ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಮ ಮಂದಿರ ನಿರ್ಮಾಣದ ಮೊದಲ ಹೆಜ್ಜೆ’

ಅಯೋಧ್ಯೆಯಲ್ಲಿ ಯೋಗಿ ದೀಪಾವಳಿ
Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಜೆಪಿಯ ಹಿರಿಯ ನಾಯಕರು ಮತ್ತು ಸಚಿವರ ಉಪಸ್ಥಿತಿಯಲ್ಲಿ ಅಯೋಧ್ಯೆಯಲ್ಲಿ ಅದ್ದೂರಿಯಾಗಿ ನಡೆದ ದೀಪಾವಳಿ ಸಂಭ್ರಮಾಚರಣೆಯು ರಾಮ ಮಂದಿರ ನಿರ್ಮಾಣದ ಮೊದಲ ಹೆಜ್ಜೆ ಎಂದು ಅಯೋಧ್ಯೆಯ ಸಂತರು ಅಭಿಪ್ರಾಯಪಟ್ಟಿದ್ದಾರೆ.

‘ಖಂಡಿತವಾಗಿಯೂ ಇದು ಮೊದಲ ಹೆಜ್ಜೆ... ಭಗವಂತ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಲಿದೆ ಎಂಬುದು ನಮಗೆ ಖಚಿತವಾಗಿದೆ’ ಎಂದು ದಿಗಂಬರ ಅಖಾಡದ ಪ್ರಮುಖ ಸಂತ ಮಹಂತ ಸುರೇಶ್‌ ದಾಸ್‌ ಹೇಳಿದ್ದಾರೆ.

ಯೋಗಿ ಆದಿತ್ಯನಾಥ ಅವರು ಅಯೋಧ್ಯೆ ಭೇಟಿ ಸಂದರ್ಭದಲ್ಲಿ ಮಾತುಕತೆ ನಡೆಸಿದ ಸಂತರ ಗಣದಲ್ಲಿ ಸುರೇಶ್‌ ದಾಸ್‌ ಕೂಡ ಇದ್ದರು.

ಪೂಜೆ ಸಲ್ಲಿಕೆ: ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿರುವ ತಾತ್ಕಾಲಿಕ ರಾಮ ಮಂದಿರಕ್ಕೆ ಗುರುವಾರ ಭೇಟಿ ನೀಡಿದ ಯೋಗಿ ಆದಿತ್ಯನಾಥ ಅವರು ಪೂಜೆ ಸಲ್ಲಿಸಿದರು.

ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸಿದ್ದನ್ನು ಟೀಕಿಸಿದವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಕಾರ್ಯಕ್ರಮಕ್ಕೆ ಸರ್ಕಾರದ ಹಣವನ್ನು ಖರ್ಚು ಮಾಡಿಲ್ಲ ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಯೋಗಿ ಅವರ ಅದ್ದೂರಿ ಪ್ರದರ್ಶನಕ್ಕೆ ಸರ್ಕಾರದ ಬೊಕ್ಕಸದಿಂದ ಹಣ ಖರ್ಚು ಮಾಡಲಾಗಿದೆ ಎಂದು ವಿರೋಧ ಪಕ್ಷದ ಮುಖಂಡರು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಯೋಗಿ, ‘ಜನರ ನೆರವಿನಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ’ ಎಂದು ಹೇಳಿದ್ದಾರೆ.

ಭಗವಂತ ರಾಮನ ಮೇಲಿನ ತಮ್ಮ ನಂಬಿಕೆ ವೈಯಕ್ತಿಕ ವಿಷಯ, ಅದನ್ನು ಪ್ರಶ್ನಿಸಲು ಯಾರೊಬ್ಬರಿಗೂ ಹಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅವರು ನೂರಾರು ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದರು.

ಅಬ್ಬರದ ದೀಪಾವಳಿ: ದೀಪಾವಳಿಯ ಅಂಗವಾಗಿ ಬುಧವಾರ ದೇವಾಲಯ ಪಟ್ಟಣ ಅಯೋಧ್ಯೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಆದಿತ್ಯನಾಥ ಹಾಗೂ ಅವರ ಸಂಪುಟ ಸದಸ್ಯರ ಸ್ವಾಗತಕ್ಕಾಗಿ ಇಡೀ ಪಟ್ಟಣವನ್ನು ಸಿಂಗರಿಸಲಾಗಿತ್ತು. ರಂಗು ರಂಗಿನ ಮೆರವಣಿಗೆಗಳನ್ನು ಪಟ್ಟಣದೆಲ್ಲೆಡೆ ಸಂಘಟಿಸಲಾಗಿತ್ತು. ಸರಯೂ ನದಿ ದಡಗಳನ್ನು ದೀಪಗಳಿಂದ ಅಲಂಕರಿಸಲಾಗಿತ್ತು.

ರಾಜಕೀಯ ಲೆಕ್ಕಾಚಾರ?
2019ರ ಲೋಕಸಭೆ ಚುನಾವಣೆಗೂ ಮುಂಚಿತವಾಗಿ ರಾಮ ಮಂದಿರ ವಿಚಾರವನ್ನು ಮುನ್ನೆಲೆಗೆ ತರುವ ಯತ್ನವಾಗಿ ಯೋಗಿ ಆದಿತ್ಯನಾಥ ಅವರು ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

2019ರಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಹಿಂದೂ ಸಂಘಟನೆಗಳು ಮುಖಂಡರು ಮಾತ್ರವಲ್ಲದೇ ಬಿಜೆಪಿಯ ಹಿರಿಯ ನಾಯಕರೂ ಹೇಳಿರುವುದರಿಂದ ಯೋಗಿ ಅವರ ಅಯೋಧ್ಯೆ ಭೇಟಿ ಹೆಚ್ಚು ಮಹತ್ವ ಪಡೆದಿದೆ.

ಯೋಗಿ ಅವರ ಸರ್ಕಾರ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಮ ಮಂದಿರ ವಿಚಾರ ಹೆಚ್ಚು ಸುದ್ದಿಯಲ್ಲಿದೆ. ಮಂದಿರ ನಿರ್ಮಾಣಕ್ಕಾಗಿ ರಾಜಸ್ಥಾನದಿಂದ ಟ್ರಕ್‌ಗಟ್ಟಲೆ ಭಾರಿ ಶಿಲೆಗಳು ಅಯೋಧ್ಯೆಗೆ ಬಂದು ಬೀಳುತ್ತಲೇ ಇವೆ.

ಶಿಲೆಗಳ ಸಾಗಣೆಗೆ ಕಾನೂನಾತ್ಮಕವಾಗಿ ನಿರ್ಬಂಧ ಇಲ್ಲದಿರುವುದರಿಂದ ಅಯೋಧ್ಯೆಗೆ ತರಲಾಗುತ್ತಿರುವ ಶಿಲೆಗಳ ಮೇಲೆ ನಿಷೇಧ ಹೇರುವ ಯೋಚನೆ ಸರ್ಕಾರಕ್ಕೆ ಇಲ್ಲ ಎಂದು ಯೋಗಿ ಆದಿತ್ಯನಾಥ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT