ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಸಿಗೊಂಡಿರುವೆ ‘ನಾನು ಸಹ’

Last Updated 20 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮೊದಲೇ ಹೇಳಿಬಿಡುತ್ತೇನೆ, ಗಂಡಸರೆಲ್ಲರೂ ಹೀಗೆಯೇ ಅಂತಲ್ಲ!

ನಮಗೆ ಸಮ್ಮತವಲ್ಲದ್ದು, ಕಿರಿಕಿರಿ ಮಾಡುವಂಥದ್ದು, ಮುಜುಗರಕ್ಕೀಡು ಮಾಡುವಂಥದ್ದು, ಆತಂಕವನ್ನುಂಟು ಮಾಡುವಂಥದ್ದು, ನೋಯಿಸುವಂಥದ್ದು, ಅವಮಾನಿಸುವಂಥದ್ದು, ಭಯವನ್ನುಂಟು ಮಾಡುವಂಥದ್ದು, ಒತ್ತಾಯಿಸುವಂಥ ಯಾವ ವಿಷಯಗಳಾದರೂ ಸರಿ ಅದು ಹಿಂಸೆಯೇ. ಅದು ಪ್ರತ್ಯಕ್ಷವಾಗಿಯಾದರೂ ಸೈ ಪರೋಕ್ಷವಾಗಿಯಾದರೂ; ನಮ್ಮ ಮನಸ್ಸು, ದೇಹ ಮತ್ತು ಆತ್ಮಸ್ಥೈರ್ಯವನ್ನು ಉಡುಗಿಸುವಂಥ ಯಾವ ನಡೆ, ನುಡಿ, ಕ್ರಿಯೆ, ಪ್ರಕ್ರಿಯೆಯೂ.

ಹೀಗೊಂದು ಒಕ್ಕಣೆ ನಮ್ಮ ಮನಸ್ಸಿನೊಳಗೆ ನಾಟಿ ನಾವು ಸಶಕ್ತಗೊಳ್ಳಬೇಕೆನ್ನುವ ಹೊತ್ತಿಗೆ ನಮ್ಮ ಜೀವನಮಾನದ ಒಂದಿಷ್ಟು ದಶಕಗಳು ನಮಗರಿವಿಲ್ಲದೆಯೋ, ಅರೆಬರೆಯಾಕಾರ ಮೂಡಿಸಿಯೋ ಸರಿದು ಹೋಗಿರುತ್ತವೆ. ಕಾರಣ, ಪ್ರತಿಯೊಬ್ಬರ ಯಾತ್ರೆಯೂ ಪ್ರತ್ಯೇಕವೇ. ಹೀಗೆಂದು ಅದು ಬಾನೊಳಗೆ ತೇಲಿಹೋಗುವ ಪುಷ್ಪಕವಿಮಾನದಂತಲ್ಲ. ನಮ್ಮ ಸಾಮಾಜಿಕ ವ್ಯವಸ್ಥೆ, ಕೌಟುಂಬಿಕ ಚೌಕಟ್ಟು ಮತ್ತು ಸಾಂಸ್ಕೃತಿಕ ಜವಾಬ್ದಾರಿಯೆಂಬ ಹೆದ್ದಾರಿ ಹಾಗೂ ಹಿನ್ನೆಲೆ ಎಂಬ ಆಲದ ಮರದ ಮೂಲಕವೇ, ನಮ್ಮನಮ್ಮದೇ ವೇಗಮಿತಿಯಲ್ಲಿ ಅದು ಹಾದು ಹೋಗುವಂಥದ್ದು. ವೈಯಕ್ತಿಕ ನೆಲೆಯಲ್ಲಿ ಯಾವುದನ್ನೂ ಒಮ್ಮೆಲೆ ಧಿಕ್ಕರಿಸಲಾಗದು, ತಿರಸ್ಕರಿಸಲೂ ಆಗದು.

ತಡವಿದವರು ಯಾರೇ ಇದ್ದರೂ, ಸಾಕ್ಷ್ಯಗಳು ಕಣ್ಣೆದುರೇ ಓಡಾಡಿಕೊಂಡಿದ್ದರೂ ಎಷ್ಟೋ ಸಲ ಕೂಗಿ ಹೇಳಲಾಗದು. ಕೂಗಲು ಪ್ರಯತ್ನಿಸಿದಾಗೆಲ್ಲ ದನಿಯೇ ತುಂಡರಿಸಿದ್ದಿದೆ, ಗಂಟಲೇ ಹಿಚುಕಿಸಿಕೊಂಡದ್ದಿದೆ. ಕಾನೂನು ಕೂಡ ಕೆಲವೊಮ್ಮೆ ಆದ ಗಾಯವನ್ನು ಪೂರ್ತಿ ಮಾಯಿಸುವಲ್ಲಿ ಸೋತಿದೆ. ಹೀಗೆ ಒಂದಿಷ್ಟು ಎದ್ದು ಬಿದ್ದು ಮುಗ್ಗರಿಸಿದ ನಂತರವೇ ನಮ್ಮತನದ ಬಗ್ಗೆ ಯೋಚಿಸಲಾರಂಭಿಸಿದ್ದೇವೆ. ಏಕೆಂದರೆ, ನಾವು ಸಾಮಾನ್ಯರಲ್ಲಿ ಸಾಮಾನ್ಯರು. ತಾಳ್ಮೆಯ ಫಲ ಸಿಹಿಯಾಗೆ ಇರುತ್ತದೆ ಎಂದು ಇಷ್ಟು ದಿನ ಸಾತ್ವಿಕಭಾವದೊಂದಿಗೆ ಕಾಯುತ್ತ ಕುಳಿತವರು ಮತ್ತು ಬಲಿಪಶುಗಳಿಂದ ಬಲಿಪಶುಗಳಾದವರು.

ಕ್ರಮೇಣ ಧ‍್ವನಿಗೆ ಸ್ಪಷ್ಟತೆ ಕಂಡುಕೊಳ್ಳುತ್ತಿದ್ದೇವೆ, ಹಂಚಿಕೊಳ್ಳುತ್ತಿದ್ದೇವೆ ತನ್ಮೂಲಕ ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಿದ್ದೇವೆ ಎಂದರೆ ಅದು ಅಕ್ಷರದ ಆಸರೆ, ಮಾಧ್ಯಮ ಮತ್ತು ತಂತ್ರಜ್ಞಾನದ ಕೊಡುಗೆ.

ಮೊನ್ನೆಯ ದೀಪಾವಳಿಗೆ ಪ್ರಣತಿಯನ್ನೂ ತೈಲವನ್ನೂ ಬತ್ತಿಯನ್ನೂ ಜೋಡಿಸುತ್ತ ಆನ್‍ಲೈನಿನಲ್ಲಿ ಈಜಾಡುತ್ತಿದ್ದವರಿಗೆ ‘ಮಿ ಟೂ’ (ನಾನು ಕೂಡ) ಎಂಬ ಹ್ಯಾಷ್‍ಟ್ಯಾಗ್‍ ಮಿಲಿಯನ್ನುಗಳ ಲೆಕ್ಕದಲ್ಲಿ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಪಟಾಕಿ ಸಿಡಿಸಿ ಎಚ್ಚರಗೊಳಿಸಿತು ಮತ್ತು ಅಚ್ಚರಿಗೊಳಿಸಿತು. ಲೈಂಗಿಕ ಶೋಷಣೆಗೆ ಸಂಬಂಧಿಸಿದ ವೈಯಕ್ತಿಕ ಬದುಕಿನ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಮೌನ ಮುರಿಯತೊಡಗಿದವು. ಹೀಗೊಂದು ಮಹಾಸ್ಫೋಟದ ಅಲೆಯೇಳಲು ಕಾರಣ ಅಮೆರಿಕದ ನಟಿ ಆ್ಯಲಿಸ್ಸಾ ಮಿನೋಲಳ ಒಂದು ಟ್ವೀಟ್‍.

ಜೀವಂತ ಪಾತ್ರಗಳು ಜ್ವಲಂತ ಸಾಕ್ಷ್ಯಗಳು

ಲೈಂಗಿಕ ಕಿರುಕುಳಕ್ಕೆ ಒಳಗಾಗಿ ಒಳಗೊಳಗೇ ಬೇಯುವ ಜೀವಗಳು ನಮ್ಮ ಮಧ್ಯೆ ಅದೆಷ್ಟಿಲ್ಲ? ಯಾರ ಬಳಿ ಹೇಗೆ ಹೇಳಿಕೊಳ್ಳುವುದೆಂದು ಅದೆಷ್ಟು ಬಾರಿ ಗಂಟಲು ಸರಿಮಾಡಿಕೊಂಡು ದನಿ ಹೊರಡದೆ ವಿಫಲವಾಗಿಲ್ಲ? ಅದೆಷ್ಟು ಜೀವಗಳು ಮರ್ಯಾದೆಯ ಆವರಣಗಳಿಂದ ಹೊರಬರಲಾಗದೆ ಚಡಪಡಿಸುತ್ತಿಲ್ಲ? ಅದೆಷ್ಟು ಜನ ಸೃಜನಶೀಲ ಅಭಿವ್ಯಕ್ತಿಗಳಲ್ಲಿ ಅಮೂರ್ತಭಾವ ಹೊಮ್ಮಿಸುತ್ತ ಕುಳಿತಿಲ್ಲ? ಆದರೆ ಈ ಹಲವರಲ್ಲಿ ಕೆಲವರೆಲ್ಲ ‘ಮೀ ಟೂ’ ಹ್ಯಾಷ್‍ಟ್ಯಾಗ್‍ನಲ್ಲಿ ಧ್ವನಿ ದಕ್ಕಿಸಿಕೊಂಡರೆಂದರೆ ಇದು ಒಂದು ಪರಣಾಮಕಾರಿ ಬದಲಾವಣೆಯೇ.

ಆ್ಯಲಿಸ್ಸಾ, ಹಾಲಿವುಡ್ ನಟಿ ಮತ್ತು ಸೆಲೆಬ್ರಿಟಿ ಎಂಬುದೇ ಇದಕ್ಕೆ ಕಾರಣವಾಯಿತು. ಅಲ್ಲಿಗೆ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಎಷ್ಟೇ ಮನಮುಟ್ಟುವಂತೆ ಸಿನೆಮಾಗಳನ್ನು ತಯಾರಿಸಿದ್ದರೂ ಎಷ್ಟೋ ಸಲ ಅವು ಪರದೆಮೇಲಿನ ಕಥೆ ಚಿತ್ರಕತೆ ಸಂಭಾಷಣೆ ಎಂಬಲ್ಲಿಗೆ ಸೀಮಿತವಾಗಿದ್ದು ಸಾಬೀತಾಯಿತು. ನಿಜ. ನಮಗೆ ಜೀವಂತ ಪಾತ್ರಗಳು ಬೇಕು ಜ್ವಲಂತ ಸಾಕ್ಷ್ಯಗಳು ಬೇಕು. ಅಂಥವನ್ನಷ್ಟೇ ನಾವು ನಂಬುತ್ತೇವೆ. ಆ ಸಮಾನಮನಸ್ಕತೆಯ ಮೂಲಕ ನಮ್ಮನ್ನುನಾವು ಕಂಡುಕೊಳ್ಳುತ್ತೇವೆ. ಅಂತೆಯೇ ಶಾಪಗ್ರಸ್ಥರಂತೆ ಒಳಗೊಳಗೇ ನೋಯುತ್ತಿದ್ದವರಿಗೆ ಈ ಒಂದು ಟ್ವೀಟ್ ಮೀಟುಗೋಲಂತೆ ಪರಿಣಮಿಸಿತು.

ಎಚ್ಚೆತ್ತ ಕೋಲ್ಕತ್ತ ಪೊಲೀಸ್‍

‘ಮೀ ಟೂ’ ಹರಿವನ್ನು ಗಮನಿಸಿದ ಫೇಸ್‍ಬುಕ್‍ನ ಕೋಲ್ಕತ್ತ ಪೊಲೀಸ್‍ ಪಡೆ ಪುಟ ಕೂಡ ಪ್ರಸ್ತುತ ವಿಷಯಕ್ಕೆ ಸ್ಪಂದಿಸಿತು. ‘ಯಾರೆ ಆಗಲಿ ದೈಹಿಕ ಮತ್ತು ಮಾನಸಿಕ ಕಿರುಕುಳಗಳನ್ನು ಸಹಿಸದಿರಿ. ನಿಮ್ಮ ಸಮಸ್ಯೆ ಮತ್ತು ಅನುಭವಗಳನ್ನು ಸಮಾಧಾನದಿಂದ ಕೇಳಲು ನಮ್ಮ ಅಧಿಕಾರಿಗಳು ಸಿದ್ಧರಿದ್ದಾರೆ. ತಡಮಾಡದೆ ಧೈರ್ಯದಿಂದ ಠಾಣೆಗೆ ಬಂದು ದೂರು ದಾಖಲಿಸಿ’ ಎಂದು ಹೇಳಿದ್ದಲ್ಲದೆ, ‘ಈಗಾಗಲೇ ನಾವು ಲೈಂಗಿಕ ಕಿರುಕುಳ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲು ಹತ್ತು ಸ್ಥಳೀಯ ಶಾಲೆಗಳಿಗೆ ತೆರಳಿ ಅಲ್ಲಿನ ಹುಡುಗರಿಗೆ ತಿಳಿಹೇಳಿದ್ದೇವೆ. ನವೆಂಬರಿನಲ್ಲಿ ಈ ಯೋಜನೆಯ ಎರಡನೇ ಹಂತ ಮುಂದುವರಿಯಲಿದೆ’ ಎಂದೂ ಸ್ಟೇಟಸ್‍ ಅಪ್ಡೇಟ್ ಮಾಡಿತು. ಇಪ್ಪತ್ನಾಲ್ಕು ಗಂಟೆ ಅವಧಿಯಲ್ಲಿ ಸುಮಾರು ಆರುಸಾವಿರ ಸಾರ್ವಜನಿಕರು ಲೈಕ್‍ ಒತ್ತಿದರು. ಸಾವಿರಾರು ಜನರು ಪ್ರತಿಕ್ರಿಯಿಸಿದರು ಹಾಗೇ ದೂರನ್ನೂ ದಾಖಲಿಸಿದರು.

ಮನಸ ಮೇಲಣ ಗಾಯ

ಅಂತೂ ಸಾಮಾಜಿಕ ಜಾಲತಾಣಗಳ ಮೂಲಕ ದೀಪದಿಂದ ದೀಪವನ್ನೇ ಹಚ್ಚಿದಂತಾಯಿತು ಈ ‘ಮೀ ಟೂ’. ಇದು ಇಲ್ಲಿಗೇ ನಿಲ್ಲಲಿಲ್ಲ. ಕೆಲವರು ವೈಯಕ್ತಿಕ ಬದುಕನ್ನೆಲ್ಲ ಬಿಕರಿಗಿಟ್ಟರು ಎಂದು ಸ್ಟೇಟಸ್ಸುಗಳಲ್ಲಿ ಮತ್ತು ಇನ್ಬಾಕ್ಸುಗಳಲ್ಲಿ ಕುಹಕವನ್ನೂ ಆಡಿಕೊಂಡರು. ಎಲ್ಲವನ್ನೂ ಗಮನಿಸಿ ಕೆಲವರು ಜಾಣಕುರುಡನ್ನೂ ಪ್ರದರ್ಶಿಸಿದರು. ಇದೆಲ್ಲ ಗಾಳಿಯೊಂದಿಗೆ ಗುದ್ದಾಟ, ಏನು ಮಾಡಿದರೂ ಸಮಸ್ಯೆ ಬಗೆಹರಿಯಲಾರದು ಎಂದು ಮೈಗೆ ಎಣ್ಣೆ ಹಚ್ಚಿಕೊಂಡು ವ್ಯಂಗ್ಯವನ್ನೂ ಆಡಿದರು ಉಳಿದವರು. ಅಷ್ಟೇ ಅಲ್ಲ, ಪ್ರಚಾರದ ಗಿಮಿಕ್‍ ಎಂದು ಕೂಡ ಅಸಡ್ಡೆ ತೋರಿದರು. ಅಲ್ಲಿಗೆ ಇಂಥವರ ಮನಸ್ಥಿತಿ ಅರ್ಥವಾದಂತೆ. ಹಾಗೆ ನೋಡಿದರೆ, ಹಿಂಸೆ ಎಂದರೆ ದೈಹಿಕವಾಗಿಯಷ್ಟೇ ಅಲ್ಲ. ಅದು ಮನಸ ಮೇಲಣ ಗಾಯ. ಅದನ್ನು ಅರ್ಥ ಮಾಡಿಕೊಳ್ಳಲು ಒಂದಿಷ್ಟು ಸೂಕ್ಷ್ಮನೋಟ ಮತ್ತು ಸಂವೇದನಾಶೀಲ ಮನಸ್ಸಿರಲೇಬೇಕಾಗುತ್ತದೆ.

ಇಂದು ನೇರಾನೇರ ಅಥವಾ ಫೇಸ್‍ಬುಕ್‍, ವಾಟ್ಸ್‌ಆ್ಯಪ್‌ನ ಮೂಲಕ ಹೇಳಿದ, ಹಂಚಿದ ದ್ವಂದ್ವಾರ್ಥದ ಮಾತು, ಚಿತ್ರ, ವಿಡಿಯೊ ತುಣುಕಗಳು ಕೂಡ ಪರೋಕ್ಷವಾಗಿ ಕಾಮನೆಗಳನ್ನು ನೀವೇದಿಸುವ ತಂತ್ರಗಳೇ. ವಸ್ತ್ರ ಸಂಹಿತೆಯಡಿ ದೇವಸ್ಥಾನ, ಶಾಲಾ-ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತರಾಟೆಗೆ ತೆಗೆದುಕೊಳ್ಳುವ ಆಧುನಿಕ ದುಶ್ಯಾಸನರೂ ಇಂದು ತಪ್ಪಿತಸ್ಥರೇ. ಇನ್ನು ಕಲಾಮಾಧ್ಯಮ, ಸಂಶೋಧನಾ ಕ್ಷೇತ್ರ ಮತ್ತು ಬಾಸ್ ಸ್ಥಾನದಲ್ಲಿರುವ ಕೆಲ ಮನಸ್ಥಿತಿಗಳಂತೂ ಅವಳ ಭವಿಷ್ಯದೊಂದಿಗೇ ಚೆಲ್ಲಾಟವಾಡಿಬಿಡುತ್ತಿವೆ. ಅಲ್ಲದೆ, ಸಹಾಯ, ಅವಕಾಶ ಅಥವಾ ಉಪಕಾರದ ನೆಪದಲ್ಲಿ ಅವಳನ್ನು ಹಂಗಿಗೆ ಬೀಳಿಸಿಕೊಂಡು ಹುರಿದು ಮುಕ್ಕುವ ನೀಚ ಮನಸ್ಥಿತಿಗಳೂ ಇದಕ್ಕೆ ಹೊರತಾಗಿಲ್ಲ. ಇನ್ನು ಕೌಟುಂಬಿಕ ಜವಾಬ್ದಾರಿಯ ನೆಪದಲ್ಲಿ ಅವಳ ಅಸ್ತಿತ್ವಕ್ಕೇ ಕೈಹಾಕಿ ಅತಂತ್ರಳನ್ನಾಗಿಸುವುದು ಮತ್ತು ಪರಾವಲಂಬಿಯನ್ನಾಗಿಸುವ ತಂತ್ರಗಳಿಗಂತೂ ಎಣೆಯುಂಟೆ? ಇಷ್ಟೇ ಅಲ್ಲ, ಬುದ್ಧಿಮಾಂದ್ಯ, ಅಂಗವಿಕಲ, ವಿಚ್ಛೇದಿತರು, ವಿಧವೆಯರು, ವಿವಾಹೇತರ ಸಂಬಂಧಗಳಲ್ಲಿ ನೆಮ್ಮದಿ ಅರಸುವ ಮಹಿಳೆಯರಿಗಾಗುವ ಗಾಯಗಳು ಕಂಡಾವೆ?

ಒಟ್ಟಾರೆಯಾಗಿ ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಮೈಮಾರಿ ಬದುಕುವ ಹೆಣ್ಣಿಗೂ ‘ನೋ’ ಎಂದು ಹೇಳುವ ಹಕ್ಕೂ ಇಂದಿದೆ. ಅಂತೆಯೇ ಅದಕ್ಕಾಗಿ ಹಣ ಕೊಟ್ಟವನೂ ಕೂಡ ಗೌರವದಿಂದ ಮತ್ತು ಜವಾಬ್ದಾರಿಯುತವಾಗಿ ಅವಳನ್ನು ಕಾಣಬೇಕಿದೆ. ಹೆಣ್ಣೆಂದರೆ ಇಲ್ಲಿ ತಾಯಿಯಲ್ಲದೆ ಬೇರೆ ಅರ್ಥವುಂಟೆ?

ಕಪ್ಪ ಕೊಡಲೇಬೇಕು

ಅಂತೂ ಒಂದು ಹ್ಯಾಷ್‍ಟ್ಯಾಗ್ ಈ ರೀತಿ ಸಂಚಲನ ಮೂಡಿಸಿದ್ದು ಅಚ್ಚರಿಯೇ. ಸಹಾನುಭೂತಿಯ ಮೂಲಕ ಸಬಲೀಕರಣಗೊಂಡಿದ್ದು ಪ್ರಗತಿಯ ಸಂಕೇತವೇ. ಕಾರಣ, ನಮ್ಮ ಮನೆಯ ಒಳಗಿನವರೋ ಹೊರಗಿನವರೋ ನಮ್ಮೆದೆಗೂಡಿನ ದೀಪ ಕದಲಿಸಿದ್ದಾರೆಂದರೆ ಅದು ಸಣ್ಣ ಮಾತಲ್ಲವಲ್ಲ. ಸ್ವಾರ್ಥ-ವಿಕಾರ ಮೆರೆದವರಿಗೆ ಮೆರವಣಿಗೆ ಮಾಡಿ ಕಪ್ಪ ಕೊಡಲೇಕಲ್ಲ? ಜನಸಾಮಾನ್ಯರಲ್ಲಿ ಇಂಥ ಘಟನೆಗಳಾದಾಗ ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತೇವೆ ಅಥವಾ ನ್ಯಾಯಕ್ಕಾಗಿ ಹೋರಾಡಲು ನಮ್ಮದೇ ಆದ ರೀತಿಯಲ್ಲಿ ಕೈಗೂಡಿಸುತ್ತೇವೆ. ಎಷ್ಟೋ ಸಲ ಇನ್ಯಾರಿಗೋ ಆದ ಅನ್ಯಾಯವೇ ನಮಗೂ ಆಗಿದೆ ಎಂದು ಮನವರಿಕೆಯಾದ ಮೇಲೂ ನಾವು ಮೌನ ಮುರಿದಿರುವುದು ಕಡಿಮೆಯೇ. ಮರ್ಯಾದೆಯ ಚೌಕಟ್ಟು, ಸಭ್ಯತೆಯ ಮುಖವಾಡ, ಹೇರಿಕೊಂಡ ಆದರ್ಶ ಮತ್ತು ನಂಬಿಕೊಂಡ ಸಿದ್ಧಾಂತಗಳೂ ಇದಕ್ಕೆ ಕಾರಣವಾಗಿರಬಹುದು. ಆದರೆ ಇದೊಂದು ಮಾನಸಿಕ ಅಸ್ವಸ್ಥತೆ.

ಗುಟ್ಟು ರಟ್ಟು ಮಾಡೋಣ

ಅಷ್ಟಕ್ಕೂ ದೈಹಿಕವಾಗಿ ನಡೆದದ್ದು ಮಾತ್ರ ಅತ್ಯಾಚಾರವಲ್ಲ. ಮಾತಿನಲ್ಲಿ, ನೋಟದಲ್ಲಿ, ಸ್ಪರ್ಶದಲ್ಲಿ ಕೂಡ ಅದರ ಕೆನ್ನಾಲಿಗೆ ಸುರುಳಿಸುತ್ತಿ ಮಲಗಿರುತ್ತದೆ. ಅದೊಂದು ವಿಕೃತ ವ್ಯಕ್ತಿತ್ವ. ಒಬ್ಬರೊಂದಿಗೆ ನಡೆದುಕೊಂಡಂತೆಯೇ ಇನ್ನೊಬ್ಬರೊಂದಿಗೂ ನಡೆದುಕೊಳ್ಳುವ ನೀಚ ಮನಸ್ಥಿತಿ ಅದರದು. ಇದು ನಮಗೆ ಮೊದಲು ಮನದಟ್ಟಾಗಬೇಕು. ಎಷ್ಟೋ ಬಾರಿ ನಮ್ಮ ಮೌನ, ಹತಾಶೆ, ಸೋಲು, ಕುಸಿತ ಮತ್ತು ಹಾಕಿಕೊಳ್ಳುವ ಮಿತಿಗಳಿಗೆ ಇದೇ ಕಾರಣವಾಗಿರುತ್ತದೆ. ಪ್ರತಿಯೊಂದು ಜೀವಿಯೂ ತನ್ನತನಕ್ಕಾಗಿ ಕೊನೆತನಕ ಹೋರಾಡುವುದು ಸ್ವಾರ್ಥವಲ್ಲ, ಸಹಜ. ಇನ್ನಾದರೂ ನಾವು ಇಂಥ ಗುಟ್ಟುಗಳನ್ನು ಮೊದಲು ಕೌಟುಂಬಿಕ ನೆಲೆಯಲ್ಲಿ ನಂತರ ಕಾನೂನು ಮತ್ತು ಸಾರ್ವಜನಿಕ ವಲಯಗಳಲ್ಲಿ ರಟ್ಟು ಮಾಡಲು ಕಲಿಯೋಣ. ನಮ್ಮ ಮಕ್ಕಳಿಗೂ ಕಲಿಸೋಣ.

ಏಕೆಂದರೆ, ಸಹಜವಾಗಿರುವುದು ಸ್ಪಷ್ಟವಾಗಿರುತ್ತದೆ ಮುಕ್ತವಾಗಿರುತ್ತದೆ. ಹೊಸತನಕ್ಕೆ ತೆರೆದುಕೊಳ್ಳುತ್ತಿರುತ್ತದೆ. ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳುತ್ತಿರುತ್ತದೆ. ಶಕ್ತಿ-ಅಭಿವ್ಯಕ್ತಿಯನ್ನು ಪ್ರೇರೇಪಿಸುತ್ತಿರುತ್ತದೆ. ಅಷ್ಟೇ ಅಲ್ಲ ಅಸಹಜವನ್ನು ಬಲುಬೇಗ ಗುರುತಿಸಿ ವಿರೋಧಿಸುತ್ತಿರುತ್ತದೆ. ಇದೆಲ್ಲವೂ ಜೀವಜೀವದ ಸೂಕ್ಷ್ಮ ಅನುಬಂಧ. ಆದರೆ ವಿಕೃತಿಗೆ, ಅಸ್ವಸ್ಥತೆಗೆ ಹಗಲು ಬೆಳಕಂತಿಲ್ಲ, ಬಯಲು ಆಲಯ ಅಂತಿಲ್ಲ, ತಾನು ತನ್ನದು ತನ್ನವರು ಅಂತಿಲ್ಲ. ಎಲ್ಲೆಂದರಲ್ಲಿ ಕೆಟ್ಟ ನಾಲಿಗೆಯನ್ನೂ ಚಾಚುತ್ತಲೇ ಇರುತ್ತದೆ, ಪ್ರತಿತಂತ್ರಗಳನ್ನು ಹೂಡುತ್ತಲೇ ಇರುತ್ತದೆ.

ಗುಟ್ಟುಗಳನ್ನು ಒಂದೊಂದಾಗಿ ಬಿಚ್ಚಿಡುವಂಥ ಕಾಲವೀಗ ಬಂದಿದೆ. ಅದು ಥೇಟ್ ನಿನ್ನೆ ದೀಪಾವಳಿಯಲ್ಲಿ ಒಂದೊಂದೇ ದೀಪ ಹಚ್ಚಿದಂತೆ. ಹಂಚಿಕೊಂಡರೆ ಮಾನ ಹರಾಜು ಎನ್ನುವ ಕಾಲದಲ್ಲಿ ನಾವೀಗ ಇಲ್ಲ. ಹಂಚಿಕೊಳ್ಳುವಿಕೆ ನಮ್ಮೊಳಗನ್ನು ದಟ್ಟಗೊಳಿಸುತ್ತದೆ. ತಪ್ಪಿತಸ್ಥ ಭಾವನೆಯಿಂದ ಮುಕ್ತಗೊಳಿಸಿ ಪಶ್ಚಾತ್ತಾಪದ ಕೂಪದಿಂದ ಮೇಲೆ ಎತ್ತುತ್ತದೆ. ಅಷ್ಟಕ್ಕೂ ನಾವ್ಯಾಕೆ ನಮ್ಮದಲ್ಲದ ತಪ್ಪಿಗೆ ನೊಂದುಕೊಳ್ಳಬೇಕು?

‘ನಾನೂ ಕೂಡ’ ಎಂದ ತರಾನಾ ಮತ್ತು ಆ್ಯಲಿಸ್

‘If you have been sexually harassed or assaulted, write ‘me too’ as a reply to this tweet’; ಆ್ಯಲಿಸ್‍ಳ ಈ ಟ್ವೀಟಿಗೆ ಇಪ್ಪತ್ನಾಲ್ಕು ಗಂಟೆ ಅವಧಿಯೊಳಗೆ ಸುಮಾರು 50 ಸಾವಿರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಕೆಲವೇ ನಿಮಿಷಗಳಲ್ಲಿ ಈ ಒಕ್ಕಣೆ ಹ್ಯಾಷ್‍ಟ್ಯಾಗ್‍ ಆಗಿ ಪರಿವರ್ತನೆಗೊಂಡಿತ್ತು. ಇದಕ್ಕೆ ಕಾರಣ, ಹಾಲಿವುಡ್‍ ನಿರ್ಮಾಪಕ ಹಾರ್ವೇ ವೈನ್‍ಸ್ಟಿನ್‍ ವಿರುದ್ಧ ಅಮೆರಿಕ ಮೂಲದ ನಟಿ ಆ್ಯಲಿಸ್ ಲೈಂಗಿಕ ಕಿರುಕುಳ ಆರೋಪ ಕುರಿತು ದೂರು ದಾಖಲಿಸಿದ್ದರು. ಇದು ಕಳೆದ ವಾರ ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ವರದಿಯಾಗಿತ್ತು. ಆ್ಯಲಿಸ್‍ಳನ್ನು ಬೆಂಬಲಿಸಲು ಮಾಧ್ಯಮ ಮತ್ತು ಮನೋರಂಜನಾ ಉದ್ಯಮದಲ್ಲಿ ತೊಡಗಿಕೊಂಡ ಮಹಿಳೆಯರು ‘ಮಿ ಟೂ’ ಹ್ಯಾಷ್ ಟ್ಯಾಗ್‍ನಡಿ ಲೈಂಗಿಕ ಕಿರುಕುಳಕ್ಕೆ ಸಂಬಂಧುಸಿದ ಸ್ವಾನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ನಮ್ಮ ರಾಜ್ಯವೂ ಒಳಗೊಂಡಂತೆ ಜಗತ್ತಿನ ಸಾಮಾನ್ಯ ಮಹಿಳಾವಲಯೂ ಇದಕ್ಕೆ ಸ್ಪಂದಿಸಿತು. ಗಮನಿಸಬೇಕಾದ ಅಂಶವೆಂದರೆ, ಲಕ್ಷಾಂತರ ಸಂಖ್ಯೆಯಲ್ಲಿ ತೃತೀಯ ಲಿಂಗಿಗಳೂ ತಮ್ಮ ಅನುಭವಗಳನ್ನು ಹಂಚಿಕೊಂಡಿರುವುದು.

‘ಮೀ ಟೂ’ ಎಂಬ ಪದಗುಚ್ಛಕ್ಕೆ ಮತ್ತು ಇದರ ಉದ್ದೇಶಕ್ಕೆ ಒಂದು ದಶಕದ ಇತಿಹಾಸವೇ ಇದೆ. 2007ರಲ್ಲಿ ‘ಮೀ ಟೂ’ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಾಕಿದ್ದು ಕಪ್ಪುಜನಾಂಗದ ತರನಾ ಬುರ್ಕೆ ಎಂಬ ಮಹಿಳೆ. ‘ಜಸ್ಟ್‌ ಬಿ ಇಂಕ್’ ಎಂಬ ಅಭಿಯಾನವನ್ನು ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯೊಬ್ಬಳು ಅಂಥದೇ ಸ್ಥಿತಿಯಲ್ಲಿರುವ ಮಹಿಳೆಗೆ ಮನಃಸ್ಥೈರ್ಯ ನೀಡುವ ಹಿನ್ನೆಲೆಯಲ್ಲಿ ‘ನಾನೂ ಕೂಡ’ ಎಂಬ ಅಭಿಯಾನವನ್ನು ಆರಂಭಿಸಲಾಗಿತ್ತು. ಮಹಿಳೆಗೆ ಆದ ಗಾಯವನ್ನು ತಕ್ಕಮಟ್ಟಿಗೆ ವಾಸಿ ಮಾಡುವ ಪ್ರಯತ್ನ ಇದರ ಆಶಯವಾಗಿತ್ತು ಎಂದು ‘ಎಬೊನಿ’ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ತರಾನಾ ಹೇಳಿದ್ದಾರೆ. ಒಟ್ಟಾರೆಯಾಗಿ ನೋಡಿದಾಗ, ತರಾನಾ ಮತ್ತು ಆ್ಯಲಿಸ್‍ಳ ಉದ್ದೇಶ ಒಂದೇ ಆಗಿದ್ದು, ಅಂದು ಹ್ಯಾಷ್‍ಟ್ಯಾಗ್‍ ಇರಲಿಲ್ಲ; ಆದರೆ ಇಂದು ಹ್ಯಾಷ್‍ಟ್ಯಾಗ್‍ನೊಂದಿಗೆ ಲಕ್ಷಗಟ್ಟಲೇ ಜನರನ್ನು ಜಾಗೃತಗೊಳಿಸಿದೆ ಅಷ್ಟೆ.

**

ಧ್ವನಿಯಲ್ಲೂ ನುಸುಳಿದ ರಾಜಕೀಯ

‘ಕಳೆದ ವರ್ಷ ಎಷ್ಟು ಮಹಿಳೆಯರು ಅತ್ಯಾಚಾರಕ್ಕೆ ಒಳಗಾದರು’ ಎನ್ನುವುದರ ಬಗ್ಗೆ ನಾವು ಮಾತನಾಡುತ್ತೇವೆ, ‘ಎಷ್ಟು ಮಂದಿ ಪುರುಷರು ಅತ್ಯಾಚಾರವೆಸಗಿದರು’ ಎಂದಲ್ಲ. ‘ಎಷ್ಟು ವಿದ್ಯಾರ್ಥಿನಿಯರು ದೌರ್ಜನ್ಯಕ್ಕೆ ಒಳಗಾದರು’ ಎಂದು ಮಾತನಾಡುತ್ತೇವೆ, ‘ಎಷ್ಟು ಮಂದಿ ಹುಡುಗರು ದೌರ್ಜನ್ಯವೆಸಗಿದರು’ ಎಂದಲ್ಲ. ‘ಎಷ್ಟು ಹದಿಹರೆಯದ ಹುಡುಗಿಯರು ಗರ್ಭಿಣಿಯರಾದರು’ ಎಂದು ಮಾತನಾಡಿಕೊಳ್ಳುತ್ತೇವೆ, ’ಎಷ್ಟು ಮಂದಿ ಗಂಡಸರು ಮತ್ತು ಹುಡುಗರು ಇದಕ್ಕೆ ಕಾರಣರಾದರು’ ಎಂದು ಯೋಚಿಸುವುದಿಲ್ಲ.

ಈ ಪಕ್ಷಪಾತ ಧೋರಣೆಯ ಹೇಳಿಕೆ ಅಥವಾ ಧ್ವನಿಯಲ್ಲಿ ಇರುವ ರಾಜಕೀಯ ಮತ್ತದರ ಪರಿಣಾಮದ ಅರಿವು ಗೋಚರವಾಗುತ್ತಿದೆಯೇ? ಇದು ಪುರುಷರನ್ನು ಗೌಣವಾಗಿಸಿ, ಹೆಣ್ಣಿನತ್ತಲೇ ಕೇಂದ್ರೀಕರಿಸುತ್ತಿರುವಂತೆ ಮಾಡುತ್ತಿದೆ. ’ಮಹಿಳೆಯರ ಮೇಲಿನ ಹಿಂಸೆ’ ಎನ್ನುವ ವಾಕ್ಯಪ್ರಯೋಗ ಕೂಡ ಸಮಸ್ಯಾತ್ಮಕವಾಗಿದೆ. ಅದರಲ್ಲಿ ತಾಟಸ್ಥ್ಯವೇ ಎದ್ದುಕಾಣುತ್ತಿದೆ. ಕ್ರಿಯಾತ್ಮಕತೆಯೇ ಆ ವಾಕ್ಯದಲ್ಲಿ ಗೈರು ಹಾಜರಾಗಿದೆ. ಮಹಿಳೆಯರ ಮೇಲಿನ ಹಿಂಸೆ ಎನ್ನುವುದು ಹೀನಕ್ರಿಯೆಯಾಗಿದ್ದು ಅದನ್ನು ಮಾಡಿದವರ ಬಗ್ಗೆ ಆ ಹೇಳಿಕೆ ಮೌನವಹಿಸಿದಂತಿದೆ. ‘ಅದನ್ನು ಯಾರೂ ಮಾಡುತ್ತಿಲ್ಲ;  ಅದರಷ್ಟಕ್ಕೇ ಅದು ಅದು ಸಂಭವಿಸಿದೆ’ ಎಂಬಂತಿದೆ. ಯಾವ ರೀತಿಯಲ್ಲೂ ಪುರುಷರು ಇದರ ಭಾಗವಾಗಿಲ್ಲ ಎಂಬ ಧ್ವನಿಯನ್ನು ಇದು ಹೊರಡಿಸಿದಂತಿದೆ. ಇದು ನಿಮ್ಮ ಗ್ರಹಿಕೆಗೆ ನಿಲುಕಿದೆಯೆ?

- ಜಾಕ್ಸನ್‍ ಕಾಟ್ಝ್‍, ಅಮೆರಿಕದ ಚಿತ್ರನಿರ್ಮಾಪಕ ಮತ್ತು ಶಿಕ್ಷಣತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT