ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಧ್ವನಿಗೆ ‘ವಿಷನ್‌ 2025’ ಶಕ್ತಿ

Last Updated 17 ಅಕ್ಟೋಬರ್ 2017, 8:59 IST
ಅಕ್ಷರ ಗಾತ್ರ

ರಾಮನಗರ: ‘ಸಾಮಾಜಿಕ ಮತ್ತು ಆರ್ಥಿಕ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕಗಳ ಮೂಲಕ ಭವಿಷ್ಯದ ಪ್ರಗತಿಯನ್ನು ಯೋಜಿಸಲಾಗುತ್ತಿದೆ’ ಎಂದು ವಿಷನ್‌ 2025 ಲಿಂಕ್‌ ಡಾಕ್ಯೂಮೆಂಟ್ ಯೋಜನೆಯ ಸಿಇಒ ರೇಣುಕಾ ಚಿದಂಬರಂ ಹೇಳಿದರು.

ನಗರದ ಗೌಸಿಯಾ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ವಿನೂತನ ನವ ಕರ್ನಾಟಕ ವಿಷನ್–2025’ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮುಂದಿನ ಏಳು ವರ್ಷದ ಭವಿಷ್ಯದಲ್ಲಿ ಜಿಲ್ಲೆಗಳ ಅಭಿವೃದ್ಧಿ ಯೋಜನೆಗಳು ಹೇಗಿರಬೇಕು? ಜನರ ನಿರೀಕ್ಷೆ ಏನಿದೆ? ರಾಜ್ಯಕ್ಕೆ ಈ ಏಳು ವರ್ಷಗಳಲ್ಲಿ ಎಂಥ ಆಡಳಿತಯಂತ್ರ ಬೇಕು? ಈ ಕುರಿತು ಜನರ ಅಭಿವ್ಯಕ್ತಿಗೆ ಶಕ್ತಿ ತುಂಬುವ ಸಲುವಾಗಿಯೇ ‘ವಿಷನ್‌–2025’ ರೂಪಿಸಲಾಗಿದೆ. ಹಾಗಾಗಿ, ಸರ್ಕಾರದ ಅಭಿವೃದ್ಧಿ ಪರ ಮುನ್ನೋಟಕ್ಕೆ ಸಲಹೆ ನೀಡುವ ಮೂಲಕ ನಾಗರಿಕರು ಸಹಭಾಗಿತ್ವ ಹೊಂದಬೇಕಿದೆ’ ಎಂದು ಅವರು ಹೇಳಿದರು.

‘ವಿಷನ್–2025’ ಯೋಜನೆ 13 ವಲಯಗಳನ್ನು ಹೊಂದಿದೆ. ಎಲ್ಲಾ ಇಲಾಖೆಯ ಮುಖ್ಯಸ್ಥರನ್ನು ಒಳಗೊಂಡ ವಲಯವಾರು ಕೇಂದ್ರಗಳನ್ನು ಒಳಗೊಂಡಿದೆ. ಈ ವಲಯಗಳಲ್ಲಿ ಕೃಷಿ ಸಂಬಂಧಿತ ಕ್ಷೇತ್ರಗಳು, ಮೂಲಸೌಕರ್ಯ, ಕೈಗಾರಿಕಾ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಸೇವೆಗಳು, ಶಿಕ್ಷಣ, ಉದ್ಯೋಗ, ಕೌಶಲ ಅಭಿವೃದ್ಧಿ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ, ನಗರಾಭಿವೃದ್ಧಿ, ಆಡಳಿತ, ಕಾನೂನು ಸುವ್ಯವಸ್ಥೆ ಒಳಗೊಂಡು ಸಮಗ್ರ ಅಭಿವೃದ್ಧಿ ಕುರಿತು ವರದಿ ರಚನೆಯಾಗಲಿದೆ. ಈ ವರದಿ ಆಧಾರದ ಮೇಲೆ ಸರ್ಕಾರ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳಲಿವೆ’ ಎಂದು ಮಾಹಿತಿ ನೀಡಿದರು.

‘ವಿಷನ್–2025 ಮೂಲಕ ಸರ್ಕಾರ ಜನರ ಬಳಿಗೆ ಹೋಗುತ್ತಿದೆ. ಈ ಹಿಂದಿದ್ದ ಪದ್ಧತಿ ತೊಡೆದು ಹಾಕಿರುವ ಸರ್ಕಾರ ಯೋಜನೆ ರೂಪಿಸಲು ಜನರ ಧ್ವನಿಗೆ ಅವಕಾಶ ಮತ್ತು ಆದ್ಯತೆ ನೀಡಿದೆ. ಸರ್ಕಾರ ಜವಾಬ್ದಾರಿಯನ್ನು ಜನರು ಇಚ್ಛಿಸುವ ಜನಪರ ಯೋಜನೆಗಳ ಮೇಲೆ ಆಡಳಿತಯಂತ್ರ ಕಾರ್ಯಸಾಧುವಾಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿನೂತನ ಯೋಜನೆ ಕೈಗೆತ್ತಿಕೊಂಡಿದ್ದಾರೆ. ನವೆಂಬರ್ ತಿಂಗಳ ಅಂತ್ಯದಲ್ಲಿ ಜನರ ಮಾಹಿತಿ ಸಂಗ್ರಹ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಡಿಸೆಂಬರ್ ಅಂತ್ಯದಲ್ಲಿ ವರದಿಗೆ ಅಂತಿಮ ರೂಪುರೇಷೆ ಸಿಗಲಿದೆ’ ಎಂದರು.

ಜಿಲ್ಲಾಧಿಕಾರಿ ಬಿ.ಆರ್. ಮಮತಾ ಮಾತನಾಡಿ ‘ಒಬ್ಬ ಸಾಮಾನ್ಯ ವ್ಯಕ್ತಿಯಿಂದ ಅಭಿಪ್ರಾಯ ಪಡೆದು, ಅವರ ಅಪೇಕ್ಷೆಗಳು, ನಿರೀಕ್ಷೆಗಳು ಏನಿವೆ ಎಂಬುದನ್ನು ತಿಳಿದು ತಯಾರು ಮಾಡುತ್ತಿರುವ ದಾಖಲಾತಿಯೇ ವಿಜನ್ 2025 ಕಾರ್ಯಕ್ರಮವಾಗಿದೆ. ಜನರಿಗೆ ಏನು ಬೇಕು? ಅವರ ಅವಶ್ಯಕತೆಗಳೇನು ಎಂದು ತಿಳಿಯುವ ಪ್ರಯತ್ನ ಇದಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಪ್ರಶಾಂತ್‌, ಉಪವಿಭಾಗಾಧಿಕಾರಿ ಎಂ.ಎನ್. ರಾಜೇಂದ್ರಪ್ರಸಾದ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿಎನ್‌ಆರ್‌ ವೆಂಕಟೇಶ್, ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್‌ ಇದ್ದರು. ಶಿಕ್ಷಕ ಶಿವಸ್ವಾಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT