ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣನ ಆರ್ಭಟಕ್ಕೆ ಬೆಳೆ ನಾಶ

Last Updated 17 ಅಕ್ಟೋಬರ್ 2017, 9:37 IST
ಅಕ್ಷರ ಗಾತ್ರ

ಗುರುಮಠಕಲ್: ಹದಿನೈದು ದಿನಗಳಿಂದ ಎರಡು ದಿನಕ್ಕೊಮ್ಮೆ ಸುರಿಯುತ್ತಿರುವ ಮಳೆ ನೀರು ಹೊಲದಲ್ಲಿ ನಿಂತುಕೊಂಡಿದ್ದು ತೊಗರಿ ಸೇರಿದಂತೆ ಹತ್ತಿ, ಭತ್ತ, ಮುಂಗಾರು ಜೋಳ, ಕುಸುಬೆ ಬೆಳೆಗಳು ನಾಶವಾಗುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗುರುಮಠಕಲ್ ಹೋಬಳಿ ವ್ಯಾಪ್ತಿಯ ನಜರಾಪುರ, ಮಿನಾಸಪುರ, ಚಪೆಟ್ಲಾ, ಗಾಜರಕೋಟ, ಚಿಂತನಹಳ್ಳಿ, ಕಂದಕೂರು, ಕೊಂಕಲ್, ಅನಪುರ, ಕುಂಟಿಮರಿ, ಜೈಗ್ರಾಮ, ಗೌರನೂರು, ನಸಲವಾಯಿ, ಚಿಂತಕುಂಟ, ಪಾಡುಪಲ್ಲಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಸುಮಾರು 450ರಿಂದ 500 ಎಕರೆ ಬೆಳೆ ನಾಶವಾಗಿದೆ.

‘ಎರಡು ಎಕರೆ ಜಮೀನಿನಲ್ಲಿ ಸಾಲ ಮಾಡಿ ತೊಗರಿ ಬಿತ್ತನೆ ಮಾಡಿದ್ದೆನು. ಈಗ ಜಮೀನಿನಲ್ಲಿ ಮಳೆ ನೀರು ಸಂಗ್ರಹಗೊಂಡಿದ್ದರಿಂದ ಬೇರು ಕೊಳೆತು ತೊಗರಿ ಬೆಳೆ ಒಣಗುತ್ತಿದೆ. ಒಂದು ಎಕರೆ ಬೆಳೆ ಈಗಾಗಲೇ ಸಂಪೂರ್ಣ ನಾಶವಾಗಿದ್ದು, ಉಳಿದ ಬೆಳೆಯೂ ಕೈಕೊಡುವ ಆತಂಕವಿದೆ. ಇದರಿಂದ ದಿಕ್ಕು ತೋಚದಾಗಿದೆ’ ಎಂದು ರೈತ ಯಂಕಟಪ್ಪ ಅಗಸರ್ ಅಳಲು ತೋಡಿಕೊಂಡರು.

‘ಮಿನಾಸಪುರ ಗ್ರಾಮದ ಕೆರೆಯ ಏರಿ ಕೆಳಗಿನ ಸುಮಾರು 20 ಎಕರೆ ವ್ಯಾಪ್ತಿಯಲ್ಲಿಯೂ ಬೆಳೆಹಾನಿಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಯಾವ ಅಧಿಕಾರಿ, ಜನಪ್ರತಿನಿಧಿ ಇಲ್ಲಿಯವರೆಗೂ ಹಾನಿಯ ಸಮೀಕ್ಷೆಯನ್ನು ಮಾಡುವ ಪ್ರಯತ್ನವನ್ನು ಮಾಡುತ್ತಿಲ್ಲ. ಹೀಗಾದರೆ ರೈತರ ಸಮಸ್ಯೆಗಳು ಪರಿಹರಿಸುವರು ಯಾರು?’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಯುವ ಕೃಷಿಕರಾದ ರಾಮಣ್ಣ ಯಲ್ಲನ್ನೋರ, ತಿಮ್ಮಪ್ಪ ಹಾಗೂ ನಾರಾಯಣ.

‘ಹೊಲದಲ್ಲಿ ಕಷ್ಟಪಟ್ಟು ದುಡಿಯುತ್ತೇವೆ. ಆದರೆ ಬೆಳೆ ಕೈಗೆ ಬಂದಾಗ ತಕ್ಕ ಬೆಲೆ ಇರಲ್ಲ. ಒಮ್ಮೆ ಅನಾವೃಷ್ಟಿಯಿಂದ ಬೆಳೆಹಾನಿಯಾದರೆ, ಮತ್ತೊಮ್ಮೆ ಅತಿವೃಷ್ಟಿಯಿಂದ ಬೆಳೆಹಾನಿ ಅನುಭವಿಸುತ್ತೇವೆ. ಬಿತ್ತುವಾಗ ಮಳೆ ಬರಲಿಲ್ಲ. ಇನ್ನೇನು ಬೆಳೆ ಕೈಗೆ ಬರಲಿದೆ ಎನ್ನುವಾಗ ಧಾರಾಕಾರ ಮಳೆ ಬೆಳೆ ಜತೆಗೆ ನಮ್ಮ ಬದುಕು ಹಾಳು ಮಾಡಿದೆ’ ಎಂದು ಎಂದು ಲಕ್ಷ್ಮವ್ವ, ಬಂಗಾರೆಪ್ಪ ನೋವು ತೋಡಿಕೊಂಡರು.

‘ಮಳೆ ಹಾನಿಯ ಸಮೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರು ಹೊಲದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು. ಧೈರ್ಯ ಕಳೆದುಕೊಳ್ಳಬಾರದು’ ಎಂದು ವಿಶೇಷ ತಹಶೀಲ್ದಾರ್‌ ಎಜಾಜ್ ಉಲ್ ಹಕ್ ಸಲಹೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT