ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧಕಾರದಿಂದ ಬೆಳಕಿನೆಡೆಗೆ...

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ದೀಪೇನ ಲೋಕಾನ್ ಜಯತಿ ದೀಪಸ್ತೇಜೋಮಯಃ ಸ್ಮೃತಃ

ಚರುರ್ವರ್ಗಪ್ರದೋ ದೀಪಸ್ತಸ್ಮಾದ್ ದೀಪೈರ್ಯಜೇತ್ ಪ್ರೀಯೆ

ಪ್ರಜ್ವಲಮಯ ದೀಪ ಜೀವನದ ಧರ್ಮ, ಅರ್ಥ, ಕಾಮ, ಮೋಕ್ಷದ ರೂಪವಾಗಿದೆ.ಆದ್ದರಿಂದ ದೀಪವನ್ನು ಬೆಳಗಿಸುವುದು ನಮ್ಮ ಜೀವನದ ಸಾರ್ಥಕ್ಯದ ಸಂಕೇತ. ಅದನ್ನೇ ಜಿ.ಎಸ್.ಶಿವರುದ್ರಪ್ಪನವರು ಈ ರೀತಿ ಹೇಳುತ್ತಾರೆ.

‘ಹಣತೆ ಹಚ್ಚುತ್ತೇನೆ, ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆ ಎಂಬ ಜಿದ್ದಿನಿಂದಲ್ಲ’

ಅಂದರೆ ನಮ್ಮ ಜೀವನದ ಕತ್ತಲನ್ನು ಅಂದರೆ ಯಾವುದೇ ಕಷ್ಟಗಳನ್ನು ಜಿದ್ದಿನಿಂದ ಅಲ್ಲ; ಆದರೆ ಪ್ರೀತಿಯಿಂದ ಆತ್ಮವಿಶ್ವಾಸದಿಂದ. ಜೀವನ ಸಾಗಿಸುವ ಮಾರ್ಗದರ್ಶಿಗಳಾಗಿ ಈ ಹಬ್ಬಗಳು ನಮ್ಮನ್ನು ಮುನ್ನಡೆಸುತ್ತವೆ. ಆದ್ದರಿಂದ ನಮ್ಮ ಭಾರತೀಯ ಹಬ್ಬಗಳು ಒಂದೊಂದು ಒಂದೊಂದರ ಸಂಸ್ಕೃತಿಯನ್ನು ಬಿಂಬಿಸುತ್ತ ನಮ್ಮನ್ನು ಮಾನವತ್ವದ ಕಡೆ ಸಾಗಿಸುತ್ತಿವೆ.

ತಮಸೋಮ ಜ್ಯೋತಿರ್ಗಮಯ

ಮೃತ್ಯೋರ್ಮಾ ಅಮೃತಂಗಮಯ’

ಎನ್ನುವಂತೆ ಅಂಧಕಾರದಿಂದ ಬೆಳಕಿನೆಡೆಗೆ ಮೃತ್ಯುವಿನಿಂದ ಅಮರತ್ವದೆಡೆಗೆ ನಮ್ಮ ಜೀವನವನ್ನು ಸಾಗಿಸುವ ಪ್ರತೀಕವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ದೀಪ ಎಲ್ಲಿ ಇರುವುದೋ ಅಲ್ಲಿ ಸಂಪತ್ತು ಇರುವುದು. ಇಲ್ಲಿ ಬೆಳಕು ಎಂದರೆ ಕೇವಲ ಭೌತಿಕ ಬೆಳಕಲ್ಲ. ಮನವೆಂಬ ಹಣತೆಯಲ್ಲಿ ಸತತ ಪರಿಶ್ರಮದ ತೈಲದೊಂದಿಗೆ ಪ್ರಯತ್ನ ಎಂಬ ಬತ್ತಿಯೊಂದಿಗೆ ಜ್ಞಾನ ಎಂಬ ಜ್ಯೋತಿಯನ್ನು ಹಚ್ಚಿದಾಗ ಆ ವ್ಯಕ್ತಿತ್ವದಲ್ಲಿ ಬೆಳಕು ಉಂಟಾಗಿ ಆ ವ್ಯಕ್ತಿಯೊಬ್ಬ ಸಮಾಜ ಉಪಯೋಗಿ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ.

ದೀಪಾವಳಿ ಮೂರು ದಿನಗಳ ಅದ್ದೂರಿ ಹಬ್ಬ. ಒಂದೊಂದು ದಿನಕ್ಕೆ ತನ್ನದೆಯಾದ ವಿಶಿಷ್ಟ ಕತೆಗಳಿವೆ. ಮೊದಲನೇ ದಿನ ನರಕ ಚತುದರ್ಶಿ. ನರಕಾಸುರನೆಂಬ ರಾಕ್ಷಸನನ್ನು ಕೊಂದು ಶ್ರೀ ಕೃಷ್ಣ ಜಗತ್ತಿಗೆ ಕಲ್ಯಾಣ ಉಂಟು ಮಾಡಿದ ರೀತಿಯಲ್ಲಿ ನಾವು ಕೂಡ ನಮ್ಮ ಮನಸ್ಸಿನಲ್ಲಿರುವ ಕೆಟ್ಟತನವನ್ನು ಹೋಗಲಾಡಿಸಿ ಹೊಸ ಜೀವನದ ಕನಸನ್ನು ಕಾಣುವ ಹಬ್ಬವಾಗಬೇಕು. ಇದು ಆಶ್ವೀಜ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ದಿನವಾಗಿದ್ದು ಈ ದಿನ ಅಭ್ಯಂಜನ ಸ್ನಾನ ಮಾಡಿ ಹೊಸ ಉಡುಗೆ ತೊಟ್ಟು ಮಕ್ಕಳಿಗೆ ಆರತಿ ಮಾಡುವ ಮೂಲಕ ಆಚರಿಸಲಾಗುತ್ತದೆ. ಎರಡನೇ ದಿನ ಸಂಪತ್ತಿನ ಅದಿ ದೇವತೆಯಾದ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಹಣ ಎಲ್ಲರೂ ಬಯಸುವ ಅತ್ಯಧಿಕ ಮನುಷ್ಯನ ಜೀವನದ ಬೇಡಿಕೆಯಾಗಿದೆ. ಸಂಪತ್ತನ್ನು ನೀಡುವಳು ಮಹಾಲಕ್ಷ್ಮಿ.

‘ಗಂಧದ್ವಾರಾಂ ದುರಾಧರ್ ಷಾಂ ನಿತ್ಯ ಪುಷ್ಟಾಂ ಕರೀಷಿಣೆಂ

ಈಶ್ವರೀಗ್ಂ ಸರ್ವಭೂತಾನಾಂ ತಾಮಿಹೋ ಪಹ್ವಯೇ ಶ್ರೀಯಂ’

ಇದರ ಅರ್ಥ- ಆರಾಧನೆಗೆ ಉಪಯುಕ್ತವಾದ ಸುಗಂಧ ಪುಷ್ಪ, ಧೂಪ, ದೀಪಾದಿ ಸಮೃದ್ಧವಾದ ಗೃಹದಲ್ಲಿ ಸನ್ನಿಹಿತವಾಗಿರುವ, ಯಾವಾಗಲೂ ಸಂತುಷ್ಟಿ ಪುಷ್ಟಿಕರಳೂ ಆದ ಮಹಾಲಕ್ಷ್ಮಿಯನ್ನು ಪೂಜಿಸುತ್ತೇವೆ.

ಮೂರನೇ ದಿನ ಬಲಿಪಾಡ್ಯ. ಬಲಿಚಕ್ರವರ್ತಿ ವಾಮನನಿಗೆ ಕೊಟ್ಟ ಮಾತಿನಂತೆ ಮೂರು ಹೆಜ್ಜೆಗಳ ಪ್ರತೀಕವಾಗಿ ಒಂದನ್ನು ನೆಲದ ಮೇಲೆ ಮತ್ತೊಂದನ್ನು ಆಕಾಶದ ಮೇಲೆ ಇನ್ನೊಂದನ್ನು ತನ್ನ ತಲೆ ಮೇಲೆ ಇರಿಸಿಕೊಂಡು ಪಾತಳಕ್ಕೆ ಇಳಿದನಂತೆ. ಈ ದಿನ ಗ್ರಾಮೀಣ ಭಾಗದಲ್ಲಿ ಭೂಮಿ ಪೂಜೆ, ದನಕರುಗಳ ಪೂಜೆ ಮಾಡುತ್ತಾರೆ. ಬಲಿ ಚಕ್ರವರ್ತಿ ಸಂಕೇತವಾಗಿ ಆಕಳ ಸಗಣೆಯಿಂದ ಬಲಿಂದ್ರ ಕೋಟೆಯನ್ನು ಕಟ್ಟಿ, ಹೆಜ್ಜೆಗಳನ್ನು ಸುಣ್ಣ ಬಣ್ಣಗಳಿಂದ ಚಿತ್ರಿಸಿ, ಹೊಲದಲ್ಲಿ ಬೆಳೆದ ವಿವಿಧ ರೀತಿ ಧಾನ್ಯಗಳ ಹೂಗಳಿಂದ ಅದನ್ನು ಸಿಂಗರಿಸುತ್ತಾರೆ. ತನ್ನ ಜನರನ್ನು ನೋಡಲು ಬಲಿ ಚಕ್ರವರ್ತಿ ಆ ದಿನ ಭೂಮಿಗೆ ಬರುತ್ತಾನೆ ಮತ್ತು ತನ್ನ ಜನರಿಗೆ ಈ ರೀತಿ ಹರಿಸುತ್ತಾನೆ ಎಂಬ ನಂಬಿಕೆ.

‘ದನ ಕಾಯುವ ಮಕ್ಕಳಿರಾ ಕೊಡಿರಯ್ಯಾ ಬೀಜವ ಬಿತ್ತುತ ಹೋಗುವೆ ಹೊಲದಲಿ ಮುತ್ತು ಮಾಣಿಕ್ಯವ ಬೆಳೆಯಲಿ’–ಎಂದು ಹಾರೈಸುತ್ತಾನಂತೆ. ಅದಕ್ಕೆ ಜನರು ‘ಇಂದೋದ ಬಲೀಯಂದ್ರ, ಮುಂದಕ್ಕೆ ಈ ದಿನಕ್ಕೆ ಬಪ್ಪೆಯಾ’ ಎನ್ನುತ್ತಾರೆ.

ಈ ರೀತಿಯಾಗಿ ಜಾತಿ ಮತಗಳ ಅಂತರವಿಲ್ಲದೆ ಎಲ್ಲ ಜನರು ಈ ಹಬ್ಬವನ್ನು ಆಚರಿಸುತ್ತಾರೆ. ದೀಪಾವಳಿ ಎಂದರೆ ದೀಪಗಳ ಸಮೂಹ ‘ದೀಪಯತಿ ಸ್ವಂ ಪರ ಚ ಇತಿ ದೀಪ’ ಅಂದರೆ ದೀಪ, ಬೆಳಕು, ಜ್ಯೋತಿ ಹೀಗೆ ಅನೇಕ ಹೆಸರುಗಳಿಂದ ಕರೆಯುವ ದೀಪ ಜ್ಞಾನ, ಸಂತೋಷ, ಪ್ರೀತಿ, ಉತ್ಸಾಹ ಎಲ್ಲವುಗಳ ಮೂಲಕ ಮನೆ- ಮನಗಳನ್ನು ಬೆಳಗುತ್ತ ಸಮಸ್ಯೆ, ಕಷ್ಟ, ಅಜ್ಞಾನ, ಕೆಟ್ಟತನ ಎಲ್ಲವೂ ಉರಿದು ಮಾನವೀಯ ಮೌಲ್ಯಗಳು ನಮ್ಮಲ್ಲಿ ಸದಾ ನೆಲಸಲಿ ಎನ್ನುತ್ತಾ ದೀಪಾವಳಿ ಆಚರಿಸೋಣ.

ಡಾ.ಭಾಗ್ಯಜ್ಯೋತಿ ಕೋಟಿಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT