ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಮಸ್ಯೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಿರಿ

Last Updated 17 ಅಕ್ಟೋಬರ್ 2017, 9:11 IST
ಅಕ್ಷರ ಗಾತ್ರ

ಸಾಗರ: ಮೊದಲು ಬರಗಾಲ, ನಂತರ ಅತಿವೃಷ್ಟಿಯಿಂದ ಕರ್ನಾಟಕ ಹಾಗೂ ದೇಶದ ಎಲ್ಲೆಡೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಸಮಸ್ಯೆ ಕುರಿತು ಚರ್ಚಿಸಲೆಂದೇ ಲೋಕಸಭೆ ಹಾಗೂ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ಇಲ್ಲಿನ ಗಾಂಧಿ ಮೈದಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸೋಮವಾರ ಏರ್ಪಡಿಸಿದ್ದ ರೈತರ ಸಾಲ ಮನ್ನಾಕ್ಕೆ ಅರ್ಜಿ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡದೆ ಇದ್ದರೆ ರೈತರೆ ಸಾಲ ಮನ್ನಾದ ಘೋಷಣೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ’ ಎಂದರು.

ಬೃಹತ್ ಕೈಗಾರಿಕೆಗಳಿಗೆ, ಐಟಿ–ಬಿಟಿ ಕಂಪೆನಿಗಳಿಗೆ ಸಾವಿರಾರು ಕೋಟಿ ರೂಪಾಯಿ ತೆರಿಗೆ ರಿಯಾಯ್ತಿ ಸೌಲಭ್ಯ ನೀಡಲು ಹಿಂಜರಿಯದ ಸರ್ಕಾರಗಳಿಗೆ ದೇಶಕ್ಕೆ ಅನ್ನ ನೀಡುವ ರೈತರ ಸಾಲ ಮನ್ನಾ ಮಾಡಲು ಏನು ತೊಂದರೆ ಎಂದು ಪ್ರಶ್ನಿಸಿದರು.

ಏಳನೇ ವೇತನ ಆಯೋಗದ ಶಿಫಾರಸಿನಂತೆ ನೌಕರರ ವೇತನ ಹೆಚ್ಚಳ ಮಾಡಿದ ರೀತಿಯಲ್ಲಿ, ಅದೇ ಮಾನದಂಡ ಅನುಸರಿಸಿ ರೈತರ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಬೇಕು. ಇಲ್ಲದೇ ಇದ್ದರೆ 70 ವರ್ಷಗಳಿಂದ ನಡೆಯುತ್ತಿರುವ ರೈತರ ಶೋಷಣೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದರು.

ಉತ್ತರ ಕರ್ನಾಟಕ ಭಾಗದ 14 ವರ್ಷದ ಬಾಲಕಿ ತಮ್ಮ ಗ್ರಾಮದಲ್ಲಿ ಶೌಚಾಲಯದ ಕೊರತೆ ಇದೆ ಎಂದು ಪ್ರಧಾನಿಗೆ ಪತ್ರ ಬರೆದರೆ, ಅದಕ್ಕೆ ಅವರು ಉತ್ತರಿಸಿ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆಯುತ್ತಾರೆ. ಆದರೆ, ರೈತರು ಪ್ರತಿನಿತ್ಯ ಅನುಭವಿಸುತ್ತಿರುವ ಸಮಸ್ಯೆ, ಕಷ್ಟಕೋಟಲೆಗಳು ಅವರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.

ರೈತರಿಗೆ ಸಿಟ್ಟು ಬಂದರೆ ಏನಾಗುತ್ತದೆ ಎಂಬುದರ ಅರಿವು ನರೇಂದ್ರ ಮೋದಿ ಹಾಗೂ ಸಿದ್ದರಾಮಯ್ಯ ಅವರಿಗೆ ಇರಬೇಕು. ರೈತರಿಗೆ ಅನುಕೂಲ ಮಾಡಿಕೊಡದ ಪಕ್ಷಕ್ಕೆ ಮುಂಬರುವ ಚುನಾವಣೆಗಳಲ್ಲಿ ಮತ ಹಾಕುವುದಿಲ್ಲ ಎಂದು ರೈತರು ಪ್ರತಿಜ್ಞೆ ಮಾಡಲಿದ್ದಾರೆ ಎಂದರು.

ಕೇಂದ್ರ ಸರ್ಕಾರ ಈ ಹಿಂದೆ ರೈತರಿಗೆ ನೀಡಿದ್ದ ಭರವಸೆಯಂತೆ ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು. ಒಂದು ವೇಳೆ ಸಂಕಷ್ಟದಲ್ಲಿರುವ ರೈತರ ಸಾಲವನ್ನು ಬಲವಂತದಿಂದ ವಸೂಲಿ ಮಾಡಲು ಮುಂದಾದರೆ ಬ್ಯಾಂಕ್‌ನ ಅಧಿಕಾರಿ, ಸಿಬ್ಬಂದಿ ವರ್ಗದವರನ್ನು ರೈತರು ಹಳ್ಳಿಗಳಲ್ಲಿ ಕಂಬಕ್ಕೆ ಕಟ್ಟಿಹಾಕುವ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

ರೈತರ ಸಾಲ ಮನ್ನಾ ಅರ್ಜಿಯನ್ನು ಉಪವಿಭಾಗಾಧಿಕಾರಿ ನಾಗರಾಜ್.ಆರ್.ಸಿಂಗ್ರೇರ್ ಸ್ವೀಕರಿಸಿದರು. ರೈತಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಕೆ.ಮಂಜುನಾಥಗೌಡ, ಗೂರ್ಲಕೆರೆ ಚಂದ್ರಶೇಖರ್, ನಾಗಣ್ಣ, ವಸಂತ್‌ಕುಮಾರ್, ಇಂದೂಧರ, ವಿರೇಶ್ ಪಾಟೀಲ್, ಡಿ.ಎಸ್.ಈಶ್ವರಪ್ಪ, ಐ.ವಿ.ಹೆಗಡೆ ಸಿದ್ದಾಪುರ, ರಾಘವೇಂದ್ರ ನಾಯಕ್ ಅವರೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT