ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಬಾಣಿ ಯುವತಿಯರ ‘ದೀಪಾವಳಿ’ ಸಂಭ್ರಮ

Last Updated 17 ಅಕ್ಟೋಬರ್ 2017, 9:34 IST
ಅಕ್ಷರ ಗಾತ್ರ

ಪ್ರತಿ ದೀಪಾವಳಿ ಸಂದರ್ಭದಲ್ಲಿ ಯಾದಗಿರಿಯ ಗಾಂಧಿನಗರದಲ್ಲಿನ ಲಂಬಾಣಿಗರ ಮನೆಗಳಲ್ಲಿ ಸಡಗರ ಮನೆ ಮಾಡಿರುತ್ತದೆ. ‘ದೀಪಾವಳಿ ಲಂಬಾಣಿ ಯುವತಿಯರ ಹಬ್ಬ’ ಎಂದೇ ಹೇಳುತ್ತಾರೆ ಈ ಸಮುದಾಯದ ಹಿರಿಯರು. ಅದರಲ್ಲೂ ದೀಪಾವಳಿ ನಂತರ ಬರುವ ಬೇಸಿಗೆಯಲ್ಲಿ ಮದುವೆ ಆಗಲಿರುವ ಯುವತಿಯರು ಕುಲದೈವ ‘ಸೇವಾಭಾಯ್‌’ ಹೆಸರಿನಲ್ಲಿ ಅವರವರ ಮನೆಗಳಲ್ಲಿ ದೀಪಗಳನ್ನು ಹಚ್ಚುತ್ತಾರೆ.

ಉತ್ಸವ ಮುಗಿಯುವವರೆಗೂ ದೀಪಕ್ಕೆ ಎಣ್ಣೆ ಹಾಕಿ ದೀಪ ನಿರಂತರ ಬೆಳಗುವಂತೆ ಜೋಪಾನ ಮಾಡುವ ಜವಾಬ್ದಾರಿ ಕೂಡ ಯುವತಿಯರದ್ದಾಗಿರುತ್ತದೆ.ದೀಪ ಆರಿದರೆ ಬದುಕಿನ ದಾರಿ ಕತ್ತಲಾಗುತ್ತದೆ ಎಂಬ ನಂಬಿಕೆ ಈ ಜನಾಂಗದಲ್ಲಿದೆ. ಹಾಗಾಗಿ, ದೀಪದ ಮೇಲೆ ಯುವತಿಯರ ದೃಷ್ಟಿ ನಿರಂತರವಾಗಿರುತ್ತದೆ.

ದೀಪ ಚೆನ್ನಾಗಿ ಬೆಳಗಿದರೆ ಬದುಕು ಬೆಳಕಿನಂತಾಗುತ್ತದೆ ಎಂಬ ನಂಬಿಕೆಯೂ ಲಂಬಾಣಿಗರಲ್ಲಿದೆ. ಈ ನಂಬಿಕೆಯಿಂದಾಗಿ ‘ದೀಪ’ವನ್ನು ಲಂಬಾಣಿಗರು ದೇವರ ಸ್ವರೂಪದಂತೆ ಭಾವಿಸುತ್ತಾರೆ. ದೀಪಾವಳಿ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರ ಮನೆಗಳಲ್ಲಿನ ಹೆಣ್ಣು ಮಕ್ಕಳಿಗೆ ವಿಶೇಷ ಆದ್ಯತೆ ನೀಡುತ್ತಾರೆ. ಆ ಹೆಣ್ಣು ಮಕ್ಕಳಿಂದ ದೀಪಗಳನ್ನು ಬೆಳಗಿಸುತ್ತಾರೆ. ಹೆಣ್ಣು ಬೆಳಗಿದ ದೀಪ ನಿಶ್ಚಲ ಎಂಬುದು ಅವರ ಅಚಲ ನಂಬಿಕೆಯಾಗಿದೆ.

ಮಣ್ಣಿನ ದೀಪವೇ ಬೇಕು: ದೀಪ ಹುಚ್ಚುವ ಸಂಭ್ರಮವನ್ನೂ ಲಂಬಾಣಿಗರಲ್ಲಿ ವಿಶೇಷವಾಗಿ ಕಾಣಬಹುದು. ಎರಡು ಹಸ್ತದ ಅಗಲ ಇರುವ ಮಣ್ಣಿದ ದೀಪಗಳ ತುಂಬಾ ಎಣ್ಣೆ ಹಾಕುತ್ತಾರೆ. ನಂತರ ದೀಪವನ್ನು ಹೂವಿನಿಂದ ಸಿಂಗರಿಸುತ್ತಾರೆ. ಆಕಳ ಸಗಣಿಯಿಂದ ನೆಲ ಸಾರಿಸಿ ಅಲ್ಲಿ ದೀಪವನ್ನು ಪ್ರತಿಷ್ಠಾಪಿಸುತ್ತಾರೆ. ನಂತರ ದೀಪದ ಮುಂದೆ ರಂಗೋಲಿ ಬಿಡಿಸಿ ಯುವತಿಯರು ದೀಪವನ್ನು ಹಚ್ಚುತ್ತಾರೆ. ಈ ಸಂದರ್ಭ ಇಡೀ ಕುಟುಂಬದವರು ಹಾಜರಿದ್ದು ಹೆಣ್ಣು ಮಕ್ಕಳನ್ನು ಮಹಾಲಕ್ಷ್ಮಿ ದೇವತೆಯ ಸ್ವರೂಪದಂತೆ ಕಾಣುತ್ತಾರೆ.

ಹೂ ಕೀಳುವ ಸಂಭ್ರಮ: ಹಬ್ಬದ ಅಂತಿಮದಿನ ಬಲಿ ಪೂಜೆಯ ಮುಂಜಾನೆ ಲಂಬಾಣಿ ಯುವತಿಯರು ಒಗ್ಗೂಡಿ ಅಡವಿಯತ್ತ ತಂಗಟೆ, ಕಣಗಿಲೆ ಹೂವಿಗಾಗಿ ಬುಟ್ಟಿ ಹಿಡಿದು ಹೊರಡುತ್ತಾರೆ. ವಿಶೇಷವಾಗಿ ತಂಗಟೆ ಹೂವನ್ನೇ ಕಿತ್ತು ತರುತ್ತಾರೆ. ಹಾಗೆ ತಂದ ಹೂವಿನಿಂದ ಅವರವರ ಮನೆಗಳ ಮುಂದಿನ ಅಂಗಳದಲ್ಲಿ ಸಗಣಿ ಸಾರಿಸಿ ರಂಗೋಲಿ ಹಾಕಿ ಹೂವಿಟ್ಟು ಬಲೀಂದ್ರನನ್ನು ಸೃಷ್ಟಿಸುತ್ತಾರೆ. ಅಂದು ರಾತ್ರಿ ಎಲ್ಲರ ಮನೆಗಳಲ್ಲಿ ಲಂಬಾಣಿ ಹುಡುಗಿಯರು ಅತ್ಯಂತ ಸಂಭ್ರಮದಿಂದ ಶೃಂಗಾರಗೊಳ್ಳುತ್ತಾರೆ.

ಅಂತಿಮ ದಿನದ ಸಂಭ್ರಮ: ಶೃಂಗಾರಗೊಂಡ ಹುಡುಗಿಯರು ದೀಪಗಳನ್ನು ಹೊತ್ತು ಮನೆಮನೆಗಳಿಗೆ ಹೋಗಿ ‘ಮೇರಾ’ ಆಚರಿಸುವ ರೀತಿ ಆಕರ್ಷಣೀಯವಾಗಿರುತ್ತದೆ. ಲಂಬಾಣಿ ಭಾಷೆಯಲ್ಲಿ ‘ಮೇರಾ’ ಅಂದರೆ ದೀಪ ಹಿಡಿದ ಹುಡುಗಿಯರು ಹಿರಿಯರಿಗೆ ಅರತಿ ಬೆಳಗುವುದು ಎಂದರ್ಥ. ಆರತಿ ಬೆಳಗಿದ ಹುಡುಗಿಯರಿಗೆ ಹಿರಿಯರು ನಗದು ಉಡುಗೊರೆ ನೀಡುತ್ತಾರೆ. ಈ ಆಚರಣೆ ಜಿಲ್ಲೆಯಲ್ಲಿನ ಎಲ್ಲಾ ಲಂಬಾಣಿ ತಾಂಡಾಗಳಲ್ಲಿ ಏಕಕಾಲದಲ್ಲಿ ಏಕರೀತಿಯಲ್ಲಿ ಆಚರಿಸಲ್ಪಡುತ್ತದೆ.

ನಗದು ಉಡುಗೊರೆಗಾಗಿಯೇ ಹುಡುಗಿಯರು ಸಂಬಂಧಿಕರ ಮನೆ ಮನೆಗೆ ಅಲೆದು ‘ಮೇರಾ’ ಬೆಳಗುತ್ತಾರೆ. ‘ವರ್ಸೇರ್‌ ಕೋರ್ ದವಾಳಿ ಭೀಯಾ ತೋನ ಮೇರಾ...’ (ಅಣ್ಣ ನಿನಗೆ ಇಡೀ ವರ್ಷದ ದೀಪಾವಳಿ ಸಂಭ್ರಮದ ಆರತಿ ಬೆಳುಗುವೆ) ಎಂದು ಲಂಬಾಣಿ ಜಾನಪದ ಹಾಡು ಹಾಡುತ್ತಾರೆ. ದೀಪ ಹಿಡಿದ ಹುಡುಗಿಯರಿಗೆ ನಿರಾಶೆ ಮಾಡಬಾರದು ಎಂಬ ಕಾರಣದಿಂದ ಅಣ್ಣ, ತಮ್ಮಂದಿರು, ಬಂಧು ಬಳಗದವರು ಭರಪೂರ ಉಡುಗೊರೆ ನೀಡುತ್ತಾರೆ. ನಗದು ಸಿಕ್ಕ ಸಂಭ್ರಮ ಹುಡುಗಿಯರದ್ದಾಗಿದ್ದರೆ, ಮನೆಯಲ್ಲಿನ ‘ಮಹಾಲಕ್ಷ್ಮಿಯರ’ ಸಡಗರ ಕಂಡು ಹಿರಿಯರು ಆನಂದಿಸುತ್ತಾರೆ.

ಜಿಲ್ಲೆಯ ದೋರನಹಳ್ಳಿ, ಮುದ್ನಾಳ, ಅಲಿಪುರ, ಆಶನಾಳ, ಉಕ್ಕನಾಳ, ಚಾಮನಾಳ, ಗುಂಡಳ್ಳಿ, ಯರಕಿಹಾಳ, ಕನ್ಯಾ ಕೋಳೂರು, ಹೊತ್ಪೇಟಿ, ವಿಶ್ವಾಸಪುರ, ಯಂಪಾಡ, ಬಾಚವಾರ, ಹೊಸಳ್ಳಿ, ರಾಜನ ಕೋಳೂರ, ಕೊಡೇಕಲ್ಲ, ಆರನಾಳ, ಮಾವಿನ ಗಿಡ, ಪಾರಿಗಿಡ, ನಡಿಹಾಳ, ಚಂದಾಪುರ, ಸರ್ಕಳ್ಳಿ, ಬಸಂಪುರ, ಚೆಲ್ಲೂರ, ವಜ್ಜಲ್‌, ಏವೂರ, ಮಡ್ಡಿ, ಹೊಸಕೆರೆ, ಗೋಗಿ, ನಾಲ್ವಡಿ, ಚಟ್ನಳ್ಳಿ, ವಡಗೇರಾ, ಲಿಂಗೇರಿ, ಜೈನಾಪುರ, ಬಳಗೇರಾ ತಾಂಡಾಗಳಲ್ಲಿ ದೀಪಾವಳಿಯ ಸಂಭ್ರಮ ಇಮ್ಮಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT