ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ರಮ್ಯಾ, ಮಂಗಳೂರು
ನನ್ನ ಉಳಿತಾಯ: ₹ 10,000 Gold Scheme, ₹ 5000 ಆರ್‌.ಡಿ. ₹ 2500, VPF ಮೂರು ತಿಂಗಳಿಗೊಮ್ಮೆ LIC ₹ 7119. ನನ್ನೊಡನೆ ₹ 1 ಲಕ್ಷವಿದೆ. ಇದನ್ನು ಎನ್‌ಎಸ್‌ಸಿ ಅಥವಾ ಬಂಗಾರ ಹೀಗೆ ಎಲ್ಲಿ ತೊಡಗಿಸಲಿ. ಸಿಪ್‌ (SIP)  ಹೇಗೆ ಮಾಡಿಸುವುದು?

ಉತ್ತರ: ನಿಮ್ಮ ಈಗಿನ ಉಳಿತಾಯ ಚೆನ್ನಾಗಿದೆ. ಅವುಗಳನ್ನು ಹಾಗೆಯೇ ಮುಂದುವರಿಸಿ. ಆರ್‌.ಡಿ. ಮಾಡುವಾಗ ದೀರ್ಘಾವಧಿಗೆ ಮಾಡಿ (10 ವರ್ಷಗಳಿಗೆ). ಮುಂದೆ ಠೇವಣಿ ಬಡ್ಡಿದರ ಕಡಿಮೆ ಆದರೂ, ಆರ್‌ಡಿಗೆ ಕಟ್ಟುವ ಮುಂದಿನ ಕಂತಿಗೂ, ಈಗ ನಿಶ್ಚಯಿಸಿದ ಬಡ್ಡಿಯೇ ದೊರೆಯುತ್ತದೆ. ₹ 1 ಲಕ್ಷ ನಿಮ್ಮ ಸಂಬಳ ಬರುವ ಅಥವಾ ಮನೆಗೆ ಸಮೀಪದ ಬ್ಯಾಂಕಿನಲ್ಲಿ 5 ವರ್ಷಗಳ ಅವಧಿಗೆ ಒಮ್ಮೆಲೇ ಬಡ್ಡಿ ಬರುವ ಮರು ಹೂಡಿಕೆ ಠೇವಣಿಯಲ್ಲಿ ಇರಿಸಿರಿ.

ಈಗಾಗಲೇ ನೀವು ₹ 10,000 ತಿಂಗಳಿಗೆ ಬಂಗಾರದ ಹೂಡಿಕೆ ಮಾಡುತ್ತಿದ್ದು, ಇನ್ನೂ ಹೆಚ್ಚಿನ ಹಣ ಇಲ್ಲಿ ಹೂಡುವುದು ಲಾಭದಾಯಕವಲ್ಲ. ಸಿಪ್‌ (Systematic Invistment Plan –SIP) ಎಂದರೆ, ಮ್ಯೂಚುವಲ್‌ ಫಂಡ್‌ಗಳು, ಜನರಿಂದ ಪ್ರತೀ ತಿಂಗಳೂ, ನಿರ್ದಿಷ್ಟ ಹಣ, ನಿರ್ದಿಷ್ಟ ತಾರೀಕಿನಲ್ಲಿ ಬ್ಯಾಂಕುಗಳ ಮುಖಾಂತರ ಪಡೆದು, ಕಂಪೆನಿ ಷೇರು, ಸರ್ಕಾರಿ ಬಾಂಡ್‌ಗಳಲ್ಲಿ ಹಣ ಹೂಡಿ, ಬರುವ ಲಾಭ– ಅಥವಾ ನಷ್ಟ, ಹೂಡಿಕೆದಾರರಿಗೆ ವರ್ಗಾಯಿಸುತ್ತವೆ. ಇಲ್ಲಿ ನಿರ್ದಿಷ್ಟವಾದ ಆದಾಯ ಬಂದೇ ಬರುತ್ತದೆ ಎನ್ನುವಂತಿಲ್ಲ. ಒಮ್ಮೊಮ್ಮೆ ಉತ್ತಮ ವರಮಾನ ಬರುವ ಸಾಧ್ಯತೆಯೂ ಇದೆ. ನಿಮ್ಮ ಉಳಿತಾಯದ ಶೇ 5 ರಷ್ಟು ಇಲ್ಲಿ ತೊಡಗಿಸಬಹುದು.

ಕಿರಣ್, ಬೆಂಗಳೂರು
ನಾನು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ. ನನ್ನ ತಿಂಗಳ ಸಂಬಳ ₹ 62,000. ನನಗೆ ತಿಂಗಳಿಗೆ ₹ 1000 ಸಹ ಉಳಿಸಲು ಆಗುತ್ತಿಲ್ಲ. ನಾನು ಕಾರಿನ ಸಾಲಕ್ಕೆ ₹ 11,050 ತುಂಬುತ್ತೇನೆ. ನಾನು ಕ್ರೆಡಿಟ್ ಕಾರ್ಡಿಗೆ ಪ್ರತೀ ತಿಂಗಳೂ ₹ 30,000 ತುಂಬುತ್ತೇನೆ. ಇದನ್ನು ನಿಯಂತ್ರಿಸಲಾಗುತ್ತಿಲ್ಲ. ನನ್ನ ಸಂಬಳದಲ್ಲಿ ಕಡಿತದ ವಿವರ– ವಾರ್ಷಿಕ ಎಲ್.ಐ.ಸಿ. ₹ 12,000, ಸೇವಿಂಗ್ಸ್ ಪ್ಲ್ಯಾನ್ ₹ 15,000, ಸುಕನ್ಯಾ ತಿಂಗಳಿಗೆ ₹ 30,000, ಆರ್.ಡಿ. ₹ 12,000. ಮನೆ ಖರ್ಚು ₹ 9,000. ದಯಮಾಡಿ ನನಗೆ ಉತ್ತಮ ಮಾರ್ಗದರ್ಶನ ಮಾಡಿರಿ. ನನಗೆ ಇಬ್ಬರು ಸಣ್ಣ ಮಕ್ಕಳಿದ್ದಾರೆ.

ಉತ್ತರ: ನೀವು ಸುಕನ್ಯಾ ಸಮೃದ್ಧಿ ಯೋಜನೆಗೆ, ವಾರ್ಷಿಕವಾಗಿ ₹ 30,000 ತುಂಬುತ್ತಿರಬೇಕು. ಕ್ರೆಡಿಟ್ ಕಾರ್ಡು ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಯಿಂದಾಗಿ ₹ 60,000 ಖರ್ಚಾದಲ್ಲಿ, ನಿಮ್ಮೊಡನೆ ಬರೇ ₹ 2000 ಮಾತ್ರ ಉಳಿಯುತ್ತದೆ. ನಿಮ್ಮ ಮುಂದಿರುವ ಸಮಸ್ಯೆಗೆ ಒಂದೇ ಪರಿಹಾರವೆಂದರೆ ತಕ್ಷಣ ಕ್ರೆಡಿಟ್ ಕಾರ್ಡನ್ನು, ಪಡೆದ ಬ್ಯಾಂಕಿಗೆ ಹಿಂತಿರುಗಿಸುವುದು (Surender). ಇದರಿಂದ ನೀವು ನೆಮ್ಮದಿಯಿಂದ ಬಾಳಬಹುದು ಹಾಗೂ ಜೀವನದ ಸಂಜೆಯಲ್ಲಿ ಸುಖವಾಗಿ ಜೀವಿಸಬಹುದು. ಉತ್ತರ ಓದಿದ ತಕ್ಷಣ ದಯಮಾಡಿ ಕಾರ್ಡನ್ನು ಹಿಂತಿರುಗಿಸಿ ಬಿಡಿ.

ಬಹಳಷ್ಟು ಯುವ ಜನಾಂಗ, ಕ್ರೆಡಿಟ್ ಕಾರ್ಡಿನ ಬಳಕೆ ಸರಿಯಾಗಿ ಮಾಡದೆ, ಸಾಲದಲ್ಲಿ ಮುಳುಗುತ್ತಿರುವುದು ಆತಂಕಕಾರಿ ವಿದ್ಯಮಾನವಾಗಿದೆ. ವಿಮೆ, ಸುಕನ್ಯಾ ಸಮೃದ್ಧಿ ಯೋಜನೆ, ಆರ್.ಡಿ. ಮುಂದುವರಿಸಿರಿ (ನಿಮ್ಮ ಆರ್.ಡಿ. ₹ 12,000 ವರ್ಷಕ್ಕೆ ಇರಬಹುದು ಎಂದು ಭಾವಿಸುವೆ) ನಿಮಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರ ಮದುವೆ, ವಿದ್ಯಾಭ್ಯಾಸ ಹೀಗೆ ಹಲವು ಜವಾಬ್ದಾರಿಗಳು ನಿಮ್ಮ ಮುಂದೆ ಇವೆ.

ಕ್ರೆಡಿಟ್ ಕಾರ್ಡ್‌ನಿಂದ ಉಳಿಯುವ ₹ 30,000 ದಲ್ಲಿ ಕನಿಷ್ಠ ತಲಾ ₹ 10,000 ದಂತೆ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ, 10 ವರ್ಷಗಳ ಅವಧಿಗೆ ಆರ್.ಡಿ. ಮಾಡಿರಿ. ಶೇ 7 ಬಡ್ಡಿ ದರದಲ್ಲಿ ತಲಾ ₹ 17.37 ಲಕ್ಷ ಅವಧಿ ಮುಗಿಯುತ್ತಲೇ ಪಡೆಯುತ್ತೀರಿ. ಈ ದೊಡ್ಡ ಮೊತ್ತ ಮಕ್ಕಳ ಭವಿಷ್ಯಕ್ಕೆ ಸಹಾಯವಾಗುತ್ತದೆ. ಹಣ ಕೊಡದೆ, ಕ್ರೆಡಿಟ್ ಕಾರ್ಡಿನಿಂದ ಬೇಕೋ ಬೇಡವೋ ಆಗಿರುವ ವಸ್ತುಗಳನ್ನು ಕೊಂಡು, ಹಣ ತುಂಬುವಾಗ ಸರ್ವಜ್ಞ ವಚನದಲ್ಲಿ ತಿಳಿಸಿದಂತೆ ‘ಕಿಬ್ಬದಿಯ ಕೀಲು ಮುರಿದಂತೆ’ ಎನ್ನುವ ನೋವನ್ನು ಅನುಭವಿಸುವುದು ಎಂದಿಗೂ ಜಾಣತನವಲ್ಲ.

ಎಂ.ಆರ್‌. ರಾವ್‌, ಶಿವಮೊಗ್ಗ
ನನ್ನ ಮಗಳು EPF, VPF, PPF ಒಟ್ಟಿನಲ್ಲಿ ₹ 2.90 ಲಕ್ಷ ವಾರ್ಷಿಕವಾಗಿ ತೊಡಗಿಸುತ್ತಾಳೆ. ₹ 2.90 ಲಕ್ಷದಿಂದ ಬರುವ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯತಿ ಇದೆಯೇ? ಆಕೆ ಎನ್‌ಪಿಎಸ್‌ನಲ್ಲಿ ₹ 50,000 ಉಳಿಸುತ್ತಾಳೆ. ಎನ್‌ಪಿಎಸ್‌ನಲ್ಲಿ ಗರಿಷ್ಠ ಎಷ್ಟು ಉಳಿಸಬಹುದು?

ಉತ್ತರ: EPF, VPF, PPF ಇಲ್ಲಿ ಬರುವ ಸಂಪೂರ್ಣ ಸೆಕ್ಷನ್‌ 10(11) ಆಧಾರದ ಮೇಲೆ ಎಷ್ಟು ತುಂಬಿದರೂ, ಅಲ್ಲಿ ಬರುವ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯತಿ ಇದೆ. ಎನ್‌ಪಿಎಸ್‌ನಲ್ಲಿ ಗರಿಷ್ಠ ಮಿತಿ ಎನ್ನುವುದಿಲ್ಲ, ಆದರೆ ಸೆಕ್ಷನ್‌ 80 ಸಿಸಿಡಿ(1ಬಿ) ಆಧಾರದ ಮೇಲೆ ಪಡೆಯುವ ರಿಯಾಯತಿ ₹ 50,000 ಮಾತ್ರ ಸೀಮಿತವಾಗಿದೆ.

ಆರ್‌.ವಿ. ಪದ್ಮನಾಭ, ಬೆಂಗಳೂರು
ನನ್ನ ವಾರ್ಷಿಕ ಆದಾಯ ₹ 3,33,809. ನನ್ನೊಡನೆ ಕೆಲವು ಬ್ಯಾಂಕ್‌ ಠೇವಣಿಗಳಿವೆ. ನನಗೆ ತೆರಿಗೆ ಬರುತ್ತಿದೆಯೇ ತಿಳಿಸಿ. ನಾನು ಹಿರಿಯ ನಾಗರಿಕ. ನಿಮ್ಮ ಒಂದು ಅಂಕಣದಲ್ಲಿ ಬಾಡಿಗೆಯಲ್ಲಿ ಶೇ 30 ಕಳೆದು ತೆರಿಗೆ ಸಲ್ಲಿಸಬಹುದು ಎಂಬುದಾಗಿ ತಿಳಿಸಿದ್ದೀರಿ. ಇದು ಯಾವ ಸೆಕ್ಷನ್‌ ಹಾಗೂ ನನಗೂ ಅನ್ವಯವಾಗುತ್ತಿದೆಯೇ?

ಉತ್ತರ: ನಿಮ್ಮ ವಾರ್ಷಿಕ ಆದಾಯ ₹ 3 ಲಕ್ಷ (ಪಿಂಚಣಿ ಹಾಗೂ ಬ್ಯಾಂಕ್‌ ಬಡ್ಡಿ ಸೇರಿಸಿ) ದಾಟಿದಲ್ಲಿ ನೀವು ಆ ಮೊತ್ತಕ್ಕೆ ತೆರಿಗೆ ಸಲ್ಲಿಸಬೇಕು. ರಿಟರ್ನ್‌ ಕೂಡಾ ತುಂಬ ಬೇಕು. ಯಾವುದೇ ವ್ಯಕ್ತಿ ತನ್ನ ಮನೆಯನ್ನು ಬೇರೆಯವರಿಗೆ ಬಾಡಿಗೆ ಕೊಟ್ಟಲ್ಲಿ ಸೆಕ್ಷನ್‌ 24(ಎ) ಆಧಾರದ ಮೇಲೆ, ಬರುವ ವಾರ್ಷಿಕ ಬಡ್ಡಿಯಲ್ಲಿ ಶೇ 30 ಕಳೆದು ಈ ಮೊತ್ತ ಒಟ್ಟು ಆದಾಯಕ್ಕೆ ಸೇರಿಸಿ ತೆರಿಗೆ ಕೊಡಬೇಕಾಗುತ್ತದೆ.

ಶರಣಪ್ಪ, ಸುರಪುರ (ಯಾದಗಿರಿ)
ನಾನು ಕೇಂದ್ರ ಸರ್ಕಾರದ ನೌಕರ. ಇನ್ನೂ 17 ವರ್ಷದ ಸೇವಾವಧಿ ಇದೆ. ನನ್ನ ಒಟ್ಟು ಸಂಬಳ ₹ 36,000 ಇದರಲ್ಲಿ NPS+PLIಗೆ ತಿಂಗಳಿಗೆ ₹ 14,000 ಕಡಿತವಾಗುತ್ತದೆ. ನನ್ನ ಮನೆ ಪಟ್ಟಣದಿಂದ 6 ಕಿ.ಮಿ. ಅಂತರದಲ್ಲಿದೆ. ಅಲ್ಲಿ ಹಳೆಮನೆ ಬಿದ್ದಿದ್ದು, ಅದೇ ಜಾಗದಲ್ಲಿ ಮನೆ ಕಟ್ಟಲು ಗೃಹಸಾಲ ಸಿಗಬಹುದೇ ತಿಳಿಸಿರಿ.

ಉತ್ತರ: ಹಳ್ಳಿಗಳಲ್ಲಿ ಮನೆ ನಿರ್ಮಿಸಲು ಗೃಹಸಾಲ ದೊರೆಯುವುದಿಲ್ಲ ಎನ್ನುವಂತಿಲ್ಲ. ಮನೆ ಕಟ್ಟುವ ಸ್ಥಳ ಭೂಪರಿವರ್ತನೆಯಾಗಿರಬೇಕು. (N.A.) ಎಲ್ಲಕ್ಕೂ ಮುಖ್ಯವಾಗಿ, ವ್ಯಕ್ತಿಯ ಸಾಲ ಮರುಪಾವತಿಸುವ ಶಕ್ತಿ, ಉದ್ಯೋಗದ ಖಾತರಿ, ಹಾಗೂ ಅವಶ್ಯಕತೆ ಇವುಗಳು ಮುಖ್ಯವಾಗುತ್ತದೆ. ಕಡಿತದ ನಂತರ ನಿಮಗೆ ₹ 22,000 ಕೈಗೆ ಬರುತ್ತದೆ. ಮನೆ ಖರ್ಚು ಬಾಡಿಗೆ, ಮಕ್ಕಳ ವಿದ್ಯಾಬ್ಯಾಸ ಇವೆಲ್ಲವುಗಳಿಂದ ನೀವು ಸಾಲ ಮರುಪಾವತಿಸಲು ಅಷ್ಟೊಂದು ಹಣ ನಿಮ್ಮೊಡನೆ ಉಳಿಯಲಾರದು. ಒಳ್ಳೆ ವ್ಯಕ್ತಿ ಜಾಮೀನು ಕೊಟ್ಟು ಗೃಹಸಾಲಕ್ಕೆ, ಸಂಬಳ ಪಡೆಯುವ ಬ್ಯಾಂಕಿನಲ್ಲಿ ವಿಚಾರಿಸಿರಿ.

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ.ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001.
ಇ–ಮೇಲ್‌: businessdesk@prajavani.co.in

ಡಾ. ರಾಜಶೇಖರ್, ರಾಯಚೂರು
ನಾನು ಸರ್ಕಾರಿ ಪಿ.ಯು. ಕಾಲೇಜಿನಲ್ಲಿ ಉಪನ್ಯಾಸಕ. ಬಹಳ ಹಿಂದೆ ನೀವು ಆರ್.ಡಿ. ಪ್ರಾರಂಭಿಸಿ, 30 ವರ್ಷಗಳಲ್ಲಿ ಕರೋಡಪತಿ ಆಗಲು ಪ್ಲ್ಯಾನ್‌ ಹೇಳಿದ್ದೀರಿ. ನನಗೆ ಆಗ ಹಣ ಉಳಿಸಿ, ನೀವು ಹೇಳಿದಂತೆ ಮಾಡಲಾಗಲಿಲ್ಲ. ನಾನು ಈಗ ₹ 10,000 ತಿಂಗಳೂ ಉಳಿಸಬಹುದು. ಇನ್ನು 27 ವರ್ಷಗಳಲ್ಲಿ ₹ 1 ಕೋಟಿ ಗಳಿಸಬಹುದೇ ತಿಳಿಸಿ. ದೊಡ್ಡ ಮೊತ್ತಕ್ಕೆ ತೆರಿಗೆ ಬರುತ್ತದೆಯೇ?

ಉತ್ತರ: ನೀವು ₹ 10,000 ಆರ್.ಡಿ. ಪ್ರಾರಂಭಿಸಿ, ಈ ಕೆಳಗಿನ ಲೆಕ್ಕಾಚಾರದಂತೆ, 27 ವರ್ಷಗಳಲ್ಲಿ ₹ 95.60 ಲಕ್ಷವನ್ನು ಶೇ. 7ರ ಬಡ್ಡಿ ದರದಲ್ಲಿ  ಪಡೆಯುವಿರಿ. ಆರ್.ಡಿ.ಯನ್ನು ಎಲ್ಲಾ ಬ್ಯಾಂಕುಗಳಲ್ಲಿ ಒಂದೇ ಹೆಸರಿನಲ್ಲಿ ಕರೆಯುತ್ತಾರೆ. ಆದರೆ ಐ.ಆರ್.ಡಿ.ಯನ್ನು ಕೆಲವು ಬ್ಯಾಂಕುಗಳು ನಗದು ಸರ್ಟಿಫಿಕೇಟ್ ಎಂಬುದಾಗಿ ಕರೆಯುತ್ತಾರೆ. ಉದಾಹರಣೆಗಾಗಿ ಸಿಂಡಿಕೇಟ್ ಬ್ಯಾಂಕಿನಲ್ಲಿ ವಿಕಾಸ್ ಸರ್ಟಿಫಿಕೇಟ್, ಕರ್ಣಾಟಕ ಬ್ಯಾಂಕಿನಲ್ಲಿ ಅಭ್ಯುದಯ ಸರ್ಟಿಫಿಕೇಟ್, ದಿ ಬೆಂಗಳೂರು ಸಿಟಿ ಕೋ ಆಪರೇಟಿವ್ ಬ್ಯಾಂಕಿನಲ್ಲಿ ‘ರಜತ ಸರ್ಟಿಫಿಕೇಟ್, ಐ.ಆರ್.ಡಿ. ಅಥವಾ ನಗದು ಸರ್ಟಿಫಿಕೇಟುಗಳ ತತ್ವ ಒಂದೇ ಇರುತ್ತದೆ. ಈ ಠೇವಣಿಯ ಮಹತ್ವವೆಂದರೆ, ಪ್ರತೀ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ಅಸಲಿಗೆ ಸೇರಿಸಿ, ಅವಧಿ ಮುಗಿಯುವ ತನಕ ಚಕ್ರಬಡ್ಡಿಯಲ್ಲಿ ವರಮಾನ ಗಳಿಸಬಹುದು.

ನೀವು ತಕ್ಷಣ ₹ 10,500 ತಿಂಗಳಿಗೆ ಉಳಿಸಿ ಮೇಲಿನಂತೆ, ಹಣ ಹೂಡುತ್ತಾ ಬಂದಲ್ಲಿ 27 ವರ್ಷಗಳಲ್ಲಿ ₹ 1 ಕೋಟಿಗೂ ಮಿಕ್ಕಿದ ಮೊತ್ತ ಪಡೆಯುತ್ತೀರಿ. ನಿಮಗೆ ನನ್ನ ಶುಭ ಕಾಮನೆಗಳು. ದೀರ್ಘಾವಧಿ ಠೇವಣಿಯಲ್ಲಿ ಹಾಗೂ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಅವಧಿ ಮುಗಿಯುತ್ತಲೇ ದೊಡ್ಡ ಮೊತ್ತ ಬರುವುದರಿಂದ ತೆರಿಗೆ ವಿಚಾರದಲ್ಲಿ ಭಯ ಪಡುವ ಅವಶ್ಯವಿಲ್ಲ. ಅಸಲಿಗೆ ಬ್ಯಾಂಕಿನಲ್ಲಿ ಪ್ರತೀ ವರ್ಷ ಸೇರಿಸುವ ಬಡ್ಡಿ (Accrued Interest) ವಿಚಾರದಲ್ಲಿ ಫಾರಂ ನಂ 16–ಎ ಬ್ಯಾಂಕಿನಿಂದ ಪಡೆದು, ಬಡ್ಡಿ ಆದಾಯ ಪ್ರತೀ ವರ್ಷ ರಿಟರ್ನ್ ತುಂಬುವಾಗ ತೋರಿಸಿ ತೆರಿಗೆ ಸಲ್ಲಿಸಬಹುದು. ಹೀಗೆ ಮಾಡಿದಲ್ಲಿ ಒಮ್ಮೆಲೇ ಪಡೆಯುವ ದೊಡ್ಡ ಬಡ್ಡಿ ಮೊತ್ತಕ್ಕೆ ಒಮ್ಮೆಲೇ ತೆರಿಗೆ ತುಂಬುವ ಅವಶ್ಯವಿಲ್ಲ. ಈ ಸೌಲತ್ತು ಆದಾಯ ತೆರಿಗೆ ಕಾನೂನಿನಲ್ಲಿ ಅಡಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT