ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪನಾಮಾ ದಾಖಲೆ’ ಹಗರಣ ಬಯಲಿಗೆಳೆದ ಪತ್ರಕರ್ತೆ ದಾಫ್ನೆ ಬಾಂಬ್ ಸ್ಫೋಟಕ್ಕೆ ಬಲಿ

Last Updated 17 ಅಕ್ಟೋಬರ್ 2017, 19:12 IST
ಅಕ್ಷರ ಗಾತ್ರ

ವಲೆಟಾ (ಮಾಲ್ಟಾ)(ಎಪಿ): ಪನಾಮಾ ದಾಖಲೆಗಳನ್ನು ಹೊರಗೆಡವಿ ಮೆಡಿಟರೇನಿಯನ್‌ ದ್ವೀಪರಾಷ್ಟ್ರ ಮಾಲ್ಟಾ, ತೆರಿಗೆ ತಪ್ಪಿಸಿಕೊಳ್ಳುವವರ ಸ್ವರ್ಗ ಎಂಬ ಅಂಶವನ್ನು ಬಯಲಿಗೆಳೆದಿದ್ದ ತನಿಖಾ ಪತ್ರಕರ್ತೆ ದಾಫ್ನೆ ಕರುಆನಾ ಗಲಿಜಿಯಾ(53) ಅವರು ಸೋಮವಾರ ಕಾರ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.

‘ಗಲಿಜಿಯಾ ಅವರು ಮೊಸ್ಟಾದಲ್ಲಿನ ತಮ್ಮ ಮನೆಯಿಂದ ಕಾರನ್ನು ಚಲಾಯಿಸಿಕೊಂಡು ಹೊರಟ ಕೆಲವೇ ನಿಮಿಷಗಳಲ್ಲಿ ಕಾರು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಕಾರಿನ ಭಗ್ನಾವಶೇಷಗಳು ಗಾಳಿಯಲ್ಲಿ ಹಾರಿ ಚದುರಿ ಬಿದ್ದಿವೆ’ ಎಂದು ಪ್ರಧಾನಿ ಜೋಸೆಫ್ ಮಸ್ಕತ್ ತಿಳಿಸಿದ್ದಾರೆ.

‘ಗಲಿಜಿಯಾ ಅವರು ರಾಜಕೀಯ ಮತ್ತು ವೈಯಕ್ತಿಕ ನೆಲೆಯಲ್ಲಿ ನನ್ನ ಕಡು ವಿಮರ್ಶಕಿಯಾಗಿದ್ದವರು. ಅವರ ಸಾವು ಅನಾಗರಿಕ ದಾಳಿಯ ಫಲಿತಾಂಶ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಆಕ್ರಮಣ’ ಎಂದು ಜೋಸೆಫ್ ಅವರು ಘಟನೆಯನ್ನು ಖಂಡಿಸಿದ್ದಾರೆ. ‘ಇದು ರಾಜಕೀಯ ಕಾರಣಕ್ಕಾಗಿ ನಡೆದ ಕೊಲೆ’ ಎಂದು ಇಲ್ಲಿನ ಸಂಸತ್ತಿನಲ್ಲಿ ಬಣ್ಣಿಸಲಾಗಿದೆ.

‘ತಮಗೆ ಬೆದರಿಕೆಗಳು ಬರುತ್ತಿವೆ ಎಂದು ಗಲಿಜಿಯಾ ಅವರು ಎರಡು ವಾರಗಳ ಹಿಂದೆ ದೂರು ನೀಡಿದ್ದರು’ ಎಂದು ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಅವರು 1996ರಿಂದ ‘ದಿ ಮಾಲ್ಟಾ ಇಂಡಿಪೆಂಡೆಂಟ್’ ಪತ್ರಿಕೆಗೆ ಅಂಕಣ ಬರೆಯುತ್ತಿದ್ದರು ಮತ್ತು ‘ರನ್ನಿಂಗ್ ಕಾಮೆಂಟರಿ’ ಬ್ಲಾಗ್‌ನಲ್ಲಿಯೂ ಬರಹಗಳನ್ನು ಪ್ರಕಟಿಸುತ್ತಿದ್ದರು. ಭ್ರಷ್ಟಾಚಾರದ ಸಂಬಂಧ ಪ್ರಧಾನಿ ವಿರುದ್ಧ ಟೀಕೆ ಮಾಡಿದ ವಿರೋಧ ಪಕ್ಷದ ನಾಯಕನ ಮೇಲೆ ಪ್ರಧಾನಿಯವರ ಸಿಬ್ಬಂದಿಯ ಮುಖ್ಯಸ್ಥ ಮಾನನಷ್ಟ ಮೊಕದ್ದಮೆ ಹೂಡಿದ ಸುದ್ದಿಯನ್ನು ಗಲಿಜಿಯಾ ಅವರು ಕಾರು ಸ್ಫೋಟಕ್ಕೂ ಅರ್ಧ ಗಂಟೆ ಮೊದಲಷ್ಟೇ ತಮ್ಮ ಬ್ಲಾಗ್‌ನಲ್ಲಿ ಪ್ರಕಟಿಸಿದ್ದರು.

ಸ್ವತಃ ಗಲಿಜಿಯಾ ಅವರೂ ತಮ್ಮ ಬ್ಲಾಗ್ ಬರಹಕ್ಕೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಗಳನ್ನು ಎದುರಿಸುತ್ತಿದ್ದರು.

2016ರಲ್ಲಿ ಪನಾಮಾ ದಾಖಲೆಗಳ ಕುರಿತು ತನಿಖೆ ಮಾಡಿದ ಗಲಿಜಿಯಾ ಅವರು ಪ್ರಧಾನಿ ಮಸ್ಕತ್ ಅವರ ಪತ್ನಿ ಮಿಷೆಲ್ ಅವರಿಗೆ ಪತ್ರ ಬರೆದಿದ್ದರು. ‘ಮಾಲ್ಟಾದ ಸರ್ಕಾರದ ಸಿಬ್ಬಂದಿ ಮುಖ್ಯಸ್ಥರು ಮತ್ತು ಇಂಧನ ಸಚಿವರು ಪನಾಮಾ ಸಂಸ್ಥೆಗಳಲ್ಲಿ ಪಾಲುದಾರಿಕೆ ಹೊಂದಿದ್ದಾರೆ’ ಎಂದು ಬರೆದಿದ್ದರು. ಆದರೆ, ‘ಪನಾಮಾದಲ್ಲಿ ತಾವು ಯಾವುದೇ ಸಂಸ್ಥೆಗಳನ್ನು ಹೊಂದಿಲ್ಲ’ ಎಂದು ಈ ಪತ್ರಕ್ಕೆ ಮ‌ಸ್ಕತ್ ಹಾಗೂ ಅವರ ಪತ್ನಿ ಪ್ರತಿಕ್ರಿಯಿಸಿದ್ದರು.

ಪನಾಮಾ ಪ್ರಕರಣದ ತನಿಖಾ ವರದಿ ಸಿದ್ಧಪಡಿಸಿದ ಪತ್ರಕರ್ತರ ಒಕ್ಕೂಟವು 2017ರ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದಿದೆ.

ಭ್ರಷ್ಟಾಚಾರ ಬಯಲಿಗೆಳೆದಿದ್ದಕ್ಕೆ ಹತ್ಯೆ (ರಾಯಿಟರ್ಸ್ ವರದಿ): ‘ರಾಜಕೀಯ ಭ್ರಷ್ಟಾಚಾರವನ್ನು ಹೊರೆಗೆಡವಿದ್ದರ ಪರಿಣಾಮವಾಗಿ ನನ್ನ ತಾಯಿಯ ಹತ್ಯೆ ಮಾಡಲಾಗಿದೆ’ ಎಂದು ಗಲಿಜಿಯಾ ಅವರ ಮಗ ಮ್ಯಾಥ್ಯು ಕರುಆನಾ ಗಲಿಜಿಯಾ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT