ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ನಾಣ್ಯ, ನೋಟುಗಳ ಕಣಜ!

Last Updated 15 ಅಕ್ಟೋಬರ್ 2017, 8:43 IST
ಅಕ್ಷರ ಗಾತ್ರ

ವಿರಾಜಪೇಟೆ: ಭಾರತವೂ ಸೇರಿದಂತೆ ವಿವಿಧ ದೇಶಗಳ, ವಿಭಿನ್ನ ಕಾಲಘಟ್ಟದ ಬಗೆಬಗೆಯ ನಾಣ್ಯ ಹಾಗೂ ನೋಟುಗಳ ಸಂಗ್ರಹವೇ ಈ ಯುವಕನ ಬಳಿ ಸಾಕಷ್ಟು ಪ್ರಮಾಣದಲ್ಲಿದೆ. ಇವರು ವೃತ್ತಿಯಿಂದ ಕೃಷಿಕ ರಾದರೂ, ಪ್ರವೃತ್ತಿಯಿಂದ ನಾಣ್ಯ ಹಾಗೂ ನೋಟು ಸಂಗ್ರಾಹಕ. ವಿವಿಧ ದೇಶಗಳ ಸಾವಿರಕ್ಕೂ ಹೆಚ್ಚು ನಾಣ್ಯ ಹಾಗೂ ಸಾವಿರಕ್ಕೂ ಹೆಚ್ಚು ನೋಟುಗಳನ್ನು ಕೇವಲ ಕಳೆದ 6 ವರ್ಷಗಳಲ್ಲಿ ಇವರು ಸಂಗ್ರಹಿಸಿದ್ದಾರೆ! ಹೌದು, ಸಮೀಪದ ಐಮಂಗಲ ಗ್ರಾಮದ ವಿನಾಯಕ ನಗರದ ಅಜಯ್ ರಾವ್ ಎಂಬುವವರೇ ಅಲ್ಪ ಅವಧಿ ಯಲ್ಲಿಯೇ ಈ ಸಾಧನೆ ಮಾಡಿದವರು.

ಅಜಯ್ ರಾವ್ ಖ್ಯಾತ ವಕೀಲ ದಿ. ಎಂ.ಕೆ. ನಾರಾಯಣ ರಾವ್ ಹಾಗೂ ದಿ. ಎಂ.ಎನ್. ಚಂದ್ರಕಲಾ ರಾವ್ ದಂಪತಿಯ ನಾಲ್ವರು ಮಕ್ಕಳಲ್ಲಿ ಕೊನೆಯವರು. ಭಾರತ, ಅಮೆರಿಕ, ಜಪಾನ್, ಚೀನಾ, ಟರ್ಕಿ, ಮೆಕ್ಸಿಕೋ, ಫ್ರಾನ್ಸ್, ನೈಜೀರಿಯಾ, ಕಾಂಬೋಡಿಯ, ಆಸ್ಡ್ರೀಯ, ಕಾಂಗೋ, ಸೈಪ್ರಸ್, ಈಜಿಪ್ಟ್‌, ಇಥಿಯೋಪಿಯ, ಗ್ರೀಕ್... ಸೇರಿದಂತೆ ವಿಶ್ವದ 165ಕ್ಕೂ ಹೆಚ್ಚು ದೇಶಗಳ ಹಳೆಯ ನಾಣ್ಯ ಹಾಗೂ ನೋಟುಗಳು ಅಜಯ್ ರಾವ್ ಸಂಗ್ರಹದಲ್ಲಿವೆ.

ಭಾರತದ ನೂರಾರು ವರ್ಷಗಳ ಹಿಂದಿನ ಹಾಗೂ ಬ್ರಿಟಿಷರ ಕಾಲದ ಸಾಕಷ್ಟು ನಾಣ್ಯಗಳು ಸೇರಿದಂತೆ ಸ್ವಾತಂತ್ರ್ಯ ಬಂದ ಬಳಿಕ ದೇಶದಲ್ಲಿ ಚಲಾವಣೆಗೊಂಡ ಬೇರೆಬೇರೆ ಮುಖಬೆಲೆಯ ಬಗೆಬಗೆಯ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ರೂ 5 ಮುಖಬೆಲೆಯ ವಿಭಿನ್ನ ಮಾದರಿಯ 39 ನಾಣ್ಯಗಳನ್ನು ಇವರು ಸಂಗ್ರಹಿಸಿರುವುದು ವಿಶೇಷ.

12ನೇ ಶತಮಾನದ ಉತ್ತರ ಭಾರತದ ರಾಜ ಚೌಹಾನ ಟಂಕಿಸಿದ ಅಪರೂಪದ ರಾಮ ಪಟ್ಟಾಭಿಷೇಕದ ನಾಣ್ಯ, ಮೊಘಲ್, ಟಿಪ್ಪು ಸುಲ್ತಾನ್, ನಿಜಾಮ, ವೀರರಾಜೇಂದ್ರ, ಬ್ರಿಟಿಷರ, ಪೊರ್ಚುಗೀಸರು ಸೇರಿದಂತೆ ಅನೇಕರ ಕಾಲದ ನಾಣ್ಯಗಳನ್ನು ಇವರು ಸಂಗ್ರಹಿಸಿದ್ದಾರೆ. ಮಹಾತ್ಮ ಗಾಂಧಿ ದ. ಆಫ್ರಿಕಾದಿಂದ ಹಿಂದಿರುಗುವಾಗಿನ ಅವರ ಭಾವಚಿತ್ರ ಹೊಂದಿರುವ ನಾಣ್ಯದಿಂದ ನಂತರದ ಕಾಲದವರೆಗಿನ ಅವರ ಭಾವಚಿತ್ರವಿರುವ ನಾಣ್ಯವನ್ನು ಸಂಗ್ರಹಿಸಿದ್ದಾರೆ.

ಡಾಲರ್, ಯೂರೋ, ದಿನಾರ್ ಸೇರಿದಂತೆ ದೇಶವಿದೇಶದ ನೋಟುಗಳ ಸಂಗ್ರಹವೇ ಇವರ ಬಳಿಯಿದೆ. ಈವರೆಗೆ ದೇಶದಲ್ಲಿ ಚಲಾವಣೆಗೊಂಡ ಬಹುತೇಕ ಮಾದರಿಯ ನೋಟುಗಳನ್ನು ಸಂಗ್ರಹಿಸಿದ್ದಾರೆ. ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿದ್ದ ಬಹುತೇಕರ ಸಹಿ ಹೊಂದಿರುವ ವಿವಿಧ ಮೌಲ್ಯದ ಬಗೆಬಗೆಯ ನೋಟುಗಳನ್ನು ಇವರು ಸಂಗ್ರಹಿಸಿರುವುದು ಮತ್ತೊಂದು ವಿಶೇಷ. ಜತೆಗೆ, ವಿವಿಧ ಬಗೆಯ ಫ್ಯಾನ್ಸಿ ನಂಬರ್ ಹೊಂದಿರುವ ನೋಟುಗಳನ್ನು ಇಟ್ಟುಕೊಂಡಿದ್ದಾರೆ.

ಕಡಿಮೆ ಅವಧಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ನಾಣ್ಯ ಹಾಗೂ ನೋಟು ಸುಲಭವಾಗಿ ಸಂಗ್ರಹಿಸಿದ್ದಲ್ಲ. ಈ ಕುರಿತು ಪ್ರತಿಕ್ರಿಯಿಸುವ ಅಜಯ್ ರಾವ್, ಕೇರಳ ರಾಜ್ಯ ಸೇರಿದಂತೆ ಹಲವು ಊರುಗಳಿಗೆ ತೆರಳಿ ಹಳೆಯ ನೋಟು ಹಾಗೂ ನಾಣ್ಯಗಳನ್ನು ಸಂಗ್ರಹಿಸುತ್ತೇನೆ. ಕೆಲವು ವೇಳೆ ಹಳೆಯನಾಣ್ಯ ಹಾಗೂ ನೋಟುಗಳನ್ನು ಕೊಡುತ್ತೇನೆಂದವರ ಮಾತನ್ನು ನಂಬಿ ಹೋದಾಗ ನಿರಾಸೆ ಅನುಭವಿಸಿದ್ದು ಇದೆ. ಕೇವಲ ಒಂದು ಹಳೆಯ ನೋಟಿಗೆ ರೂ 20 ಸಾವಿರಕ್ಕು ಹೆಚ್ಚು ನೀಡಿದ್ದು ಇದೆ.

ಜತೆಗೆ ತನಗೆ ಪರಿಚಯ ಇರುವ ಸುತ್ತಮುತ್ತಲಿನ ವ್ಯಕ್ತಿಗಳೇ ತನಗೆ ಅಧಿಕ ಸಂಖ್ಯೆಯಲ್ಲಿ ನಾಣ್ಯ ಹಾಗೂ ನೋಟುಗಳನ್ನು ನೀಡಿದ್ದಾರೆ. ಇನ್ನು ಕೆಲವರು ಮತ್ತಷ್ಟು ಹಳೆಯ ನಾಣ್ಯ ಹಾಗೂ ನೋಟುಗಳನ್ನು ಶೀಘ್ರದಲ್ಲಿ ನೀಡುವ ಭರವಸೆ ನೀಡಿದ್ದಾರೆ. ಎಲ್ಲವು ನಿರೀಕ್ಷೆಯಂತೆ ನಡೆದರೆ ಸಂಗ್ರಹದ ಪ್ರಮಾಣ ಮತ್ತಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ.

ನಾಣ್ಯ ಹಾಗೂ ನೋಟು ಸಂಗ್ರಹದಲ್ಲಿ ದಾಖಲೆ ನಿರ್ಮಿಸಬೇಕೆಂಬ ಕನಸನ್ನು ಹೊಂದಿರುವ ಇವರು ಮುಂದಿನ ದಿನಗಳಲ್ಲಿ ಇವುಗಳನ್ನು ಪ್ರದರ್ಶನಕಿಟ್ಟು ಬಂದ ಹಣವನ್ನು ಅನಾಥ, ಅಂಗವಿಕಲ ಹಾಗೂ ಅಂಧಮಕ್ಕಳಿಗೆ ನೀಡುವ ಉದ್ದೇಶವನ್ನು ಹೊಂದಿದ್ದಾರೆ. ನಾಣ್ಯ ಹಾಗೂ ನೋಟು ಸಂಗ್ರಹದಲ್ಲಿ ಇವರ ಸಾಧನೆಯನ್ನು ಗಮನಿಸಿದ ಕನ್ನಡ ಸಾಹಿತ್ಯ ಪರಿಷತ್ನ ತಾಲ್ಲೂಕು ಘಟಕವು ಇವರನ್ನು ಸನ್ಮಾನಿಸಿ ಗೌರವಿಸಿದೆ.

ಕಂಪ್ಯೂಟರ್ ಸೈನ್ಸ್‌ನಲ್ಲಿ ಪಾಲಿಟೆಕ್ನಿಕ್ ಶಿಕ್ಷಣ ಮುಗಿಸಿರುವ ಅಜಯ್ ರಾವ್ ಕೃಷಿಯೊಂದಿಗೆ ಸಣ್ಣಪುಟ್ಟ ವ್ಯಾಪಾರವನ್ನು ಮಾಡುತ್ತಿದ್ದಾರೆ. ಜತೆಗೆ, ಉತ್ತಮ ಗಾಯಕರಾಗಿರುವ ಇವರು ತಂಡದೊಂದಿಗೆ ವಿವಿಧೆಡೆಗಳಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT