ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಕಟ್ಟಡ ನಕ್ಷೆ ಮಂಜೂರಾತಿ

ಬಿಪಿಎಎಂಎಸ್‌ ತಂತ್ರಾಂಶ ಅಳವಡಿಸಿಕೊಳ್ಳಲಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ
Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಟ್ಟಡ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣಪತ್ರ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ಬಿಬಿಎಂಪಿ ಇನ್ನು ಮುಂದೆ ಆನ್‌ಲೈನ್‌ ಮೂಲಕ ನೀಡಲಿದೆ.

ಇದಕ್ಕಾಗಿ ಬಿಲ್ಡಿಂಗ್‌ ಪ್ಲಾನ್‌ ಅಪ್ರೂವಲ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ (ಬಿಪಿಎಎಂಸ್‌) ತಂತ್ರಾಂಶ ಅಳವಡಿಸಿಕೊಂಡಿದ್ದು, ಆನ್‌ಲೈನ್‌ ಸೇವೆ ಮುಂದಿನ ತಿಂಗಳು ಜಾರಿಗೆ ಬರಲಿದೆ. ನವೆಂಬರ್‌ ಮೊದಲ ವಾರದಲ್ಲಿ ಈ ಯೋಜನೆಗೆ ಮುಖ್ಯಮಂತ್ರಿ ಚಾಲನೆ ಕೊಡಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳ ಪರಿಶೀಲನೆಗಾಗಿ ಕಟ್ಟಡಗಳ ಅಪಾಯ ಆಧರಿಸಿ ಅತೀ ಕಡಿಮೆ ಅಪಾಯ, ಕಡಿಮೆ ಅಪಾಯ, ಮಧ್ಯಮ ಅಪಾಯ ಹಾಗೂ ಹೆಚ್ಚು ಅಪಾಯಗಳೆಂದು ನಾಲ್ಕು ವಿಭಾಗಗಳನ್ನು ನಿಗದಿಪಡಿಸಲಾಗಿದೆ. ಅತೀ ಕಡಿಮೆ ಅಪಾಯ ವಲಯದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೆಂಗಳೂರು - ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರದ (ಬಿಎಂಐಸಿಎಪಿಎ) ನಿವೇಶನಗಳನ್ನು ಗುರುತಿಸಲಾಗಿದೆ. ಈ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡುವಾಗ ಪೂರ್ವಭಾವಿಯಾಗಿ ಸ್ಥಳ ಪರಿಶೀಲಿಸುವುದಕ್ಕೆ ವಿನಾಯಿತಿ ನೀಡಲಾಗಿದೆ. ಇದರಿಂದ ಆಸ್ತಿ ಮಾಲೀಕರು ಮನೆಯಲ್ಲೇ ಕುಳಿತು ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಿ, ಆನ್‌ಲೈನ್‌ನಲ್ಲೇ ಪರವಾನಗಿ ಪಡೆಯಬಹುದು ಎನ್ನುತ್ತಾರೆ ಅವರು.

ಅರ್ಜಿ ಸ್ವೀಕರಿಸಿದ 7 ದಿನಗಳೊಳಗೆ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ಸೂಚನೆ ಸಂಬಂಧ ಅರ್ಜಿದಾರರಿಗೆ ತಂತ್ರಾಂಶದ ಮೂಲಕವೇ ಮಾಹಿತಿ ರವಾನಿಸಲಿದ್ದಾರೆ. ಅಭಿವೃದ್ಧಿ ಯೋಜನೆ ನಕ್ಷೆಗಳ ವ್ಯಾಪ್ತಿಯಲ್ಲಿನ ಕಟ್ಟಡ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣ ಪತ್ರ ಹಾಗೂ ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ಆನ್‌ಲೈನ್‌ ಮೂಲಕ ನೀಡುವ ವ್ಯವಸ್ಥೆ ಪಾಲಿಕೆಯಲ್ಲಿ ಇದುವರೆಗೆ ಇರಲಿಲ್ಲ. ಆಸ್ತಿ ಮಾಲೀಕರು ಖುದ್ದು ಅರ್ಜಿ ಸಲ್ಲಿಸಬೇಕಾದ ವ್ಯವಸ್ಥೆ ಇತ್ತು.

ಸಾಫ್ಟ್‌ಟೆಕ್‌ ಎಂಜಿನಿಯರ್ಸ್ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಉನ್ನತೀಕರಿಸಿದ ತಂತ್ರಾಂಶ ಸಿದ್ಧಪಡಿಸಿಕೊಟ್ಟಿದೆ. ಈ ತಂತ್ರಾಂಶದಿಂದ ಕಟ್ಟಡ ನಕ್ಷೆ ಮಂಜೂರಾತಿ ಪ್ರಕ್ರಿಯೆ ಪ್ರಾರಂಭದಿಂದ ಕೊನೆವರೆಗೂ ಆನ್‌ಲೈನ್‌ ಮೂಲಕವೇ ನಡೆಯಲಿದೆ. ನಿವೇಶನ ಮಾಲೀಕರು ಮತ್ತು ಡೆವಲಪರ್‌ಗಳು ಮಂಜೂರಾತಿಗೆ ಕೋರುವ ಅರ್ಜಿಗಳನ್ನು ಮತ್ತು ದಾಖಲಾತಿಗಳನ್ನು ಆನ್‌ಲೈನ್‌ ತಂತ್ರಾಂಶದ ಮೂಲಕವೇ ವೆಬ್‌ಸೈಟ್‌ www.bbmp.gov.inನಲ್ಲಿ ಅಪ್‌ಲೋಡ್‌ ಮಾಡುವುದು ಕಡ್ಡಾಯವಾಗಲಿದೆ. ಶುಲ್ಕ ಪಾವತಿಯನ್ನು ಆನ್‌ಲೈನ್‌ನಲ್ಲೇ ಪಾವತಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT