ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ವೇದ ನಾಲ್ಕಾಯಿತು...

ವೇದ 4
Last Updated 20 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವೇದಗಳು ಎಂದಾಗ ನೆನಪಿಗೆ ಬರುವುದು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಹೀಗೆ ವಿಂಗಡಣೆ ಮಾಡಿದವರು ವೇದವ್ಯಾಸ ಎಂಬುದು ಪರಂಪರೆಯ ಒಕ್ಕಣೆ. ಅಖಂಡವಾಗಿದ್ದ ವೇದವನ್ನು ಅಧ್ಯಯನದ ಅನುಕೂಲಕ್ಕಾಗಿ ಹೀಗೆ ಅವರು ವಿಂಗಡಿಸಿದರಂತೆ.  ಒಂದೇ ಆಗಿದ್ದ ವೇದವನ್ನು ನಾಲ್ಕಾಗಿ ವಿಂಗಡಿಸಿದಂತೆ, ಒಂದೊಂದು ವೇದವನ್ನೂ ಸಂಹಿತಾ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತು ಎಂದು ಮತ್ತೆ ವಿಂಗಡಿಸಲಾಗಿದೆ.

‘ಸಂಹಿತಾ’ ಎಂದರೆ ಒಟ್ಟುಗೂಡಿಸಿದ್ದು ಎಂದರ್ಥ. ಮಂತ್ರಗಳನ್ನು ಸಾಕ್ಷಾತ್ಕಾರ ಮಾಡಿಕೊಂಡವರು ಋಷಿಗಳು. ಇವರು ಹಲವರು. ಹೀಗೆ ಹಲವು ಋಷಿಗಳ ಮಂತ್ರಗಳನ್ನು ಒಂದು ಗೊತ್ತಾದ ಕ್ರಮದಲ್ಲಿ ಒಂದೆಡೆ ಸೇರಿಸಿರುವುದರಿಂದ ‘ಸಂಹಿತಾ’ ಎಂದು ಹೆಸರು. ಮಂತ್ರಗಳ ಸಮೂಹವೇ ಸಂಹಿತಾ. ಉದಾ: ತೈತ್ತಿರೀಯಸಂಹಿತಾ, ವಾಜಸನೇಯಸಂಹಿತಾ.

‘ಬ್ರಾಹ್ಮಣ’ ಎಂದರೆ ಇಲ್ಲಿ ಜಾತಿ ಸೂಚಕವಲ್ಲ. ವೇದಸಂಹಿತೆಯಲ್ಲಿರುವ ಮಂತ್ರಗಳ ವ್ಯಾಖ್ಯಾನರೂಪವೇ ಬ್ರಾಹ್ಮಣ ಗ್ರಂಥಗಳು. ಮಂತ್ರಗಳನ್ನು ಹೇಗೆ ವಿನಿಯೋಗಿಸಬೇಕು? ಯಾವ ಯಜ್ಞಕ್ಕೆ ಯಾವ ಮಂತ್ರ? ಯಜ್ಞಗಳನ್ನು ಹೇಗೆ ಮಾಡಬೇಕು? – ಇಂಥವಕ್ಕೆ ವಿವರಗಳನ್ನು ಈ ಗ್ರಂಥಗಳಲ್ಲಿ ನೋಡಬಹುದು. ಉದಾ: ಐತರೇಯಬ್ರಾಹ್ಮಣ, ಶತಪಥಬ್ರಾಹ್ಮಣ.

‘ಆರಣ್ಯಕ’ ಎಂದರೆ ಕಾಡಿಗೆ ಸಂಬಂಧಿಸಿದ್ದು. ಕಾಡಿನಲ್ಲಿ ಅಧ್ಯಯನ ಮಾಡಬೇಕಾದ ವೇದಭಾಗವೇ ಆರಣ್ಯಕ. ಎಂದರೆ ಏಕಾಂತದಲ್ಲಿ ಮನನ ಮಾಡಬೇಕಾದ ವೇದಮಂತ್ರಗಳು ಎಂದು ಸ್ವಲ್ಪ ಸರಳವಾಗಿ ಹೇಳಬಹುದು. ಸಂಹಿತೆಗಳು ಮತ್ತು ಬ್ರಾಹ್ಮಣಗಳು ಮುಖ್ಯವಾಗಿ ಕರ್ಮವನ್ನು ಮಾಡಲು ಒದಗುವಂಥವು. ಎಂದರೆ ಅವು ಹೊರಗಿನ ಯಜ್ಞವನ್ನು ಕುರಿತಂಥವು. ಕರ್ಮಗಳನ್ನು ಮಾಡುತ್ತ ಮಾಡುತ್ತ ಪಕ್ವಗೊಂಡ ಮನಸ್ಸು ಅವುಗಳ ಸಾರ್ಥಕತೆಯ ಬಗ್ಗೆ ಆಳವಾಗಿ ಚಿಂತಿಸಲೂ ಪ್ರೇರಣೆಯನ್ನು ಒದಗಿಸುತ್ತದೆ. ಇಂಥ ಆಲೋಚನೆಗೆ ಏಕಾಂತ ಬೇಕು. ಅರಣ್ಯಗಳು ಅಂಥ ಏಕಾಂತವನ್ನು ಒದಗಿಸುವ ತಾಣಗಳು. ಹೀಗೆ ಮಂತ್ರಗಳ ಮನನಶೀಲತೆಯನ್ನು ಪ್ರತಿನಿಧಿಸುವ ವೇದಭಾಗಗಳೇ ಆರಣ್ಯಕಗಳು. ಉದಾ: ತೈತ್ತೀರಿಯಾರಣ್ಯಕ, ಬೃಹದಾರಣ್ಯಕ.

‘ಉಪನಿಷತ್ತು’ ವೇದದ ಕೊನೆಯ ಭಾಗ; ಹೀಗಾಗಿಯೇ ಇದನ್ನು ‘ವೇದಾಂತ’ ಎಂದೂ ಕರೆಯುತ್ತಾರೆ. ಇದಕ್ಕೆ ವೇದದ ಕೊನೆ ಎಂದೂ ಅರ್ಥ ಮಾಡಬಹುದು; ವೇದದ ಅಂತಿಮ ನಿರ್ಣಯ, ಸಿದ್ಧಾಂತ ಎಂದೂ ಅರ್ಥ. ಸಂಹಿತೆಗಳು ಮತ್ತು ಬ್ರಾಹ್ಮಣಗಳು ಕರ್ಮವನ್ನು ಎತ್ತಿಹಿಡಿದರೆ, ಆರಣ್ಯಕಗಳು ಮತ್ತು ಉಪನಿಷತ್ತುಗಳು ಜ್ಞಾನವನ್ನು ಎತ್ತಿಹಿಡಿಯುತ್ತವೆ ಎನ್ನುವ ಸರಳ ಮೀಮಾಂಸೆಯೂ ಇದೆ. ಆದರೆ ಸಂಹಿತಾಭಾಗದಲ್ಲೂ ಜ್ಞಾನವನ್ನು ಪ್ರತಿನಿಧಿಸುವ ಹೇರಳ ಮಂತ್ರಗಳಿವೆ. ಹೀಗಿದ್ದರೂ ಅಧ್ಯಯನ
ಕ್ರಮಕ್ಕಾಗಿ ಸದ್ಯಕ್ಕೆ ಹೀಗೆ ಸುಲಭ ವಿಂಗಡಣೆಯನ್ನು ಮಾಡಬಹುದು. ಉದಾ: ಈಶಾವಾಸ್ಯೋಪನಿಷತ್ತು, ತೈತ್ತಿರೀಯೋಪನಿಷತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT