ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧ: ನಮ್ಮ ಕಾಲದ ವೈದ್ಯ

ವೈಶಾಖದ ಹುಣ್ಣಿಮೆ
Last Updated 20 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ದರ್ಶನ’ ಎಂದರೆ ಕಾಣ್ಕೆ; ನೋಟ. ನದಿಯ ಈ ಬದಿಯ ದಂಡೆಯ ಮೇಲೆ ನಿಂತು ಆ ಬದಿಯ ದಂಡೆಯನ್ನೂ ನೋಡುವಂಥ ಸ್ಥಿತಿಯೇ ‘ಕಾಣ್ಕೆ’. ನೋಡುವುದು ಎಂದರೆ ದೂರದ ಬೆಟ್ಟ ನುಣ್ಣಗೆ ಎಂಬಂಥ ನೋಟವಲ್ಲ; ಸ್ಪಷ್ಟವಾಗಿ ವಿವರಗಳನ್ನು ಕಾಣಬಲ್ಲಂಥ ದೃಷ್ಟಿ. ಇಂಥದೊಂದು ನೋಟ ಬದುಕಿನ ರಹಸ್ಯದ ಬಗ್ಗೆಯೂ ಒದಗಿದರೆ ಆಗ ಅದು ’ಸಂಬೋಧಿ’. ನೋಟ ಎಂದರೆ ಅದು ಕೇವಲ ಕಣ್ಣಿನ ದೃಷ್ಟಿಯಷ್ಟೇ ಅಲ್ಲ; ಅರಿವಿನ ಅನುಭವವೂ ಹೌದು; ಆನಂದದ ಅರಿವೂ ಹೌದು. ಸಿದ್ಧಾರ್ಥ ಇಂಥ ಅರಿವನ್ನು ಪಡೆದವನು; ಹೀಗಾಗಿಯೇ ಅವನು ‘ಬುದ್ಧ’. ಅವನ ಕಾಣ್ಕೆಯನ್ನೇ ‘ಬುದ್ಧದರ್ಶನ’ ಎಂದು ಒಕ್ಕಣಿಸುವುದು.

ಬುದ್ಧನ ಜೀವನ–ಉಪದೇಶಗಳನ್ನು ವಿವರವಾಗಿ ತಿಳಿದುಕೊಳ್ಳುವ ಮೊದಲು ನಾವಿಲ್ಲಿ ಒಂದು ಪ್ರಶ್ನೆಯನ್ನು ಹಾಕಿಕೊಳ್ಳಬಹುದು. ಬುದ್ಧನ ಕಾಲ  ಸುಮಾರು ಎರಡು ಸಾವಿರದ ಐದುನೂರು ವರ್ಷಗಳಷ್ಟು ಹಿಂದಿನದು. ಅಂದು ಅವನು ಪಡೆದುಕೊಂಡ ಅರಿವು ಅದು ನಮ್ಮ ಕಾಲಕ್ಕೂ ಸಲ್ಲುತ್ತದೆಯೆ?

ಬೌದ್ಧದರ್ಶನದ ಪ್ರಮುಖ ಗ್ರಂಥಗಳಲ್ಲಿ ಒಂದು ‘ಧಮ್ಮಪದ’. (ಇದರ ವಿವರಗಳನ್ನು ಮುಂದೆ ನೋಡೋಣ.) ಅಲ್ಲಿಯ ಮೊದಲ ಮಾತುಗಳು ಹೀಗಿವೆ:

ಮನೋಪುಬ್ಬಂಗಮಾ ಧಮ್ಮಾ

ಮನೋಸೆಟ್ಠಾ ಮನೋಮಯಾ;

ಮನಸಾ ಚೇ ಪದುಟ್ಠೀನ

ಭಾಸತಿ ವಾ ಕರೋತಿ ವಾ,

ತತೋ ನಙ್ ದುಕ್ಖಙ್ ಅನ್ವೇತಿ

ಚಕ್ಕಂ ವ ವಹತೋ ಪದಙ್‌

ಇದರ ಸರಳ ಅನುವಾದ ಹೀಗೆ: ‘ಧರ್ಮಗಳಿಗೆ ಮನಸ್ಸು ಪೂರ್ವಗಾಮಿ, ಧರ್ಮಗಳಲ್ಲಿ ಮನಸ್ಸೆ ಶ್ರೇಷ್ಠ, ಧರ್ಮಗಳೆಲ್ಲ ಮನೋಮಯಗಳು. ಪ್ರದುಷ್ಟವಾದ ಮನಸ್ಸಿನಿಂದ ಮಾತನಾಡಿದರೆ ಅಥವಾ ಕೆಲಸ ಮಾಡಿದರೆ, ಅದರಿಂದ ದುಃಖ ಅವನನ್ನು ಹಿಂಬಾಲಿಸುತ್ತದೆ – ವಾಹನದ ಹೆಜ್ಜೆಯನ್ನು ಚಕ್ರ ಹೇಗೋ ಹಾಗೆ.’ (ಅನುವಾದ: ಜಿ. ಪಿ. ರಾಜರತ್ನಂ)

ಸಂಸ್ಕೃತದ ‘ಧರ್ಮ’ವೇ ಪಾಲಿಯಲ್ಲಿ ‘ಧಮ್ಮ’ ಎಂದಾಗುತ್ತದೆ. ‘ಧಮ್ಮ’ ಎನ್ನುವುದಕ್ಕೆ ಹಲವು ಸ್ತರಗಳ ಅರ್ಥಗಳಿವೆ; ಸಂದರ್ಭನಿಷ್ಠವಾಗಿ ಅರ್ಥವನ್ನು ಗ್ರಹಿಸಬೇಕಾಗುತ್ತದೆ.

ನಾವು ಮಾಡುವ ಎಲ್ಲ ಕೆಲಸಗಳಿಗೂ ಮನಸ್ಸೇ ಮೂಲ. ನಮ್ಮ ಗುಣಗಳು, ಸ್ವಭಾವಗಳು ಮನಸ್ಸನ್ನೇ ಆಶ್ರಯಿಸಿಕೊಂಡಿವೆ. ಕೆಟ್ಟ ಮನಸ್ಸಿನಿಂದ ಅಥವಾ ಕೆಟ್ಟ ಕೆಲಸವನ್ನು ಮಾಡಿದರೆ ಅದರಿಂದ ದುಃಖವೇ ಉಂಟಾಗುತ್ತದೆ; ಇದು ಹೇಗೆಂದರೆ ಬಂಡಿಯನ್ನು ಅದರ ಚಕ್ರ ಹಿಂಬಾಲಿಸುವಂತೆ. ಇದು ಮೇಲಣ ಮಾತುಗಳ ಸರಳ ತಾತ್ಪರ್ಯ.

ಈಗ ಇನ್ನೊಂದು ಗಾಹೆಯನ್ನು (ಪದ್ಯವನ್ನು) ನೋಡಬಹುದು:

ಸುಸುಖಙ್‌ ವತ ಜೀವಾಮ

ಆತುರೇಸು ಮನುಸ್ಸೇಸು

ವಿಹರಾಮ ಅನಾತುರಾ

ಇದರ ಅನುವಾದ: ‘ರೋಗವುಳ್ಳವರ ನಡುವೆ ರೋಗವಿಲ್ಲದವರಾಗಿ, ಸುಸುಖವಾಗಿ ಜೀವಿಸೋಣ. ರೋಗವುಳ್ಳ ಮನುಷ್ಯರ ನಡುವೆ ರೋಗವಿಲ್ಲದವರಾಗಿ ವಿಹರಿಸೋಣ’. (ಅನುವಾದ: ಜಿ. ಪಿ. ರಾಜರತ್ನಂ)

ಇಲ್ಲಿ ರೋಗ ಎಂದರೆ ದೈಹಿಕವಾದದ್ದು ಮಾತ್ರವೇ ಅಲ್ಲ, ಮಾನಸಿಕವಾದುದನ್ನೂ ಸೇರಿಸಿ ಹೇಳಲಾಗಿದೆ.

ನಮ್ಮ ಕಾಲದ ದೊಡ್ಡ ಸಮಸ್ಯೆ ಎಂದರೆ, ನಮ್ಮ ಮನಸ್ಸು ನಮ್ಮಲ್ಲಿ ಇರದು; ಹೀಗೆ ಎಲ್ಲೆಲ್ಲೋ ಅಲೆದು ಏನೆಲ್ಲ ತೊಂದರೆಯನ್ನು ಅದು ನಮಗೆ ಒಡ್ಡುತ್ತಲೇ ಇರುತ್ತದೆ. ಮನಸ್ಸಿನ ಗುಣಾವಗುಣಗಳನ್ನು ಅರಿತು, ಅದರ ನಿಯಂತ್ರಣಕ್ಕೂ ಸರಿಯಾದ ಉಪಯೋಗಕ್ಕೂ ಖಂಡಿತವಾಗಿಯೂ ಬುದ್ಧನ ಕಾಣ್ಕೆ ನಮಗೆ ಒದಗಬಲ್ಲದು. ನಮ್ಮ ಇಂದಿನ ದೊಡ್ಡ ಸಮಸ್ಯೆ ಎಂದರೆ ಅನಾರೋಗ್ಯ. ಇದು ಮಾನಸಿಕ ಅನಾರೋಗ್ಯವೂ ಹೌದು, ದೈಹಿಕ ಅನಾರೋಗ್ಯವೂ ಹೌದು. ನಮ್ಮ ಆರೋಗ್ಯವನ್ನು ನಾವು ಉಳಿಸಿಕೊಳ್ಳಲು ಬುದ್ಧನ ಉಪದೇಶ ನಮಗೆ ಔಷಧವಾಗಿ ಒದಗಬಲ್ಲದು.

ಇಲ್ಲೊಂದು ಸ್ವಾರಸ್ಯ ಉಂಟು. ಬುದ್ಧನು ಕಂಡುಕೊಂಡ ಸತ್ಯವನ್ನು ಆರ್ಯಸತ್ಯಗಳು ಎಂದು ಒಕ್ಕಣಿಸಲಾಗುತ್ತದೆ; ಆರ್ಯ ಎಂದರೆ ಶ್ರೇಷ್ಠವಾದುದು ಎಂದರ್ಥ. ಈ ಸತ್ಯಗಳು ನಾಲ್ಕು. ಸಿದ್ಧಾರ್ಥನು ಬುದ್ಧನಾದಾಗ ಕಾಣಿಸಿದ ಸತ್ಯಗಳೇ ಇವು. ಈ ಸತ್ಯಗಳು ಒಂದು ವಿಧದಲ್ಲಿ ವೈದ್ಯಶಾಸ್ತ್ರದ ಹಿನ್ನೆಲೆಯಲ್ಲಿಯೇ ಮೂಡಿದಂತಿವೆ. ದುಃಖ ಎನ್ನುವುದು ಇದೆ; ಅದಕ್ಕೆ ಕಾರಣವೂ ಇದೆ; ಕಾರಣ ಇದ್ದರೆ ಪರಿಹಾರವೂ ಸಾಧ್ಯ; ದುಃಖದಿಂದ ಬಿಡುಗಡೆಗೊಳಿಸಬಲ್ಲ ದಾರಿಯೂ ಇದೆ. ಇದೇ ಆರ್ಯಸತ್ಯಗಳ ಸಾರಾಂಶ. ‘ರೋಗ ಇದೆ; ರೋಗಕ್ಕೆ ಕಾರಣವೂ ಇದೆ; ಕಾರಣವನ್ನು ಕಂಡುಕೊಂಡರೆ ಅದಕ್ಕೆ ಪರಿಹಾರದ ದಾರಿಯೂ ತಿಳಿಯುತ್ತದೆ.’ ವೈದ್ಯನೊಬ್ಬ ರೋಗವನ್ನು ಪರಿಹರಿಸುವಾಗ ಅನುಸರಿಸುವ ದಾರಿಯಂತೆಯೇ ಆರ್ಯ ಸತ್ಯಗಳ ಕ್ರಮವೂ ಇದೆ. ಆದುದರಿಂದಲೇ ಬುದ್ಧನನ್ನೂ ಭಿಷಜ, ವೈದ್ಯ ಎಂದು ಕರೆಯಲಾಗುತ್ತದೆ.

ನಮ್ಮ ಕಾಲದ ರೋಗಗಳಿಂದ ನಮ್ಮನ್ನು ಬಿಡುಗಡೆಗೊಳಿಸಬಲ್ಲ ದಾರಿ ಬುದ್ಧನ ದರ್ಶನ ತೋರಬಲ್ಲದು.

- ಅವಲೋಕಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT