ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಸಿ ಜಯಿಸಿದ ಸುಂದರ ನಗರಿಯ ಹುಡುಗಿ

Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ಸರ್ಕಾರ ನಮಗೆ ಏನು ಮಾಡಿದೆ? ರಾಜಕಾರಣಿಗಳದ್ದು ಒಣಭಾಷಣ. ಸ್ಪರ್ಧೆಗೆ ಯೋಗ್ಯವಾದ ಒಂದು ಸ್ವಿಮ್ ಸೂಟ್ ಬೆಲೆ 30 ಸಾವಿರ ರೂಪಾಯಿ. ಅದನ್ನು ಅಬ್ಬಬ್ಬಾ ಅಂದರೆ ನಾಲ್ಕು ಸಲ ತೊಡಬಹುದು. ನನ್ನ ಅಪ್ಪ-ಅಮ್ಮ ತಮ್ಮ ಉಳಿತಾಯದ ಹಣವನ್ನೆಲ್ಲ ನನ್ನ ಈಜು ಸ್ಪರ್ಧೆಗಳಿಗಾಗಿ ಹಿಂದೆ ಮುಂದೆ ನೋಡದೆ ಖರ್ಚು ಮಾಡಿದರು. ತರಬೇತುದಾರ ಗುರುಚರಣ್ ಜಿತ್ ಸಿಂಗ್ ಬೆನ್ನುತಟ್ಟಿದರು. ನನಗೆ ಒಲಿಂಪಿಕ್ಸ್‌ನಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಬೇಕೆಂಬ ಕನಸಿದೆ. ನಮ್ಮ ಸರ್ಕಾರ ಅಮೆರಿಕ, ಆಸ್ಟ್ರೇಲಿಯಾ ಅಥವಾ ಜಪಾನ್‌ಗೆ ಕಳುಹಿಸಿಕೊಡುವುದೇ?’

ಎರಡೇ ವರ್ಷಗಳ ಹಿಂದೆ ಚಾಹತ್ ಅರೋರಾ ಹೀಗೆ ಪ್ರಶ್ನಿಸಿದ್ದರು. ಹೋರಾಟ, ಹತಾಶೆ, ಕನಸುಗಳ ನನಸಾಗಿಸಿಕೊಳ್ಳುವ ಛಲ ಎಲ್ಲವೂ ಅವರ ಪ್ರಶ್ನೆಗಳಲ್ಲಿದ್ದವು. ಡಯಟಿಷಿಯನ್ ಇಲ್ಲ, ನ್ಯೂಟ್ರಿಷನಿಸ್ಟ್ ಇಲ್ಲ, ಫಿಟ್ ನೆಸ್ ತರಬೇತುದರರಂತೂ ದೂರದ ಮಾತು- ಇವೆಲ್ಲ ಕೊರತೆಗಳನ್ನು ನೀಗಿಕೊಳ್ಳಲು ಚಾಹತ್ ಪುಸ್ತಕಗಳನ್ನು ಓದಿದರು. ವಿಡಿಯೊಗಳನ್ನು ನೋಡಿದರು. ಬಲ್ಲವರನ್ನು ಕೇಳಿದರು. ತತ್ಫಲವಾಗಿ ಭೋಪಾಲ್ ನಲ್ಲಿ ನಡೆದ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್ ಷಿಪ್ ನ 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಚಿನ್ನ ಗೆದ್ದದ್ದಷ್ಟೇ ಅಲ್ಲ; ರಾಷ್ಟ್ರೀಯ ದಾಖಲೆಯನ್ನೂ ಬರೆದರು. 1 ನಿಮಿಷ 15.19 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ಅವರು 2015ರಲ್ಲಿ ಜಯವೀಣಾ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು (1 ನಿಮಿಷ 16.25 ಸೆಕೆಂಡ್) ಮೀರಿದರು.

ಚಂಡೀಗಡವನ್ನು 'ಸುಂದರ ನಗರಿ' ಎನ್ನುತ್ತಾರೆ. ಅಲ್ಲಿ ಸೆಕ್ಟರ್ -38ರಲ್ಲಿ ವಾಸ ಮಾಡುವ ಕುಟುಂಬದ ಹೆಣ್ಣುಮಗಳು ಚಾಹತ್. ಅಮ್ಮ ಗೀತಾ ಅರೊರಾ. ಅಣ್ಣ ಸ್ಪರ್ಶ್. ಮೊದಲು ಅವನು ಈಜು ಶಾಲೆಗೆ ಸೇರಿದ. ಸೆಕ್ಟರ್ -23ರಲ್ಲಿದ್ದ ತರಬೇತಿ ಕೇಂದ್ರಕ್ಕೆ ನಿತ್ಯ ಮಗನನ್ನು ಗೀತಾ ಕರೆದುಕೊಂಡು ಹೋಗುತ್ತಿದ್ದರು. ನಾಲ್ಕರ ಮಗಳು ಚಾಹತ್ ಕೂಡ ಒಂದು ದಿನ ಅಮ್ಮನ ಬೆರಳು ಹಿಡಿದು ಹೊರಟಳು. ಅಲ್ಲಿನ ಉದ್ಯಾನದ ಪುಟ್ಟ ಕೊಳದಲ್ಲಿ ನೀರಿನಾಟ ಅಡುವುದೆಂದರೆ ಅವಳಿಗೆ ಖುಷಿ. ನೀರಿನೊಳಗೆ ವೇಗವಾಗಿ ಜಿಗಿದು ನುಗ್ಗುವ ಅಣ್ಣನ ಕಂಡು ಅವಳಿಗೂ ಬಯಕೆಯಾಯಿತು. ಅಮ್ಮ ಗೀತಾ ಮಗಳನ್ನೂ ತರಬೇತಿಗೆ ಸೇರಿಸಿದರು.

ವಯಸ್ಸಿನಲ್ಲಿ ತನಗಿಂತ ಎರಡು ಪಟ್ಟು ದೊಡ್ಡವರನ್ನೂ ಹಿಂದಿಕ್ಕುವಷ್ಟು ವೇಗವಾಗಿ ಚಾಹತ್ ಈಜುತ್ತಿದ್ದಳು. ಸಹಜವಾಗಿಯೇ ರಾಜ್ಯಮಟ್ಟದ ಸ್ಪರ್ಧೆಗೆ ಎರಡೇ ವರ್ಷಗಳಲ್ಲಿ ಆಯ್ಕೆಯಾದಳು. ಅಲ್ಲಿ ಮೊದಲು ಒಲಿದದ್ದು ಕಂಚು. ಆಮೇಲೆ ಯಶೋಪಾಥ. ರಾಜ್ಯಮಟ್ಟದ ಬಗೆಬಗೆಯ ಸ್ಪರ್ಧೆಗಳಲ್ಲಿ ಚಾಹತ್ ಗೆದ್ದಿರುವ ಪದಕಗಳ ಸಂಖ್ಯೆ ನೂರು ದಾಟಿದೆ.

2009ರಲ್ಲಿ ಮೊದಲ ಸಲ ರಾಷ್ಟ್ರೀಯ ಜೂನಿಯರ್ ಸ್ಪರ್ಧೆಯಲ್ಲಿ ಹೋರಾಡಿ ಕಂಚು ಗೆದ್ದಳು. 2010ರಲ್ಲಿ ಸಿಕ್ಕಿದ್ದೂ ಕಂಚೇ. ಅಲ್ಲಿಂದಾಚೆಗೆ ಈಜು ಸ್ಪರ್ಧೆಯನ್ನು, ವಿಶೇಷವಾಗಿ ಬ್ರೆಸ್ಟ್ ಸ್ಟ್ರೋಕ್ ಅನ್ನು ಹುಡುಗಿ ಗಂಭೀರವಾಗಿ ಪರಿಗಣಿಸಿದಳು.

ಬೆಳಿಗ್ಗೆ 5ಕ್ಕೆ ಏಳುವುದು. ಎರಡೂವರೆ ತಾಸು ಅಭ್ಯಾಸ. ಮಧ್ಯಾಹ್ನ 2.30ಕ್ಕೆ ಶಾಲೆ ಮುಗಿದ ಮೇಲೆ ಟ್ಯೂಷನ್. 4.30ರಿಂದ ಮತ್ತೆ ಎರಡೂವರೆ ತಾಸು ಅಭ್ಯಾಸ. ರಜಾದಿನಗಳಲ್ಲಿ ಎರಡು ಅವಧಿಗಳಲ್ಲಿ ಆರು ತಾಸು ಅಭ್ಯಾಸ ಮಾಡಿದ್ದೂ ಇದೆ.

ರಾಷ್ಟ್ರೀಯ ಜೂನಿಯರ್ ಸ್ಪರ್ಧೆಯಲ್ಲಿ ಮೂರು ಕಂಚು, ಶಾಲಾ ಮಟ್ಟದ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಒಂದು ಚಿನ್ನ, ಎರಡು ಬೆಳ್ಳಿ, ಒಂದು ಕಂಚು ಗೆದ್ದಳು. ಸಿಬಿಎಸ್ಇ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 50 ಮೀ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಕೂಟ ದಾಖಲೆ ಮಾಡಿದ ಮೇಲೆ ಭಾರತೀಯ ಕ್ರೀಡಾ ಪ್ರಾಧಿಕಾರದ ಈಜು ತರಬೇತಿ ಕೇಂದ್ರಕ್ಕೆ ಸೇರಿದಳು. ಅಲ್ಲಿ ಗುರುವಾಗಿ ಗುರುಚರಣ್ ಜಿತ್ ಸಿಕ್ಕರು.

ಈಜಿ ಬೇಗ ದಡ ಸೇರಿದ್ದಷ್ಟೇ ಅಲ್ಲ; 12ನೇ ಇಯತ್ತೆ ಪರೀಕ್ಷೆಯಲ್ಲಿ ಶೇ 89 ಅಂಕಗಳನ್ನು ಗಳಿಸಿ ಶಹಬ್ಬಾಸ್ ಎನಿಸಿಕೊಂಡಳು. ಎರಡು ವರ್ಷಗಳಿಂದ ಈಜು ಕ್ಷೇತ್ರ ತನ್ನತ್ತ ಬೆರಗಿನಿಂದ ನೋಡುವಂತೆ ಮಾಡಿರುವ ಚಾಹತ್ ಈಗ 22ರ ಯುವತಿ. 2015ರಲ್ಲಿ ನ್ಯಾಷನಲ್ ಗೇಮ್ಸ್ ನಲ್ಲಿ 100 ಮೀ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಚಿನ್ನ ಗೆದ್ದಮೇಲೆ ಆತ್ಮವಿಶ್ವಾಸ ದುಪ್ಪಟ್ಟಾಯಿತು. ಹಿಂದಿನ ವರ್ಷವಷ್ಟೆ ಸೀನಿಯರ್ ನ್ಯಾಷನಲ್ಸ್ ನಲ್ಲಿ ಬೆಳ್ಳಿ ಗೆದ್ದಿದ್ದರು.

ಸರ್ಕಾರಗಳಿಗೆ ಅವರು ಹಾಕಿದ ಪ್ರಶ್ನೆಗಳ ಕಡೆ ಮತ್ತೊಮ್ಮೆ ನೋಡೋಣ. ಅವುಗಳಲ್ಲಿ ಹುರುಳಂತೂ ಇದೆ. ತಾನೇ ಅವಕ್ಕೆ ಉತ್ತರ ಕಂಡುಕೊಳ್ಳುತ್ತಾ ಸಾಧನೆಯ ಪಥದಲ್ಲಿ ಸಾಗಿರುವುದು ಗಮನಾರ್ಹ. ಚಾಹತ್ ಬತ್ತಳಿಕೆಯಲ್ಲಿ ಪ್ರತಿಭೆಯ ಇನ್ನಷ್ಟು ಬಾಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT