ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳೂ ಒಂದು ದಿನ ಬಂದೇ ಬರ್ತಾಳೆ

Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ತುಂಬಿದ ಹೊಟ್ಟೆಯೊಳಗೆ ಮುಂದೊತ್ತಿ ಬಂದ ಪುಟ್ಟ ಪಾದ. ಆರ್‌.ಟಿ. ನಗರದಲ್ಲಿ ಮೂರು ಅಂತಸ್ತಿನ ಮನೆಯ ಮಹಡಿ ಮೇಲೆ ಬಟ್ಟೆ ಒಣಹಾಕುತ್ತಿದ್ದ ಗಾಯತ್ರಿಗೆ ಆಯ ತಪ್ಪಿ ಮುಗ್ಗರಿಸುವಂತಾಯಿತು. ಹೊಟ್ಟೆ ಸವರಿಕೊಂಡರೆ ಅಲ್ಲಿ ಇನ್ನೊಂದು ಜೀವ ಈಜುತ್ತಿರುವ ಅನುಭವ.

ಮಗು ಅದರ ಅಪ್ಪನಂತಿರುತ್ತೋ, ನನ್ನಂತಿರುತ್ತೋ...? ನನ್ನಂತೆ ಕಪ್ಪಗೆ ಇರೋದು ಬೇಡಪ್ಪಾ. ಅವರಪ್ಪನಂಗೆ ಕೆಂಪುಕೆಂಪಾಗಿದ್ದರೆ ಚಂದ.

ಅದು ಗಂಡೋ- ಹೆಣ್ಣೋ? ಮೊನ್ನೆ ಮನೆಗೆ ಬಂದಿದ್ದ ಸೋದರತ್ತೆ ನನಗೆ ದೃಷ್ಟಿ ನೀವಳಿಸಿ, ‘ನಿನ್ನ ಹೊಟ್ಟೆ ಮೇಲುಬ್ಬಿದೆ. ನಿಂಗೇ ಹೆಣ್ಣೇ ಆಗೋದು’ ಅಂದಿದ್ರು. ‘ಯಾವ್ದೋ ಒಂದು ಅಂತೂ ಆರೋಗ್ಯವಾಗಿದ್ರೆ ಸಾಕು’ ಅಂದುಕೊಂಡವಳ ಮೊಗದಲ್ಲಿ ನಿರುಮ್ಮಳ ನಗು.

ಮೋಡದ ಹಿಂದೆ ಬಚ್ಚಿಟ್ಟುಕೊಂಡಿದ್ದ ಸೂರ್ಯ ಇವಳ ನಗು ನೋಡಲೋ ಎಂಬಂತೆ ಒಮ್ಮೆ ಮೇಲೆದ್ದು ಬಂದ. ಹೊಳೆವ ಇಳಿಬಿಸಿಲಲಿ ಹಾರುವ ಕೊಕ್ಕರೆ- ಬಾವಲಿಗಳು ಬಲುಚಂದ. ದೀಪಾವಳಿಯ ಮುನ್ನಾದಿನವಾಗಿದ್ದರೂ ಮೇಲೆ ಹಾರಿ ದೂರ ಸಿಡಿವ ರಾಕೆಟ್‌ಗಳಿಗೆ ಕೊರತೆ ಇರಲಿಲ್ಲ.

‘ಬಸುರೀರ ಹೊಟ್ಟೆ ಮೇಲೆ ಸಂಜೆ ಹೊತ್ತು ಪಕ್ಷಿಗಳ ನೆರಳು ಬೀಳಬಾರದು’ ಅಂದಿದ್ದ ಅತ್ತೆಯ ಮಾತು ನೆನಪಾಗಿ ಕೆಳಗಿಳಿದಳು.

‘ಅಷ್ಟೆಲ್ಲಾ ವಿಚಾರವಾದಿಯಾಗಿದ್ದ ನಾನು, ಜಾತಿ ಮೀರಿ ಮದುವೆಯಾದ ನಾನು, ಇಂಥ ಗೊಡ್ಡ ನಂಬಿಕೆಗಳಿಗೆಲ್ಲಾ ಇಷ್ಟೊಂದು ಬೆಲೆ ಕೊಡ್ತಿದ್ದೀನಲ್ಲಾ?’ ಅವಳ ಮನಸು ಪ್ರಶ್ನೆ ಕೇಳಿಕೊಂಡಾಗ ಮೊಗದ ಮೇಲೆ ಮತ್ತೆ ನಗುವಿನ ರಂಗವಲ್ಲಿ. ಆಗಷ್ಟೇ ಆಕಾಶದಲ್ಲಿ ಶುಕ್ರನೂ ಮಿನುಗಲು ಆರಂಭಿಸಿದ್ದ.

***

ಮನೆ ಒಳಗೆ ಬಂದವಳು ಟೀವಿ ಆನ್ ಮಾಡಿ, ಸೋಫಾ ಮೇಲೆ ಹಗೂರಕ್ಕೆ ಕುಳಿತಳು.

‘ಮೊದಲಿನಿಂದಲೂ ಸೋದರತ್ತೆಗೆ ನನ್ನ ಮೇಲೆ ವಾಂಛಲ್ಯ ಇದ್ದುದು ಅಷ್ಟಕಷ್ಟೇ. ಈಗೇಕೆ ನನ್ನನ್ನು ಹುಡುಕಿಕೊಂಡು ಬಂದ್ರು?’ ವಿಚಿತ್ರ ಅನಿಸಿತು. ಸೋದರತ್ತೆಯ ನೆನಪಿನ ಜೊತೆಗೆ ಒತ್ತಿ ಬಂದಿದ್ದು ಅಪ್ಪನ ಮುಖ.

‘ನಾನು ಹುಡುಗಿ ಅಲ್ವಾ? ನಂಗೆ ಇಂಥ ಸಂದರ್ಭದಲ್ಲಿ ಅಮ್ಮ ನೆನಪಾಗ್ಬೇಕು. ನಾನ್ಯಾಕೆ ಯಾವಾಗ್ಲೂ ಅಪ್ಪನ್ನ ನೆನಪಿಸಿಕೊಳ್ತೀನಿ?’ಈ ಹಿಂದೆಯೂ ಎಷ್ಟೊಂದು ಸಲ ಈ ಪ್ರಶ್ನೆ ಕೇಳಿಕೊಂಡಿದ್ಳು.

***

ರಿಂಗಣಿಸಿದ ಮೊಬೈಲ್‌ಗೆ ಹಲೋ ಹೇಳಿದಾಗ ಅದು ಗೆಳತಿ ಲಲಿತಾಳ ದನಿ ಎಂದು ಗೊತ್ತಾಯಿತು.

‘ಏನೇ, ಸೋದರತ್ತೆ ಬಂದಿದ್ರಾ?’ ಲಲಿತಾ ಹಲೋ ಎನ್ನದೇ ನೇರವಾಗಿ ಮಾತಿಗಿಳಿದಳು.

‘ಹೌದು, ನಿನಗೆ ಹೇಗೆ ಗೊತ್ತಾಯ್ತು?’

‘ನನಗೊಬ್ಬಳಿಗೆ ಏನು, ಇಡೀ ಊರಿಗೇ ಗೊತ್ತು. ಅವರನ್ನ ನಿನ್ನ ಮನೆಗೆ ಕಳಿಸೋಕೆ ನಿಮ್ಮಪ್ಪ ಅದೆಷ್ಟು ಸರ್ಕಸ್ ಮಾಡಿದ್ರು ಗೊತ್ತಾ? ನಿನ್ನ ಸೋದರತ್ತೆ, ಅವರ ಯಜಮಾನ್ರು, ಅವರ ಅಪ್ಪ-ಅಮ್ಮನಿಗೆಲ್ಲಾ ಕಾಶಿಯಾತ್ರೆ ಮಾಡಿಸಿದರು. ಅವರ ಮಕ್ಕಳಿಗೆ ಏನೇನೋ ಗಿಫ್ಟ್‌ ಕೊಟ್ಟು, ನಿನ್ನ ಮೇಲೆ ಪ್ರೀತಿ ಹುಟ್ಟೋ ಹಂಗೆ ಮಾಡಿದ್ರು. ಅಪ್ಪ ಅಂದ್ರೆ ನಿಮ್ಮಪ್ಪ ಕಣೆ. ಎಲ್ರಿಗೂ ಅಂಥ ಅಪ್ಪ ಸಿಗಲ್ಲ'

‘ಸಾಕು ಸುಮ್ನಿರೆ, ಅಪ್ಪ ನನ್ನ ಜೊತೆಗೆ ಮಾತಾಡಿ ಎರಡು ವರ್ಷಕ್ಕೆ ಬಂತು. ಅವ್ರಿಗೆ ನನ್ನ ಹೆಸರು ಕೇಳಿದ್ರೇ ಆಗಲ್ಲ. ಇಷ್ಟೊತ್ತಿಗೆ ಅವ್ರು ನನ್ನ ಮರೆತೇ ಬಿಟ್ಟಿರಬೇಕು’

‘ಯಾರೇ ಹಾಗಂತ ಹೇಳಿದ್ದು. ಇವತ್ತೂ ನಿಮ್ಮಪ್ಪ ದೇವರಮನೆಯಲ್ಲಿ ಒಬ್ಬರೇ ಇದ್ದಾಗ ಕಣ್ಣೀರು ಹಾಕ್ತಾರೆ ಗೊತ್ತಾ? ನಿಮ್ಮಮ್ಮ ನೋಡಿದ್ರೂ ಯಾಕೆ ಅಂತ ಕೇಳಲ್ಲ. ನಿಮ್ಮಪ್ಪ ನಿನ್ನ ಎಂದೋ ಕ್ಷಮಿಸಿದ್ದಾರೆ. ಆದ್ರೆ ನಿನ್ನ ಅಮ್ಮನ ಸಿಟ್ಟು ಆರಿಲ್ಲ. ಅಮ್ಮನಿಗೆ ಗೊತ್ತಾದ್ರೆ ರಾದ್ಧಾಂತ ಆಗುತ್ತೆ ಅಂತ ಅವ್ರು ನಿನ್ನ ಮನೆಗೆ ಬರ್ತಿಲ್ಲ. ಈಗ ನೋಡು ನಿನ್ನ ಅಮ್ಮನಿಗೂ ಗೊತ್ತಾಗದಂತೆ ಅವರ ತಂಗಿ, ಅಂದ್ರೆ ನಿನ್ನ ಸೋದರತ್ತೆ ಕೈಲಿ ಸೀಮಂತಕ್ಕೆ ಬೇಕಾದ ಎಲ್ಲ ಸಾಮಾನು ಕೊಟ್ಟು ಕಳಿಸಿದ್ರು. ದೀಪಾವಳಿ ಉಡುಗೊರೆ ಅಂತ ಎರಡು ಚಿನ್ನದ ಸರ ಕಳಿಸಿದ್ರು. ಸಿಕ್ತಾ?’

‘ಅತ್ತೆ ಅರಿಷಿಣ, ಕುಂಕುಮ ಹಚ್ಚಿ ಒಂದು ಸರ ಕೊಟ್ರು’

‘ತಂಗಿ ಸ್ವಭಾವ ಏನು ಅಂತ ನಿಮ್ಮಪ್ಪನಿಗೆ ಗೊತ್ತಿಲ್ವಾ? ಎರಡು ಕೊಡು ಅಂದ್ರೆ ಒಂದಾದ್ರೂ ಕೊಟ್ಟಾಳು ಅಂತ ಎರಡು ಸರ ಕೊಟ್ಟಿದ್ರು. ಈಗ್ಲಾದ್ರೂ ನಿಮ್ಮಪ್ಪನ ಮನಸು ಅರ್ಥ ಮಾಡಿಕೊ. ಒಂದು ಸಲ ನೀನೇ ಮನೆಗೆ ಬಾ’

***

ಹೌದಾ ಅಪ್ಪ, ನೀನಿನ್ನೂ ನನ್ನ ಮರೆತಿಲ್ವಾ? ನಾವಿಬ್ಬರೂ ಒಬ್ಬರನೊಬ್ಬರು ಮರೆಯಲು ಎಂದಾದ್ರೂ ಸಾಧ್ಯವಾ? ಆದ್ರೂ ಈ ಹಠ ಯಾಕೆ ಅಂತೀನಿ? ಸೋದರತ್ತೆ ಬದಲು ನೀನೇ ಬಂದಿದ್ರೆ ಎಷ್ಟು ಚಂದ ಇರೋದು? ನಂಗೂ ತವರಿನ ಆಸೆ ಇರಲ್ವಾ? ನಾನೇನೋ ಬರಬಹುದು. ಆದ್ರೆ ಜಾತಿತಪ್ಪಿ ಮದುವೆಯಾದವಳನ್ನ ಮನೆಗೆ ಸೇರಿಸಿದಿ ಅಂದ್ರೆ ಅಲ್ಲಿರೋರು ನಿನ್ನ ಸುಮ್ನೆ ಬಿಡ್ತಾರಾ?

ತೊಟ್ಟಿಕ್ಕಿದ ಕಣ್ಣೀರು ಒರೆಸಿಕೊಂಡಾಗಲೇ, ಅವಳಿಗೆ ತಾನು ಲಲಿತಾ ಜೊತೆ ಮಾತನಾಡುತ್ತಿದ್ದವಳು ಇದ್ದಕ್ಕಿದ್ದಂತೆ ಸುಮ್ಮನಾಗಿದ್ದು, ಲಲಿತಾಳೇ ಅತ್ತಲಿಂದ ಫೋನ್ ಕಟ್ ಮಾಡಿದ್ದು ಗೊತ್ತಾಗಿದ್ದು. ಮತ್ತೆ ಫೋನ್ ಮಾಡಲು ಮನಸು ಬರಲಿಲ್ಲ.

***

ಇದೆಲ್ಲ ನಡೆದು ಮತ್ತೂ ಎರಡು ವರ್ಷ ಕಳೆದಿತ್ತು. ಆರ್‌.ಟಿ.ನಗರದ ಅದೇ ಮನೆಯ ತಾರಸಿಯಲ್ಲಿ ಮತ್ತೊಂದು ಇಳಿಸಂಜೆ. ಶುಕ್ರ ನಕ್ಷತ್ರವಷ್ಟೇ ಕಾಣಿಸುವಷ್ಟು ಮಂದ ಬೆಳಕು. ಅದೇ ದೀಪಾವಳಿಯ ಮುನ್ನಾ ದಿನಗಳು. ಹಾರಿ ಸಿಡಿವ ರಾಕೆಟ್‌ಗಳು.

ಬಿಳಿಪಂಚೆ, ಶಲ್ಯ ಹೊದ್ದ, ಬಿಳಿ ಕೂದಲು ಕೆದರಿಕೊಂಡಿದ್ದ ವ್ಯಕ್ತಿಯೊಬ್ಬರು ಏದುಬ್ಬುಸ ಬಿಡುತ್ತಾ ನೇರವಾಗಿ ಅಲ್ಲಿಗೇ ಬಂದಿದ್ದರು. ಅಮ್ಮನ ಸೆರಗು ಹಿಡಿದು ಆಡುತ್ತಿದ್ದ ಮಗು, ಬಿಳಿತಲೆಯ ಅಜ್ಜನನ್ನು ಕಂಡು ಅಮ್ಮನ ಹಿಂದೆಯೇ ಬಚ್ಚಿಟ್ಟುಕೊಂಡಿತು.

‘ಅಪ್ಪಾ, ಕೊನೆಗೂ ಬಂದ್ಯಾ?’

‘ಬಂದೆ ಕಣಮ್ಮ. ಮಕ್ಕಳ ಮೇಲಿನ ಮೋಹಕ್ಕಿಂತ, ಮೊಮ್ಮಕ್ಕಳ ಮೇಲಿನ ವಾಂಛಲ್ಯ ದೊಡ್ಡದು’

‘ನಮ್ಮನೆಲಿ ಕಾಫಿ ಕುಡಿತ್ಯಾ? ಪಕ್ಕದ ಮನೆಯವರಿಗೆ ಹೇಳಿ ಮಾಡಿಸ್ಲಾ?’

‘ಮೊಮ್ಮಗಳು ಮುಟ್ಟಿ ಕೊಟ್ರೆ ಊಟಾನೇ ಮಾಡಿಬಿಡ್ತೀನಿ’

‘ಅಮ್ಮ ಬಂದಿದ್ದಾರಾ?

‘ಈ ಪುಟ್ಟ ಲಕ್ಷ್ಮಿ ಕರೆಸಿಕೊಂಡ್ರೆ, ಒಂದಲ್ಲ ಒಂದು ದಿನ ಬಂದೇ ಬರ್ತಾಳೆ’

ಅಪ್ಪ-ಮಗಳು ಮನತಣಿಯೇ ನಕ್ಕರು. ಮಗುವಿಗೆ ಸಂದರ್ಭ ಏನೆಂದು ಅರ್ಥವಾಗಲಿಲ್ಲ. ಆದರೆ ಅದಕ್ಕೂ ನಾನೀಗ ನಗಬೇಕು ಎನಿಸಿತು. ಬೊಚ್ಚುಬಾಯಿ ಮಗು ನಗುವಾಗ ಸುರಿದ ಜೊಲ್ಲನ್ನು ಅಜ್ಜನೇ ಶಲ್ಯದಿಂದ ಒರೆಸಿದ. ನಾಲ್ಕು ವರ್ಷದ ಬಿಗುಮಾನ ಅದೇ ಕ್ಷಣ ಮಾಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT