ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಪತ್ರೆಯ ಖಾದ್ಯಗಳು ಪರಿಮಳವೂ ಮತ್ತು ರುಚಿಕರವೂ

Last Updated 20 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದೊಡ್ಡಪತ್ರೆ ಬಾತ್

ಬೇಕಾಗುವ ಸಾಮಗ್ರಿಗಳು: ಹೆಚ್ಚಿದ ದೊಡ್ಡಪತ್ರೆ  - 1/2ಕಪ್, ಅಕ್ಕಿ -2ಕಪ್, ಈರುಳ್ಳಿ ಹೆಚ್ಚಿದ್ದು - 1, ಹಸಿ ಅಥವಾ ನೆನೆಸಿದ ಬಟಾಣಿ - 1/4ಕಪ್, ಹೆಚ್ಚಿದ ಕೊತ್ತಂಬರಿ ಸೊಪ್ಪು - 1ಚಮಚ, ಹಸಿಮೆಣಸು 3, ಬೆಳ್ಳುಳ್ಳಿ 4, ಲವಂಗ 2, ಚಕ್ಕೆ ಚೂರು -1ಇಂಚು, ಹೆಚ್ಚಿದ ಟೊಮೆಟೊ - 1, ಶುಂಠಿ ತುಂಡು - 1/2ಇಂಚು, ತುಪ್ಪ - 5ರಿಂದ6 ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು ನೀರು ಬಸಿದಿಡಿ. ಕೊತ್ತಂಬರಿಸೊಪ್ಪು, ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ, ಹೆಚ್ಚಿದ ಟೊಮೆಟೊ, ಹಸಿಮೆಣಸು – ಎಲ್ಲವನ್ನೂ ನುಣ್ಣಗೆ ರುಬ್ಬಿ. ಕುಕ್ಕರಿನಲ್ಲಿ ತುಪ್ಪ ಹಾಕಿ ಈರುಳ್ಳಿ ಹಾಕಿ ಬಾಡಿಸಿ, ರುಬ್ಬಿದ ಮಸಾಲೆ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಬಳಿಕ ದೊಡ್ಡಪತ್ರೆ ಸೊಪ್ಪು, ಬಟಾಣಿ, ಅಕ್ಕಿ ಹಾಕಿ ಚೆನ್ನಾಗಿ ಮಗುಚಿ. ಉಪ್ಪು ಹಾಗೂ 4 ಕಪ್ ನೀರು ಹಾಕಿ ಕುಕ್ಕರನ್ನು 1 ಸೀಟಿ ಕೂಗಿಸಿ ಇಳಿಸಿ. ಬಿಸಿಬಿಸಿ ದೊಡ್ಡಪತ್ರೆಯ ಬಾತ್ – ಸವಿಯಲು ಸಿದ್ಧ.

**

ದೊಡ್ಡಪತ್ರೆ ಚಟ್ನಿ

ಬೇಕಾಗುವ ಸಾಮಗ್ರಿಗಳು: ಹೆಚ್ಚಿದ ದೊಡ್ಡಪತ್ರೆ – 1/2ಕಪ್, ಒಣಮೆಣಸು – 3, ಕೊತ್ತಂಬರಿ – 1ಚಮಚ, ಉದ್ದಿನ ಬೇಳೆ – 1ಚಮಚ, ತೆಂಗಿನತುರಿ – 1ಕಪ್, ಹುಣಸೆಹಣ್ಣು – ಹುಣಸೆಬೀಜದ ಗಾತ್ರ, ಎಣ್ಣೆ – 1ಚಮಚ, ಬೆಳ್ಳುಳ್ಳಿ – 2ಎಸಳು, ಕರಿಬೇವು – 2ಎಸಳು, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಹೆಚ್ಚಿದ ದೊಡ್ಡಪತ್ರೆಯನ್ನು ಎಣ್ಣೆಯಲ್ಲಿ ಚೆನ್ನಾಗಿ ಬಾಡಿಸಿ. ಒಣಮೆಣಸು, ಉದ್ದಿನ ಬೇಳೆ, ಕೊತ್ತಂಬರಿಯನ್ನು ಹುರಿಯಿರಿ. ಬಾಡಿಸಿದ ದೊಡ್ಡಪತ್ರೆಗೆ ತೆಂಗಿನ ತುರಿ, ಹುರಿದ ಉದ್ದಿನ ಬೇಳೆ, ಕೊತ್ತಂಬರಿ, ಒಣಮೆಣಸು, ಹುಳಿ, ಉಪ್ಪು ಸೇರಿಸಿ ರುಬ್ಬಿ. ಸಾಸಿವೆ, ಬೆಳ್ಳುಳ್ಳಿ ಜೊತೆ ಕರಿಬೇವಿನ ಒಗ್ಗರಣೆ ಮಾಡಿ. ಇದು ಊಟಕ್ಕೆ, ಚಪಾತಿ, ದೋಸೆಗೆ ಚೆನ್ನಾಗಿರುತ್ತದೆ.

**

ದೊಡ್ಡಪತ್ರೆ ಮಸಾಲೆ ವಡೆ

ಬೇಕಾಗುವ ಸಾಮಗ್ರಿಗಳು: ಸಣ್ಣಗೆ ಹೆಚ್ಚಿದ ದೊಡ್ಡಪತ್ರೆ  – 1/2ಕಪ್, ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ – 1/2ಕಪ್, ಕಡಲೆಬೇಳೆ – 2ಕಪ್, ಉದ್ದಿನಬೇಳೆ – 1/4ಕಪ್, ತೊಗರಿಬೇಳೆ – 1/4ಕಪ್, ಸ್ವಲ್ಪ ಕೊತ್ತಂಬರಿಸೊಪ್ಪು, ಶುಂಠಿ – 1ಇಂಚು, ಹಸಿಮೆಣಸು 6, ಇಂಗು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಕಡಲೆಬೇಳೆ, ಉದ್ದಿನ ಬೇಳೆ, ತೊಗರಿಬೇಳೆಗಳನ್ನು ಒಟ್ಟಿಗೆ ಎರಡು ಗಂಟೆಗಳ ಕಾಲ ನೆನೆಸಿ ತೊಳೆದು ಹಸಿಮೆಣಸು, ಉಪ್ಪು, ಶುಂಠಿ, ಇಂಗು ಹಾಕಿ ಗಟ್ಟಿಗೆ ತರಿತರಿಯಾಗಿ ರುಬ್ಬಿ. ಹೆಚ್ಚಿಟ್ಟುಕೊಂಡ ದೊಡ್ಡಪತ್ರೆ ಸೊಪ್ಪು, ಕರಿಬೇವು ಮತ್ತು ಕೊತ್ತಂಬರಿಸೊಪ್ಪನ್ನು ಹಾಕಿ ಬೆರೆಸಿ. ಅದನ್ನು ಸಣ್ಣ ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿ ಕೈಯಲ್ಲಿ ಸ್ವಲ್ಪ ಒತ್ತಿ ಚಪ್ಪಟೆ ಮಾಡಿ ಕಾದ ಎಣ್ಣೆಯಲ್ಲಿ ಕರಿದರೆ ರುಚಿಯಾದ ಘಮ ಘಮಿಸುವ ದೊಡ್ಡಪತ್ರೆಯ ಮಸಾಲೆ ವಡೆ – ಸವಿಯಲು ಸಿದ್ಧ.

**

ದೊಡ್ಡಪತ್ರೆ ಮೊಸರುಗೊಜ್ಜು

ಬೇಕಾಗುವ ಸಾಮಗ್ರಿಗಳು: ದೊಡ್ಡಪತ್ರೆ  – 4, ಟೊಮೆಟೊ 2, ಈರುಳ್ಳಿ – 1, ಹಸಿಮೆಣಸು – 2, ಮೊಸರು – 1ಕಪ್, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ದೊಡ್ಡಪತ್ರೆ, ಟೊಮೆಟೊ, ಈರುಳ್ಳಿ, ಹಸಿಮೆಣಸು – ಎಲ್ಲವನ್ನೂ ಸಣ್ಣಗೆ ಹೆಚ್ಚಿ. ಮೊಸರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಸಾಸಿವೆ ಒಗ್ಗರಣೆ ಕೊಡಿ. ಅನ್ನ, ಪಲಾವ್‌ನೊಂದಿಗೆ ಸವಿಯಿರಿ.

**

ದೊಡ್ಡಪತ್ರೆ ತಂಬುಳಿ

ಬೇಕಾಗುವ ಸಾಮಗ್ರಿ: ದೊಡ್ಡಪತ್ರೆ  – 10, ತೆಂಗಿನತುರಿ – 1ಕಪ್, ಜೀರಿಗೆ – 1/2ಚಮಚ, ಸಿಹಿ ಮಜ್ಜಿಗೆ – 1ಕಪ್, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ದೊಡ್ಡಪತ್ರೆಯನ್ನು ಸಣ್ಣಗೆ ಹೆಚ್ಚಿ ಬಾಣಲೆಗೆ ಹಾಕಿ ಒಂದು ಚಮಚ ತುಪ್ಪವನ್ನು ಹಾಕಿ ಬಾಡಿಸಿಕೊಳ್ಳಿ. ತಣಿದ ಮೇಲೆ ಇದಕ್ಕೆ ತೆಂಗಿನತುರಿ, ಜೀರಿಗೆ, ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೇಕಾದಷ್ಟು ನೀರು ಹಾಗೂ ಮಜ್ಜಿಗೆಯನ್ನು ಸೇರಿಸಿ ತಂಬುಳಿ ಹದ ಮಾಡಿಕೊಂಡು ಸಾಸಿವೆಯ ಒಗ್ಗರಣೆಯನ್ನು ನೀಡಿ. ಕೆಮ್ಮು, ಶೀತ, ಕಫಗಳನ್ನು ಶಮನಗೊಳಿಸುವ ಶಕ್ತಿ ದೊಡ್ಡಪತ್ರೆಗೆ ಇರುವುದರಿಂದ ಈ ತಂಬುಳಿ ಆರೋಗ್ಯಕ್ಕೆ ಕೂಡ ಒಳ್ಳೆಯದು.

**

–ಸಹನಾ ಕಾಂತಬೈಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT