ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಗಲಿರುವುದು ಸಮಾಜದ ಋಣ ತೀರಿಸಲು

Last Updated 15 ಅಕ್ಟೋಬರ್ 2017, 9:17 IST
ಅಕ್ಷರ ಗಾತ್ರ

ಮಂಗಳೂರು: ‘ನಮ್ಮ ಹೆಗಲು ಇರು ವುದು ಸಮಾಜದ ಋಣ ತೀರಿಸುವುದಕ್ಕೆ. ನಾವು ಶೋಷಿತರು, ದಮನಿತರು, ಸ್ತ್ರೀಯರ ಪರವಾದ ನಿಲುವು ರೂಢಿಸಿಕೊಳ್ಳಬೇಕು’ ಎಂದು ಹಿರಿಯ ಲೇಖಕಿ ವೈದೇಹಿ ಹೇಳಿದರು. ನಗರದ ಎಸ್‌ಡಿಎಂ ಉದ್ಯಮಾ ಡಳಿತ ಕಾಲೇಜಿನ ಸಭಾಂಗಣದಲ್ಲಿ ಶನಿವಾರ, ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ನಾವೆಲ್ಲರೂ ಮನುಷ್ಯರಾಗಿ ನೋಡಿಕೊಳ್ಳುವ ಅಗತ್ಯತೆ ಹೆಚ್ಚಾಗಿದೆ. ಕಂಪ್ಯೂಟರ್‌ ಎದುರಿನ ಜಗತ್ತನ್ನು ಬಿಟ್ಟು, ಸಂಗೀತ, ಸಾಹಿತ್ಯ, ಕಲೆಗಳನ್ನು ಮೈಗೂಡಿಸಿಕೊಂಡು ಸಮಗ್ರವಾಗಿ ಜಗತ್ತನ್ನು ನೋಡಬೇಕಾಗಿದೆ ಎಂದು ಸಲಹೆ ನೀಡಿದರು.

ಮನುಷ್ಯನ ಮನಸ್ಸು ಹಾಳಾಗುತ್ತಿದೆ. ಮಕ್ಕಳ ಮನಸ್ಸಿನಲ್ಲಿ ವಿಷ ಬಿತ್ತುತ್ತಿದ್ದೇವೆ. ಇದು ಬಾಂಬ್‌ ಹಾಕುವುದಕ್ಕಿಂತ ದೊಡ್ಡ ಪ್ರಮಾದ ಎಂದು ಎಚ್ಚರಿಸಿದ ಅವರು, ಮಕ್ಕಳಲ್ಲಿ ಗಂಡು–ಹೆಣ್ಣು ಎಂಬ ಭೇದ ಮಾಡದೇ, ಇಬ್ಬರನ್ನೂ ಒಂದೇ ರೀತಿಯಲ್ಲಿ ಬೆಳೆಸೋಣ. ಅವರವರ ವಿಶಿಷ್ಟತೆಯನ್ನು ಅರಿತು ಬದುಕೋಣ ಎಂದು ತಿಳಿಸಿದರು.

‘ಸಂಬಂಧ, ಪ್ರಕೃತಿಯ ಬಗ್ಗೆ ಚಿಂತನೆಯೇ ಕಡಿಮೆ ಆಗಿರುವ ಈ ಕಾಲಘಟ್ಟದಲ್ಲಿ, ಕಾಳಜಿವುಳ್ಳ ಅನೇಕ ಬರವಣಿಗೆಗಳು ಇನ್ನೂ ನಿಂತಿಲ್ಲ. ಇದು ಆಶಾವಾದದ ಬೆಳವಣಿಗೆ. ನಮ್ಮ ನಮ್ಮ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡೋಣ. ಆತಂಕವನ್ನು ಮೀರಿ ಅಭಿವ್ಯಕ್ತಿಯ ಆನಂದವನ್ನು ಹೊಂದೋಣ’ ಎಂದರು.

‘ಪ್ರಜಾವಾಣಿ’ ಪತ್ರಿಕೆಯ ಕುರಿತು ಮಾತನಾಡಿದ ಅವರು, ನಾವೆಲ್ಲರೂ ‘ಪ್ರಜಾವಾಣಿ’ ಓದಿಯೇ ಬೆಳೆದವರು. ಇಂದಿಗೂ ನನಗೆ ‘ಪ್ರಜಾವಾಣಿ’ ಪತ್ರಿಕೆ ಬರುತ್ತದೆ. ಅದೇ ನಿಲುವು, ಅದೇ ಗಟ್ಟಿತನ ಇಂದಿಗೂ ಹಾಗೆಯೇ ಇದೆ. ಇದು ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ ಪತ್ರಿಕೆಯು ದೀಪಾ ವಳಿ ವಿಶೇಷಾಂಕದ ಮೂಲಕ ಹಲವಾರು ಸಾಹಿತಿಗಳಿಗೆ ವೇದಿಕೆ ಒದಗಿಸಿದೆ. ಸ್ಪರ್ಧೆಯಲ್ಲಿ ಇಂದಿಗೂ ಅದೇ ಗಟ್ಟಿತನ ಉಳಿದಿರುವುದು ಮೆಚ್ಚುಗೆ ಸಂಗತಿ. ಇಂತಹ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ಜ್ಯೋತಿ ಬೆಳಗುವ ಮೂಲಕ ಲೇಖಕಿ ವೈದೇಹಿ ಹಾಗೂ ಅವರ ಪತಿ ಶ್ರೀನಿವಾಸ ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ‘ಪ್ರಜಾವಾಣಿ’ ಸಹ ಸಂಪಾದಕ ಎಂ. ನಾಗರಾಜ್‌ ಇದ್ದರು. ಮುಖ್ಯ ಉಪ ಸಂಪಾದಕಿ ಶೈಲಜಾ ಹೂಗಾರ ಸ್ವಾಗತಿಸಿದರು. ಮುಖ್ಯ ಉಪ ಸಂಪಾದಕಿ ರಶ್ಮಿ ಎಸ್‌. ನಿರೂಪಿಸಿದರು. ‘ಪ್ರಜಾವಾಣಿ’ ಮಂಗಳೂರು ಬ್ಯೂರೊ ಮುಖ್ಯಸ್ಥ ಎಂ.ಜಿ. ಬಾಲಕೃಷ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT