ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಪಕ್ಷಗಳ ಬಾಗಿಲು ತಟ್ಟುತ್ತಿರುವ ಶಾಸಕರು?

ರಾಜಕಾರಣಿಗಳ ಪಕ್ಷಾಂತರಕ್ಕೆ ಸಿದ್ಧಗೊಳ್ಳುತ್ತಿರುವ ವೇದಿಕೆ
Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಸುಮಾರು ಏಳು ಶಾಸಕರು ಹಾಗೂ ಕಾಂಗ್ರೆಸ್‌ನ ಕೆಲವು ಮುಖಂಡರು ಬಿಜೆಪಿ ಸೇರುವ ಚಿಂತನೆ ನಡೆಸಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಬೆಳಗಾವಿ ಜಿಲ್ಲೆಯ ಇಬ್ಬರು ಶಾಸಕರು ಈಗಾಗಲೇ ತಮ್ಮ ಮತ ಕ್ಷೇತ್ರದಲ್ಲಿ ಆಪ್ತರೊಂದಿಗೆ ಜೆಡಿಎಸ್ ಸೇರುವ ಸಂಬಂಧ ಚರ್ಚೆ ನಡೆಸಿದ್ದಾರೆ. ಇವರು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಜತೆಯಲ್ಲಿ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉತ್ತರಕರ್ನಾಟಕ ಭಾಗದಲ್ಲಿ ಜೆಡಿಎಸ್‌ ಭದ್ರವಾಗಿ ನೆಲೆಯೂರುವ ಉದ್ದೇಶದಿಂದ ಹಿಂದಿನ ಜನತಾಪರಿವಾರದ ನಾಯಕರು ಮತ್ತು ಪ್ರಬಲ ಮುಖಂಡರನ್ನು ಸೆಳೆಯುವ ಪ್ರಯತ್ನ ನಡೆಸಿದೆ. ಬೆಳಗಾವಿ ಜಿಲ್ಲೆಯ ಈ ನಾಯಕರಿಗೆ ಬಿಜೆಪಿ ರಾಜ್ಯ ನಾಯಕತ್ವದ ಜತೆಗೆ ಹೊಂದಾಣಿಕೆ ಸಮಸ್ಯೆ ಇದ್ದು, ಪಕ್ಷದಲ್ಲಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ ಎಂದು ಮೂಲಗಳು ಹೇಳಿವೆ.

ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಎಚ್‌.ಡಿ.ಕುಮಾರಸ್ವಾಮಿ ನವೆಂಬರ್‌ನಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆಗ ಆಸಕ್ತ ಶಾಸಕರು ಕುಮಾರಸ್ವಾಮಿ ಅವರನ್ನು ಸಂಪರ್ಕಿಸುವ ಸಾಧ್ಯತೆ ಇದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಇನ್ನೊಂದೆಡೆ ಕಾಂಗ್ರೆಸ್‌ನ ಕೆಲವು ಪ್ರಮುಖ ಮುಖಂಡರು ಚುನಾವಣೆಗೆ ಮೊದಲೇ ಬಿಜೆಪಿ ಸೇರುವ ಸಾಧ್ಯತೆ ಇದೆ. ಅಂತಹ ಆಸಕ್ತ ಮುಖಂಡರ ಪಟ್ಟಿಯೊಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಬಳಿ ಇದೆ. ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಷಾ ಅವರೇ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಈ ಮುಖಂಡರಲ್ಲಿ ಸಿದ್ದರಾಮಯ್ಯ ಸಂಪುಟದ ಕೆಲವು ಪ್ರಮುಖ ಮಂತ್ರಿಗಳೂ, ಶಾಸಕರೂ ಇದ್ದಾರೆ. ಸಿದ್ದರಾಮಯ್ಯ ಬಗ್ಗೆ ಅಸಮಾಧಾನಗೊಂಡಿರುವ ಕೆಲವು ಶಾಸಕರೂ ಬಿಜೆಪಿಯಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವೇ ಎಂಬ ಚಿಂತನೆ ನಡೆಸಿದ್ದಾರೆ. ಆದರೆ, ಷಾ ಹಿಮಾಚಲ ಪ್ರದೇಶ್‌ ಮತ್ತು ಗುಜರಾತ್‌ ವಿಧಾನಸಭಾ ಚುನಾವಣೆ ಬಳಿಕವೇ ಈ ಬಗ್ಗೆ ಗಮನಹರಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.
*
ಪ್ರತಿ ಕ್ಷೇತ್ರದಿಂದ 5 ಹೆಸರು ಕೇಳಿರುವ ಅಮಿತ್‌ ಷಾ
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅನುಕೂಲವಾಗುವಂತೆ ಪ್ರತಿ ಕ್ಷೇತ್ರದಿಂದಲೂ ತಲಾ ಐವರು ಸಂಭವನೀಯರ ಹೆಸರು ಕಳುಹಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಸೂಚಿಸಿದ್ದಾರೆ.

ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಮೊದಲು ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಮುಖಂಡರಾದ ಈಶ್ವರಪ್ಪ, ಜಗದೀಶ ಶೆಟ್ಟರ್‌, ಕೇಂದ್ರ ಸಚಿವರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ‘ಕರ್ನಾಟಕ ಪರಿವರ್ತನೆ ರಥ ಯಾತ್ರೆ’ ಮುಗಿದ ಬಳಿಕ ಪ್ರತಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಗೆ ಕಳುಹಿಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು, ಕ್ಷೇತ್ರದಲ್ಲಿ ಜನರ ಜತೆಗಿರುವ ಸಂಪರ್ಕ, ಪಕ್ಷದ ಸಂಘಟನೆ ಬಲಪಡಿಸುವಲ್ಲಿ ವಹಿಸಿದ ಶ್ರಮವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಪರಿವರ್ತನೆ ರಥ ಯಾತ್ರೆ ಯಶಸ್ಸು ಕೂಡ ಟಿಕೆಟ್‌ ಹಂಚಿಕೆಗೆ ಪ್ರಮುಖ ಮಾನದಂಡವಾಗಲಿದೆ.

ಯಾವ ಕ್ಷೇತ್ರದಲ್ಲಿ ಯಾರನ್ನು ಕಣಕ್ಕೆ ಇಳಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚು ಎಂಬುದರ ಬಗ್ಗೆ ಖುದ್ದು ಅಮಿತ್‌ ಷಾ ಅವರೇ ಖಾಸಗಿ ಸಂಸ್ಥೆಯಿಂದ ಸಮೀಕ್ಷೆ ಮಾಡಿಸಿ ವರದಿ ಪಡೆಯಲಿದ್ದಾರೆ. ಈಗಾಗಲೇ ಒಂದು ಸುತ್ತಿನ ಸಮೀಕ್ಷೆ ಮುಗಿದಿದ್ದು, ಸದ್ಯದಲ್ಲೇ ಎರಡನೇ ಸುತ್ತಿನ ಸಮೀಕ್ಷೆ ನಡೆಯಲಿದೆ. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವುದಕ್ಕೆ ಮುನ್ನ ರಾಜ್ಯ ಆರ್‌ಎಸ್‌ಎಸ್‌ ಮುಖಂಡರೂ ಸಲಹೆ– ಸೂಚನೆಗಳನ್ನು ನೀಡಲಿದ್ದಾರೆ.

ಬೇರೆ ಪಕ್ಷಗಳಿಂದ ವಲಸೆ ಬಂದವರು ಮತ್ತು ಪಕ್ಷದಲ್ಲಿನ ಹೊಸಬರಿಗೆ ಟಿಕೆಟ್‌ ನೀಡುವ ಬಗ್ಗೆ ಆಂತರಿಕ ಸಮೀಕ್ಷೆ ಆಧರಿಸಿ ಷಾ ನಿರ್ಧರಿಸಲಿದ್ದಾರೆ. ಉತ್ತರ ಪ್ರದೇಶ ಚುನಾವಣೆ, ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಅನುಸರಿಸಿದ ಮಾನದಂಡ ಹೆಚ್ಚಿನ ಫಲ ನೀಡಿದ್ದನ್ನು ಗಮನಕ್ಕೆ ತೆಗೆದುಕೊಳ್ಳಲಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಿಂದ ವಲಸೆ ಹೆಚ್ಚುವ ಸಾಧ್ಯತೆ ಇದೆ. ಇವರಲ್ಲಿ ಮೂರ್ನಾಲ್ಕು ಪ್ರಭಾವಿ ಮಂತ್ರಿಗಳು ಮತ್ತು ಶಾಸಕರೂ ಇದ್ದಾರೆ. ಬಿಜೆಪಿ ಸೇರುವವರ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ. ಇವರಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಮತ್ತು ಬಿಡಬೇಕು ಎಂಬುದನ್ನು ವರಿಷ್ಠರೇ ನಿರ್ಧರಿಸಲಿದ್ದಾರೆ.

*
ಬಿಜೆಪಿಯ 20 ಶಾಸಕರು ಕಾಂಗ್ರೆಸ್‌ ಸೇರಲಿದ್ದಾರೆ. ಚುನಾವಣೆಗೆ ಪಕ್ಷದ ಸಂಭವನೀಯ ಅಭ್ಯರ್ಥಿಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭವಾಗಿದೆ.
ಜಿ.ಪರಮೇಶ್ವರ,
ಅಧ್ಯಕ್ಷ, ಕೆಪಿಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT