ನವ ಪ್ರತಿಭೆಗಳ ಉಗಮ

ಭಾರತದಲ್ಲಿ ಜೂನಿಯರ್ ಫುಟ್‌ಬಾಲ್ ವಿಶ್ವಕಪ್‌: ನವಯುಗದ ಆರಂಭ...

ನವ ಪ್ರತಿಭೆಗಳ ಉಗಮಕ್ಕೆ ನಾಂದಿಯಾಗಿರುವ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌  ಭಾರತದಲ್ಲಿ ಫುಟ್‌ಬಾಲ್‌ ಕ್ರಾಂತಿಗೆ ಮುನ್ನುಡಿ ಬರೆದಿದೆ. ಈ ಬಗ್ಗೆ ಜಿ.ಶಿವಕುಮಾರ ಬರೆದಿದ್ದಾರೆ.

ಭಾರತದಲ್ಲಿ ಜೂನಿಯರ್ ಫುಟ್‌ಬಾಲ್ ವಿಶ್ವಕಪ್‌: ನವಯುಗದ ಆರಂಭ...

ಅಕ್ಟೋಬರ್‌ 6 ರಂದು ನವದೆಹಲಿಯಲ್ಲಿ ನಡೆದ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತ ತಂಡ ಅಮೆರಿಕ ಸವಾಲಿಗೆ ಎದೆಯೊಡ್ಡಲು ಜವಾಹರಲಾಲ್‌ ನೆಹರೂ ಕ್ರೀಡಾಂಗಣಕ್ಕೆ ಅಡಿ ಇಡುತ್ತಿದ್ದಂತೆ ಭಾರತದ ಫುಟ್‌ಬಾಲ್‌ ಚರಿತ್ರೆಯಲ್ಲಿ ಹೊಸ ಅಧ್ಯಾಯ ತೆರೆದುಕೊಂಡಿತು.

ಅಮರ್‌ಜೀತ್ ಸಿಂಗ್‌ ಕಿಯಾಮ್‌ ಬಳಗದಲ್ಲಿದ್ದ ಆಟಗಾರರ ಹೆಸರುಗಳು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಅಚ್ಚಾದವು. ಫಿಫಾದ ಪ್ರತಿಷ್ಠಿತ ಕೂಟವನ್ನು ಆಯೋಜಿಸುವ ಭಾರತದ ಎಂಟು ದಶಕಗಳ ಕನಸೂ ಸಾಕಾರಗೊಂಡಿತು. 87 ವರ್ಷಗಳ ಫುಟ್‌ಬಾಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ವಿಶ್ವಕಪ್‌ ಆತಿಥ್ಯ ವಹಿಸಿದ ಹೆಗ್ಗಳಿಕೆಗೂ ಭಾಜನವಾಯಿತು.

ಕೂಟದಲ್ಲಿ ಭಾರತದ ಯುವ ಪಡೆ ಪ್ರಶಸ್ತಿ ಎತ್ತಿಹಿಡಿಯದಿದ್ದರೂ ಆಡಿದ ಮೂರೂ ಪಂದ್ಯಗಳಲ್ಲಿ ಛಲದಿಂದ ಹೋರಾಡಿ ಕೋಟ್ಯಂತರ ಜನರ ಮನಸ್ಸು ಗೆದ್ದಿತು. ಮಣಿಪುರದ ಮಿಡ್‌ಫೀಲ್ಡರ್‌ ಜೀಕ್ಸನ್‌ ಸಿಂಗ್‌ ತೌನಾಜಾಮ್‌ ಕೂಟದಲ್ಲಿ ಭಾರತದ ಗೋಲಿನ ಖಾತೆ ತೆರೆದು ಹೊಸ ಮೈಲುಗಲ್ಲು ಸ್ಥಾಪಿಸಿದರು. ಅವರು ಕೊಲಂಬಿಯಾ ವಿರುದ್ಧದ ಪಂದ್ಯದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ವಿಶ್ವಕಪ್‌ನಲ್ಲಿ ಗೋಲು ಬಾರಿಸಿದ ದೇಶದ ಮೊದಲ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು.

1980ಕ್ಕೂ ಮುನ್ನ ಭಾರತದಲ್ಲಿ ಕ್ರಿಕೆಟ್‌ ಅಷ್ಟೇನು ಜನಪ್ರಿಯವಾಗಿರಲಿಲ್ಲ. 1983ರ ಏಕದಿನ ವಿಶ್ವಕಪ್‌ನಲ್ಲಿ ‘ಕಪಿಲ್‌ ಡೆವಿಲ್ಸ್‌’ ಪಡೆ ವೆಸ್ಟ್‌ ಇಂಡೀಸ್‌ ತಂಡವನ್ನು ಮಣಿಸಿ ಚೊಚ್ಚಲ ಟ್ರೋಫಿ ಎತ್ತಿಹಿಡಿದ ನಂತರ ಹೊಸ ಯುಗದ ಆರಂಭವಾಯಿತು. ಕ್ರಿಕೆಟ್‌ ಆಟದ ಸೊಬಗಿಗೆ ಮಾರು ಹೋಗಿರುವ ಜನ ಅಂದಿನಿಂದಲೂ ಈ ಕ್ರೀಡೆಯನ್ನು ಆರಾಧಿಸುತ್ತಿದ್ದಾರೆ.

17 ವರ್ಷದೊಳಗಿನವರ ವಿಶ್ವಕಪ್‌ ಕೂಡ ಭಾರತದ ಫುಟ್‌ಬಾಲ್‌ ರಂಗದಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದೆ. ಈ ಕ್ರೀಡೆಯ ಕಂಪು ದೇಶದ ಎಲ್ಲಾ ಭಾಗಗಳಿಗೂ ಪಸರಿಸಲು ಕೂಟ ನೆರವಾಗಲಿದೆ ಎಂದೇ ಹೇಳಲಾಗುತ್ತಿದೆ.

1962ರಲ್ಲಿ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ಫುಟ್‌ಬಾಲ್‌ ತಂಡ ಚಿನ್ನಕ್ಕೆ ಮುತ್ತಿಕ್ಕಿ ಹೊಸ ಭಾಷ್ಯ ಬರೆದಿತ್ತು. 1956ರ ಮೆಲ್ಬರ್ನ್‌ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿ ಫುಟ್‌ಬಾಲ್‌ ಜಗತ್ತಿನ ಗಮನ ಸೆಳೆದಿತ್ತು. ಐ.ಎಂ.ವಿಜಯನ್‌, ಭೈಚುಂಗ್‌ ಭುಟಿಯಾ ಮತ್ತು ಸುನಿಲ್‌ ಚೆಟ್ರಿ ಅವರಂತಹ ತಾರೆಯರು ಈ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಿ ಭಾರತದ ಕೀರ್ತಿ ಬೆಳಗಿದ್ದರು. ಹೀಗಿದ್ದರೂ ಕಾಲ್ಚೆಂಡಿನಾಟ ಜನಮಾನಸಕ್ಕೆ ಅಷ್ಟೇನು ಹತ್ತಿರವಾಗಿರಲಿಲ್ಲ. ಆದರೆ ಈಗ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ.

ಈ ಕ್ರೀಡೆಯ ಬೇರುಗಳನ್ನು ಇನ್ನಷ್ಟು ಆಳಕ್ಕಿಳಿಸುವ ಗುರಿ ಹೊಂದಿರುವ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿ ಅವುಗಳನ್ನು ಕ್ಷಿಪ್ರಗತಿಯಲ್ಲಿ ಅನುಷ್ಠಾನಗೊಳಿಸುತ್ತಿದೆ. ಜೂನಿಯರ್‌ ವಿಶ್ವಕಪ್‌ ಆಯೋಜನೆ ಈ ನಿಟ್ಟಿನಲ್ಲಿ ಮಹತ್ವದ್ದು.

ಭವಿಷ್ಯ ಉಜ್ವಲ

ವಿಶ್ವಕಪ್‌ಗೂ ಮುನ್ನ ಪ್ರತಿಭಾನ್ವೇಷಣೆಗೆ ಮುಂದಾಗಿದ್ದ ಎಐಎಫ್‌ಎಫ್‌ ಶ್ರೇಷ್ಠ ಎನಿಸಿದ 21 ಮಂದಿಯನ್ನು ಆಯ್ಕೆ ಮಾಡಿತ್ತು. ಈ ತಂಡವನ್ನು ಇನ್ನಷ್ಟು ಬಲಯುತಗೊಳಿಸುವ ಸಲುವಾಗಿ ಫುಟ್‌ಬಾಲ್‌ನ ಶಕ್ತಿ ಕೇಂದ್ರಗಳೆನಿಸಿರುವ ಜರ್ಮನಿ, ಇರಾನ್‌, ಸ್ಪೇನ್‌, ರಷ್ಯಾ ಮತ್ತು ದಕ್ಷಿಣ ಅಮೆರಿಕದಲ್ಲಿ ವಿಶೇಷ ತರಬೇತಿ ಕೊಡಿಸಿತ್ತು. ಜೊತೆಗೆ ಈ ತಂಡಗಳ ವಿರುದ್ಧ 50ಕ್ಕೂ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಮಾಡಿಕೊಟ್ಟು ಆಟಗಾರರ ಮನೋಬಲ ವೃದ್ಧಿಸುವ ಕೆಲಸ ಮಾಡಿತ್ತು.2019ರಲ್ಲಿ ನಡೆಯುವ 20 ವರ್ಷದೊಳಗಿನವರ ವಿಶ್ವಕಪ್‌ ಆಯೋಜನೆಗೂ ಎಐಎಫ್‌ಎಫ್‌ ಒಲವು ತೋರಿದೆ. ಇದು ಕೂಡ ಮಹತ್ವದ ಹೆಜ್ಜೆ ಎನಿಸಿದೆ.

ಬೇರು ಮಟ್ಟದಿಂದಲೇ ಈ ಕ್ರೀಡೆಯನ್ನು ಬೆಳೆಸಬೇಕು ಎಂಬುದನ್ನು ಅರಿತಿರುವ ಫೆಡರೇಷನ್‌ ಈ ಉದ್ದೇಶದಿಂದಲೇ ಜೂನಿಯರ್‌ ವಿಭಾಗದ ಆಟಗಾರರಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಇದರಿಂದಾಗಿ ಯುವಕರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಲು ಮುಂದಾಗುತ್ತಿದ್ದಾರೆ. ಜೊತೆಗೆ ಕಾರ್ಪೊರೇಟ್‌ ಕಂಪೆನಿಗಳೂ ಪ್ರಾಯೋಜಕತ್ವ ನೀಡಲು ಮುಂದೆ ಬರುತ್ತಿರುವುದರಿಂದ ಅಭಿವೃದ್ಧಿ ಇನ್ನಷ್ಟು ವೇಗ ಪಡೆದುಕೊಳ್ಳುತ್ತಿದೆ.

ಮ್ಯಾಂಚೆಸ್ಟರ್‌ ಯುನೈಟೆಡ್‌, ರಿಯಲ್‌ ಮ್ಯಾಡ್ರಿಡ್‌, ರಿವರ್‌ ಪ್ಲೇಟ್‌, ಸಾವೊಪಾಲೊದಂತಹ ವಿಶ್ವದ ಪ್ರತಿಷ್ಠಿತ ಕ್ಲಬ್‌ಗಳು ವಿಶ್ವಕಪ್‌ ಕೂಟವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಶ್ರೇಷ್ಠ ಆಟ ಆಡಿದವರನ್ನು ತಮ್ಮತ್ತ ಸೆಳೆದುಕೊಳ್ಳುವ ಆಲೋಚನೆ ಹೊಂದಿವೆ. ಒಂದೊಮ್ಮೆ ಭಾರತದ ಒಬ್ಬ ಆಟಗಾರ ಈ ಕ್ಲಬ್‌ಗಳಿಗೆ ಆಯ್ಕೆಯಾದರೂ ಅದು ಚರಿತ್ರಾರ್ಹ ಸಾಧನೆಯಾಗಲಿದೆ. ಗೋಲ್‌ಕೀಪರ್‌ ಧೀರಜ್‌ ಸಿಂಗ್‌, ಜೀಕ್ಸನ್‌ ಮತ್ತು ಕರ್ನಾಟಕದ ಸಂಜೀವ್‌ ಸ್ಟಾಲಿನ್‌ ಅವರು ಈ ನಿಟ್ಟಿನಲ್ಲಿ ಭರವಸೆಯಾಗಿ ಗೋಚರಿಸಿದ್ದಾರೆ.

ಅತ್ಯಾಧುನಿಕ ಮೂಲ ಸೌಕರ್ಯ

ವಿಶ್ವಕಪ್‌ ಆಯೋಜನೆಯ ಉದ್ದೇಶದಿಂದ ಎಐಎಫ್‌ಎಫ್‌ ಕೋಟ್ಯಂತರ ಹಣ ವೆಚ್ಚ ಮಾಡಿ ನವದೆಹಲಿ, ಕೋಲ್ಕತ್ತ, ಮುಂಬೈ, ಕೊಚ್ಚಿ, ಗೋವಾ ಮತ್ತು ಗುವಾಹಟಿಯಲ್ಲಿರುವ ಕ್ರೀಡಾಂಗಣಗಳಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನು ಕಲ್ಪಿಸಿದೆ. ಕೋಲ್ಕತ್ತದ ಸಾಲ್ಟ್‌ಲೇಕ್‌ ಕ್ರೀಡಾಂಗಣದ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಫಿಫಾ ಪೂರ್ಣ 10 ರೇಟಿಂಗ್‌ ನೀಡಿದೆ.

ತಂಡಗಳ ಅಭ್ಯಾಸಕ್ಕಾಗಿ ಈ ನಗರಗಳ ಇತರೆ ಪ್ರಮುಖ ಮೈದಾನಗಳನ್ನೂ ಅಭಿವೃದ್ಧಿ ಪಡಿಸಲಾಗಿದೆ. ಜೊತೆಗೆ ದೇಶದ ವಿವಿಧ ರಾಜ್ಯಗಳಲ್ಲಿ ತಲೆ ಎತ್ತಿ ರುವ ತರಬೇತಿ ಕೇಂದ್ರ ಗಳನ್ನು ಅಭಿವೃದ್ಧಿಪಡಿಸುವತ್ತಲೂ ಎಐಎಫ್‌ಎಫ್‌ ಚಿತ್ತ ನೆಟ್ಟಿದೆ. ವಿಶ್ವಕಪ್‌ ಮುಗಿದ ಬಳಿಕ ಸ್ಥಳೀಯ ಮಕ್ಕಳು ಮತ್ತು ಆಟಗಾರರಿಗೆ ಈ ಕ್ರೀಡಾಂಗಣಗಳಲ್ಲಿ ಅಭ್ಯಾಸ ಮಾಡುವ ಅವಕಾಶ ಸಿಗುವುದರಿಂದ ಅವರು ಈ ಸೌಕರ್ಯಗಳ ಲಾಭ ಎತ್ತಿಕೊಂಡು ಆಟದ ಗುಣಮಟ್ಟ ಹೆಚ್ಚಿಸಿಕೊಳ್ಳಬಹುದು.

**

ಫುಟ್‌ಬಾಲ್‌ಗೆ ಹೊಸ ಮೆರುಗು

‘ಜೂನಿಯರ್‌ ವಿಶ್ವಕಪ್‌ ಆಯೋಜನೆಯಿಂದ ಭಾರತದಲ್ಲಿ ಫುಟ್‌ಬಾಲ್‌ ಕ್ರೀಡೆಗೆ ಹೊಸ ಮೆರುಗು ಸಿಗಲಿದೆ. ಈ ಕ್ರೀಡೆ ಜನಮಾನಸಕ್ಕೆ ಇನ್ನಷ್ಟು ಆಪ್ತವಾಗಲಿದ್ದು, ಪೋಷಕರು ತಮ್ಮ ಮಕ್ಕಳಿಕೆ ಫುಟ್‌ಬಾಲ್‌ ಕಲಿಸಲು ಮುಂದಾಗುವ ನಂಬಿಕೆ ಇದೆ’...

ಹೀಗೆ ಭರವಸೆಯ ಮಾತುಗಳನ್ನಾಡಿದ್ದವರು ಬ್ರೆಜಿಲ್‌ನ ಫುಟ್‌ಬಾಲ್‌ ದಿಗ್ಗಜ ಜೆರ್ಸನ್‌ ಫ್ರಾಗಾ ವಿಯೇರಾ.

ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಅವರು ‘ಭಾರತದ ಯುವ ಪಡೆ ತನ್ನ ಶಕ್ತಿಯನ್ನು ಜಗಜ್ಜಾಹೀರುಗೊಳಿಸಲು ಕೂಟ ವೇದಿಕೆಯಾಗಿದೆ. ಹೊಸ ಪೀಳಿಗೆಯವರಲ್ಲಿ ಫುಟ್‌ಬಾಲ್‌ ಕನಸು ಬಿತ್ತಲೂ ಇದು ಸಹಕಾರಿಯಾಗಲಿದ್ದು, ಕ್ರೀಡೆಯ ಅಭಿವೃದ್ಧಿಗೂ ನೆರವಾಗಲಿದೆ’ ಎಂದಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಡಬಲ್ಸ್‌ ವಿಭಾಗಕ್ಕೂ ಮನ್ನಣೆ ಸಿಗುತ್ತಿದೆ...

ಬ್ಯಾಡ್ಮಿಂಟನ್‌
ಡಬಲ್ಸ್‌ ವಿಭಾಗಕ್ಕೂ ಮನ್ನಣೆ ಸಿಗುತ್ತಿದೆ...

23 Apr, 2018
ಶೂಟಿಂಗ್‌ ಮೇಲೆ ತೂಗುಗತ್ತಿ

ಕಾಮನ್‌ವೆಲ್ತ್ ಕ್ರೀಡಾಕೂಟ
ಶೂಟಿಂಗ್‌ ಮೇಲೆ ತೂಗುಗತ್ತಿ

23 Apr, 2018
ಇದು ಫ್ಯಾಂಟಸಿ ಲೀಗ್ ಕಾಲ

ಕಲ್ಪನಾಲೋಕ
ಇದು ಫ್ಯಾಂಟಸಿ ಲೀಗ್ ಕಾಲ

23 Apr, 2018
ಆಟ-ಮುನ್ನೋಟ

ಆಟ-ಮುನ್ನೋಟ
ಆಟ-ಮುನ್ನೋಟ

23 Apr, 2018
ರಣಜಿ: ಹಳೇ ಮಾದರಿಗೆ ಹೊಸ ರೂಪ

ರಣಜಿ ಟೂರ್ನಿ
ರಣಜಿ: ಹಳೇ ಮಾದರಿಗೆ ಹೊಸ ರೂಪ

23 Apr, 2018