ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲೆಬ್ರಿಟಿಗಳೂ ಖಿನ್ನತೆಯೂ...

Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮೊಮೀನಾ ಮುಷ್ತೆಷಾನ್‌

ಗಾಯಕ ರಾಹೇತ್ ಫತೇ ಅಲಿಖಾನ್ ಅವರ ಕೋಕ್ ಸ್ಟುಡಿಯೋದ ಮೂಲಕ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದವರು ಪಾಕಿಸ್ತಾನದ ಯುವಗಾಯಕಿ ಮೊಮೀನಾ ಮುಷ್ತೆಷಾನ್. ಆದರೆ, ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಖಿನ್ನತೆಗೊಳಗಾಗಿದ್ದ ಮೊಮೀನಾ ಸೆಪ್ಟೆಂಬರ್‌ನಲ್ಲಿ ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಯಶಸ್ಸು ಅನ್ನೋದು ನನಗೇನೂ ದಿಢೀರ್ ಅಂತ ಸಿಗಲಿಲ್ಲ. ಯಶಸ್ಸು ಸಿಕ್ಕ ಮೇಲೂ ನಾನೇನೂ ನೆಮ್ಮದಿಯಾಗಿರಲಿಲ್ಲ. ಇದ್ದಕ್ಕಿದ್ದಂತೆ ಯಾವುದೇ ಕಾರಣವಿಲ್ಲದೇ ಖಿನ್ನತೆ ನನ್ನ ಮನಸಿಗಾವರಿಸಿತು. ಮಧ್ಯರಾತ್ರಿ ಎರಡು ಗಂಟೆ ಹೊತ್ತಿಗೆ ವಿನಾಕಾರಣ ಅಳುವುದು, ಗಾಬರಿಯಾಗಿ ನಿದ್ದೆ ಇಲ್ಲದೇ ಒದ್ದಾಡುವುದು ನಡೆದೇ ಇತ್ತು. ದಿನಗಟ್ಟಲೇ ಮನೆಯಲ್ಲೇ ಇರುತ್ತಿದ್ದೆ ಹೊರಗೆ ಹೋಗುತ್ತಿರಲಿಲ್ಲ. ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳಲೂ ಭಯವಾಗುತ್ತಿತ್ತು. ನನಗೆ ಖಿನ್ನತೆ ಉಂಟಾಗಿರೋದು ಸುಳ್ಳಲ್ಲ. ಸತ್ಯ ಎಂಬುದನ್ನು ಮನವರಿಕೆ ಮಾಡಿಕೊಂಡೆ. ಆದರೆ, ಇದೆಲ್ಲದರಿಂದ ಹೊರಬರಬೇಕೆಂದು ಮನಸು ತುಡಿಯುತ್ತಿತ್ತು. ನಾನು ಏನಾಗಿದ್ದೆ ಎಂಬುದನ್ನು ಹಿಂತಿರುಗಿ ನೋಡಿದಾಗ ತುಸು ಆತ್ಮವಿಶ್ವಾಸ ಬಂತು.

ನಂತರ ನಿಧಾನವಾಗಿ ಖಿನ್ನತೆಯಿಂದ ಹೊರಬಂದೆ. ನಮ್ಮನ್ನು ನಾವು ಪ್ರೀತಿಸಿಕೊಂಡಾಗ ಮಾತ್ರ ಸಂತಸವಾಗಿರಬಹುದು ಎಂಬ ಸರಳ ಸತ್ಯವನ್ನು ಅರಿತುಕೊಂಡೆ ಎನ್ನುತ್ತಾರೆ ಮೊಮೀನಾ.

‌ನುಮಾನ್ ಜಾವೀದ್

ಪಾಕಿಸ್ತಾನಿ ನಟ ಮತ್ತು ಗಾಯಕ ನುಮಾನ್‌ ಜಾವೀದ್ ಕೂಡಾ ಈ ವರ್ಷದ ಆರಂಭದಲ್ಲಿ ತೀವ್ರವಾದ ಖಿನ್ನತೆಗೊಳಗಾಗಿದ್ದರು. ಖಿನ್ನತೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ 50 ನಿದ್ದೆ ಮಾತ್ರೆಗಳನ್ನು ನುಂಗಿದ್ದ ಈ ನಟ ಆತ್ಮಹತ್ಯೆಗೂ ಪ್ರಯತ್ನಿಸಿದ್ದುಂಟು. ಕಾರು ಅಪಘಾತ, ಗ್ಯಾಸ್ ಲೀಕ್ ಮಾಡಿಕೊಳ್ಳುವ ಮೂಲಕವೂ ತಮ್ಮ ಜೀವನವನ್ನು ಕೊನೆಗಾಣಿಸಿಕೊಳ್ಳಲು ಬಯಸಿದ್ದರಂತೆ.

ಹೇಗಾದರೂ ಸರಿ ಖಿನ್ನತೆಯಿಂದ ಹೊರಬರಬೇಕೆಂಬ ದೃಢ ಸಂಕಲ್ಪದಿಂದ ಜಾವೀದ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸಹಜ ಸ್ಥಿತಿಗೆ ತಲುಪಿದರು. ಮುಂದಿನ ಭವಿಷ್ಯದ ಬಗ್ಗೆ ನಾನು ಆಶಾವಾದಿಯಾಗಿರುತ್ತೇನೆ. ಮತ್ತೆ ಇಂಥ ಕೆಲಸ ಮಾಡಲ್ಲ’ ಎಂದು ಜಾವೀದ್ ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದು, ಈಗ ಮತ್ತೆ ಗಾಯನ ಮತ್ತು ನಟನೆಯತ್ತ ಚಿತ್ತ ಹರಿಸಿದ್ದಾರೆ.

ಜುಗ್ಗನ್ ಕಾಜಿಂ

ಪಾಕಿಸ್ತಾನಿ–ಕೆನಡಿಯನ್ ರೂಪದರ್ಶಿ ಮತ್ತು ನಟಿ ಜುಗ್ಗನ್‌ ಕಾಜಿಂ ಮೂರು ವರ್ಷಗಳ ಹಿಂದೆ ಖಿನ್ನತೆಗೊಳಗಾಗಿದ್ದರು.

ಸ್ಕ್ರಿಜೋಫೋನಿಯಾ ಮತ್ತು ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಈ ನಟಿ ಮಾನಸಿಕ ತಜ್ಞರ ಬಳಿ ಚಿಕಿತ್ಸೆ ಪಡೆದ ಬಳಿಕ ಗುಣಮುಖರಾಗಿದ್ದಾರೆ. ‘ಮಾಡೆಲಿಂಗ್ ಮತ್ತು ಸಿನಿಮಾ ಕ್ಷೇತ್ರದಲ್ಲಿ ರೂಪದರ್ಶಿ ಮತ್ತು ನಟಿಯರ ಮೇಲೆಯೇ ಎಲ್ಲರ ಕಣ್ಣುಗಳು ನೆಟ್ಟಿರುತ್ತವೆ. ನಿಜ ಹೇಳಬೇಕೆಂದರೆ ನಮ್ಮ ಕ್ಷೇತ್ರದಲ್ಲಿ ಅಂಗಸೌಷ್ಟವ ಕಾಪಾಡಿಕೊಳ್ಳಲು ಹೇಗೆ ಪ್ರತಿನಿತ್ಯ ಜಿಮ್‌ಗೆ ಹೋಗುತ್ತೇವೋ ಹಾಗೆಯೇ, ವಾರಕ್ಕೊಂದು ಬಾರಿಯಾದರೂ ಮಾನಸಿಕ ತಜ್ಞರನ್ನು ಭೇಟಿ ಮಾಡಿ ಮನಸನ್ನು ಹಗುರ ಮಾಡಿಕೊಳ್ಳುವುದು ಒಳಿತು’ ಎಂಬುದು ಜುಗ್ಗನ್ ಸಲಹೆ.

ಕರಣ್ ಜೋಹರ್

ಬಾಲಿವುಡ್‌ನಲ್ಲಿ ಹಿಟ್‌ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಕರಣ್ ಜೋಹರ್ ಕೂಡಾ ಖಿನ್ನತೆಯಿಂದ ಬಳಲಿದವರು. ಅದೊಂದು ಕರಾಳ ಅನುಭವ. ಆಗ ಎಲ್ಲೆಡೆಯೂ ಕತ್ತಲೆಯೇ ಅನಿಸುತ್ತಿತ್ತು. ನಾನು ಅಸಹಾಯಕ ಅನಿಸುತ್ತಿತ್ತು. ರಾತ್ರಿಗಳಲ್ಲಿ ನಿದ್ದೆಯೇ ಬರುತ್ತಿರಲಿಲ್ಲ. ಅಪ್ಪ ಇಲ್ಲದಿರುವ ಖಾಲಿತನದ ಜತೆಗೆ 44ರ ಹರೆಯದಲ್ಲಿ ನಿಮಗೊಬ್ಬ ಸಂಗಾತಿ, ಮಗು ಇಲ್ಲದಿದ್ದರೆ ಇಂಥದ್ದನ್ನು ಎದುರಿಸುವುದು ನಿಜಕ್ಕೂ ಕಷ್ಟ ಎಂದು ಕರಣ್ ತಮ್ಮ ಖಿನ್ನತೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಖಿನ್ನತೆ ನಿವಾರಣೆಗಾಗಿ ವೈದ್ಯರ ಬಳಿ ಚಿಕಿತ್ಸೆ ಪಡೆದ ಕರಣ್, ಈಗ ಖುಷಿಯಾಗಿದ್ದಾರೆ.

ಇಲಿಯಾನ ಡಿಕ್ರೂಸ್

ಮೂರು ವರ್ಷದಿಂದ ‘ಬಾಡಿ ಡಿಸ್ಮಾರ್ಫಿಕ್‌ ಡಿಸಾರ್ಡರ್‌’ (ಬಿಡಿಡಿ) ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ನಟಿ ಇಲಿಯಾನ ಡಿಕ್ರೂಸ್ ಈಗ ಗುಣಮುಖರಾಗಿದ್ದಾರೆ.

ಹದಿನೈದರ ಹರೆಯಕ್ಕೆ ಕಾಲಿಟ್ಟಾಗ ನನ್ನ ಮೈಮಾಟದ ಬಗ್ಗೆಯೇ ನನಗೆ ಕೀಳರಿಮೆ ಇತ್ತು. ನಾನು ನಾಚಿಕೆಯ ಸ್ವಭಾವದಳಾಗಿದ್ದೆ. ಆದರೆ, ನನ್ನ ದೌರ್ಬಲ್ಯಗಳನ್ನು ಅರಿತುಕೊಂಡೆ. ಬಿಡಿಡಿ ಬಗ್ಗೆ ವೈದ್ಯರು ವಿವರಣೆ ನೀಡಿದಾಗ ಚಿಕಿತ್ಸೆ ಪಡೆಯಬೇಕೆಂದು ನಿರ್ಧರಿಸಿದೆ. ನಾನೀಗ ಸಂಪೂರ್ಣವಾಗಿ ಕೀಳರಿಮೆಯಿಂದ ಹೊರಬಂದಿರುವೆ. ಖಿನ್ನತೆಗೆ ಗುಡ್‌ಬೈ ಹೇಳಿದ್ದೇನೆ ಎನ್ನುತ್ತಾ ನಗುತ್ತಾರೆ ಸುಂದರಿ ಇಲಿಯಾನ.

ದೀಪಿಕಾ ಪಡುಕೋಣೆ

ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆಗೆ ಖಿನ್ನತೆ ಆವರಿಸಿದಾಗ ಆತಂಕಕ್ಕೀಡಾಗಿದ್ದರು. ಆದರೆ ಸಕಾಲಕ್ಕೆ ಮನೋವೈದ್ಯರ ಬಳಿ ತೆರಳಿದ ನಟಿ ಈಗ ಖಿನ್ನತೆಯಿಂದ ಮುಕ್ತರಾಗಿದ್ದಾರೆ.

‘ಒಂದು ಮುಂಜಾನೆ ಇದ್ದಕ್ಕಿಂತೆ ಹೊಟ್ಟೆಯಲ್ಲಿ ಖಾಲಿತನದ ಅನುಭವ, ಸುಸ್ತು ಗೋಚರಿಸಿತು. ಯಾವ ಕೆಲಸನವ್ನೂ ಏಕಾಗ್ರಚಿತ್ತದಿಂದ ಮಾಡಲಾಗುತ್ತಿರಲಿಲ್ಲ. ದೂರದ ಊರಿಂದ ಅಪ್ಪ–ಅಮ್ಮ ಬಂದಾಗ ಅವರ ಮುಂದೆ ಎಲ್ಲವನ್ನೂ ಹೇಳಿಕೊಂಡು ಅತ್ತುಕೊಂಡೆ. ಆಗ ತಿಳಿಯಿತು ನನಗೆ ಖಿನ್ನತೆ ಆವರಿಸಿದೆ ಎಂದು. ‘ಹ್ಯಾಪಿ ನ್ಯೂ ಇಯರ್’ ಸಿನಿಮಾ ಚಿತ್ರೀಕರಣದ ವೇಳೆ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದೆ. ಮುಂಜಾನೆ ಏಳುವುದೇ ದುಸ್ತರವೆನಿಸುತ್ತಿತ್ತು. ಕೊನೆಗೆ ಮನೋ ವೈದ್ಯರ ಸಲಹೆ ಮೇರೆಗೆ ಗುಳಿಗೆ ಸೇವಿಸಲು ಆರಂಭಿಸಿದೆ. ಈಗ ಖಿನ್ನತೆ ಮಾಯವಾಗಿ ಆರಾಮವಾಗಿದ್ದೇನೆ’ ಎನ್ನುತ್ತಾರೆ ದೀಪಿಕಾ.

‘ದೇಹಕ್ಕೆ ಹೇಗೆ ಕಾಯಿಲೆ ಆಗುತ್ತದೋ ಮನಸಿಗೂ ಕಾಯಿಲೆ ಆಗುತ್ತದೆ. ಅದಕ್ಕೂ ಚಿಕಿತ್ಸೆಯಿದೆ. ಖಿನ್ನತೆಯೂ ವಾಸಿಯಾಗಬಲ್ಲ ಕಾಯಿಲೆ’ ಎಂಬುದು ದೀಪಿಕಾಳ ಸಲಹೆ. ಖಿನ್ನತೆ ನಿವಾರಣೆಗಾಗಿ ಎನ್‌ಜಿಒವೊಂದನ್ನು ಆರಂಭಿಸಿರುವ ದೀಪಿಕಾ ಇತ್ತೀಚೆಗಷ್ಟೇ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿಗೆ ಭೇಟಿ ನೀಡಿ, ಅಲ್ಲಿನ ಮಾನಸಿಕ ರೋಗಿಗಳ ಜತೆ ಸಂವಾದ ನಡೆಸಿ, ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT