ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಗೌರಿ ಮನೆಗೆ ಬರ್ತಿದ್ದಾಳೆ..!!

Last Updated 17 ಅಕ್ಟೋಬರ್ 2017, 10:05 IST
ಅಕ್ಷರ ಗಾತ್ರ

‘ಪುಟ್ಟಗೌರಿ' ಮದುವೆ ಧಾರಾವಾಹಿಯ ನಾಯಕಿ ಗೌರಿ ಕಾಡಿನ ಪಾಲಾದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ರಂಗೇರಿದೆ. ಟ್ರೋಲ್‌ ಮಾಡುವವರಿಗಂತೂ ಅವಳು ಕೆದಕಿದಷ್ಟೂ ಮಿಗುವ ತಮಾಷೆಯ ಕಣಜವಾಗಿಬಿಟ್ಟಿದ್ದಾಳೆ. ಮೆಚ್ಚುಗೆಯೋ, ಟೀಕೆಯೋ ಪುಟ್ಟಗೌರಿ ಅಚ್ಚರಿ ಹುಟ್ಟಿಸುವಷ್ಟು ಸದ್ದು ಮಾಡಿರುವುದಂತೂ ದಿಟ. ಈ ಕುರಿತು ‘ಪುಟ್ಟಗೌರಿ ಮದುವೆ’ ಧಾರಾವಾಹಿ ನಿರ್ದೇಶಕ ರಾಮ್‌ಜಿ ಜತೆ ನಡೆಸಿದ ಲಘು ಮಾತುಕತೆಯ ಅಕ್ಷರರೂಪ ಇಲ್ಲಿದೆ

* ಗೌರಿಯನ್ನು ಕಾಡಿಗೆ ಕಳಿಸೋ ಐಡಿಯಾ ಬಂದಿದ್ದು ಹೇಗೆ?

ನನ್ನ ಮಗ ಒಂದನೇ ತರಗತಿ ಓದ್ತಿದಾನೆ. ಅವನು ನನ್ ಹೆಣ್ತೀನ ಕೇಳ್ತಿದ್ದ ‘ಅಮ್ಮಾ ಟೈಗರ್‌ ಸ್ಪೆಲ್ಲಿಂಗ್‌ ಹೇಳು’ ಅಂತ. ಅವಳು ಹೇಳಿದ್ಲು. ಅವನು ಮತ್ತೆ ‘ಅಮ್ಮಾ ಫಾರೆಸ್ಟ್‌ ಸ್ಪೆಲ್ಲಿಂಗ್‌ ಹೇಳಮ್ಮಾ?’ ಅಂತ ಕೇಳ್ದ. ನಾನು ಅವನ ಮಾತು ಕೇಳ್ತಾ ಕೂತಿದ್ದೆ. ನಾವು ಡೈರೆಕ್ಟರುಗಳು ಎಲ್ಲಿ ನಮಗೆ ವಿಷಯ ಸಿಗತ್ತೆ ಅಂತ ಹುಡುಕ್ತಾ ಇರ್ತೀವಲ್ಲಾ. ಮನೇಲಿ ಪರ್ಸನಲ್‌ ಆಗಿರೋದು ಬಿಟ್ಟು ಪ್ರೊಫೆಷನಲ್ ಆಗಿ ಯೋಚಿಸ್ತಾ ಇರ್ತೀವಿ. ಆ ಸಮಯದಲ್ಲಿ ಪುಟ್ಟಗೌರಿಯನ್ನು ಸಾಯಿಸುವ ಪ್ರಯತ್ನಕ್ಕೆ ಒಂದು ಕಾನ್ಸೆಪ್ಟ್‌ ಹುಡುಕ್ತಾ ಇದ್ದೆ. ಅದಕ್ಕೆ ಮಗನ ಮಾತು ಲಿಂಕ್‌ ಆಗಿ ಹೋಯ್ತು.

* ಅಷ್ಟೆತ್ತರದ ಗುಡ್ಡದಿಂದ ಹಾರಿ ಹಕ್ಕಿಯ ಹಾಗೆ ಮರದ ಮೇಲೆ ಆರಾಮವಾಗಿ ಇಳಿಯುವ ಕಲೆಯನ್ನು ಗೌರಿ ಕಲಿತದ್ದು ಯಾವಾಗ?

ಅದು ಸ್ವಲ್ಪ ತಾಂತ್ರಿಕ ತೊಂದರೆ ಆಗಿದೆ. ಆ ಸಮಯದಲ್ಲಿ ನನ್ನ ಆರೋಗ್ಯ ಸರಿ ಇರಲಿಲ್ಲ. ಆ ದೃಶ್ಯದಲ್ಲಿ ಅಷ್ಟೊಂದು ಡೆಪ್ತ್‌ ಬೇಕಾಗಿರಲಿಲ್ಲ. ನಮ್ಮ ಸಿಜಿ (ಕಂಪ್ಯೂಟರ್‌ ಗ್ರಾಫಿಕ್ಸ್‌) ತಂಡದವರು ತುಂಬಾ ಡೆಪ್ತ್‌ ಸೃಷ್ಟಿಸಿಬಿಟ್ಟಿದ್ದಾರೆ. ಕಡಿಮೆ ಎತ್ತರದಿಂದ ಮರದ ಮೇಲೆ ಬಿದ್ದು, ಅಲ್ಲಿಯೇ ಬಳ್ಳಿಗೆ ಸಿಲುಕಿಕೊಂಡು, ಮತ್ತೆ ನೆಲಕ್ಕೆ ಬಿದ್ದರೆ ಏನೂ ಆಗುವುದಿಲ್ಲವಲ್ಲ. ನನ್ನ ಐಡಿಯಾ ಹಾಗಿತ್ತು. ಆದರೆ ತಂಡದವರು ಡೆಪ್ತ್‌ ಸೂಪರ್‌ ಆಗಿದೆ ಅಂತ ಮಾಡಿಬಿಟ್ಟಿದಾರೆ. ಪುಟ್ಟಗೌರಿ ಮೇಲೆ ಅವರಿಗೆ ತುಂಬಾ ನಂಬಿಕೆ.

* ಬರಿಗಾಲಲ್ಲಿ ಕಾಡಿಗೆ ಬಿದ್ದಿದ್ದ ಪುಟ್ಟಗೌರಿಗೆ ಚಪ್ಪಲಿ ತಂದುಕೊಟ್ಟಿದ್ದು ಯಾರು?

ಮೊದಲ ಹತ್ತು ಶಾಟ್‌ಗಳಲ್ಲಿ ಚಪ್ಪಲಿ ಇರಲಿಲ್ಲ. ನಂತರ ಚಪ್ಪಲಿ ಬಂತು. ಅದು ಏನಾಯ್ತು ಅಂದ್ರೆ, ಕಾಡಲ್ಲಿ ಜೋರು ಮಳೆ ಶುರುವಾಯ್ತು. ಎರಡು ಇಂಚು ಕಾಲು ಹೂತುಹೋಗುತ್ತಿತ್ತು. ಚಿತ್ರೀಕರಣ ಬ್ರೇಕ್‌ ಮಾಡಿ ಹತ್ತು ದಿನ ಬಿಟ್ಟು ಮತ್ತೆ ಆರಂಭಿಸಿದೆವು. ಕಾಡಿನಲ್ಲಿ ತುಂಬಾ ಮುಳ್ಳು, ಎಲ್ಲಿ ಏನಿದೆಯೋ ಗೊತ್ತಿಲ್ಲ. ಆದ್ದರಿಂದ ಜನರು ಬೈಯ್ಕೊಂಡ್ರೂ ಪರ್ವಾಗಿಲ್ಲ. ಪುಟ್ಟಗೌರಿಗೆ ಏನೂ ಆಗಬಾರದು ಎಂಬ ಕಾರಣಕ್ಕೆ ಚಪ್ಪಲಿ ಹಾಕಿಸಿದೆವು. ಪುಟ್ಟಗೌರಿ ಚೆನ್ನಾಗಿರಬೇಕು ಅಲ್ವಾ?

* ಗೌರಿ ಮೇಕಪ್‌ ಒಂದು ಚೂರು ಹಾಳಾಗಲ್ವಲ್ಲಾ? ಯಾವ ಕಂಪೆನಿ ಮೇಕಪ್‌ ಅದು?

ರಂಜನಿಯ (ಪುಟ್ಟಗೌರಿ) ಮುಖ ಸ್ವಲ್ಪ ರಫ್ ಇದೆ. ಮೇಕಪ್‌ ಇಲ್ದೆ ಚೆನ್ನಾಗಿ ಕಾಣಿಸಲ್ಲ. ಕಾಡಿನ ಭಾಗ ನಾನು ತುಂಬಾ ಆಸೆಪಟ್ಟು ಬರೆದಿದ್ದು. ಆದ್ದರಿಂದ ಅದರ ಚಿತ್ರೀಕರಣಕ್ಕೆ ನಾರ್ಮಲ್‌ ಕ್ಯಾಮೆರಾ ಬಿಟ್ಟು ವಿಶೇಷ ಕ್ಯಾಮೆರಾ ಬಳಸಿದೆ. ಅದು ಇನ್ನೂ ಸುಂದರವಾಗಿ ಕಾಣಿಸುವ ಹಾಗೆ ಆಗಿಹೋಯ್ತು.

* ಈಗ ಗೌರಿ ಕಾಡಿಗಿಂತ ಫೇಸ್‌ಬುಕ್‌ನಲ್ಲೇ ಹೆಚ್ಚು ಸದ್ದು ಮಾಡ್ತಿದ್ದಾಳಲ್ವಾ?

ಹೌದು. ನಾನು ಮಾಡುತ್ತಿರುವುದು ಮನರಂಜನೆಯ ಕೆಲಸ. ಮನರಂಜನೆ ಎಂದರೆ ಏನು? ಒಬ್ಬರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವುದು. ಅದು ಭಾವನಾತ್ಮಕವಾಗಿ ಆಗಿರಬಹುದು, ಹಾಸ್ಯರೂಪದಲ್ಲಾಗಿರಬಹುದು, ಕೋಪದಿಂದ ಆಗಿರಬಹುದು, ಇರಿಟೇಶನ್‌ನಿಂದ ಆಗಿರಬಹುದು ಎಲ್ಲವೂ ಮನರಂಜನೆಯೇ? ಗೌರಿ ಸತ್ತೋಗ್ತಾಳೆ ಅಂತ ಅತ್ತವರಿದ್ದಾರೆ. ಅಂಥವರ ಸಂಖ್ಯೆ 80 ಪರ್ಸೆಂಟ್. ಒಂದು 10 ಪರ್ಸೆಂಟ್ ಜನರಿಗೆ ಇರಿಟೇಶನ್ ಆಗಿದೆ. ಇನ್ನೂ 10 ಪರ್ಸೆಂಟ್ ಜನರಿಗೆ ತಮಾಷೆಯಾಗಿ ಕಂಡಿದೆ. ಅದೂ ಮನರಂಜನೆಯೇ ಅಲ್ವಾ? ಆರು ವರ್ಷದಿಂದ ‘ಪುಟ್ಟಗೌರಿ’ ನಂಬರ್‌ ಒನ್‌ ಸ್ಥಾನದಲ್ಲಿದೆ. ಇದೇನು ಕಡಿಮೆ ಸಾಧನೆ ಅಂದ್ಕೊಂಡ್ರಾ?

* ಗೌರಿ ಹಾವು, ಹುಲಿಯನ್ನೆಲ್ಲ ಫ್ರೆಂಡ್‌ಷಿಪ್‌ ಮಾಡುವಷ್ಟು ಪವರ್‌ಫುಲ್‌ ಆಗಿದ್ದು ಹೇಗೆ?

ತುಂಬ ಸಿಂಪಲ್‌. ನಾವೆಲ್ಲರೂ ಹಾವನ್ನು ಪೂಜೆ ಮಾಡ್ತೀವಿ. ಅದನ್ನು ದೇವರು ಅಂತ ನಂಬ್ತೀವಿ. ಗೌರಿ ತುಂಬ ದೈವಭಕ್ತೆ. ಆಕೆ ದೇವರ ಹತ್ರ ಮಾತಾಡ್ತಾಳೆ. ಹಾವಿನ ಹತ್ರ ಮಾತಾಡ್ತಾಳೆ. ಅವಳು ಹಾವನ್ನು ದೇವರು ಅಂದುಕೊಂಡು ನಮಸ್ಕಾರ ಮಾಡಿದ್ಲು, ಅದು ಹೊರಟೋಯ್ತು. ಅದನ್ನು ನೋಡಿ ಹಳ್ಳಿ ಕಡೆ ಜನ ’ನಾಗರಾಜ ಹೊರಟೋದ, ದೇವರು’ ಅಂದ್ಕೋತಾರೆ. ಇನ್‌ ಕೆಲವರು ‘ಹಾವಿನ ಮೂಡ್‌ ಸರಿ ಇರ್ಲಿಲ್ಲ’ ಅಂದ್ಕೋತಾರೆ. ಇನ್ಯಾರೋ ‘ನಾಗರಹಾವಿಗೂ ಪುಟ್‌ ಗೌರಿನ ನೋಡೋಕೆ ಇಷ್ಟ ಆಗ್ಲಿಲ್ಲ ಅದ್ಕೆ ಹೊರಟೋಯ್ತು’ ಅಂತ ಟ್ರೋಲ್‌ ಮಾಡಿದಾರೆ. ಒಬ್ಬೊಬ್ಬರು ಒಂದೊಂದು ರೀತಿ ತಗೊಂಡಿದಾರೆ.

ಗೌರೀನ ಸಾಯಿಸೋಕೆ ಬಂದ ಹುಲಿ ತಪ್ಪಿಸಿಕೊಂಡು ಬಾವಿಯಲ್ಲಿ ಬಿದ್ದೋಗತ್ತೆ. ಪುಟ್‌ ಗೌರಿ ಯಾರನ್ನೂ ನೋಯಿಸುವವಳಲ್ಲ. ತನ್ನಿಂದ ಯಾರೂ ನೋವು ಅನುಭವಿಸಬಾರದು ಎನ್ನುವಷ್ಟು ಒಳ್ಳೆಯವಳು. ಅವಳು ಹುಲಿಯನ್ನು ಕಾಪಾಡುತ್ತಾಳೆ. ಆಗ ಹುಲಿ ಅವಳನ್ನು ಸುಮ್ಮನೆ ಬಿಟ್ಟು ಹೋಗ್ತದೆ. ಕೊನೆಗೆ ಪುಟ್‌ ಗೌರಿಗೆ, ಮನುಷ್ಯ ಮೃಗಗಳಿಗಿಂತ ಕ್ರೂರಿನಾ ಅಂತ ಅನಿಸಿಬಿಡುತ್ತದೆ. ಮನುಷ್ಯನನ್ನು ಮೀರಿದ ಮಾನವೀಯತೆ ಮೃಗಗಳಲ್ಲಿದೆ, ಅದು ಮನುಷ್ಯನಲ್ಲಿ ಮರೆಯಾಗುತ್ತಿದೆ.

* ಗೌರಿಯೇನೋ ದೈವಭಕ್ತೆ. ಆದರೆ ಕಾಡುಮನುಷ್ಯರಿಗೆ ಅವಳೇ ದೇವತೆ ಅಂತ ಅನಿಸಿಬಿಡ್ತಲ್ಲ...

ಕಾಡು ಮನುಷ್ಯರು ಬಲಿ ಕೊಡೋಕೆ ಶುರು ಮಾಡಿದಾಗ ಅಲ್ಲಿಗೆ ಹುಲಿ ಎಂಟ್ರಿ ಆಗಿ ಅವಳನ್ನು ಒಂದು ಸುತ್ತು ಹಾಕಿ ಕೂರುತ್ತೆ ನೋಡಿದ್ರಾ? ಅದರರ್ಥ ಏನು ಗೊತ್ತಾ? ಗೌರಿ ಪರವಾಗಿ ನಾನಿದ್ದೀನಿ. ಯಾರಾದ್ರೂ ಹತ್ತಿರಕ್ಕೆ ಬನ್ನಿ ನೋಡೋಣ ಅಂತ. ಅದು ಗೌರಿ ಸಹಾಯ ಮಾಡಿದ ಹುಲಿ. ಹುಲಿನೇ ಬಂದು ಗೌರಿ ಪಕ್ಕ ನಿಂತ್ಕೋತಿದೆ ಅಂದಾಕ್ಷಣ ಕಾಡಿನ ಜನ ಅವಳು ಮನುಷ್ಯ ಅಲ್ಲ, ದೇವತೆ ಅಂದ್ಕೋತಾರೆ. ಪುಣ್ಯಕೋಟಿ ಕಥೆಯಲ್ಲಿ ಹುಲಿ ಹಸುನ ಬಿಟ್ಟುಕೊಡ್ತು ಅಂದ್ರೆ ನಂಬ್ತೀವಲ್ಲ ನಾವು. ನಾನು ಬರೆದ ಕಥೇನಾ ಮಾತ್ರ ಯಾಕೆ ನಂಬಲ್ಲ?

* ಅಂದರೆ ಪುಟ್ಟಗೌರಿ ‘ಕಾಡಿನ ರಾಣಿ’ ಆಗುವ ಸೂಚನೆ ಇದೆ ಅಂತಾಯ್ತು...

ಇಲ್ಲಪ್ಪಾ ಇಲ್ಲ. ಪ್ರಾಕ್ಟಿಕಲ್‌ ಆಗಿ ಅದು ಕಷ್ಟ. ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಚಿತ್ರೀಕರಣ ಮಾಡುವಷ್ಟು ಬಜೆಟ್ ನಮ್ಮದು. ಆದರೆ ನಾನು  ‘ಪುಟ್ಟಗೌರಿ' ಜೊತೆಗೆ ಇಡೀ ದೇಶ ಸುತ್ತಿಕೊಂಡು ಬಂದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಪುಟ್ಟಗೌರಿ ಶೂಟಿಂಗ್‌ ಮಾಡಿದೀನಿ. ತಾಜಮಹಲ್‌ ಒಳಗೆ ಚಿತ್ರೀಕರಣ ಮಾಡಿದೀನಿ. ಕನ್ನಡದಲ್ಲಿ ಯಾರೂ ಮಾಡಿಲ್ಲ ಇದುವರೆಗೂ. ಆರು ತಿಂಗಳು ಎಂಟು ತಿಂಗಳು ಮನೆಲೇ ಶೂಟಿಂಗ್‌ ಮಾಡ್ತೀನಿ. ಅದು ಬೇಜಾರು ಹುಟ್ಟಿಸುತ್ತೆ. ಆ ಸಮಯದಲ್ಲಿ ಒಂದಿಷ್ಟು ಹಣ ಉಳಿದಿರುತ್ತಲ್ಲ, ಅದನ್ನೇ ಬಳಸಿಕೊಂಡು ಈ ರೀತಿ ಹೊರಗೆ ಚಿತ್ರೀಕರಣ ಮಾಡುತ್ತೇನೆ.

* ಮುಂದಿನ ದಿನಗಳಲ್ಲಿ ಗೌರಿಗೆ ಕಷ್ಟ ಕೊಟ್ಟ ವಿಲನ್‌ಗಳನ್ನು ಕಾಡಿಗೆ ಕಳಿಸುವ ಐಡಿಯಾ ಇದ್ಯಾ?

ಇಲ್ಲ. ಬೇರೆ ಥರ ಏನೋ ಪ್ಲ್ಯಾನ್‌ ಮಾಡಿದೀನಿ. ಏನೋ ಒಂದು ಪಾಠ ಕಲಿಸಿಯೇ ಕಲಿಸ್ತೀನಿ. ತುಂಬಾ ಜನ ಹೇಳ್ತಾರೆ. ಎಷ್ಟು ದಿನ ಗೌರಿಗೆ ಕಷ್ಟ ಕೊಡ್ತೀರಿ? ಅವಳಿಗೆ ಕಷ್ಟ ಕೊಟ್ಟವರಿಗೆ ಶಿಕ್ಷೆ ಕೊಡಿ ಅಂತ.

(ನಿರ್ದೇಶಕ -ರಾಮ್‍ಜಿ)

* ಪುಟ್ಟಗೌರಿಯ ಕಷ್ಟಗಳು ಮುಗಿಯುವುದು ಯಾವಾಗ?

ಪ್ರೇಕ್ಷಕರು ಧಾರಾವಾಹಿಯನ್ನು ಖುಷಿಯಿಂದ ನೋಡ್ತಿದ್ದಾರೆ. ನಾನು ಸಿಕ್ಕಾಗ ಕೈ ಮುಗಿತಾರೆ, ಅಳ್ತಾರೆ. ಅವರು ಗೌರಿಯ ಜತೆಗೆ ಬದುಕ್ತಿದ್ದಾರೆ. ಆದರೆ ಈ ಬುದ್ಧಿಜೀವಿಗಳು ಅಂತ ಒಂದಷ್ಟು ಜನ ಇದ್ದಾರಲ್ಲಾ, ಅವರು ಮಾತ್ರ 'ಏನ್‌ ಎಳಿತಾ ಇದ್ದೀರಾ?' ಅಂತ ಕೇಳ್ತಾರೆ. ನಾನು ಪ್ರೇಕ್ಷಕರಿಗಾಗಿ ಸೀರಿಯಲ್ ಮಾಡ್ತೀನಿ. ಬುದ್ಧಿಜೀವಿಗಳಿಗಾಗಿ ಅಲ್ಲ.

ಮಹಾಭಾರತದ ಕಥೆ ಎಷ್ಟು ವರ್ಷ ನಡೀತು? ಪಾಂಡವರು ಗೆದ್ದಿದ್ದು ಯಾವಾಗ? ಅಲ್ಲೀವರೆಗೂ ಅವರು ಕಷ್ಟ ಅನುಭವಿಸಲಿಲ್ವಾ? ನಾನು ಬರೀ ಐದು ವರ್ಷ ಪುಟ್ಟಗೌರಿಯ ಕಷ್ಟ ತೋರಿಸಿದ್ದಕ್ಕೆ ಎಷ್ಟು ಮಾತಾಡ್ತಾರಪ್ಪಾ? ಇನ್ನು ರಾಮಾಯಣ ತಗೊಳಿ. ರಾಮ- ಸೀತೆಯರು ಸುಖ ಅಂತ ನೋಡಿದ್ದು ಯಾವಾಗ? ನನಗೆ ಸೀತೆಯ ಪಾತ್ರವೇ ಆದರ್ಶ. ಅದನ್ನೇ ಮನಸಿನಲ್ಲಿಟ್ಟುಕೊಂಡು ಗೌರಿಯನ್ನು ಮಾಡಿದೆ. ಪಾಪ, ಅವಳು ಕಳೆದ ಐದು ವರ್ಷಗಳಿಂದ ಕಷ್ಟ ಅನುಭವಿಸಿದ್ದಾಳೆ. ಇನ್ನೊಂದೆರಡು ವರ್ಷ ಅನುಭವಿಸಲಿ ಬಿಡಿ.

* ಕಾಡಿನ ಎಪಿಸೋಡಿನ ಚಿತ್ರೀಕರಣ ಆಗಿದ್ದು ಎಲ್ಲಿ?

ಅರಮನೆ ಮೈದಾನದ ಸಪೋಟ ತೋಪಿನಲ್ಲಿ.

* ಎಲ್ಲರೂ ಕಾಯ್ತಿದ್ದಾರೆ. ಪುಟ್ಟಗೌರಿ ಯಾವಾಗ ಮನೆಗೆ ಬರ್ತಾಳೆ?

ಇನ್ನೂ ಏಳೆಂಟು ಎಪಿಸೋಡು ಇತ್ತು. ಮಳೆ ಹಿಡಿದುಕೊಂಡ ಕಾರಣದಿಂದ ಕ್ಯಾನ್ಸಲ್‌ ಮಾಡಿದೆವು. ಬೇಗ ಕರೆಸ್ತಾ ಇದ್ದೀವಿ. ಈವತ್ತು ಬಂದ್ಬಿಡ್ತಾಳೆ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT