ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಕ್ಷಗಾನ ಸಮಕಾಲೀನ’

Last Updated 20 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

–ಸುಕೃತ ಎಸ್‌.

**

ಯಾವುದೇ ಕಲೆ ತೀರಾ ಶಾಸ್ತ್ರೀಯವಾದರೆ ಅದು ಸಹಜವಾಗಿ ನಿರ್ದಿಷ್ಟ ಚೌಕಟ್ಟುಗಳಿಗೆ ಒಳಗಾಗುತ್ತದೆ. ಜಾನಪದ ಕಲೆಗಳಿಗೆ ಕಾಲದೊಂದಿಗೆ ಬದಲಾಗುವ, ಕಲಾವಿದರ ವೈಯಕ್ತಿಕ ಪ್ರತಿಭೆಗೆ ಅವಕಾಶ ನೀಡುವ ಗುಣ ಇದೆ. ಇದು ಅಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣವಾದರೆ ಮಾತ್ರ ಕಲೆ ಜನರಿಂದ ದೂರ ಹೋಗುತ್ತದೆ. ಈ ಸಮಸ್ಯೆ ಸದ್ಯಕ್ಕೆ ಯಕ್ಷಗಾನಕ್ಕಿಲ್ಲ. ಕರ್ನಾಟಕ ಸಂಗೀತವೂ ಅಲ್ಲದ, ಹಿಂದೂಸ್ಥಾನಿಯೂ ಅಲ್ಲದ ಹಾಡಿನ ಕ್ರಮವೊಂದನ್ನು ಯಕ್ಷಗಾನ ಬೆಳೆಸಿಕೊಂಡಿದೆ. ಇದರೊಳಗೆ ವಿಭಿನ್ನ ಬಗೆಯ ಪ್ರಯೋಗಗಳನ್ನು ಮಾಡಲು ಹೇರಳವಾದ ಅವಕಾಶಗಳಿವೆ.

ಪ್ರತಿ ಭಾಗವತರೂ ತಮ್ಮ ಪ್ರತಿಭೆಯಿಂದ ತಮ್ಮದೇ ಶೈಲಿ ರೂಢಿಸಿಕೊಂಡು ಖ್ಯಾತರಾಗಿದ್ದಾರೆ. ಬಲಿಪ ನಾರಾಯಣ ಭಾಗವತರ ಹಾಡುಗಾರಿಕೆ ಒಂದು ಬಗೆಯದಾದರೆ, ಅಗರಿ ಶ್ರೀನಿವಾಸ ಭಾಗವತರ ಶೈಲಿ ಇನ್ನೊಂದು ಬಗೆ. ಇದೇ ರೀತಿ ದಾಮೋದರ ಮಂಡೆಚ್ಚರು, ಕಡತೋಕ ಮಂಜುನಾಥ ಭಾಗವತರು, ಉಪ್ಪೂರು ನಾರಾಯಣ ಭಾಗವರು, ಗುಂಡ್ಮಿ ಕಾಳಿಂಗ ನಾವುಡರು, ಪುತ್ತಿಗೆ ರಘುರಾಮ ಜೋಯಿಸರು, ಪಟ್ಲ ಸತೀಶ್ ಶೆಟ್ಟಿ ಸೇರಿದಂತೆ ಹಲವರು ತಮ್ಮದೇ ಶೈಲಿಯಿಂದ ಖ್ಯಾತರಾಗಿದ್ದಾರೆ.

ಈಚಿನ ದಿನಗಳಲ್ಲಿ ಭಾಗವತಿಕೆಯು ಭಾವಗೀತೆಯಾಗಿ ಪರಿವರ್ತನೆಯಾಗುತ್ತಿರುವುದು ನಿಜ. ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ಕಕ್ಕೆಪದವು ಮೊದಲಾದವರು ಯಕ್ಷಗಾನದ ಹಾಡುಗಳನ್ನು ಲಂಬಿಸಿ, ರಾಗವಾಗಿ ಹಾಡುತ್ತಿದ್ದಾರೆ. ಹೀಗೆ ಮಾಡುವುದು ಯಕ್ಷಗಾನ ಭಾಗವತಿಕೆಗೆ ಕೊಂಚ ಜನಪ್ರಿಯತೆ ತಂದುಕೊಡಬಹುದು. ಆದರೆ, ಯಕ್ಷಗಾನ ಎನ್ನುವುದು ನೋಡಬೇಕಾದ ಕಲೆಯೇ ವಿನಾ ಗಮಕದ ಹಾಗೆ ಕೇಳಬೇಕಾದ ಕಲೆಯಲ್ಲ. ಇಲ್ಲಿ ರಂಗದ ಮೇಲೆ ಹಾಡು, ಕುಣಿತ, ಅರ್ಥ ಮತ್ತು ಬಣ್ಣಗಳು ಸಮತೋಲನ ಕಾಯ್ದುಕೊಳ್ಳಬೇಕು. ಈಗಿನ ಭಾಗವತಿಕೆಯು ಈ ಸಮತೋಲನವನ್ನು ಹಾಳುಗೆಡವಿದೆ.

ಯಕ್ಷಗಾನದಲ್ಲಿ ಭಾಷೆಯ ಬಳಕೆಯ ದೃಷ್ಟಿಯಿಂದಲೂ ಈಚಿನ ದಿನಗಳಲ್ಲಿ ಕೆಲ ಪ್ರಯೋಗಗಳು ನಡೆಯುತ್ತಿವೆ. ಯಕ್ಷಗಾನಕ್ಕೆ ಕನ್ನಡ ಒಗ್ಗುವುದಾದರೆ ತುಳು-ಹವ್ಯಕ ಭಾಷೆಗಳ ಬಳಕೆಯಲ್ಲಿ ತಪ್ಪೇನು? ಕನ್ನಡದಲ್ಲೇ ಭಾಗವತಿಕೆ ಕೇಳಿದ ಕಿವಿಗಳಿಗೆ ಹೊಸ ಭಾಷೆ ಸ್ವಲ್ಪ ಕಿರಿಕಿರಿ ಉಂಟುಮಾಡಬಹುದು. ತಾತ್ವಿಕವಾಗಿ ಅದರಲ್ಲಿ ತಪ್ಪೇನೂ ಇಲ್ಲ. ಶ್ರೀರಾಮಚಂದ್ರ ಕನ್ನಡ ಮಾತಾಡುವುದಾದರೆ, ಅರ್ಥಧಾರಿಯೊಬ್ಬರು ಅಂಬೆಯನ್ನು ‘ಭಯೋತ್ಪಾದಕಿ’ ಎಂದಿದ್ದಕ್ಕೆ ನನ್ನ ಪ್ರತಿಕ್ರಿಯೆ ಇಷ್ಟೇ, ಯಕ್ಷಗಾನವು ಪುರುಷಕೇಂದ್ರಿತ ಕಲೆ. ಅದರಲ್ಲಿ ಸಾಂಪ್ರದಾಯಿಕ  ಮೌಲ್ಯಗಳಿಗೇ ಮನ್ನಣೆ. ಈ ಎರಡು ಸಂದರ್ಭಗಳಲ್ಲಿಯೂ ಮಹಿಳೆ ಶೋಷಿತಳೇ ಹೌದು. ಇನ್ನು ಯಕ್ಷಗಾನದಲ್ಲಿ ಯಾವುದಾದರೂ ಪುರುಷ ಪಾತ್ರವು ಹೆಣ್ಣಿನ ಬಗ್ಗೆ ಕೀಳಾಗಿ ಮಾತಾಡಿದರೆ, ಸ್ತ್ರೀ ಪಾತ್ರಕ್ಕೆ ತನ್ನನ್ನು ಸಮರ್ಥಿಸಿಕೊಳ್ಳಲೂ ಅವಕಾಶವಿರುತ್ತದೆ.

ಪ್ರಖ್ಯಾತ ವೇಷಧಾರಿ ಕೋಳ್ಯೂರು ರಾಮಚಂದ್ರರಾಯರು ರಂಗದಲ್ಲಿ ಕಟ್ಟಿದ ಸ್ತ್ರೀ ಪಾತ್ರಗಳು ಬಹಳ ಪ್ರಭಾವಶಾಲಿಗಳಾಗಿದ್ದುವು. ಅಂಬೆ, ದಾಕ್ಷಾಯಿಣಿ, ಶೂರ್ಪನಖಿ, ಸೈರೇಂದ್ರಿ, ದ್ರೌಪದಿ, ಪ್ರಮೀಳೆ ಮೊದಲಾದ ಪಾತ್ರಗಳಿಗೆ ತುಂಬ ಶಕ್ತಿಯಿದೆ. ಆ ಶಕ್ತಿಯನ್ನು ರಂಗದಲ್ಲಿ ಹೊಮ್ಮಿಸುವ ಸಾಮರ್ಥ್ಯ ಕಲಾವಿದರೆ ಇದ್ದಾಗ ಮಾತ್ರ ಆ ಪಾತ್ರಗಳು ವಿಜೃಂಭಿಸುತ್ತವೆ. ಇಲ್ಲದಿದ್ದರೆ ಸಹಜವಾಗಿಯೇ ಅವು ಪೇಲವವಾಗುತ್ತವೆ ಎಂದರು.

ಶೇಣಿ ಗೋಪಾಲಕೃಷ್ಣ ಭಟ್ಟರ ಹಾಗೇ ನಮ್ಮ ಬದುಕಿನ ಕಾಲಘಟ್ಟದ ಕೆಲವು ವಿಷಯಗಳನ್ನು ಔಚಿತ್ಯಪೂರ್ಣವಾಗಿ ರಂಗದ ಮೇಲೆ ತರುವುದರಿಂದ ಕಲೆ ಸಮಕಾಲೀನವಾಗಲು ಸಾಧ್ಯ. ಪ್ರಜಾಪ್ರಭುತ್ವದ ಕೆಲವು ಮೌಲ್ಯಗಳು, ರಾಜಕೀಯ ಪಕ್ಷಗಳು, ವರ್ತಮಾನ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳಿಗೂ ಯಕ್ಷರಂಗದಲ್ಲಿ ಸ್ಥಾನವಿದೆ. ಇವು ಕಲೆಯ ಅಂತರ್ಯದ ಭಾಗವಾಗಿದ್ದಾಗ ಪ್ರೇಕ್ಷಕರ ಗಮನ ಸೆಳೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT