ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ಕಣ್ಣಲ್ಲಿ ಪ್ರಾಣಿ ಬದುಕು

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಛಾಯಾಗ್ರಹಣದತ್ತ ಆಸಕ್ತಿ...

ಮೈಸೂರಿನಲ್ಲಿ ನನ್ನ ತಂದೆ ಸರ್ಕಾರಿ ನೌಕರಿಯಲ್ಲಿದ್ದರು. ಬಿಡುವು ಸಿಕ್ಕಾಗ ಮೃಗಾಲಯಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅವರ ಕಚೇರಿಯಲ್ಲಿ ಕೃಪಾಕರ- ಸೇನಾನಿ ತೆಗೆದ ಪಕ್ಷಿಯ ಚಿತ್ರವಿತ್ತು. ಏಳೆಂಟು ಸೆಂ.ಮಿ. ಇದ್ದ ಆ ಅಪರೂಪದ ಪಕ್ಷಿ ನೋಡಲು ಮುದ್ದಾಗಿತ್ತು. ಅದನ್ನು ನೋಡಿದ ನನಗೆ ಒಂದು ಥರ ಆಕರ್ಷಣೆ ಬೆಳೆಯಿತು. ರಜೆಯಲ್ಲಿ ನನ್ನ ಪೋಷಕರು ಅರಣ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದರು. ದೊಡ್ಡವನಾದ ನಂತರವೂ ಟ್ರಕ್ಕಿಂಗ್‌ ಹೋಗುತ್ತಿದ್ದೆ. ಗುಂಪು ಗುಂಪಾಗಿ ಸಂಚರಿಸುತ್ತಿದ್ದ ಪ್ರಾಣಿಗಳನ್ನು ಗಂಟೆಗಟ್ಟಲೆ ನೋಡುತ್ತಾ ಕುಳಿತುಬಿಡುತ್ತಿದ್ದೆ. ಪ್ರಕೃತಿಯ ಜೊತೆಗಿನ ಈ ಒಡನಾಟವೇ ನನಗೆ ಪ್ರಾಣಿ ಪ್ರೀತಿ ಕಲಿಸಿತು.

ವಿದ್ಯಾಭ್ಯಾಸ...

ಬಿಎಂಎಸ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಓದಿದೆ. ನಂತರ ಬ್ರಿಟನ್‌ನಲ್ಲಿ ಜಿಯೋಗ್ರಾಫಿಕ್‌ ಇನ್‌ಫಾರ್ಮೇಶನ್‌ ಸಿಸ್ಟಮ್ಸ್‌ನಲ್ಲಿ ಎಂ.ಎಸ್‌ ಮಾಡಿದ್ದೇನೆ.

ಫೋಟೊಗ್ರಫಿ ಅನುಭವ...

ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಛಾಯಾಗ್ರಹಣ ಮಾಡಿದ್ದೇನೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಾಖಂಡ, ಬ್ರಿಟನ್‌ನಲ್ಲಿಯೂ ಕೆಲಸ ಮಾಡಿದ್ದೇನೆ.

ಸವಾಲುಗಳು...

ಈಗಂತೂ ವೈಲ್ಡ್‌ಲೈಫ್‌ ಫೋಟೊಗ್ರಫಿ ಒಂದು ಟ್ರೆಂಡ್ ಆಗಿ ಬೆಳೆಯುತ್ತಿದೆ. ಹಿಂದೆಲ್ಲ ವನ್ಯಜೀವಿ ಛಾಯಾಗ್ರಾಹಕರಿಗೆ ಪ್ರಾಣಿಗಳ ಬಗ್ಗೆ ಪ್ರೀತಿ ಇತ್ತು. ಈಗ ಇಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಕೆಲವರು ಮಾಡುವ ಕೆಲಸದಿಂದಾಗಿ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಇದರಿಂದಾಗಿ  ಛಾಯಾಗ್ರಹಣ ಬಗ್ಗೆ ನಿಜವಾದ ಪ್ರೀತಿ ಇರುವವರಿಗೂ ಅರಣ್ಯಾಧಿಕಾರಿಗಳ ಪ್ರೋತ್ಸಾಹ ಸಿಗುವುದು ಕಡಿಮೆಯಾಗುತ್ತಿದೆ.

ವನ್ಯಜೀವಿ ಛಾಯಾಗ್ರಾಹಕನ ಅರ್ಹತೆ...

ಆತ ಪರಿಸರ ಪ್ರೇಮಿ, ಹೋರಾಟಗಾರ, ವಿಜ್ಞಾನಿ ಎಲ್ಲವೂ ಆಗಿರಬೇಕು. ಪ್ರಾಣಿಗಳ ಚಲನವಲನದ ಅರಿವಿರಬೇಕು. ಪ್ರಾಣಿಗಳನ್ನು ಪ್ರೀತಿಸಬೇಕು. ದಿನಗಟ್ಟಲೆ ಕಾಯುವ ತಾಳ್ಮೆ ಇರಬೇಕು.

ಎಚ್ಚರಿಕೆ...

ನಿಯಮಗಳನ್ನು ಮೀರಬಾರದು. ವನ್ಯಜೀವಿಗಳಿಂದ ಅಂತರ ಕಾಯ್ದುಕೊಳ್ಳಬೇಕು. ನಮ್ಮ ನಡೆಯಿಂದ ವನ್ಯಜೀವಿಗಳಿಗೆ ತೊಂದರೆ ಆಗಬಾರದು ಎಂಬ ಪ್ರಜ್ಞೆ ಸದಾ ಜಾಗೃತವಾಗಿರಬೇಕು.

ಸ್ಫೂರ್ತಿ...

ಪ್ರಾಣಿಗಳೇ ನನ್ನ ಕನಸಿಗೆ ಸ್ಫೂರ್ತಿ. ಕಬಿನಿಯ ಚಿರತೆಯ ಸೌಂದರ್ಯವೇ ಛಾಯಾಗ್ರಹಣದಲ್ಲಿ ತೊಡಗಲು ಕಾರಣವಾಯಿತು. ಮೊದಲು ಕಾಡು, ಮೃಗಾಲಯಕ್ಕೆ ಅಲೆದಾಡುತ್ತಿದ್ದೆ. ಆದರೆ ಆ ಗಳಿಗೆಯನ್ನು ನೆನಪಿಟ್ಟುಕೊಳ್ಳಲು ಚಿತ್ರದ ಮಹತ್ವ ಎಷ್ಟು ಎಂಬುದು ಅರಿವಾದ ಕ್ಷಣದಿಂದ ಛಾಯಾಗ್ರಾಹಕನಾದೆ.

ಚಿತ್ರಗಳ ಮೂಲಕ ಏನು ಹೇಳಲು ಹೊರಟಿದ್ದೀರಿ?

ಜನರಿಗೆ ಪ್ರಾಣಿಗಳ ಸೌಂದರ್ಯದ ಜೊತೆಗೆ ಅದರ ಮಹತ್ವ ತಿಳಿಸಬೇಕು. ನನ್ನ ಮಗನಿಗೆ ಈಗ ಮೂರುವರೆ ವರ್ಷ. ಅವನು ಹುಲಿಯ ಪ್ರತಿಯೊಂದು ಮಾಹಿತಿಗಳನ್ನು ಹೇಳುತ್ತಾನೆ. ಎರಡು ಮೂರು ಸರಿ ಕಾಡಿನಲ್ಲಿ ಹುಲಿ ನೋಡಿದ್ದಾನೆ. ಛಾಯಾಚಿತ್ರಗಳ ಮೂಲಕವೇ ಅವನು ಅದನ್ನು ಅಷ್ಟು ಆಳವಾಗಿ ತಿಳಿದುಕೊಂಡಿದ್ದಾನೆ. 20ರಿಂದ 30 ಪಕ್ಷಿಗಳ ಹೆಸರನ್ನು ಗುರುತಿಸುತ್ತಾನೆ. ಮುಂದಿನ ಪೀಳಿಗೆಗೆ ಪ್ರಾಣಿಗಳ ಸೌಂದರ್ಯ ತಿಳಿಸುವುದು ನನ್ನ ಉದ್ದೇಶ.

ಮರೆಯಲಾಗದ ಅನುಭವ...

ಪ್ರತಿಯೊಂದು ಗಳಿಗೆಯೂ ಸಾಕಷ್ಟು ಅನುಭವ ನೀಡಿದೆ. ಬಂಡಿಪುರದಲ್ಲಿ ಪ್ರಿನ್ಸ್‌ ಎಂಬ ಹುಲಿಯಿತ್ತು. ನಾವು ಅದರ ಫೋಟೊ ತೆಗೆಯಲು ಗಾಡಿ ನಿಲ್ಲಿಸಿದ್ದೆವು. ಆದರೆ ಗುಹೆಯೊಳಗೆ ಹೋದ ಅದು 20 ನಿಮಿಷವಾದರೂ ಹೊರಗೆ ಬರಲೇ ಇಲ್ಲ. ಅಷ್ಟರಲ್ಲಿ ಅಲ್ಲಿಗೆ  ಕಾಡುಕೋಣಗಳ ಹಿಂಡು ಬಂತು.

ಹಸಿದ ಹುಲಿ ಬೇಟೆಯಾಡಬಹುದು ಎಂಬ ನಿರೀಕ್ಷೆಯಲ್ಲಿ ಕಾದು ಕುಳಿತೆ. ಕೊನೆಗೂ ಹೊರಗೆ ಬಂದ ಹುಲಿ ಕಟ್ಟುಮಸ್ತಾದ ಕೋಣದ ಕತ್ತು ಹಿಡಿಯಿತು. ಹುಲಿ ಬಾಯಿಗೆ ಸಿಕ್ಕ ಕೋಣ ಸುಮಾರು 40 ನಿಮಿಷ ಸಂಕಟ ಅನುಭವಿಸಿ ಸಾವನ್ನಪ್ಪಿತು. ಕೊನೆಯ ಹಂತದಲ್ಲಿ ಎರಡು ಕಾಲಿನ ಮೇಲೆ ಕೋಣ ನಿಂತಿದ್ದರೆ, ಹುಲಿ ಬಾಯಿಗೆ ಸಿಕ್ಕ ಅದರ ಕತ್ತು ಗಾಳಿಯಲ್ಲಿ ನೇತಾಡುತ್ತಿತ್ತು. ಆ ದೃಶ್ಯವನ್ನು ನನಗೆ ಮರೆಯಲು ಸಾಧ್ಯವೇ ಇಲ್ಲ. ಕೊನೆಗೂ ಕೋಣ ಜೀವ ಬಿಟ್ಟಿತು. ಕಣ್ಣೆದುರೇ ಕಾಡುಪ್ರಾಣಿಯೊಂದು ಸತ್ತಾಗ ಬೇಸರವಾಯಿತು. ಆದರೆ ಅದುವೇ ಜೀವನಚಕ್ರದ ಕ್ರಮ ಎಂದು ಸಮಾಧಾನ ಮಾಡಿಕೊಂೈಡೆ.

ಕ್ಯಾಮೆರಾ, ಉಪಕರಣ...

ದೂರದ ಪ್ರಾಣಿ, ಪಕ್ಷಿ ನೋಡಲು ನಿಕಾನ್‌ ಬೈನಾಕ್ಯುಲರ್‌, ನಿಕಾನ್ ಡಿ5 ಕ್ಯಾಮೆರಾ, 600 ಎಂಎಂ ಲೆನ್ಸ್‌, ಡಿ 750 ಉಪಯೋಗಿಸುತ್ತೇನೆ. ನನ್ನೊಂದಿಗೆ ಇರುವ ಶಕ್ತಿಶಾಲಿ ಉಪಕರಣ ತಾಳ್ಮೆ.

ಇಮೇಲ್‌: laxmin.pramod@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT