ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ದೀಪಾವಳಿ ಪಾಡ್ಯ ಆಚರಣೆ

Last Updated 21 ಅಕ್ಟೋಬರ್ 2017, 6:39 IST
ಅಕ್ಷರ ಗಾತ್ರ

ಗದಗ: ಗದಗ–ಬೆಟಗೇರಿ ಅವಳಿ ನಗರದಲ್ಲಿ ದೀಪಾವಳಿ ಪಾಡ್ಯವನ್ನು ಶುಕ್ರವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬಾಳೆ ದಿಂಡು, ಕಬ್ಬು, ವಿವಿಧ ಪ್ರಕಾರದ ಹೂವುಗಳು ಹಾಗೂ ವಿದ್ಯುತ್ ದೀಪಗಳನ್ನು ಹಾಕಿ ಮಳಿಗೆ ಹಾಗೂ ಅಂಗಡಿಗಳನ್ನು ವರ್ತಕರು ಅಲಂಕರಿಸಿದರು. ಪಾಡ್ಯದ ಅಂಗವಾಗಿ ಲಕ್ಷ್ಮೀ ಪೂಜೆ ನೆರವೇರಿಸಿದರು.

ಸ್ಥಳೀಯ ಟಾಂಗಾಕೂಟ, ಮಹೇಂದ್ರಕರ ವೃತ್ತ, ಹಾತಲಗೇರಿ ನಾಕಾ, ಬ್ಯಾಂಕ್‌ ರಸ್ತೆ, ಮುಳಗುಂದ ನಾಕಾ ಸೇರಿ ವಿವಿಧೆಡೆ ವರ್ತಕರು ಬೆಳಿಗ್ಗೆಯಿಂದ ಸಂಜೆವರೆಗೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ಮಕ್ಕಳು, ಯುವಕರು, ಮಹಿಳೆಯರು ಹೊಸ ಬಟ್ಟೆ ಧರಿಸಿ ಲಕ್ಷ್ಮೀ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹೊಸ ವಾಹನ ಖರೀದಿಸಿದವರು ನಗರದಲ್ಲಿರುವ ವಿವಿಧ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆದರು. ವಾಹನಕ್ಕೆ ಅರ್ಚಕರಿಂದ ಪೂಜೆ ಮಾಡಿಸಿದರು.

ಎಮ್ಮೆಗಳ ಮೆರವಣಿಗೆ: ದೀಪಾವಳಿ ಪಾಡ್ಯಮಿ ಅಂಗವಾಗಿ ಗೌಳಿ ಸಮುದಾಯದವರು ತಮ್ಮ ಎಮ್ಮೆಗಳನ್ನು ಅಲಂಕರಿಸಿ, ಅವುಗಳಿಗೆ ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸಿದರು. ಎಮ್ಮೆಗಳನ್ನು ಸ್ವಚ್ಛಗೊಳಿಸಿದ ಗೌಳಿಗರು ವಿವಿಧ ಬಗೆಯ ವಿನ್ಯಾಸಗಳಲ್ಲಿ ಕೂದಲನ್ನು ಕತ್ತರಿಸಿ, ವಿವಿಧ ಬಣ್ಣ ಬಳಿದು ಅಲಂಕರಿಸಿದರು.

ಕೊರಳಲ್ಲಿ ಕವಡೆ ಸರ, ಕಾಲಿಗೆ ಗೆಜ್ಜೆ, ಕೋಡಿಗೆ ನವಿಲು ಗರಿ ಹಾಕಿ ನವ ವಧುವಿನಂತೆ ಸಿಂಗಾರ ಮಾಡಿದರು. ನಂತರ ನಗರದ ಹೊರಭಾಗದ ಅಡವಿಯಲ್ಲಿ ಸಮಾಜದ ಕುಲದೇವತೆ ಸಗರ ದೇವರನ್ನು ಪ್ರತಿಷ್ಠಾಪಿಸಿ, ತಮ್ಮ ಮನೆಯಲ್ಲಿ ಸಿಂಗರಿಸಿದ ಎಮ್ಮೆಗಳನ್ನು ಕರೆದುಕೊಂಡು ಹೋಗಿ ದೇವರಿಗೆ ಎಲೆ, ಅಡಿಕೆ ಸಮರ್ಪಿಸಿ, ಟೆಂಗಿನಕಾಯಿ ಒಡೆದು ಎಮ್ಮೆಗಳಿಂದ ದೀಡ ನಮಸ್ಕಾರ ಮಾಡಿಸಿದರು.

ಸಂಜೆ ವೇಳೆ ಗೌಳಿಗರು ಎಮ್ಮೆಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತೋಂಟದಾರ್ಯಮಠ, ಮೈಲಾರ ದೇವರ ಗುಡಿ, ದುರ್ಗಮ್ಮನ ಗುಡಿ, ಜೋಡಹನುಮಂತ ದೇವರ ಗುಡಿಗೆ ಹೋಗಿ ನಮಸ್ಕರಿಸಿದರು. ‘ಹಾಲು ಕೊಡುವ ಎಮ್ಮೆಗಳನ್ನು ಸಿಂಗರಿಸಿ ಮೆರವಣಿಗೆ ಮಾಡುವುದಕ್ಕೆ ತಲೆಮಾರುಗಳ ಇತಿಹಾಸವಿದೆ. ಹಾಲು ಕೊಡುವ ಎಮ್ಮೆಯಲ್ಲಿ ನಾವು ಮಹಾಲಕ್ಷ್ಮೀಯನ್ನು ಕಾಣುತ್ತೇವೆ’ ಎಂದು ಗೌಳಿ ಸಮಾಜದ ಮುಖಂಡ ಲಕ್ಷ್ಮಣ ದಹಿಹಂಡೆ ತಿಳಿಸಿದರು.

ಹಳ್ಳಿಗಳಲ್ಲಿ ಹಟ್ಟಿ ಹಬ್ಬದ ಸಂಭ್ರಮ ದೀಪಾವಳಿಯ ಪಾಡ್ಯದ ದಿನ ಹಸುವಿನ ಸಗಣಿಯಿಂದ ಪಾಂಡವರನ್ನು ತಯಾರಿಸಲಾಗುತ್ತದೆ. ಅವುಗಳನ್ನು ಜೋಳ, ನವಣಿ, ಸಜ್ಜಿ, ಎಕ್ಕೆಹೂವು, ಕೋಲಾಣಿ ಹೂವು, ಅರಿಷಿಣ, ಕುಂಕುಮ ಮೊದಲಾದವುಗಳಿಂದ ಅಲಂಕರಿಸಲಗುತ್ತದೆ. ಅಲಂಕೃತಗೊಂಡ ಪಾಂಡವರನ್ನು (ಗ್ರಾಮೀಣ ಭಾಗಗಳಲ್ಲಿ ಅವುಗಳಿಗೆ ಹಟ್ಟೆವ್ವ ಎಂದು ಕರೆಯುತ್ತಾರೆ) ಮನೆಯ ಸುತ್ತಲೂ ಇಡಲಾಗುತ್ತದೆ.

ನಂತರ ಅವುಗಳಿಗೆ ಹಾಲು, ಮೊಸರು, ತುಪ್ಪಗಳನ್ನು ಸುರಿದು ಅವುಗಳನ್ನು ಪೂಜಿಸಲಾಗುತ್ತದೆ. ಈ ಸಂದಭರ್ದಲ್ಲಿ ಮನೆಯ ತುಂಬ ಹೂವುಗಳನ್ನು ಚಲ್ಲಲಾಗುತ್ತದೆ. (ಹಳ್ಳಿಗಳಲ್ಲಿ ಅದಕ್ಕೆ ಹಟ್ಟಿ ಹಬ್ಬ ವೆಂತಲೂ ಕರೆಯುತ್ತಾರೆ) ಸಂಜೆ ಎಲ್ಲ ಪಾಂಡವರನ್ನು ಮನೆಯ ಮಾಳಿಗೆಯ ಕುಂಬಿಗಳ ಮೇಲಿಡಲಾಗುತ್ತದೆ. ಅಲ್ಲಿಗೆ ದೀಪಾವಳಿ ಹಬ್ಬ ಪೂರ್ಣಗೊಂಡಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT