ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳವು ಮಾಡಲು ಪೊಲೀಸ್ ಕಮಿಷನರ್ ಸೋಗು!

* ವಿದ್ಯಾರ್ಥಿ ಸೇರಿ ಇಬ್ಬರ ಬಂಧನ * ದಾಳಿ ನೆಪದಲ್ಲಿ ಕಂಪೆನಿಗಳಿಗೆ ನುಗ್ಗಿ ಲೂಟಿ
Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಪೊಲೀಸ್ ಕಮಿಷನರ್ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಸಿದ್ಧಪಡಿಸಿಕೊಂಡಿದ್ದ ಈ ಚಾಲಾಕಿ, ದಾಳಿ ನಡೆಸುವ ನೆಪದಲ್ಲಿ ಸಹಚರನ ಜತೆ ಖಾಸಗಿ ಕಂಪೆನಿಗಳಿಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ. ಇದೀಗ ಸಿ.ಸಿ ಟಿ.ವಿ ಕ್ಯಾಮೆರಾ ನೀಡಿದ ಸುಳಿವು ಇಬ್ಬರಿಗೂ ಜೈಲಿನ ದಾರಿ ತೋರಿಸಿದೆ.

ಬಿಟಿಎಂ ಲೇಔಟ್ 1ನೇ ಹಂತದ ಇರ್ಫಾನ್ ಪಾಷಾ (30) ಹಾಗೂ ಕೋಲಾರದ ಅರ್ಬಾಜ್ ಖಾನ್ (21) ಎಂಬುವರನ್ನು ಬಂಧಿಸಿರುವ ಕೋರಮಂಗಲ ಪೊಲೀಸರು, ₹ 3 ಲಕ್ಷ ಮೌಲ್ಯದ ಐದು ಮೊಬೈಲ್‌ಗಳು ಹಾಗೂ ನಕಲಿ ಗುರುತಿನ ಚೀಟಿಗಳನ್ನು ಜಪ್ತಿ ಮಾಡಿದ್ದಾರೆ.

ಹೊಸೂರು ರಸ್ತೆಯ ಕಾಲೇಜೊಂದರಲ್ಲಿ ಎಂಬಿಎ ಪದವಿ ಪಡೆದ ಇರ್ಫಾನ್, ನಂತರ ಪದವೀಧರರಿಗೆ ಉದ್ಯೋಗಾವಕಾಶದ ಸಲಹೆ ನೀಡುವ ಸ್ವಂತ ಕಂಪೆನಿ ಪ್ರಾರಂಭಿಸಿದ್ದ. ಚಾರ್ಟೆಡ್ ಅಕೌಂಟೆಂಟ್ (ಸಿ.ಎ) ವಿದ್ಯಾರ್ಥಿಯಾಗಿರುವ ಅರ್ಬಾಜ್, ಇರ್ಫಾನ್‌ನ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಅದರಿಂದ ನಿರೀಕ್ಷಿತ ಗಳಿಕೆ ಸಿಗದಿದ್ದಾಗ ಆರೋಪಿಗಳು ಪೊಲೀಸ್ ಕಮಿಷನರ್ ವೇಷ ಧರಿಸಿ ಕಳ್ಳತನಕ್ಕೆ ಇಳಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಹೀಗಿತ್ತು ಕಮಿಷನರ್ ಕಾರ್ಡ್‌: ‘ಕರ್ನಾಟಕ ಸರ್ಕಾರ’ದ ಲೋಗೊ ಬಳಸಿ ನಕಲಿ ಗುರುತಿನ ಚೀಟಿ ಸಿದ್ಧಪಡಿಸಿದ್ದ ಇರ್ಫಾನ್, ಅದರಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವ ತನ್ನದೊಂದು ಫೋಟೊ ಹಾಕಿಕೊಂಡಿದ್ದಾನೆ. ಕಮಿಷನರ್, ಅಪರ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ–ಆಡಳಿತ) ಎಂಬ ವಿವರಗಳನ್ನು ಕಾರ್ಡ್‌ನಲ್ಲಿ ಮುದ್ರಿಸಿದ್ದಾನೆ. ಅಲ್ಲದೆ, ವಿಧಾನಸೌಧದ ಮೊದಲನೇ ಮಹಡಿಯಲ್ಲಿ (ಕೊಠಡಿ ಸಂಖ್ಯೆ 101) ತನ್ನ ಕಚೇರಿ ಇರುವುದಾಗಿ ಹೇಳಿದ್ದಾನೆ. ಜತೆಗೆ ದೂರವಾಣಿ ಸಂಖ್ಯೆಗಳು ಹಾಗೂ ಇ–ಮೇಲ್ ವಿಳಾಸವನ್ನೂ ಕಾರ್ಡ್‌ನಲ್ಲಿ ನೀಡಿದ್ದಾನೆ.

ಕೋರಮಂಗಲ ಕೈಗಾರಿಕಾ ಪ್ರದೇಶದಲ್ಲಿ ‘ಜಸ್ಟ್ ಡಯಲ್’ ಕಂಪೆನಿ ಇದೆ. ಅ.16ರ ನಸುಕಿನ ವೇಳೆ (ಸಮಯ 2.30) ಪೊಲೀಸ್ ಸಮವಸ್ತ್ರದಲ್ಲಿ ಅಲ್ಲಿಗೆ ಹೋಗಿದ್ದ ಅರೋಪಿಗಳು, ‘ನಾವು ಕಮಿಷನರ್‌ಗಳು. ನಿಮ್ಮ ಕಂಪೆನಿಯಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಬೇಕು’ ಎಂದು ಸೆಕ್ಯುರಿಟಿ ಗಾರ್ಡ್‌ಗೆ ತಿಳಿಸಿದ್ದರು. ಆ ಮಾತನ್ನು ನಂಬಿದ ಸೆಕ್ಯುರಿಟಿ ಗಾರ್ಡ್, ಕಂಪೆನಿಯ ಕೀಗಳನ್ನು ಅವರಿಗೆ ಕೊಟ್ಟಿದ್ದರು. ಒಳ ಹೋಗಿ ಕೈಗಡಿಯಾರ ಹಾಗೂ ಐದು ಮೊಬೈಲ್‌ಗಳನ್ನು ತೆಗೆದುಕೊಂಡು ಬಂದ ಆರೋಪಿಗಳು, ‘ಪರಿಶೀಲನೆ ಮುಗಿಯಿತು. ನಾವಿನ್ನು ಹೊರಡುತ್ತೇವೆ’ ಎಂದು ಹೇಳಿ ಕೀ ಕೊಟ್ಟು ಹೊರಟು ಹೋಗಿದ್ದರು.

ಅನುಮಾನಗೊಂಡ ಸೆಕ್ಯುರಿಟಿ ಗಾರ್ಡ್, ಕಂಪೆನಿಯ ಪ್ರಧಾನ ವ್ಯವಸ್ಥಾಪಕ ಎಂ.ನೂರುದ್ದೀನ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ತಕ್ಷಣ ಅವರು ಕಂಪೆನಿಗೆ ಬಂದು ನೋಡಿದಾಗ ಮೊಬೈಲ್ ಹಾಗೂ ಕೈಗಡಿಯಾರ ಕಳವಾಗಿರುವುದು ಗೊತ್ತಾಗಿತ್ತು. ಬಳಿಕ ಅವರು ಕೋರಮಂಗಲ ಠಾಣೆಗೆ ದೂರು ಕೊಟ್ಟಿದ್ದರು.

ಸಿ.ಸಿ.ಟಿ.ವಿ ಸುಳಿವು: ‘ತಿಂಗಳ ಹಿಂದೆ ಬನ್ನೇರುಘಟ್ಟ ರಸ್ತೆಯ ‘ಆಡಿ’ ಕಾರು ಶೋರೂಂನಲ್ಲೂ ಆರೋಪಿಗಳು ಇದೇ ಶೈಲಿಯಲ್ಲಿ ಕಳ್ಳತನ ಮಾಡಿದ್ದರು. ಆ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಜಸ್ಟ್ ಡಯಲ್ ಕಂಪೆನಿಯ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಅದೇ ಕಳ್ಳರು ಇಲ್ಲಿಯೂ ಕೃತ್ಯ ಎಸಗಿರುವುದು ಖಚಿತವಾಯಿತು' ಎಂದು ತನಿಖಾಧಿಕಾರಿಗಳು ಹೇಳಿದರು.

‘ಕ್ಯಾಮೆರಾದಲ್ಲಿ ಸಿಕ್ಕ ಇರ್ಫಾನ್‌ನ ಚಹರೆ ಮುದ್ರಿಸಿ ನಗರದ ವಿವಿಧೆಡೆ ಹಂಚಿದೆವು. ಆಗ ಆತನ ಕಂಪೆನಿಯಿಂದ ವಂಚನೆಗೊಳಗಾಗಿದ್ದ ವ್ಯಕ್ತಿಯೊಬ್ಬರು ಸುಳಿವು ಕೊಟ್ಟರು. ಆ ಮಾಹಿತಿ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡ’ ಎಂದು ಮಾಹಿತಿ ನೀಡಿದರು.

***
ಕಬ್ಬನ್‌ಪಾರ್ಕ್‌ ಠಾಣೆಯಲ್ಲಿ ದೂರು
‘ಪೊಲೀಸರ ಸೋಗಿನಲ್ಲಿ ಬಂದ ಇಬ್ಬರು ಅಪರಿಚಿತರು, ಕಚೇರಿಯಲ್ಲಿದ್ದ ದುಬಾರಿ ಬೆಲೆಯ ವಾಚ್ ತೆಗೆದುಕೊಂಡು ಹೋಗಿದ್ದಾರೆ’ ಎಂದು ಕಂಪೆನಿಯೊಂದರ ವ್ಯವಸ್ಥಾಪಕರು ಕೆಲ ದಿನಗಳ ಹಿಂದೆ ಕಬ್ಬನ್‌ಪಾರ್ಕ್‌ ಠಾಣೆಗೆ ದೂರು ಕೊಟ್ಟಿದ್ದರು. ಆ ಕೃತ್ಯದಲ್ಲೂ ಬಂಧಿತರ ಪಾತ್ರವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

***
ಆರೋಪಿಗಳು ನಗರದ ವಿವಿಧೆಡೆ ಇದೇ ರೀತಿ ಕಳ್ಳತನ ಮಾಡಿರುವ ಸಾಧ್ಯತೆ ಇದೆ. ಇವರಿಂದ ವಂಚನೆಗೊಳಗಾದವರು ಕೋರಮಂಗಲ ಠಾಣೆಗೆ (080 22942570) ದೂರು ನೀಡಬಹುದು
ಸೀಮಂತ್‌ಕುಮಾರ್ ಸಿಂಗ್, ಹೆಚ್ಚುವರಿ ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT