ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿಟ್ಟಾಣಿ ಕಿರಿಯ ಕಲಾವಿದರಿಗೆ ಪ್ರೇರಣೆ’

Last Updated 17 ಅಕ್ಟೋಬರ್ 2017, 7:10 IST
ಅಕ್ಷರ ಗಾತ್ರ

ಹೊನ್ನಾವರ: ‘ವಿವಿಧ ಕಲಾಪ್ರಕಾರಗಳು ಮೇಳೈಸುವ ಯಕ್ಷಗಾನ ಒಂದು ಪರಿಪೂರ್ಣ ಕಲೆಯಾಗಿದ್ದು, ಇಂಥ ಕಲಾ ಮಾಧ್ಯಮವನ್ನು ಇನ್ನಷ್ಟು ಶ್ರೀಮಂತಗೊಳಿಸಿದ ದಿ.ಚಿಟ್ಟಾಣಿ ರಾಮಚಂದ್ರ ಹೆಗಡೆ ಯಕ್ಷಗಾನದ ಕಿರಿಯ ಕಲಾವಿದರಿಗೆ ಪ್ರೇರಣೆಯಾದ ಒಬ್ಬ ಮಹಾನ್ ಕಲಾವಿದ’ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.

ಇತ್ತೀಚೆಗೆ ನಿಧನರಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ವೈಕುಂಠ ಸಮಾರಾಧನೆಯ ನಿಮಿತ್ತ ಚಿಟ್ಟಾಣಿ ಅವರ ಕುಟುಂಬದವರು ಹಾಗೂ ಶ್ರೀ ವಿಶ್ವ ವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠಮ್ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಚಿಟ್ಟಾಣಿ ನುಡಿನಮನ; ಚಿಟ್ಟಾಣಿ ವ್ಯಾಖ್ಯಾನ ಆಖ್ಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಸಕ ಮಂಕಾಳ ಎಸ್.ವೈದ್ಯ ಮಾತನಾಡಿ, ‘ಚಿಟ್ಟಾಣಿ ನೆನಪು ಜನಮಾನಸದಲ್ಲಿ ಸದಾ ಇರುತ್ತದೆ. ಅವರ ಹೆಸರನ್ನು ಹೊನ್ನಾವರ ವೃತ್ತವೊಂದಕ್ಕೆ ಇಡುವಂತೆ ಪಟ್ಟಣ ಪಂಚಾಯಿತಿಯನ್ನು ಕೇಳಿಕೊಳ್ಳಲಾಗಿದೆ. ಚಿಟ್ಟಾಣಿಯವರ ಹೆಸರಿನಲ್ಲಿ ಪ್ರಶಸ್ತಿ ನೀಡುವಂತಾಗಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತೇನೆ’ ಎಂದು ತಿಳಿಸಿದರು.

ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಮಾರುತಿ ಗುರೂಜಿ ಮಾತನಾಡಿ, ‘ಚಿಟ್ಟಾಣಿ ಓರ್ವ ಅದ್ವಿತೀಯ ಕಲಾವಿದರಾಗಿದ್ದರು. ಯುವ ಕಲಾವಿದರನ್ನು ಹುರಿದುಂಬಿಸಿ ಅವರನ್ನು ಪ್ರೋತ್ಸಾಹಿಸುವ ದೊಡ್ಡ ಗುಣ ಚಿಟ್ಟಾಣಿಯವರಿಗಿತ್ತು. ತಾನು ಕಲಿತಿರುವುದು ಅಲ್ಪವಾದರೂ ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆ ಅಪಾರ’ ಎಂದು ಸ್ಮರಿಸಿದರು.
ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಮಗ, ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಯಲ್ಲಾಪುರ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ, ಹೊರನಾಡು ಕ್ಷೇತ್ರದ ಧರ್ಮಕರ್ತ ಭೀಮೇಶ್ವರ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣ ನಾಯಕ, ದತ್ತಮೂರ್ತಿ ಭಟ್ ಮಾತನಾಡಿ ಅಗಲಿದ ಚೇತನಕ್ಕೆ ನುಡಿನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT