ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ವಸ್ವ’ ಬಿಡುಗಡೆಗೆ ಸಿದ್ಧ

Last Updated 21 ಅಕ್ಟೋಬರ್ 2017, 11:40 IST
ಅಕ್ಷರ ಗಾತ್ರ

ಬದುಕಿನಲ್ಲಿ ಎಲ್ಲವೂ ನೀನೆ ಎಂಬ ಸೂಚಕವೇ ‘ಸರ್ವಸ್ವ’. ಸ್ನೇಹ, ಪ್ರೀತಿ ಹೆಚ್ಚಾದಾಗಲೂ ಈ ಪದ ವಿಶೇಷ ಮಹತ್ವ ಪಡೆಯುತ್ತದೆ. ಸ್ನೇಹ, ಪ್ರೀತಿಯ ಅಂಶವನ್ನೇ ಇಟ್ಟುಕೊಂಡು ನಿರ್ದೇಶಕ ಶ್ರೇಯಸ್‌ ಕಬಾಡಿ ‘ಸರ್ವಸ್ವ’ ಚಿತ್ರವನ್ನು ಹೆಣೆದಿದ್ದಾರೆ. ವೆನುಜುವೆಲದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿರುವ ಐದು ಸಿನಿಮಾಗಳ ಪೈಕಿ ಇದು ಕೂಡ ಒಂದಾಗಿದೆ.

‘ಇದು ಕೌಟುಂಬಿಕ ಸಿನಿಮಾ. ಇದನ್ನು ನೋಡಿದ ಪ್ರೇಕ್ಷಕರ ಜೀವನಶೈಲಿ ಬದಲಾಗಲಿದೆ. ಜೀವನದಲ್ಲಿ ಸ್ನೇಹ, ಪ್ರೀತಿಯೇ ಸರ್ವಸ್ವ. ಇದನ್ನೇ ಚಿತ್ರದಲ್ಲಿಯೂ ಕಟ್ಟಿಕೊಟ್ಟಿದ್ದೇನೆ’ ಎಂದರು ನಿರ್ದೇಶಕ ಶ್ರೇಯಸ್‌ ಕಬಾಡಿ.

ವಿ. ಶ್ರೀಧರ್‌ ಸಂಭ್ರಮ್‌ ಸಂಗೀತ ನೀಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈಗಾಗಲೇ, ಬಿಡುಗಡೆಗೊಂಡಿರುವ ‘ನೀ ನನ್ನ ಲೋಕ’ಕ್ಕೆ ಸಿಕ್ಕಿರುವ ಅಭೂತಪೂರ್ವ ಸ್ಪಂದನೆಗೆ ಚಿತ್ರತಂಡ ಖುಷಿಯಾಗಿದೆ. ‘ಒಳ್ಳೆಯ ಕಾನ್ಸೆಫ್ಟ್‌ ಇಟ್ಟುಕೊಂಡು ಚಿತ್ರ ನಿರ್ಮಿಸಲಾಗಿದೆ. ಹಿನ್ನೆಲೆ ಸಂಗೀತದಲ್ಲಿಯೂ ವಿಭಿನ್ನವಾದ ಸಂಗೀತದ ಪರಿಕರ ಬಳಸಲಾಗಿದೆ. ಪಾತ್ರಗಳಲ್ಲಿ ಹೊಸತನವಿರುವುದು ಚಿತ್ರದ ವಿಶೇಷ’ ಎಂದರು ಶ್ರೀಧರ್.

ನಟ ತಿಲಕ್‌, ‘ಚಿತ್ರದಲ್ಲಿ ನನ್ನದು ಭಿನ್ನವಾದ ಪಾತ್ರ. ಕಪ್ಪು–ಬಿಳಿಪಿನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರತಂಡದ ಎಲ್ಲರೂ ಹೊಸಬರು. ಚಿತ್ರ ನೋಡಿದರಷ್ಟೇ ನನ್ನ ಪಾತ್ರದ ಮಹತ್ವ ಅರಿಯವಾಗುತ್ತದೆ’ ಎಂದರು.

ಚಿತ್ರದಲ್ಲಿರುವ ಐಟಂ ಸಾಂಗ್‌ ಅವರಿಗೆ ಇಷ್ಟವಾಗಿದೆಯಂತೆ. ‘ಇಲ್ಲಿಯವರೆಗಿನ ಎಲ್ಲ ಐಟಂ ಸಾಂಗ್‌ಗಳಿಗಿಂತಲೂ ಇದು ಭಿನ್ನವಾಗಿದೆ. ಈ ಹಾಡಿನ ಸೌಂಡಿಂಗ್‌ ಮತ್ತು ಮೇಕಿಂಗ್‌ನಲ್ಲಿ ವಿಶೇಷತೆ ಇದೆ’ ಎಂದ ಅವರು, ಶೀಘ್ರವೇ ಈ ಹಾಡನ್ನೂ ಬಿಡುಗಡೆ ಮಾಡಿ ಎಂದು ಸಂಗೀತ ನಿರ್ದೇಶಕರಿಗೆ ಸುದ್ದಿಗೋಷ್ಠಿಯಲ್ಲಿ ದುಂಬಾಲು ಬಿದ್ದರು.

ನಟಿ ರೇಣುಷಾ, ‘ನನ್ನದು ದೃಷ್ಟಿಮಾಂದ್ಯ ಹುಡುಗಿಯ ಪಾತ್ರ. ಈ ಪಾತ್ರದ ಅಭಿನಯ ಮೊದಲಿಗೆ ಕಷ್ಟವಾಗಿತ್ತು. ಕಷ್ಟದ ಪಾತ್ರವೊಂದರನ್ನು ಸಮರ್ಥವಾಗಿ ನಿಭಾಯಿಸಿದ ಖುಷಿಯಿದೆ’ ಎಂದರು.

ನಟಿ ಸಾತ್ವಿಕಾ, ‘ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ. ಆದರ್ಶ ಹುಡುಗಿಯ ಪಾತ್ರ’ ಎಂದಷ್ಟೇ ಹೇಳಿದರು.

ಭೂಪಿಂದರ್‌ಪಾಲ್‌ ಸಿಂಗ್‌ ರೈನಾ ಅವರ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ, ವಿಮಲ್‌ ಮತ್ತು ವಾಮ್ದೇವ್‌ ಬಂಡವಾಳ ಹೂಡಿದ್ದಾರೆ. ಅಕ್ಟೋಬರ್‌ 27ರಂದು ಈ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT