ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವ ಮಾನವರ ದಾನವ ಲೋಕ

Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಆಧುನಿಕ ಜಗತ್ತಿನಲ್ಲಿ ಜ್ಞಾನ- ವಿಜ್ಞಾನ- ತಂತ್ರಜ್ಞಾನ ಅದೆಷ್ಟು ಬೆಳೆದರೂ ಕೆಲವರ್ಗದ ಜನರ ಅಂಧಶ್ರದ್ಧೆ ಮತ್ತು ಅರ್ಥರಹಿತ ಆಚರಣೆಗಳು ಮಾತ್ರ ಬದಲಾಗಿಲ್ಲ ಎನ್ನುವುದಕ್ಕೆ ಇಂದಿಗೂ ನಾವು ಕಾಣುವ ದೇವಮಾನವ ಎನ್ನುವವರ  ಕಾರ್ಯಾಚರಣೆಗಳು ಸಾಕ್ಷಿಯಾಗಿವೆ.

ಎಲ್ಲ ಜೀವಜಂತುಗಳಂತೆ ಸಹಜವಾಗಿಯೇ ಹುಟ್ಟಿ, ಯಾವುದೋ ಅನೂಹ್ಯ ಅಥವಾ ಅಸಂಭವನೀಯ ಘಟನೆಯ ನೆಪದಲ್ಲಿ ದೇವಮಾನವರಾಗಿ ಆರಾಧಿಸಿಕೊಳ್ಳುವ ವ್ಯಕ್ತಿಗಳ ಮತ್ತು ಸಂಸ್ಥೆಗಳ ನೈಜ ಬಣ್ಣ ಬಯಲಾಗುವ ಘಟನೆಗಳು ಇತ್ತೀಚೆಗೆ ಒಂದಾದ ನಂತರ ಒಂದು ಹೊರಬೀಳುತ್ತಿವೆ. ‘ಸತ್ಯ’ವನ್ನು ಅದೆಷ್ಟೇ ಅದುಮಿಟ್ಟರೂ ಒಂದಲ್ಲಾ ಒಂದು ರೀತಿಯಲ್ಲಿ ಅದು ತನ್ನ ಇರುವಿಕೆಯನ್ನು ಹೊರಹಾಕದೇ ಇರಲಾರದು ಎನ್ನುವುದಕ್ಕೆ ಇವು ಸ್ಪಷ್ಟ ನಿದರ್ಶನಗಳಾಗಿವೆ.

ವ್ಯಕ್ತಿಯೊಬ್ಬ ಮತ್ತೊಬ್ಬನನ್ನು ಅಥವಾ ಎಲ್ಲರನ್ನೂ ಒಂದು ಸಾರಿ ಮೂರ್ಖರನ್ನಾಗಿಸಬಹುದಲ್ಲದೆ ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ ಎನ್ನುವ ತತ್ತ್ವಜ್ಞಾನಿಯೊಬ್ಬರ ಮಾತನ್ನು ಒಪ್ಪಬಹುದಾದರೂ ಇದಕ್ಕೆ ಅಪವಾದವೆಂಬಂತೆ, ದೇವಮಾನವರೆಂದು ಕರೆದುಕೊಂಡ ಅಥವಾ ಕರೆಯಿಸಿಕೊಂಡವರು ಅವರ ದೇವತ್ವವನ್ನು ಪ್ರಭಾವೀಕರಿಸಿಕೊಂಡಂದಿನಿಂದ ಅವರ ಆರಾಧಕರನ್ನು ತಡೆಯಿಲ್ಲದೆ ಮೂರ್ಖರನ್ನಾಗಿಸಿರುವುದನ್ನು ಕಂಡಿದ್ದೇ.

ಅಷ್ಟಕ್ಕೂ, ಈ ದೇವಮಾನವರೆಂದರೆ ಯಾರು? ದೇವರ ಅಸ್ತಿತ್ವದ ಬಗೆಗಿನ ನಂಬಿಕೆಯೇ ಅಸ್ಪಷ್ಟವಾಗಿರುವಾಗ ಸಹಜ ಮನುಷ್ಯರಿಗಿಲ್ಲದ ಅತಿಮಾನುಷ ಶಕ್ತಿ ಇವರಿಗೆಲ್ಲಿಂದ ಬಂತು ಎನ್ನುವ ಪ್ರಶ್ನೆ ಮುಂದಿಟ್ಟುಕೊಂಡು ಇವರ ಒಳ-ಹೊರಗುಗಳನ್ನು ಶೋಧಿಸಹೋದರೆ ಸಿಗಬಹುದಾದ ಉತ್ತರಕ್ಕೆ ಸುಂದರ ಉಪಮೆಯೊಂದು ಪಂಚತಂತ್ರದ, ‘ಬ್ಲ್ಯೂಜಾಕಲ್’, ಎನ್ನುವ ಕಥೆಯಲ್ಲಿ ಸಿಗುತ್ತದೆ.

‘ಒಮ್ಮೆ ನರಿಯೊಂದು ಕಾಡಿನ ಪಕ್ಕದ ಊರೊಂದಕ್ಕೆ ಆಹಾರ ಹುಡುಕಿಕೊಂಡು ಹೋಯಿತು. ಅಲ್ಲೆಲ್ಲೋ ಬಣ್ಣಗಾರನೊಬ್ಬ ನೀಲಿಬಣ್ಣದ ಪಿಪಾಯಿಗಳನ್ನು ಇಟ್ಟಿದ್ದ. ಆಕಸ್ಮಾತ್‌ ಆಗಿ ಆ ನರಿ ಅದರೊಳಗೆ ಬಿದ್ದು ಮುಳುಗೆದ್ದಿತು. ಮೈಕೊಡವಿಕೊಂಡು ನೋಡಿದಾಗ ತನಗಂಟಿದ ನೀಲಿಬಣ್ಣದ ಬಗ್ಗೆ ತಿಳಿಯಿತು. ಬೇರೆ ಯಾರಾದರೂ ಆಗಿದ್ದರೆ ತನ್ನ ಅಸಹಜ ಸ್ಥಿತಿ ಬಗ್ಗೆ ಆತಂಕ, ಅಂಜಿಕೆಪಡುತ್ತಿದ್ದರೇನೋ. ಆದರೆ, ಎಷ್ಟೇ ಆದರೂ ಅದು ನರಿ ತಾನೆ? ಕಾಡಿಗೆ ಓಡಿತು. ಅಲ್ಲಿದ್ದ ಸಮಸ್ತ ಪ್ರಾಣಿಗಳಿಗೆ ತಾನು ದೇವಲೋಕದಿಂದ ದೇವರು ಕಳುಹಿಸಿದ ಕಾಡಿನ ರಾಜನೆಂದೂ, ತನ್ನ ಅಣತಿಯಂತೆಯೇ ಎಲ್ಲರ ಚಟುವಟಿಕೆಗಳು ನಡೆಯಬೇಕೆಂದೂ ತಾಕೀತು ಮಾಡಿತು. ತನ್ನನ್ನು ಗುರುತು  ಹಿಡಿಯಬಹುದಾದ ತನ್ನವರನ್ನು ದೂರ ಇಟ್ಟಿತು. ಹೀಗೆ ಅದರ ಅಂಧ ದರ್ಬಾರು ನಡೆಯುತ್ತಿರುವಾಗ ಒಂದು ದಿನ ಮಳೆ ಹೊಯ್ದು ಅದರ ಮೈಗಂಟಿದ ನೀಲಿಬಣ್ಣ ನೀರಾಗಿ ಹರಿದು ನಿಜ ಬಯಲಾಯಿತು. ಕೂಡಲೇ ಸಿಟ್ಟಿಗೆದ್ದ ಇತರೆ ಪ್ರಾಣಿಗಳು ಅದನ್ನು ಅಟ್ಟಿಸಿಕೊಂಡು ಹೋಗಿ ಕೊಂದು ಹಾಕಿದವು!

ಇಂದು ನಮ್ಮ ಕಣ್ಣೆದುರೇ ಹೀಗೆ ಹಾಡಹಗಲೇ ಮುಗ್ಧಜನರನ್ನು ವಂಚಿಸಿ ಮಿಂಚುವ ದೇವಮಾನವರಿಗೆ ಅವರ ನಿಜ ಬಣ್ಣ ಬಯಲಾಗಬಹುದಾದುದರ ಬಗ್ಗೆ ಅರಿವು ಕೂಡ ಇದ್ದಂತಿಲ್ಲ. ಇದ್ದರೂ ಅದನ್ನು ನಿಭಾಯಿಸಿಕೊಳ್ಳುವ ಕೆಟ್ಟ ಧೈರ್ಯ ಇದ್ದಿರಬಹುದು. ‘ನಾವು ನಿಮ್ಮನ್ನು ವಂಚಿಸುತ್ತೇವೆ. ನೀವು ಅದನ್ನು ಒಪ್ಪಿ ಆನಂದಿಸುತ್ತೀರಿ’ ಎಂದು ಮನದಲ್ಲೇ ಅಂದುಕೊಂಡು ಎಗ್ಗಿಲ್ಲದೆ ಅಂದೇರಿ ಸಾಮ್ರಾಜ್ಯ ನಡೆಸುವ ಇವರ ಆರಾಧಕರುಗಳಲ್ಲಿ ಸುಶಿಕ್ಷಿತರೂ, ಪದವೀಧರರೂ ಇರುವುದನ್ನು ನೋಡಿದರೆ, ನಮ್ಮ ಶಿಕ್ಷಣ ವ್ಯವಸ್ಥೆಯೊಳಗಿನ ವೈಜ್ಞಾನಿಕ, ವೈಚಾರಿಕ ಚಿಂತನೆಗಳ ಬಗ್ಗೆ ಸಂದೇಹ ಮೂಡದಿರಲಾರದು.

ಒಬ್ಬೊಬ್ಬ ದೇವಮಾನವರ ಸುತ್ತ ಒಂದೊಂದು ಕಾರ್ಪೋರೇಟ್ ವಲಯದ ಜಾಗತಿಕ ಮಾದರಿಯ ವ್ಯವಸ್ಥೆ. ನೈತಿಕ ಬದುಕಿಗೆ ನೆಲೆಗಟ್ಟಾಗಬೇಕಿದ್ದ ಆಧ್ಯಾತ್ಮಿಕತೆ ಮಾರುಕಟ್ಟೆಯ ಸರಕಾಗಿದೆ. ಆ ಸರಕು ಮತ್ತು ಸೇವೆಗಳ ಅನುಭೋಗ ಸಂಸ್ಕೃತಿಯೇ ಶ್ರೇಷ್ಠ ಬದುಕಿನ ಕಲೆಯಾಗಿದೆ. ಇದು ನಿಜಕ್ಕೂ ಶೋಚನೀಯ. ಇಲ್ಲಿ ಜ್ಞಾನ ಎಂದರೆ ಮುಗ್ಧ ಜನರನ್ನು ಮತ್ತು ಬದುಕಿನ ಸಂಕಷ್ಟಗಳಲ್ಲಿ ನೊಂದು, ಬೆಂದವರನ್ನು ವಂಚಿಸುವ ವ್ಯವಸ್ಥಿತ ಕಲಾ ಕೌಶಲ. ಬಹುಸಂಖ್ಯೆಯ ಜನರ ನೋವು, ನಂಬಿಕೆ ಮತ್ತು ಭಯಗಳು ಕೆಲವೇ ಜನರ ಮೋಜು, ಮಜಗಳಾಗುತ್ತಿವೆ. ಮಾರಾಟ ಮತ್ತು ವಿಕ್ರಯ ಶಾಸ್ತ್ರಗಳ ಸರ್ವ ಸಂಶೋಧನಾ ವಿಧಾನ ಮಾದರಿಗಳು ಇಲ್ಲಿ ಬಳಕೆಯಾಗುತ್ತಿವೆ. ವಿಚಾರವಂತರ, ಪ್ರಜ್ಞಾವಂತರ ಮತ್ತು ಸಾಮಾಜಿಕ ಕಾಳಜಿಯ ಜನರ ಅನಾದರ ಅಥವಾ ನಿರ್ಲಕ್ಷ್ಯ ಇದಕ್ಕೆ ತುಪ್ಪ ಸುರಿದಂತಿವೆ. ಇದು ಹೀಗೆ ಮುಂದುವರಿದರೆ ಈ ದೇಶದ ಜನರನ್ನು ಯಾರು ಯಾವಾಗ ಬೇಕಾದರೂ ಮೂರ್ಖರನ್ನಾಗಿಸಬಹುದು, ವಂಚಿಸಬಹುದು, ವಶೀಕರಿಸಿಕೊಳ್ಳಬಹುದೆಂಬ ಭಾವನೆ ಜಾಗತೀಕರಣಗೊಂಡರೆ ಆಶ್ಚರ್ಯಪಡಬೇಕಿಲ್ಲ.

ಇತ್ತೀಚೆಗೆ ನಾನು ಈ ಹಿಂದೆ ಕಂಡುಂಡು ನೋಡಿದ ಹುಡುಗನೊಬ್ಬ ಭೇಟಿಯಾದ. ಸಾಧಾರಣ ವ್ಯಕ್ತಿತ್ವದ ಮತ್ತು ಪದವಿಯಲ್ಲಿ ನಪಾಸಾದ ಆ ಹುಡುಗನ ಕಾಸ್ಟ್ಯೂಮ್‌ ಬದಲಾಗಿತ್ತು. ಕೈಯಲ್ಲಿ ಎಂಟು ಬೆರಳಿಗೆ ಬಂಗಾರದ ಉಂಗುರಗಳು! ಕೊರಳಲ್ಲಿ ದಪ್ಪ ಚೈನು. ಹಣೆಯಲ್ಲಿ ತಕ್ಕಂತಹ ಮೇಕಪ್‌. ಹೆಗಲ ಮೇಲೊಂದು ಜರಿ ಶಾಲು. ‘ಏನಪ್ಪಾ, ಈ ಡ್ರೆಸ್ಸು?‘ ಎಂದೆ. ಆ ಹುಡುಗ ಹೇಳಿದ, ‘ನೋಡಿ ಸರ್, ಕೆಟ್ಟು ಪಟ್ಟಣ ಸೇರು ಎನ್ನುವುದು ಹಳೇಮಾತು. ನಾನು ಕೆಡದೇ ಪಟ್ಟಣ ಅಲ್ಲ ನಗರಕ್ಕೆ ಬಂದೆ. ನಿಮಗೇ ಗೊತ್ತಿದ್ದಂತೆ ಆವತ್ತು ಒಂದಿಷ್ಟು ಜ್ಯೋತಿಷ, ಭವಿಷ್ಯ, ಶಾಸ್ತ್ರ ಅಂತೆಲ್ಲಾ ಹೇಳ್ತಿದ್ನಲ್ಲಾ ಅದು ಇಲ್ಲಿ ಫಲ ಕೊಟ್ಟಿದೆ. ಶುಭಗಳಿಗೆ. ಈ ಸುದ್ದಿವಾಹಿನಿಗಳಲ್ಲಿ ನೀವು ನೋಡಿರ‍್ಬೇಕಲ್ಲಾ? ನನ್ನದೇ ಒಂದು ಟಿಆರ್‌ಪಿ ವಲಯ ಸೃಷ್ಟಿಯಾಗಿದೆ. ಲೈಫ್ ಚೆನ್ನಾಗಿದೆ. ಮತ್ಯಾವಗ್ಲಾದ್ರೂ ಭೇಟಿಯಾಗೋಣ. ಈಗ ರೆಕಾರ್ಡಿಂಗ್ ಇದೆ’ ಎಂದು ನನ್ನ ಕೈಗೆ ಆತನ ವಿಜಿಟಿಂಗ್ ಕಾರ್ಡ್‌ ಇಟ್ಟು ಮರೆಯಾದ. ಅಷ್ಟೊಂದು ಮೌಢ್ಯ ನಮ್ಮ ಶಿಕ್ಷಿತ ಅಥವಾ ಅಶಿಕ್ಷಿತ ಜನರ ವಲಯದಲ್ಲಿರುವುದು ಸತ್ಯ. ಈ ದೇವಮಾನವರುಗಳ ಕರ್ಮಠತನಗಳನ್ನು ಕಂಕುಳಲ್ಲಿಟ್ಟುಕೊಂಡು ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಮುಂದಿರುತ್ತೇವೆ ಎಂದು ಯಾರಾದರೂ ನಂಬಿದ್ದರೆ ಅದು ಹಾಸ್ಯಾಸ್ಪದ. ಇಂಥ ಅತಿಮಾನುಷ ವ್ಯಕ್ತಿಗಳ ಗುಂಪುಗಳಲ್ಲಿ ಪಂಚಾಂಗ ಪ್ರವೀಣರಿದ್ದಾರೆ. ಜ್ಯೋತಿಷಿಗಳಿದ್ದಾರೆ. ಬೂದಿ ಬಾಬಾಗಳಿದ್ದಾರೆ. ಹೊತ್ತಿಗೆ ಪಂಡಿತರಿದ್ದಾರೆ. ಅಪ್ಪಿ ಬೆರಗುಗೊಳಿಸುವ ಮೋಡಿಕಾರರಿದ್ದಾರೆ. ಹೊಟ್ಟೆಯೊಳಗೆ (ಜೇಬೊಳಗೆ) ಕೈಯಿಟ್ಟು ಕಾಯಿಲೆ ವಾಸಿ ಮಾಡುವ ಕೈಚಳಕದವರಿದ್ದಾರೆ. ಧ್ಯಾನ, ಸಿದ್ಧಿ ಸಮಾಧಿಗಳ ನೆಪದಲ್ಲಿ ಜನರನ್ನು ಮರುಳು ಮಾಡುವ ಕೇಶಋಷಿಗಳಿದ್ದಾರೆ.

ವೇದ, ವೈದ್ಯಗಳ ಹೆಸರಿನಲ್ಲಿ ಸಮೂಹ ಸನ್ನಿಗೊಳಿಸಿ ಜನರನ್ನು ಸುಲಿಯುವ ನುರಿತ ಪಟುಗಳಿದ್ದಾರೆ. ಯೋಗ-ಭೋಗಗಳ ಹೆಸರಿನಲ್ಲಿ ಕಪ್ಪೆಯಂತೆ ಕುಣಿಸುವ ಸರ್ಕಸ್ ರಿಂಗ್‌ಮಾಸ್ಟರ್‌ಗಳಿದ್ದಾರೆ. ಭಕ್ತರ ತಲೆಯ ಮೇಲೆ ಕೈಯನ್ನೋ, ಕಾಲನ್ನೋ ಇಟ್ಟು ದೀಕ್ಷಾವಿಧಿಗೆಯ್ಯುವವರಿದ್ದಾರೆ. ಸೂಕ್ಷ್ಮವಾಗಿ ಅವಲೋಕಿಸುವುದಿರಲಿ, ಹೊರನೋಟಕ್ಕೆ ನೋಡಿದರೆ ಸಾಕು ಸತ್ಯ ಸಾಬೀತಾಗುತ್ತದೆ. ಈ ಜನರ ಸುತ್ತ ಅವರುಗಳವೇ ಆದ ವಿಶೇಷ ಅಡ್ಡೆಗಳು ನಿರ್ಮಾಣವಾಗಿವೆ. ಇಲ್ಲಿ ದುಡಿಯುವ ವರ್ಗದಲ್ಲಿ ಅಬಾಲ ವೃದ್ಧರಿದ್ದಾರೆ. ಸಾಹಿತಿ, ಸಲಹೆಗಾರರಿದ್ದಾರೆ, ಅಧಿಕಾರಸ್ಥ ಅಥವಾ ಅಧಿಕಾರರಹಿತ ರಾಜಕಾರಣಿಗಳಿದ್ದಾರೆ. ಇವರುಗಳ ಅಶುದ್ಧ ಕೂಟವೇ ಶುದ್ಧ, ಮುಗ್ಧ ಜನರನ್ನು ಬಲೆ-ಬುಟ್ಟಿಗೆ ಹಾಕಿಕೊಳ್ಳಲು ರಚಿಸಿರುವ ಚಕ್ರವ್ಯೂಹ. ಒಟ್ಟಿನಲ್ಲಿ, ಈ ಸ್ವಯಂಘೋಷಿತ, ಪರಪೋಷಿತ ಮತ್ತು ಕೆಲವೊಮ್ಮೆ ಅಘೋಷಿತವೂ ಆದ ದೇವಮಾನವರ ಸುತ್ತ ವಿಶಿಷ್ಟ ಉದ್ಯೋಗ ವ್ಯವಸ್ಥೆಯೊಂದು ನಿರ್ಮಾಣವಾಗಿರುತ್ತದೆ.

ಇದರ ಒಳಹೊಕ್ಕು ಆಪ್ತವಾಗಿ ವಿಚಾರಿಸಿದರೆ ಹೊರಬರುವ ಸತ್ಯವೇ ಬೇರೆ. ಆರ್ಥಿಕ ಬದುಕಿನ ಅನಿವಾರ್ಯತೆಯಿಂದ ಉದ್ಯೋಗ ಭದ್ರತೆಯ ಭರವಸೆ ಹೊತ್ತು ಅವರು ಕೆಲಸ ನಿರ್ವಹಿಸುತ್ತಿರುವುದು ಕಟುವಾಸ್ತವವೇ ಹೊರತು, ಈ ದೇವ ಮಾನವರಲ್ಲಿರುವ ದಿವ್ಯ ದೈವಿಕ ಶಕ್ತಿಯ ಉಪಾಸನೆಗಾಗಿ ಅಲ್ಲ. ಅರ್ಥವ್ಯವಸ್ಥೆಯೊಂದರೊಳಗಿನ ಅಭಿವೃದ್ಧಿಯ ಘನತೆ ಅದು ಸೃಷ್ಟಿಸುವ ಉದ್ಯೋಗಾವಕಾಶಗಳ ಸ್ವರೂಪದಲ್ಲಿರುತ್ತದೆ ಎನ್ನುವುದನ್ನು ಯಾರೂ ಮರೆಯಬಾರದು. ಇಂಥ ಉದ್ಯೋಗಗಳ ಸೃಷ್ಟಿಯಿಂದಲೇ ಅತ್ಯಂತ ಶಕ್ತಿಯುತವಾದ ನಮ್ಮ ಯುವಜನರನ್ನು ಸೆಳೆಯಬಹುದೆನ್ನುವುದಾದರೆ ಅದನ್ನೊಂದು ಮಾಫಿಯಾ ಗುಂಪಿಗೆ ಹೋಲಿಸುವುದು ತಪ್ಪಲ್ಲ. ಆಳುವ ವರ್ಗ ಅಥವಾ ಆಡಳಿತ ನಡೆಸುವ ಸರ್ಕಾರಗಳ ಪ್ರತ್ಯಕ್ಷ ಅಥವಾ ಪರೋಕ್ಷ ಕೃಪಾಪೋಷಣೆ ಇಲ್ಲದೆ ಇಂಥ ಶೋಷಣೆ ನಡೆಯುವುದು ಸಾಧ್ಯವೆ?

ಇಲ್ಲ, ನಿಜಕ್ಕೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಬಹುದಾದರೂ ಸಾಕ್ಷೀಕರಿಸಿ ನಿರೂಪಿಸಲು ಇವುಗಳನ್ನು ವಿರೋಧಿಸುವ ನಿಲುವು-ನೆಲೆಗಳ ಜನರಿಗೂ ಸಾಧ್ಯವಾಗುತ್ತಿಲ್ಲ. ಅಲ್ಲೆಲ್ಲೋ ವೈಯಕ್ತಿಕವಾಗಿ ದನಿ ಎತ್ತಿದ ವಿಚಾರವಂತರು ಗುಂಡಿಗೆ ಬಲಿಯಾಗುತ್ತಿರುವುದಂತೂ ಸಜ್ಜನರನ್ನು ಧೃತಿಗೆಡಿಸುತ್ತಿದೆ. ಇದಕ್ಕೆ ತಡೆಯೇ ಇಲ್ಲವೆ? ಇರದೆ ಇರಲು ಸಾಧ್ಯವೇ ಇಲ್ಲ. ಯಾವಾಗ ಎನ್ನುವುದಕ್ಕೆ, ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್. ಪಟೇಲರ ತಮ್ಮ ಎಸ್.ಎಚ್. ಪಟೇಲರು ಹೇಳಿದ್ದ ಘಟನೆಯೊಂದು ನೆನಪಾಗುತ್ತದೆ.

ಜೆ.ಎಚ್. ಪಟೇಲರು ಒಮ್ಮೆ ತಮ್ಮ ಚೇಂಬರ್‌ನಿಂದ ಹೊರಬಂದು ಲಿಫ್ಟ್ ಒಳಗೆ ಪ್ರವೇಶಿಸುತ್ತಿರುವಾಗ ಓಡಿಬಂದ ಕಚೇರಿ ಪರಿಚಾರಕ, ‘ಸರ್, ತಮ್ಮನ್ನು ನೋಡಲು ಶನಿದೇವರ ಪುತ್ರ ಬಂದಿದ್ದಾರೆ. ಬೇಗ ಬನ್ನಿ’ ಎಂದ. ಅವರು ಆಯ್ತು ಬರಹೇಳು ಎಂದರು. ಅವರೆದುರಿಗೆ ಪ್ರತ್ಯಕ್ಷನಾದ ಕರಿಬಟ್ಟೆಯ, ಕರೀಮೈಯ, ಅರಿಸಿನ-ಕುಂಕುಮ ಪೂಸಿತ ವ್ಯಕ್ತಿಯನ್ನು ಅಪಾದಮಸ್ತಕ ಗಮನಿಸಿ, ಆತನ ಹೆಗಲಮೇಲೆ ಕೈಯಿಟ್ಟು, ‘ನಿಮ್ಮ ಡ್ಯಾಡಿಗೆ ನಾನು ಕೇಳಿದೆ ಎಂದು ಹೇಳಪ್ಪಾ...’ ಎಂದು ಹೇಳಿ ಲಿಫ್ಟ್‌ನೊಳಗೆ ನಡೆದರಂತೆ. ಇಷ್ಟು ಚೆನ್ನಾಗಿ ಈ ದೇವಮಾನವರೊಬ್ಬರಿಗೂ ಹೇಳುವ ಜನ ತಯಾರಾದರೆ ಮಾನವೀಯ ನೆಲೆಯ, ಅಂಧ ಶೋಷಣೆರಹಿತವಾದ ನಿಜ ಸಮಾಜ ನಿರ್ಮಾಣದ ಕನಸು ನನಸಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT