ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯದಿಂದಲೇ ‘ರೇಸರ್’

Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅಪ್ಪನ ಹೆಸರು ಆಂಥನಿ ಹ್ಯಾಮಿಲ್ಟನ್; ಕಪ್ಪು ಬ್ರಿಟಿಷ್. ಅಮ್ಮನ ಹೆಸರು ಕಾರ್ಮೆನ್; ಬಿಳಿ ಬ್ರಿಟಿಷ್. ಮಗ ಲೂಯಿಸ್ ಕಾರ್ಲ್ ಡೇವಿಡ್‌ಸನ್ ಹ್ಯಾಮಿಲ್ಟನ್; ಮಿಶ್ರ ವರ್ಣ. ಮೂವತ್ತೆರಡು ವಯಸ್ಸಿನ ಈ ಮಗ ಫಾರ್ಮುಲಾ ಒನ್ ರೇಸರ್. ಮೊನ್ನೆ ಮೊನ್ನೆ ಸಿಂಗಪುರ ಗ್ರ್ಯಾನ್ ಪ್ರಿ ರೇಸ್‌ನಲ್ಲಿ ಒದ್ದೆ ನೆಲದ ಮೇಲೂ ಸ್ಪರ್ಧಿಗಳನ್ನು ಹಿಂದಿಕ್ಕಿ ಗೆಲುವಿನ ಸವಿ ಉಂಡ ಸಾಧಕ.

ಅಪ್ಪ–ಅಮ್ಮ ಪ್ರತ್ಯೇಕವಾಗಿ ಬದುಕಲು ನಿರ್ಧರಿಸಿದಾಗ ಹ್ಯಾಮಿಲ್ಟನ್‌ ಇನ್ನೂ ಎರಡರ ಶಿಶು. ಸ್ವತಂತ್ರವಾಗಿ ನಡೆಯುವ ಹೊತ್ತಿಗೆ ಮತ್ತೆ ಅಪ್ಪನ ಪ್ರೀತಿ ಸಿಕ್ಕಿತು. ಮಾಹಿತಿ ತಂತ್ರಜ್ಞಾನ ಕಂಪೆನಿಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಅಪ್ಪ, ಮಗನಿಗೆ 1991ರಲ್ಲಿ ರೇಡಿಯೊ ನಿಯಂತ್ರಣವಿರುವ ಕಾರ್‌ ತಂದುಕೊಟ್ಟರು. ಅದರಲ್ಲಿ ರೇಸ್ ಆಡುವ ಗೀಳಿಗೆ ಮಗ ಬಿದ್ದಮೇಲೆ ಅಪ್ಪನ ಬದುಕೂ ಬದಲಾಗಲೇಬೇಕಾಯಿತು. ರಾಷ್ಟ್ರೀಯ ಬಿಆರ್‌ಸಿಎ ಚಾಂಪಿಯನ್‌ಷಿಪ್‌ನಲ್ಲಿ ಹ್ಯಾಮಿಲ್ಟನ್ ಎರಡನೆಯವನಾಗಿ ರೇಸ್ ಪೂರೈಸಿದ್ದೇ ಇದಕ್ಕೆ ಕಾರಣ.

ಆರು ವರ್ಷದ ಪುಟ್ಟ ಮಗನಿಗೆ ಆಂಥನಿ ಗೋ–ಕಾರ್ಟ್ ತಂದುಕೊಟ್ಟರು. ಆಮೇಲಂತೂ ಹ್ಯಾಮಿಲ್ಟನ್‌ಗೂ ರೇಸ್‌ಗೂ ಸಾವಯವ ಸಂಬಂಧ ಸಂದಿತು. ಶಾಲೆಯಲ್ಲಿ ಚೆನ್ನಾಗಿ ಕಲಿತರೆ ರೇಸಿಂಗ್‌ ಬದುಕು ಕಟ್ಟಿಕೊಳ್ಳಲು ಏನು ಬೇಕೋ ಎಲ್ಲವನ್ನೂ ಒದಗಿಸುವುದಾಗಿ ಅಪ್ಪ ಭರವಸೆ ಕೊಟ್ಟರು. ಮಗನಿಗೆ ಅಷ್ಟು ಸಾಕಾಯಿತು. ಫಾರ್ಮುಲಾ ಒನ್ ರೇಸರ್ ಆಗುವುದೆಂದರೆ ದುಬಾರಿ ಬಾಬತ್ತು. ಅದಕ್ಕೆ ದೊಡ್ಡ ಮೊತ್ತದ ಹಣ ಬೇಕು. ಅಪ್ಪ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೆಲಸ ಬಿಟ್ಟು ಗುತ್ತಿಗೆದಾರರಾದರು. ಮಗನ ವೃತ್ತಿಬದುಕು ರೂಪಿಸಲು ಅಗತ್ಯವಿದ್ದ ಹಣ ಹೊಂದಿಸಲಿಕ್ಕೆ ಅವರು ಆಯ್ಕೆ ಮಾಡಿಕೊಂಡ ದಾರಿ ಅದು. ಕೆಲವೊಮ್ಮೆ ಅವರು ಏಕಕಾಲದಲ್ಲಿ ಮೂರು ಮೂರು ಕೆಲಸಗಳನ್ನು ಮಾಡಿದ ದಿನಗಳೂ ಇವೆ.

1995ರ ಡಿಸೆಂಬರ್‌ನಲ್ಲಿ ಹ್ಯಾಮಿಲ್ಟನ್‌ ಸೀದಾ ನಡೆದುಹೋಗಿ ಮೆಕ್‌ಲಾರೆನ್‌ ತಂಡದ ಪ್ರಿನ್ಸಿಪಲ್ ರಾನ್ ಡೆನ್ನಿಸ್ ಎದುರು ನಿಂತ. ಹತ್ತು ವರ್ಷದ ಹುಡುಗ ಆಟೊಸ್ಪೋರ್ಟ್ಸ್‌ ಪ್ರಶಸ್ತಿ ಸಮಾರಂಭದಲ್ಲಿ ಹಾಗೆ ಎದೆಯುಬ್ಬಿಸಿ ನಿಂತದ್ದನ್ನು ನೋಡಿ ರಾನ್ ದಂಗಾದರು. ‘ನಾನು ಮುಂದೆ ಒಂದು ದಿನ ನಿಮ್ಮ ಕಂಪೆನಿಯ ರೇಸರ್ ಆಗಬೇಕೆಂದಿರುವೆ. ಆಗಿಯೇ ತೀರುವೆ’ ಎಂದು ಹುಡುಗ ಹೇಳಿದಾಗಲಂತೂ ಅವರಿಗೆ ಮಾತೇ ಹೊರಡಲಿಲ್ಲ.

ಮುಂದಿನ ಮೂರೇ ವರ್ಷಗಳಲ್ಲಿ ಮರ್ಸಿಡೀಸ್‌ ಬೆಂಜ್ ಹಾಗೂ ಮೆಕ್‌ಲಾರೆನ್ಸ್‌ ಕಂಪೆನಿಗಳು ಯುವ ಚಾಲಕರಿಗೆ ನೆರವು ನೀಡುವ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಿದವು. ಬೆನ್ನು ತಟ್ಟಲು ಹೆಕ್ಕಿಕೊಂಡಿದ್ದವರ ಪಟ್ಟಿಯಲ್ಲಿ ಪ್ರೌಢ ಹ್ಯಾಮಿಲ್ಟನ್‌ ಹೆಸರೂ ಇತ್ತು.

2008ರಲ್ಲಿ ಬ್ರೆಜಿಲ್‌ ಗ್ರ್ಯಾನ್‌ ಪ್ರಿ ರೇಸ್‌ನಲ್ಲಿ ಸದ್ದು ಮಾಡಿದಾಗ ಹ್ಯಾಮಿಲ್ಟನ್‌ ತಂದೆ ಎರಡೆರಡು ಜವಾಬ್ದಾರಿ ಹೊತ್ತಿದ್ದರು. ಒಂದು ಕಡೆ ತಮ್ಮದೇ ಕಂಪ್ಯೂಟರ್ ಉದ್ದಿಮೆ ಪ್ರಾರಂಭಿಸಿದ್ದರು. ಇನ್ನೊಂದು ಕಡೆ ಮಗನ ವ್ಯವಸ್ಥಾಪಕರಾಗಿಯೂ ಕೆಲಸ ಮಾಡುತ್ತಿದ್ದರು. ಮಗ 2010ರಲ್ಲಿ ಅಪ್ಪನ ನೆರಳಿನಿಂದ ಸಂಪೂರ್ಣ ಹೊರಬಂದಿದ್ದೂ ವೃತ್ತಿಪರತೆಯ ಇನ್ನೊಂದು ಮಜಲು. ತನ್ನ ಸಾಧನೆಗಾಗಿ ಅಷ್ಟೆಲ್ಲ ಏಗಿದ ಅಪ್ಪನನ್ನು ವ್ಯವಸ್ಥಾಪಕನ ಕೆಲಸದಿಂದ ಬಿಡಿಸುವುದು ಕೂಡ ಸುಲಭ ಅಲ್ಲವಲ್ಲ. 2007ರಲ್ಲಿ ಮೆಕ್‌ಲಾರೆನ್ಸ್‌ ತಂಡದ ಪರವಾಗಿ ರೇಸ್‌ ಕಣಕ್ಕೆ ಹ್ಯಾಮಿಲ್ಟನ್‌ ಇಳಿದಾಗ ಅನೇಕರು ನೆನಪಿಸಿಕೊಂಡಿದ್ದು ಹತ್ತನೇ ವಯಸ್ಸಿನಲ್ಲಿಯೇ ಅವರಿಗಿದ್ದ ಗುರಿಯನ್ನು. ಅದಕ್ಕಾಗಿ ಹದಿನೈದು ವರ್ಷ ಪರಿಶ್ರಮ ಪಟ್ಟಿದ್ದು ರೇಸ್‌ನ ಸೂಕ್ಷ್ಮಗಳನ್ನು ಬಲ್ಲ ಎಲ್ಲರಿಗೂ ಗೊತ್ತಿತ್ತು.

ಹ್ಯಾಮಿಲ್ಟನ್‌ ಪದೇ ಪದೇ ‘ಮಣ್ಣಲ್ಲಿ ಬಿದ್ದು, ಮುಗಿಲಲ್ಲಿ ಎದ್ದಿದ್ದಾರೆ’. ಫಾರ್ಮುಲಾ ಒನ್‌ ರೇಸ್‌ನಲ್ಲಿ 20ನೇ ಸ್ಥಾನಕ್ಕಿಂತ ಕೆಳಕ್ಕೆ ಕುಸಿದ ಮೇಲೆ ಮತ್ತೆ ಗೆಲ್ಲುವ ಮಟ್ಟ ತಲುಪುವವರು ಬಲು ಅಪರೂಪ. ಅಂಥ ಸಾಧನೆಯನ್ನು ಮೂರು ಸಲ ಅವರು ಮಾಡಿದ್ದಾರೆ. ಇಂಗ್ಲೆಂಡ್‌ನ ಬೇರೆ ಯಾವ ಚಾಲಕನೂ ಮಾಡದ ಸಾಧನೆ ಇದು. ಸಾರ್ವಕಾಲಿಕ ಶ್ರೇಷ್ಠ ಫಾರ್ಮುಲಾ ಒನ್ ಚಾಲಕರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಹ್ಯಾಮಿಲ್ಟನ್‌ ವಿಶ್ವದ ಸೆಲೆಬ್ರಿಟಿ. ಅವರು ಹಲ್ಲುಜ್ಜುವುದು ಹೇಗೆ ಎನ್ನುವುದರಿಂದ ಹಿಡಿದು ಅವರ ಮೈಮೇಲೆ ಏನೇನೆಲ್ಲ ಹಚ್ಚೆಗಳಿವೆ ಎನ್ನುವವರೆಗೆ; ಅವರ ಖರ್ಚು, ಆದಾಯದ ಆಳ–ಅಗಲ ಏನು ಎನ್ನುವುದರಿಂದ ಹಿಡಿದು ಅವರ ಹಿಂದೆ ಬಿದ್ದ ಲಲನೆಯರ ಪಟ್ಟಿಯವರೆಗೆ ಹಲವು ಸುದೀರ್ಘ ಲೇಖನಗಳು ಪ್ರಕಟವಾಗಿವೆ; ಆಗುತ್ತಲೇ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT