ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಾಪಕರೇ ನಿರ್ಮಿಸಿದ ಸುಂದರ ಉದ್ಯಾನ

Last Updated 16 ಅಕ್ಟೋಬರ್ 2017, 9:26 IST
ಅಕ್ಷರ ಗಾತ್ರ

ಶಿವಮೊಗ್ಗ: ಕೇವಲ ಸಂಬಳಕ್ಕಾಗಿ ಪಾಠ ಮಾಡುವವರ ಸಂಖ್ಯೆಯೇ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, ಎಲ್ಲರಿಗಿಂತ ಭಿನ್ನವಾಗಿ ಯೋಚಿಸುವ ಸಹ್ಯಾದ್ರಿ ಕಾಲೇಜಿನ ಅಧ್ಯಾಪಕರು ಸ್ವಂತ ಹಣದಿಂದ ಶೈಕ್ಷಣಿಕ ವಾತಾವರಣ ಸುಂದರಗೊಳಿಸಿದ್ದಾರೆ. ನಗರದ ಸಹ್ಯಾದ್ರಿ ಕಲಾ ಕಾಲೇಜಿನ ಕೆಲ ಸಮಾನಮನಸ್ಕ ಅಧ್ಯಾಪಕರು ತಮ್ಮ ಕಾಲೇಜು ವಾತಾವರಣವನ್ನು ಮತ್ತಷ್ಟು ಪರಿಸರ ಸ್ನೇಹಿಯನ್ನಾಗಿಸುವ ಸಲುವಾಗಿ ತಮ್ಮ ಜೇಬಿನಿಂದಲೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸುಂದರ ಉದ್ಯಾನ ನಿರ್ಮಿಸಿದ್ದಾರೆ. ಈ ಉದ್ಯಾನ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿದೆ.

ಶ್ರೇಷ್ಠ ವ್ಯಕ್ತಿಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿರುವ, ಅದರಲ್ಲೂ ಸಹ್ಯಾದ್ರಿಯ ತಪ್ಪಲಿನಲ್ಲಿರುವ ಈ ಕಾಲೇಜು 2011ರಲ್ಲಿ ಬೇರ್ಪಟ್ಟ ನಂತರ ಸ್ವಂತ ಉದ್ಯಾನ ಇಲ್ಲ ಎನ್ನುವ ಕೊರಗಿತ್ತು. ಉದ್ಯಾನ ಇಲ್ಲದೇ ಕಾಲೇಜಿನ ಶೈಕ್ಷಣಿಕ ವಾತಾವರಣವೂ ಮಂಕಾಗಿತ್ತು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ತೀರ್ಮಾನಿಸಿದ ಕೆಲ ಅಧ್ಯಾಪಕರು ಯಾರೊಬ್ಬರ ಸಹಾಯವನ್ನೂ ಬಯಸದೇ ಸುಂದರ ಉದ್ಯಾನ ನಿರ್ಮಿಸಿ, ತಾವು ಎಲ್ಲ ಶಿಕ್ಷಕರಿಗಿಂತ ಭಿನ್ನ ಎಂಬುದನ್ನು ಸಾಬೀತುಪಡಿಸಿದ್ದಾರೆ.

ವಿಶಾಲವಾದ ಉದ್ಯಾನ: ಉದ್ಯಾನ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಔಷಧೀಯ ಗಿಡಗಳು, ಕಾಡು ಜಾತಿಯ ಗಿಡಗಳು, ಪಾರಿಜಾತ ಗಿಡಗಳು, ತೆಂಗು, ಅಡಿಕೆ, ಮಾವು, ನೇರಳೆ, ಚೆರ್ರಿ, ಹಲಸು, ನೆಲ್ಲಿ ಮತ್ತಿತರ ಹಣ್ಣಿನ ಗಿಡಗಳನ್ನು ಬೆಳೆಯಲಾಗುತ್ತಿದೆ.

ಅಲ್ಲದೆ ಕುವೆಂಪು ತಮ್ಮ ಕೃತಿಗಳಲ್ಲಿ ಹೆಸರಿಸಿರುವ ಮಲೆನಾಡಿನ ಗಿಡ ಮರಗಳು, ಪಂಪವನ, ಕದಳಿ ಹೀಗೆ ಹತ್ತು ಹಲವು ಗಿಡ–ಮರಗಳನ್ನು ಬೆಳೆಸಲಾಗುತ್ತಿದೆ. ಇದರಿಂದ ಮನುಷ್ಯರಷ್ಟೇ ಅಲ್ಲದೇ ಪ್ರಾಣಿ ಪಕ್ಷಿಗಳು ಸಹ ಆಕರ್ಷಿತವಾಗುತ್ತಿವೆ.

ಕೈ ಜೋಡಿಸಿದ ಸಮಾನಮನಸ್ಕರು: ಉದ್ಯಾನ ನಿರ್ಮಿಸುವ ಕುರಿತು ಪ್ರಸ್ತಾಪಿಸಿದಾಗ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರು ತಮ್ಮ ತಾಯಿ ದಿ.ಅಮ್ಮಯ್ಯ ಹಾಗೂ ತಂದೆ ಬೆಂಡೆಕಟ್ಟೆ ನಾಗಪ್ಪ ಅವರ ಹೆಸರಿನಲ್ಲಿ ನಿರ್ಮಿಸುವುದಾಗಿ ಮನಸ್ಸು ಮಾಡಿದರು. ನಂತರ ಇವರ ಕಾರ್ಯಕ್ಕೆ ಕೆಲವು ಸಮಾನಮನಸ್ಕರು ಕೈ ಜೋಡಿಸಿದರು.

ಆರಂಭದಲ್ಲಿ ಅಪಸ್ವರ: ಉದ್ಯಾನ, ನಿರ್ಮಾಣಕ್ಕೂ ಮುನ್ನವೇ ಹಲವರ ಅಪಸ್ವರಕ್ಕೆ ಕಾರಣವಾಗಿತ್ತು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅಧ್ಯಾಪಕರ ತಂಡ ಅದರ ನಿರ್ಮಾಣಕ್ಕೆ ಮುಂದಾಯಿತು. ಅದಕ್ಕಾಗಿ ಅಧ್ಯಾಪಕರು ತಾವೇ ಗುದ್ದಲಿ ಹಿಡಿದರು. ಗಿಡ ನೆಟ್ಟರು. ಕಳೆ ತೆಗೆದರು. ನೀರುಣಿಸಿದರು. ಎರಡು ವರ್ಷದ ಬರಗಾಲದಲ್ಲಿ ಉದ್ಯಾನ ಉಳಿಸಿಕೊಳ್ಳಲು ಸಾಕಷ್ಟು ಶ್ರಮ ವಹಿಸಿದರು.

ಗುರುಗಳ ಈ ಕಾರ್ಯಕ್ಕೆ ವಿದ್ಯಾರ್ಥಿಗಳು, ಎನ್‌ಎಸ್‌ಎಸ್‌ ಪದಾಧಿಕಾರಗಳು ಕೈ ಜೋಡಿಸಿದರು. ನಂತರ ಉದ್ಯಾನದ ಉಸ್ತುವಾರಿಗೆ ಒಬ್ಬ ವ್ಯಕ್ತಿಯನ್ನು ನೇಮಿಸಿ, ಸ್ವಂತ ಹಣದಿಂದಲೇ ಸುಮಾರು ಒಂದೂವರೆ ವರ್ಷ ಸಂಬಳ ನೀಡಿದರು.

ಎರಡು ವರ್ಷಗಳ ಶ್ರಮಕ್ಕೆ ಈಗ ಫಲಸಿಕ್ಕಿದೆ. ಆವರಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ‘ನ್ಯಾಕ್’ ಸಮಿತಿಯ ಮೆಚ್ಚುಗೆಗೂ ಪಾತ್ರವಾಗಿದೆ.  ವಿಶ್ವವಿದ್ಯಾಲಯ ಕೆಲು ದಿನಗಳಿಂದ ಈಚೆಗೆ  ನಿರ್ವಹಣೆಗೆ ಇಬ್ಬರು ಕೆಲಸಗಾರರನ್ನು ನೇಮಿಸಿ ಸಂಬಳ ನೀಡುತ್ತಿದೆ. 

ತಪ್ಪಿದ ಕಿರಿಕಿರಿ: ಕಾಲೇಜು ಮುಂಭಾಗದಲ್ಲಿ ಇದ್ದ ವಿಶಾಲವಾದ ಜಾಗದಲ್ಲಿ ವಿದ್ಯಾರ್ಥಿಗಳು, ಹೊರಗಿನ ಯುವಕರು ಕ್ರಿಕೆಟ್‌, ಫುಟ್‌ಬಾಲ್ ಒಳಗೊಂಡಂತೆ ಹಲವು ಆಟಗಳನ್ನು ಆಡುತ್ತಿದ್ದರು. ಇದರಿಂದ ಅಧ್ಯಾಪಕರಿಗೆ ಪಾಠ ಮಾಡಲು ಕಿರಿಕಿರಿಯಾಗುತ್ತಿತ್ತು. ಅಲ್ಲದೆ ಪಂದ್ಯಾವಳಿ ಆಯೋಜಿಸಲು ಕ್ರೀಡಾಂಗಣ ಬಿಟ್ಟುಕೊಡಿ ಎನ್ನುವ ಒತ್ತಡವು ಪ್ರಾಂಶುಪಾಲರ ಹೆಗಲೇರುತ್ತಿತ್ತು. ಇದೀಗ ಆ ಸ್ಥಳದಲ್ಲಿ ಉದ್ಯಾನ ನಿರ್ಮಿಸಿರುವುದರಿಂದ ಕಿರಿಕಿರಿ ತಪ್ಪಿದಂತಾಗಿದೆ.

ಅನಿಲ್ ಸಾಗರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT