ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ವೇಣುಗೋಪಾಲ್

Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ವಿರುದ್ಧ ಮಾಡಲಾಗಿರುವ ಲೈಂಗಿಕ ಕಿರುಕುಳದ ಆರೋಪ ಸಾಬೀತಾದರೆ ರಾಜಕೀಯ ಜೀವನದಿಂದ ನಿವೃತ್ತಿ ಪಡೆಯುತ್ತೇನೆ’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸ್ಪಷ್ಟಪಡಿಸಿದರು.

‘36 ಕ್ರಿಮಿನಲ್ ಕೇಸು ಎದುರಿಸುತ್ತಿರುವ ಮಹಿಳೆ ನನ್ನ ಬಗ್ಗೆ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಎರ್ನಾಕುಲಂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ’ ಎಂದು ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

‘40 ವರ್ಷದ ರಾಜಕಾರಣದಲ್ಲಿ ಒಂದೇ ಒಂದು ಕಪ್ಪುಚುಕ್ಕಿ ಇಲ್ಲ. ಆದರೂ ಕೆಲವರು ನನ್ನ ವಿರುದ್ಧ ಈ ರೀತಿಯ ಆರೋಪಗಳನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಚುನಾವಣೆಗೆ ನಿಂತಾಗ ಹೆಚ್ಚು ಅಪಪ್ರಚಾರ ಮಾಡಿದ್ದರು’ ಎಂದೂ ದೂರಿದರು.

‘ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ಅಸಭ್ಯ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಬಂದಿದೆ. ಎಐಸಿಸಿ ಪರವಾಗಿ ಅವರೊಂದಿಗೆ ಮಾತನಾಡಿದ್ದೇನೆ. ಉದ್ದೇಶ ಪೂರ್ವಕವಾಗಿ ಈ ರೀತಿ ಮಾತನಾಡಿಲ್ಲ ಎಂಬುದನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ನಾಯಕರು ರೋಷನ್ ಬೇಗ್‌ಗಿಂತ ಕೆಟ್ಟದಾಗಿ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಿದ್ದನ್ನು ಕೇಳಿದ್ದೇನೆ. ಆದರೂ ಇಂತಹ ಪದ ಬಳಕೆ ಸರಿಯಲ್ಲ’ ಎಂದರು.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೆಲವೇ ದಿನಗಳಲ್ಲಿ ಎಐಸಿಸಿ ಅಧ್ಯಕ್ಷರಾಗಲಿದ್ದಾರೆ. ಕೆಪಿಸಿಸಿ ಸಹ ಇದರ ಪರವಾಗಿದೆ ಎಂದೂ ವೇಣುಗೋಪಾಲ್ ಹೇಳಿದರು.

* ಬೆಂಗಳೂರಿನಲ್ಲಿ ಮಳೆಗೆ 5 ಜನ ಮೃತಪಟ್ಟಿರುವುದು ಆಕಸ್ಮಿಕ ಘಟನೆ. ಮುಂದೆ ಹೀಗಾಗದಂತೆ ರಾಜ್ಯ ಸರ್ಕಾರ ಎಚ್ಚರ ವಹಿಸುತ್ತದೆ

-ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ

ಸಿಪಿಎಂ ಸರ್ಕಾದ ವಿರುದ್ಧ ಚಾಂಡಿ ಕಿಡಿ

ಕೊಚ್ಚಿ (ಪಿಟಿಐ): ಬಹುಕೋಟಿ ಸೋಲಾರ್ ಹಗರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಮುಖಂಡ ಉಮ್ಮನ್‌ ಚಾಂಡಿ ಅವರು ಅವರು ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರ್ಕಾರ ಹಗರಣದ ತನಿಖಾ ವರದಿ ನೀಡದೆ ಸಹಜ ನ್ಯಾಯ ನಿರಾಕರಿಸಿದೆ ಎಂದು ಹರಿಹಾಯ್ದಿದ್ದಾರೆ.

ಸೋಲಾರ್‌ ಹಗರಣದ ತನಿಖೆ ನಡೆಸಿದ ನ್ಯಾಯಮೂರ್ತಿ ಜಿ.ಶಿವರಾಜನ್‌ ಆಯೋಗ ಸಲ್ಲಿಸಿದ ವರದಿಯ ಪ್ರತಿಯನ್ನು ಸರ್ಕಾರ ತಮಗೆ ಇದುವರೆಗೂ ನೀಡಿಲ್ಲ. ಒಂದು ವೇಳೆ ಮಾಹಿತಿ ಹಕ್ಕು ಕಾಯಿದೆ ಅಡಿ ವರದಿಯ ಪ್ರತಿ ನೀಡದಿದ್ದರೆ, ನೇರವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

‘ಸರ್ಕಾರ ಸೋಲಾರ್‌ ಹಗರಣವನ್ನು ವಿಚಕ್ಷಣ ದಳದ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ವರದಿಯ ಪ್ರತಿ ನೀಡುವಂತೆ ಕೋರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೆ. ಆದರೆ, ಇಲ್ಲಿಯವರೆಗೂ ವರದಿಯ ಪ್ರತಿ ನನ್ನ ಕೈ ಸೇರಿಲ್ಲ. ಇದು ಸಹಜ ನ್ಯಾಯದ ನಿರಾಕರಣೆಯಲ್ಲದೆ ಮತ್ತಿನ್ನೇನು’ ಎಂದು ಚಾಂಡಿ ಪ್ರಶ್ನಿಸಿದ್ದಾರೆ.

ಸೋಲಾರ್ ಹಗರಣದ ಪ್ರಮುಖ ಆರೋಪಿ ಸರಿತಾ ವಿಚಾರಣೆ ವೇಳೆ ಕಾಂಗ್ರೆಸ್‌ ನಾಯಕರು, ಸಚಿವರು, ಶಾಸಕರು, ಸಂಸದರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳ ಹೆಸರು ಬಾಯ್ಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT