ಪಟಾಕಿ ನಿಷೇಧದ ಸುತ್ತ ಒಂದು ಆಲೋಚನೆ

ದೆಹಲಿಯು ಕಲುಷಿತಗೊಂಡಿದೆ ಎಂದಾದರೆ ಅದು ಭಾರತದ ಇತರ ನಗರಗಳ ವಾತಾವರಣ ಕಲುಷಿತಗೊಂಡಿರುವಷ್ಟು ದೊಡ್ಡ ಮಟ್ಟದಲ್ಲಿ ಅಥವಾ ಅಷ್ಟೇ ಸಣ್ಣ ಮಟ್ಟದಲ್ಲಿ ಕಲುಷಿತಗೊಂಡಿದೆ. ಆದರೆ, ಅಂಕಲೇಶ್ವರದಂತಹ ಸ್ಥಳಗಳಿಗಿಂತ ಕಡಿಮೆ ಕಲುಷಿತಗೊಂಡಿದೆ ಎಂಬುದು ಖಚಿತ...

ಪಟಾಕಿ ನಿಷೇಧದ ಸುತ್ತ ಒಂದು ಆಲೋಚನೆ

ಎಂಬತ್ತರ ದಶಕದ ಕೊನೆಯ ವರ್ಷಗಳು ಹಾಗೂ ತೊಂಬತ್ತರ ದಶಕದ ಆರಂಭದ ವರ್ಷಗಳ ಬಹುತೇಕ ಕಾಲ ನಾನು ನಮ್ಮ ಕುಟುಂಬದ ಮಾಲೀಕತ್ವದ ಜವಳಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೆ. ಸೂರತ್‌ನಲ್ಲಿನ ನಮ್ಮ ಮನೆಯಿಂದ ರೈಲಿನ ಮೂಲಕ ಒಂದೂವರೆ ಗಂಟೆ ಪ್ರಯಾಣಿಸಿದರೆ ಸಿಗುವ ಅಂಕಲೇಶ್ವರ ಎಂಬ ಕೈಗಾರಿಕಾ ಪ್ರದೇಶದಲ್ಲಿ ಜವಳಿ ಕಾರ್ಖಾನೆ ಇತ್ತು. ನಾನು ಸಾಮಾನ್ಯವಾಗಿ ಕಾರ್ಖಾನೆಗೆ ಮಧ್ಯಾಹ್ನ ಹೋಗುತ್ತಿದ್ದೆ, ಸಂಜೆಯಾದ ತುಸು ಹೊತ್ತಿನ ನಂತರ ಮನೆಗೆ ಮರಳುತ್ತಿದ್ದೆ. ಈ ಉದ್ಯಮ ಅಷ್ಟೇನೂ ಚೆನ್ನಾಗಿ ನಡೆಯಲಿಲ್ಲ.

1991ರ ನಂತರ ಮನಮೋಹನ್ ಸಿಂಗ್ ಅವರು ದೇಶದ ಅರ್ಥ ವ್ಯವಸ್ಥೆಯ ಬಾಗಿಲನ್ನು ಉದಾರೀಕರಣಕ್ಕೆ ತೆರೆದಿಟ್ಟಾಗ, ಇತರರ ಜೊತೆ ಸ್ಪರ್ಧಿಸಲು ನಮ್ಮಿಂದ ಆಗಲಿಲ್ಲ. ಕೆಲವು ವರ್ಷಗಳ ನಂತರ ನಾವು ಉದ್ದಿಮೆಯ ಬಾಗಿಲು ಮುಚ್ಚಿದೆವು.

ನಮ್ಮ ಕಾರ್ಖಾನೆಯು ಪ್ಲಾಸ್ಟಿಕ್‌ ರೀತಿ ಇದ್ದ ಪಾಲಿಸ್ಟರ್‌ ನೂಲನ್ನು, ಧರಿಸಲು ಅನುಕೂಲವಾಗುವಂತೆ ಮಾಡುತ್ತಿತ್ತು. ಬಹಳ ತ್ವರಿತ ಗತಿಯಲ್ಲಿ ಈ ಕೆಲಸ ಮಾಡಬೇಕಿತ್ತು. ಇದಕ್ಕೆ ದೊಡ್ಡದಾದ, ಹವಾ ನಿಯಂತ್ರಿತ ಘಟಕ ಹಾಗೂ ಉಷ್ಣಾಂಶವನ್ನು ತಗ್ಗಿಸುವ ಘಟಕ ಇತ್ತು. ಉಷ್ಣಾಂಶ ತಗ್ಗಿಸುವ ಘಟಕದ ತುದಿಗೆ ನೀರನ್ನು ಸಾಗಿಸುವ ಬೃಹದಾಕಾರದ ಪೈಪ್ ಒಂದು ದಿನ ಮುರಿದು ಬಿತ್ತು. ಅದರ ಲೋಹದ ಪದರುಗಳು ಹಪ್ಪಳದಂತೆ ಹಾರಿದವು. ಏಕೆ ಹಾಗಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಅಂದು ನಾನು ಸಂಜೆ ತುಸು ಹೆಚ್ಚು ಹೊತ್ತು ಕಾರ್ಖಾನೆಯಲ್ಲೇ ಉಳಿದೆ. ಸಂಜೆ 6.30ರ ವೇಳೆಗೆ ನಾನು ಹೋಗುತ್ತಿದ್ದಾಗ, ಆಮ್ಲದ ಹೊಗೆಯು ನನ್ನ ಗಂಟಲನ್ನು ಕಟ್ಟಿತು.

ನಮ್ಮ ಕಾರ್ಖಾನೆಯ ಸಮೀಪದಲ್ಲಿ ಇದ್ದ ಇನ್ನೊಂದು ಕಾರ್ಖಾನೆಯು ಏನೋ ಅಪಾಯಕಾರಿ ವಸ್ತುವನ್ನು ನಿರಂತರವಾಗಿ ಹೊರಸೂಸುತ್ತಿತ್ತು (ಬಹುಶಃ, ಮಾಲಿನ್ಯ ಪ್ರಮಾಣ ತಪಾಸಣೆ ನಡೆಸುವವರಿಂದ ತಪ್ಪಿಸಿಕೊಳ್ಳಲು ಇರಬಹುದು). ಅದು ಹೊರಸೂಸುತ್ತಿದ್ದ ವಸ್ತುವು ಲೋಹವನ್ನು ನಾಶ ಮಾಡುವಷ್ಟು ಅಪಾಯಕಾರಿ ಆಗಿತ್ತು. ಇನ್ನು, ಮನುಷ್ಯನ ಶ್ವಾಸಕೋಶದ ಮೇಲೆ ಅದು ಮಾಡುತ್ತಿದ್ದ ಪರಿಣಾಮವನ್ನು ಕೇಳುವುದು ಬೇಡ. ಇದು ನಮ್ಮ ದೇಶದ ಕೈಗಾರಿಕಾ ಪ್ರದೇಶಗಳಲ್ಲಿ ಅಪರೂಪಕ್ಕೆ ಒಮ್ಮೆ ನಡೆಯುವಂಥದ್ದಲ್ಲ. ನಮ್ಮ ಮಗ್ಗದ ಘಟಕಗಳು ಇದ್ದ, ಸೂರತ್‌ನ ಹೊರವಲಯದ ಉಧ್ನಾ ಮತ್ತು ಪಾಂಡೇಸರಗಳಲ್ಲಿ ಬಣ್ಣ ಹಾಕುವ ಹಾಗೂ ಮುದ್ರಣ ಘಟಕಗಳು ಗಾಢ ಬಣ್ಣಗಳನ್ನು ಹಾಗೇ ಹೊರಕ್ಕೆ ಬಿಡುತ್ತಿದ್ದದ್ದನ್ನು ನಾನು ಕಂಡಿದ್ದೇನೆ. ಇದು ಅಂತರ್ಜಲವನ್ನು ವಿಷವಾಗಿ ಪರಿವರ್ತಿಸುತ್ತಿತ್ತು.

ದೀಪಾವಳಿ ಸಂದರ್ಭದಲ್ಲಿ ದೆಹಲಿಯಲ್ಲಿ ಪಟಾಕಿಗಳ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ನಿಷೇಧ ಹೇರಿರುವ ಸುದ್ದಿಯನ್ನು ಓದಿ ಇದನ್ನು ಬರೆಯುತ್ತಿದ್ದೇನೆ. ದೆಹಲಿಗೆ ಆಗಾಗ ಭೇಟಿ ನೀಡುವ ನನಗೆ ಅಲ್ಲಿನ ಗಾಳಿಯ ಗುಣಮಟ್ಟದಲ್ಲಿ ವ್ಯತ್ಯಾಸವೇನೂ ಕಂಡಿಲ್ಲ. ದೆಹಲಿಯು ಕಲುಷಿತಗೊಂಡಿದೆ ಎಂದಾದರೆ ಅದು ಭಾರತದ ಇತರ ನಗರಗಳ ವಾತಾವರಣ ಕಲುಷಿತಗೊಂಡಿರುವಷ್ಟು ದೊಡ್ಡ ಮಟ್ಟದಲ್ಲಿ ಅಥವಾ ಅಷ್ಟೇ ಸಣ್ಣ ಮಟ್ಟದಲ್ಲಿ ಕಲುಷಿತಗೊಂಡಿದೆ. ಆದರೆ, ಅಂಕಲೇಶ್ವರದಂತಹ ಸ್ಥಳಗಳಿಗಿಂತ ಕಡಿಮೆ ಕಲುಷಿತಗೊಂಡಿದೆ ಎಂಬುದು ಖಚಿತ. ಅಂಕಲೇಶ್ವರದಂತಹ ಪ್ರದೇಶಗಳಲ್ಲಿ ನೈಜ ಸಮಸ್ಯೆ ಇದೆ.
ಒಮ್ಮೆ ಸಂಚಾರ ನಿಯಮಗಳ ಬದಲಾವಣೆ ಮೂಲಕ, ಈಗ ಪಟಾಕಿ ಮಾರಾಟ ನಿಷೇಧದ ಮೂಲಕ ದೆಹಲಿಯನ್ನು ರಿಪೇರಿ ಮಾಡಲು ಮತ್ತೆ ಮತ್ತೆ ಮುಂದಾಗುವುದು ಗೊಂದಲಕಾರಿಯಾಗಿ ನನಗೆ ಕಾಣಿಸುತ್ತದೆ. ಒಂದು ದಿನ ಪಟಾಕಿ ಹೊಡೆಯದಿದ್ದರೆ ಮಾಲಿನ್ಯದ ಮಟ್ಟ ಹೇಗೆ ಬದಲಾಗುತ್ತದೆ? ವಾಯು ಮಾಲಿನ್ಯ ಹಾಗೂ ಇತರ ಬಗೆಯ ಮಾಲಿನ್ಯಗಳು ದೇಶದ ಎಲ್ಲ ಪ್ರದೇಶಗಳನ್ನೂ ತಟ್ಟಿರುವುದು ಕಣ್ಣಿಗೆ ಕಾಣುವಷ್ಟು ಸತ್ಯವಾಗಿರುವಾಗ, ಇಂತಹ ಉನ್ನತ ಆಲೋಚನೆಗಳನ್ನು ರಾಷ್ಟ್ರ ರಾಜಧಾನಿಗೆ ಮಾತ್ರ ಸೀಮಿತಗೊಳಿಸುವುದು ಏಕೆ?

ಪಟಾಕಿ ನಿಷೇಧದ ವಿಚಾರವು, ಹಿಂದೂ ರಾಷ್ಟ್ರವಾದ (ಇದು ಕೂಡ ವಿಷಕಾರಿ) ತುಂಬಿಕೊಂಡಿರುವ ಈ ಹೊತ್ತಿನಲ್ಲಿ, ಮುಸ್ಲಿಮರನ್ನು ದೂಷಿಸಲು ಇನ್ನೊಂದು ಕಾರಣವಾಗಿ ಮಾರ್ಪಟ್ಟಿದೆ ಎಂಬುದು ನಿಜ. ಮುಂದಿನ ಹೆಜ್ಜೆಯಾಗಿ ಹಿಂದೂಗಳ ಶವದ ಅಂತ್ಯಸಂಸ್ಕಾರಕ್ಕೆ ಅವಕಾಶ ನಿರಾಕರಿಸಲಾಗುತ್ತದೆಯೇ ಎಂದು ಬಿಜೆಪಿಯ ರಾಜ್ಯಪಾಲರೊಬ್ಬರು ಪ್ರಶ್ನಿಸಿದ್ದಾರೆ. ಮೇಕೆಗಳ ಬಲಿಯನ್ನು ನಿಷೇಧಿಸಲು ಭಾರತದ ನ್ಯಾಯಾಲಯ ಧೈರ್ಯ ತೋರುತ್ತದೆಯೇ ಎಂದು ಚೇತನ್ ಭಗತ್ ಪ್ರಶ್ನಿಸಿದ್ದಾರೆ. ಪಟಾಕಿ ನಿಷೇಧಿಸಲು ಮುಸ್ಲಿಮರು ಬೇಡಿಕೆ ಇಟ್ಟಿದ್ದರೇ? ಈ ವಿವಾದದಲ್ಲಿ ಅವರನ್ನು ಏಕೆ ಎಳೆದು ತರಲಾಗುತ್ತಿದೆ? ತನ್ನ ಆದೇಶಕ್ಕೆ ಕೋಮು ತಿರುವು ಸಿಕ್ಕಿರುವುದು ದುರದೃಷ್ಟಕರ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ ಅದು ತಾನು ಕೆಲಸ ಮಾಡುತ್ತಿರುವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು.

ಮಾರಾಟದ ಅವಕಾಶಕ್ಕೆ ಕಾಯುತ್ತ ಅಂದಾಜು 50 ಲಕ್ಷ ಕೆ.ಜಿ. ಪಟಾಕಿಗಳು ದೆಹಲಿಯಲ್ಲಿ ಇವೆ. ಈಗ ಹೇರಿರುವ ನಿಷೇಧವು, ತಮ್ಮ ಸೀಮಿತ ಆದಾಯವನ್ನು ಹಬ್ಬದ ಸಂದರ್ಭದಲ್ಲಿ ತುಸು ಹೆಚ್ಚು ಮಾಡಿಕೊಳ್ಳುವವರ ಮೇಲೆ ಪರಿಣಾಮ ಉಂಟು ಮಾಡುತ್ತದೆ. ದೀಪಾವಳಿಯನ್ನು ನನ್ನಂತೆಯೇ ಆನಂದಿಸುವ ಲಕ್ಷಾಂತರ ಮಕ್ಕಳು ಹಾಗೂ ವಯಸ್ಕರ ಮೇಲೆಯೂ ಇದು ಪರಿಣಾಮ ಬೀರಲಿದೆ ಎಂಬ ವರದಿಗಳಿವೆ.

ವಿಶ್ವದ ಅತ್ಯಂತ ಬಡ ಪ್ರದೇಶಗಳಲ್ಲಿ ಒಂದಾದ ಪ್ರದೇಶದಲ್ಲಿ ಇರುವ ನಾವು, 'ಸಾಂಸ್ಕೃತಿಕ ಚಟುವಟಿಕೆಯನ್ನು ಹತ್ತಿಕ್ಕುವುದರಿಂದ ಉತ್ಪಾದಕತೆ ಸಾಧ್ಯವೇ' ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಲಾಹೋರ್‌ನಲ್ಲಿ ಬಸಂತ ಹಬ್ಬದ ವೇಳೆ ಗಾಳಿಪಟಗಳ ಉತ್ಸವವನ್ನು ನಿಷೇಧಿಸುವ ಮೂಲಕ ಪಾಕಿಸ್ತಾನ ಕೂಡ ಇದೇ ಬಗೆಯ ತಪ್ಪು ಮಾಡುತ್ತದೆ. ಗಾಳಿಪಟ ಉತ್ಸವವು 'ಇಸ್ಲಾಮಿಕ್ ಅಲ್ಲ' ಎಂದು ಅಲ್ಲಿನ ನ್ಯಾಯಾಧೀಶರು ನಂಬುತ್ತಾರೆ, ಹಾಗಾಗಿ ಇದನ್ನು ಆಚರಿಸದಂತೆ ಜನರನ್ನು ತಡೆಯಬೇಕು ಎಂದು ಭಾವಿಸುತ್ತಾರೆ. ನಿಷೇಧಕ್ಕೆ ನೀಡುವ ನೆಪ, ಹಕ್ಕಿಗಳು ಹಾಗೂ ಮನುಷ್ಯರ ಜೀವ ರಕ್ಷಣೆ ಎಂಬುದು. ಆದರೆ, ನಿಜವಾದ ಉದ್ದೇಶ ಇರುವುದು ಧಾರ್ಮಿಕ ಆಯಾಮದಲ್ಲಿ.

ಗಾಳಿಪಟ ಹಾರಿಸುವ ವೇಳೆ ಗಾಯಗಳಾಗಬಹುದು, ಕೆಲವೊಮ್ಮೆ ಸಾವು ಕೂಡ ಸಂಭವಿಸಬಹುದು ಎಂಬುದು ನಿಜ. ಆದರೆ, ಇತರ ಹಲವು ಆಚರಣೆಗಳಿಂದಲೂ ಇದು ಆಗುತ್ತದೆ. ಯಾವುದೋ ಒಂದು ಸಂಗತಿ ನಮ್ಮನ್ನು ಸುರಕ್ಷಿತವಾಗಿ ಇರಿಸುವುದಿಲ್ಲ ಎಂಬ ಒಂದೇ ಕಾರಣಕ್ಕೆ ಅದನ್ನು ನಿಷೇಧಿಸುವ ಆಲೋಚನೆಯನ್ನು ನಾವು ಮಾಡುವುದಿಲ್ಲ, ಹಾಗೆ ಮಾಡಲೂಬಾರದು. ಪಟಾಕಿಗಳ ಮೇಲೆ ನಿಷೇಧವು ಇಂಥದ್ದೊಂದು ಆಲೋಚನೆಯಿಂದ ಬಂದಿರಲಿಕ್ಕಿಲ್ಲ. ಆದರೆ, ಒಂದೇ ಏಟಿನ ಮೂಲಕ ಬದಲಾವಣೆ ತರುವ ಅಭಿಲಾಷೆಯ ಕಾರಣದಿಂದಾಗಿ ಇಂಥದ್ದೊಂದು ಕ್ರಮಕ್ಕೆ ಮುಂದಾಗಿರುವಂತಿದೆ. ಭಾವನೆಗಳನ್ನು ಎಲ್ಲಿಡಬೇಕೋ ಅಲ್ಲಿ ಇಟ್ಟಿರದ ಪರಿಣಾಮ ಇದು.

ಭಾರತದ ಸುಪ್ರೀಂ ಕೋರ್ಟ್‌ಗೆ ಲವ್‌ ಜಿಹಾದ್‌, ರಾಷ್ಟ್ರಗೀತೆಯ ವಿಚಾರದಲ್ಲಿ ಇರುವ ಆಸಕ್ತಿಗಳನ್ನು ಗಮನಿಸಿದರೆ, ರಾಜಧಾನಿಯ ಗಾಳಿಯ ಗುಣಮಟ್ಟ ಹೆಚ್ಚಿಸುವ ವಿಚಾರದಲ್ಲಿ ಅದಕ್ಕೆ ಇರುವ ಆಸಕ್ತಿ ನಮ್ಮಲ್ಲಿ ಆಶ್ಚರ್ಯ ಮೂಡಿಸಬಾರದು (ಅಮೆರಿಕದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ಸುಪ್ರೀಂ ಕೋರ್ಟ್‌ಗಳು ಯಾವ ಬಗೆಯ ವಿಚಾರಗಳನ್ನು ಕೈಗೆತ್ತಿಕೊಳ್ಳುತ್ತವೆ, ಎಂಥವುಗಳನ್ನು ಅವು ತಿರಸ್ಕರಿಸುತ್ತವೆ ಎಂಬುದು ಕುತೂಹಲದ ವಿಚಾರ).
ಮಾಲಿನ್ಯದ ಸಮಸ್ಯೆ ಹಾಗೂ ಹವಾಮಾನ ಬದಲಾವಣೆಯ ಸಮಸ್ಯೆ ನಿಜಕ್ಕೂ ಗಂಭೀರವಾಗಿವೆ. ಆದರೆ ನಾವು, ಆಲೋಚನೆ ಮಾಡದೆಯೇ ಅವುಗಳಿಗೆ ಅರ್ಥಹೀನ ಪರಿಹಾರ ಹೇಳಿದರೆ, ಸಮಸ್ಯೆಯ ಗಾಂಭೀರ್ಯ ಕಡಿಮೆ ಆಗುತ್ತದೆ. ಇಂಥ ವಿಚಾರಗಳಲ್ಲಿ ಆದೇಶ ನೀಡುವಾಗ ಒಳ್ಳೆಯ ಉದ್ದೇಶ ಇರುತ್ತದೆ ಎಂಬ ನಂಬಿಕೆ ಕೋರ್ಟ್‌ಗಳಿಗೆ ಇದ್ದರೂ, ಈ ಮಾದರಿಯ ಆದೇಶಗಳನ್ನು ಹೊರಡಿಸುವಾಗ ಕೋರ್ಟ್‌ಗಳು ಇನ್ನಷ್ಟು ಜಾಗರೂಕವಾಗಿ ಇರಬೇಕು.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

Comments
ಈ ವಿಭಾಗದಿಂದ ಇನ್ನಷ್ಟು
ಅವರಿಗೂ ನಮಗೂ ವ್ಯತ್ಯಾಸ ಇಲ್ಲವಾದಾಗ...

ದೂರ ದರ್ಶನ
ಅವರಿಗೂ ನಮಗೂ ವ್ಯತ್ಯಾಸ ಇಲ್ಲವಾದಾಗ...

22 Apr, 2018

ದೂರ ದರ್ಶನ
ಸಂಕೀರ್ಣ ಸಮಸ್ಯೆಗೆ ಸರಳ ಪರಿಹಾರ ಬಯಸುವವರು...

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 38,947. ಮಕ್ಕಳ ಮೇಲೆ 1.06 ಲಕ್ಷಕ್ಕೂ ಹೆಚ್ಚಿನ ದೌರ್ಜನ್ಯಗಳು ನಡೆದಿವೆ.

16 Apr, 2018
ದಲಿತರಿಗಾಗಿ ಎರಡು ರಾತ್ರಿ ಕಳೆದರೆ ಸಾಕೇ?!

ದೂರ ದರ್ಶನ
ದಲಿತರಿಗಾಗಿ ಎರಡು ರಾತ್ರಿ ಕಳೆದರೆ ಸಾಕೇ?!

9 Apr, 2018

ದೂರ ದರ್ಶನ
ಮಾರುಕಟ್ಟೆಯ ಮಾತು, ಇತಿಹಾಸದ ಸಂದೇಶ

‘ಅತಂತ್ರ ಲೋಕಸಭೆ’ ಎನ್ನುವ ಮಾತು ಷೇರು ಮಾರುಕಟ್ಟೆಯನ್ನು ಭೀತಿಗೆ ನೂಕುತ್ತದೆ. ಬಲಿಷ್ಠ ಮತ್ತು ದೃಢ ನಿರ್ಧಾರಗಳನ್ನು ಕೈಗೊಳ್ಳುವ ನಾಯಕತ್ವವನ್ನು ನಮ್ಮ ಅರ್ಥ ವ್ಯವಸ್ಥೆ ಬಯಸುತ್ತದೆ.  ...

2 Apr, 2018
ಇದು ರಕ್ಷಿಸುವ ಕಾನೂನುಗಳ ಭಂಜನೆಯೇ?

ದೂರ ದರ್ಶನ
ಇದು ರಕ್ಷಿಸುವ ಕಾನೂನುಗಳ ಭಂಜನೆಯೇ?

26 Mar, 2018