ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಕರನ ಜತೆ ಸೇರಿ ಗಂಡನ ಕೊಂದಳು!

ಗಾರ್ಮೆಂಟ್ಸ್ ಮೆಕ್ಯಾನಿಕ್ ಕೊಲೆ ಪ್ರಕರಣ
Last Updated 20 ಅಕ್ಟೋಬರ್ 2017, 20:12 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಿಯಕರನ ಜತೆಗೂಡಿ ಪತಿಯನ್ನೇ ಕೊಂದು ಶವವನ್ನು ಕಾಲುವೆಗೆ ಬಿಸಾಡಿದ್ದ ಮಹಿಳೆ, ನಂತರ ಗಂಡ ಕಾಣೆಯಾಗಿದ್ದಾರೆ ಎಂದು ರಾಜಗೋಪಾಲನಗರ ಠಾಣೆಗೆ ಸುಳ್ಳು ದೂರು ಕೊಟ್ಟಿದ್ದರು. ಆದರೆ, ಮೊಬೈಲ್ ಸಂದೇಶವೊಂದು ನೀಡಿದ ಸುಳಿವಿನಿಂದ ಈಗ ಆರೋಪಿಗಳಿಬ್ಬರೂ ಜೈಲು ಸೇರಿದ್ದಾರೆ.

‘ಲವಕುಶನಗರ 6ನೇ ಅಡ್ಡರಸ್ತೆಯ ನಿವಾಸಿ ನೀಲಾ (30) ಹಾಗೂ ಅವರ ಪ್ರಿಯಕರ ಪ್ರದೀಪ್ (31) ಅವರನ್ನು ಬಂಧಿಸಿದ್ದೇವೆ. ಅಕ್ರಮ ಸಂಬಂಧ ಹೊಂದಿದ್ದ ಇವರಿಬ್ಬರೂ, ಅ.10ರ ರಾತ್ರಿ ಹಗ್ಗದಿಂದ ಕುತ್ತಿಗೆ ಬಿಗಿದು ಮಧುಸೂದನ್ (36) ಅವರನ್ನು ಕೊಂದಿದ್ದರು’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪೀಣ್ಯದ ‘ಮೈತ್ರಿ’ ಗಾರ್ಮೆಂಟ್ಸ್’ನಲ್ಲಿ ಮೆಕ್ಯಾನಿಕ್ ಆಗಿದ್ದ ಮಧುಸೂದನ್, ತಮ್ಮ ಸಂಬಂಧಿ ನೀಲಾ ಅವರನ್ನು ಪ್ರೀತಿಸಿ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನೀಲಾ ಅವರಿಗೆ ಆರು ತಿಂಗಳ ಹಿಂದೆ ಕ್ಯಾಂಟರ್ ಚಾಲಕ ಪ್ರದೀಪ್‌ನ ಪರಿಚಯವಾಗಿತ್ತು. ಕ್ರಮೇಣ ಅವರ ಸ್ನೇಹ, ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಇತ್ತೀಚೆಗೆ ಈ ವಿಚಾರ ತಿಳಿದ ಮಧುಸೂದನ್, ಪತ್ನಿಗೆ ಬೈದು ಬುದ್ಧಿ ಹೇಳಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇದೇ ವಿಚಾರಕ್ಕೆ ನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಪತಿಯ ವರ್ತನೆಯಿಂದ ಕುಪಿತಗೊಂಡ ನೀಲಾ, ಅವರನ್ನು ಮುಗಿಸಲು ಸಂಚು ರೂಪಿಸಿಕೊಂಡರು. ‘ಗಂಡನನ್ನು ಕೊಂದು, ನಾವಿಬ್ಬರೂ ಮದುವೆ ಆಗೋಣ. ಅವರ ಹೆಸರಿನಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿ, ನಿನ್ನ ಸಾಲವನ್ನೂ ತೀರಿಸಬಹುದು’ ಎಂದು ಪ್ರದೀಪ್‌ಗೆ ಹೇಳಿದ್ದರು. ಅದಕ್ಕೆ ಆತ ಒಪ್ಪಿಕೊಂಡಿದ್ದ.

ಪೂರ್ವಯೋಜಿತ ಸಂಚಿನಂತೆ ಅ.10ರ ಬೆಳಿಗ್ಗೆಯೇ ಮಕ್ಕಳಿಬ್ಬರನ್ನು ತಾಯಿ ಮನೆಗೆ ಬಿಟ್ಟು ಬಂದಿದ್ದ ನೀಲಾ, ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಬರುವಂತೆ ಪ್ರದೀಪ್‌ಗೆ ಸಂದೇಶ ಕಳುಹಿಸಿದ್ದರು. ಅಂತೆಯೇ ಕ್ಯಾಂಟರ್‌ನಲ್ಲೇ ಮನೆ ಹತ್ತಿರ ಬಂದಿದ್ದ ಪ್ರದೀಪ್, ಹಗ್ಗದಿಂದ ಕುತ್ತಿಗೆ ಬಿಗಿದು ಮಧುಸೂದನ್ ಅವರನ್ನು ಉಸಿರುಗಟ್ಟಿಸಿದ್ದ. ಈ ವೇಳೆ ನೀಲಾ, ಪತಿಯ ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡು ಕೃತ್ಯಕ್ಕೆ ಸಹಕರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆ ನಂತರ ಶವವನ್ನು ಮೂಟೆಯಲ್ಲಿ ತುಂಬಿ ಕ್ಯಾಂಟರ್‌ನಲ್ಲಿ ಹಾಕಿಕೊಂಡ ಆರೋಪಿಗಳು, ಕೆಂಗೇರಿ ಕಡೆಗೆ ತೆರಳಿ ವೃಷಭಾವತಿ ಕಾಲುವೆಗೆ ಎಸೆದು ವಾಪಸಾಗಿದ್ದರು. ಮರುದಿನ ಬೆಳಿಗ್ಗೆ ನೀಲಾ ಅವರು ಪತಿ ನಾಪತ್ತೆಯಾಗಿರುವುದಾಗಿ ಸ್ಥಳೀಯರ ಮುಂದೆ ನಾಟಕವಾಡಿದ್ದರು.

ಹೀಗೆ ದೂರು ಕೊಟ್ಟ ನೀಲಾ: ‘2–3 ತಿಂಗಳಿನಿಂದ ಮದ್ಯದ ಚಟಕ್ಕೆ ಬಿದ್ದಿದ್ದ ಪತಿ, ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಕೆಲಸದ ನಿಮಿತ್ತ ಮೈಸೂರಿಗೆ ಹೋಗಿಬರುವುದಾಗಿ ಹೇಳಿ ಅ.10ರ ಸಂಜೆ ಮನೆಯಿಂದ ಹೋದ ಪತಿ, ಒಂದು ದಿನ ಕಳೆದರೂ ಮನೆಗೆ ವಾಪಸಾಗಿಲ್ಲ. ಅವರನ್ನು ಪತ್ತೆ ಮಾಡಿಕೊಡಿ’ ಎಂದು ಕೋರಿ ನೀಲಾ ಅ.11ರ ಸಂಜೆ ರಾಜಗೋಪಾಲನಗರ ಠಾಣೆಗೆ ದೂರು ಕೊಟ್ಟಿದ್ದರು.

ಸಂದೇಶವೇ ಸುಳಿವು
‘ನೀಲಾ ಹಾಗೂ ಮಧುಸೂದನ್ ಅವರ ಮೊಬೈಲ್‌ಗಳಿಗೆ ಬಂದು ಹೋಗಿರುವ ಕರೆಗಳನ್ನು (ಸಿಡಿಆರ್) ಪರಿಶೀಲಿಸಿದೆವು. ಆಗ ನೀಲಾ–ಪ್ರದೀಪ್ ನಡುವೆ ಹೆಚ್ಚು ಸಂಭಾಷಣೆ ನಡೆಯುತ್ತಿರುವುದು ಗೊತ್ತಾಯಿತು. ಅಲ್ಲದೆ, ಅ.10ರ ಸಂಜೆ ನೀಲಾ ಅವರು ಪ್ರದೀಪ್‌ಗೆ ಕಳುಹಿಸಿದ್ದ ಸಂದೇಶ ಸಿಕ್ಕಿತು. ಈ ಸುಳಿವು ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡರು’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಬಿಡದಿಯಲ್ಲಿ ಶವ ಪತ್ತೆ
‘ನಿರಂತರವಾಗಿ ಸುರಿದ ಮಳೆಯಿಂದಾಗಿ ಮಧುಸೂದನ್ ಅವರ ಮೃತದೇಹ ಕಾಲುವೆಯಲ್ಲಿ ಕೊಚ್ಚಿ ಹೋಗಿತ್ತು. ಬಿಡದಿ ಠಾಣೆ ವ್ಯಾಪ್ತಿಯ ಕಾಲುವೆಯಲ್ಲಿ ಗುರುವಾರ ಬೆಳಿಗ್ಗೆ ಅವರ ಶವ ಪತ್ತೆಯಾಯಿತು. ಉಂಗುರ ಹಾಗೂ ಕೈಗೆ ಕಟ್ಟಿದ್ದ ದಾರದಿಂದ ಶವ ಗುರುತಿಸಲಾಯಿತು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT