ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರ್ ಟೇಕರ್ ವಿಷ್ಣು

ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ
Last Updated 21 ಅಕ್ಟೋಬರ್ 2017, 20:09 IST
ಅಕ್ಷರ ಗಾತ್ರ

–ಪ್ರಕಾಶ್‌ ಕಾಕಾಲ್‌

**

ಟ್ರಿಣ್... ಟ್ರಿಣ್... ಟ್ರಿಣ್... ಟ್ರಿಣ್... ಲ್ಯಾಂಡ್‌ಲೈನ್ ರಿಂಗಣಿಸುತ್ತಿದ್ದಂತೆ ಮನೆಯ ಮಧ್ಯದ ಹಜಾರವನ್ನು ಮೊಳಕಾಲು ನೆಲಕ್ಕೂರಿ ತಿಕ್ಕಿ ತಿಕ್ಕಿ ಒರೆಸುತ್ತಿದ್ದ ವಿಷ್ಣು, ಒರೆಸು ಬಟ್ಟೆಯನ್ನು ಕೈಬಿಟ್ಟು ಅಂಗೈಯನ್ನು ಉಟ್ಟಿದ್ದ ಲುಂಗಿಗೇ ಒರೆಸಿಕೊಂಡ. ಗಡಿಬಿಡಿಯಲ್ಲಿ ಫೋನ್ ಎತ್ತಬೇಕೆಂದಿದ್ದವನ ಮನಸ್ಸು ಬದಲಾಗಿ, ಮೊಳಕಾಲ ಮೇಲೆ ನೆಟ್ಟಗೆ ನಿಂತಿದ್ದ ದೇಹ ಮತ್ತೆ ಬಾಗಿ ಒರೆಸು ಬಟ್ಟೆಯನ್ನು ಕೈಗೆತ್ತಿಕೊಂಡಿತ್ತು.  ಫೋನ್ ತನ್ನ ರಿಂಗಣವನ್ನು ನಿಲ್ಲಿಸಿತ್ತು... ಮತ್ತೆ ಲ್ಯಾಂಡ್ ಲೈನ್ ಗೆ ಫೋನ್ ಬರುತ್ತದೆ... ಆಗಲೂ ತಾನು ಫೋನ್ ಎತ್ತಬಾರದು- ಎನ್ನುವ ಗಟ್ಟಿ ತೀರ್ಮಾನ ಮಾಡಿದ್ದ. ಮತ್ತೆ ಇದ್ದೇ ಇದೆಯಲ್ಲ...ತಾನು ಮೊಬೈಲ್‌ನಿಂದ ಮಿಸ್ಡ್‌ ಕಾಲ್ ಕೊಡುವುದು...ಅವರು ಮೊಬೈಲಿಗೆ ಫೋನ್ ಮಾಡುವುದು...ಅಷ್ಟಕ್ಕೂ ನನ್ನಲ್ಲಿ ಪ್ರತಿದಿನವೂ ಮಾತನಾಡಲು ಏನಿದೆ ಅವರಿಗೆ? ಅದೇ ರಾಗ ಅದೇ ಹಾಡು...‘ಮನೆ ಎಲ್ಲಾ ಕ್ಲೀನಾಗಿದೆಯಾ ವಿಷ್ಣು?..ಗಿಡಕ್ಕೆ ನೀರು ಹಾಕ್ತಾ ಇದೀರಾ? ಕಸದ ಗಾಡಿ ನನ್ ಮನೆ ಕಂಪೌಂಡ್ ಹತ್ತಿರ ನಿಲ್ಲಿಸೋಕೆ ಬಿಡಬೇಡಿ ವಿಷ್ಣು...ಮನೆ ಎದುರಿನ ಮರಕ್ಕೆ ಆ ಹಕ್ಕಿಗಳು ದಿನಾಲು ಬರುತಾ ಇವೆಯಾ...ಹೊಂಗೆ ಗಿಡ ಹಸು ತಿನ್ನದ ಹಾಗೆ ನೋಡ್ಕಳ್ಳಿ ವಿಷ್ಣು... ದಾಸವಾಳ ಹೂಬಿಡ್ತಾ ಇದೆಯಾ? ಅದನ್ನ ಯಾರಿಗೂ ಕೀಳಕ್ಕೆ ಬಿಡಬೇಡಿ...ಅದು ಗಿಡದಲ್ಲಿದ್ರೆ ಚೆಂದ... ಎದುರುಮನೆ ಶೆಟ್ರ ಹೆಂಡ್ತಿ ಬೆಳಿಗ್ಗೆ ಬೆಳಿಗ್ಗೆ ಎದ್ದು ನನ್ ಮನೆ ಕಂಪೌಂಡಿನಲ್ಲಿರೋ ಹೂ ಕೀಳ್ತಾಳೆ. ಕಳ್ರು... ಕಳ್ರು..ಈ ಇಂಡಿಯನ್ಸ್...ಅವರ ಮನೆ ಹೂವು ಹಾಗೇ ಗಿಡದಲ್ಲಿ ಇರಬೇಕು, ಬೆಳಿಗ್ಗೆ ಬೆಳಿಗ್ಗೆ ಎದ್ದು  ಬೇರೆಯವರ ಮನೆ ಹೂ ಕುಯ್ಯೋದು. ಹೋಗ್ಲಿ ಬಿಡಿ, ನೀವು ಅವರಿಗೆ ಏನೂ ಹೇಳ್ಬೇಡಿ...ಶೆಟ್ರು ನನಗೆ ತುಂಬಾ ಬೇಕಾದವರು... ನಾನು ಅವರಿಗೆ ಫೋನ್ ಮಾಡ್ತಾ ಇರ್ತೇನೆ, ಅವರು ನಮ್ಮನೆಗೆ ಯಾರ್ ಬಂದ್ರು ಯಾರ್ ಹೋದ್ರು ಎಲ್ಲಾ ನನಗೆ ಹೇಳ್ತಾರೆ ವಿಷ್ಣು- ಹ್ಞಾಂ... ಪಕ್ಕದ ಮನೆ ಸಾಬ್ರೂ ನನ್ ಜೊತೆ ಫೋನ್‌ನಲ್ಲಿ ಮಾತಾಡ್ತಿರ‍್ತಾರೆ...ಅವ್ರು ತುಂಬಾ ಒಳ್ಳೆಯವರು, ನನ್ ಮನೆ ಹೂ ಕುಯ್ಯೋಲ್ಲ ಅವ್ರು…

ಅವರಾಡುವ ಮಾತುಗಳ ಝಲಕ್ ಮನಸ್ಸಿನಲ್ಲಿ ಹರಿದಾಡುತ್ತಿರುವಾಗಲೇ ಮನೆಯನ್ನು ಪೂರ್ತಿ ಒರೆಸಿಯಾಗಿತ್ತು. ಇಡೀ ಮನೆಯ ಮೂಲೆ ಮೂಲೆಗೂ ಕಣ್ಣಾಡಿಸಿ, ಚೊಕ್ಕಟವಾಗಿದೆ ಎಂದು ಖಾತ್ರಿಪಡಿಸಿಕೊಂಡ ವಿಷ್ಣುವಿಗೆ ತಾನೇನೋ ಅದ್ಭುತವನ್ನು ಮಾಡುತ್ತಿದ್ದೇನೆ ಎನ್ನುವ ಖುಷಿಯಲ್ಲಿ, ಪರಿಸ್ಥಿತಿಯ ಅನಿವಾರ್ಯತೆ ಎನ್ನುವ ಸಂಗತಿ ಬದಿ ಸರಿದು ನಿಲ್ಲುತ್ತಿತ್ತು... ವಿಷ್ಣುವಿನೊಳಗೊಬ್ಬ ಕೇರ್ ಟೇಕರ್ ಆಳವಾಗಿ ಬೇರೂರುತ್ತಿದ್ದ.

***

ವಿಷ್ಣು ಘಟ್ಟದ ಕೆಳಗಿನ ಬ್ರಾಹ್ಮಣ. ಬ್ರಹ್ಮಚಾರಿ ಎನ್ನುವುದಕ್ಕಿಂತ ಅವಿವಾಹಿತ ಎನ್ನುವುದು ಸೂಕ್ತ. ಮನೆಯಲ್ಲಿ ಏನೂ ಇಲ್ಲ ಅನ್ನೋ ಹಾಗೂ ಇಲ್ಲ, ಎಲ್ಲಾ ಇದೆ ಅನ್ನೋ ಹಾಗೂ ಇಲ್ಲ ಎನ್ನುವ ಪರಿಸ್ಥಿತಿ. ಹೆಚ್ಚೂ ಕಡಿಮೆ ಎಲ್ಲ ಬ್ರಾಹ್ಮಣರ ಮನೆಯಲ್ಲಿರುವ ವ್ಯವಸ್ಥೆ. ಅಪ್ಪಂದಿರ ವಯಸ್ಸು ನೂರಾದರೂ ಮಕ್ಕಳಿಗೆ ಯಜಮಾನಿಕೆ ಇರೋಲ್ಲ. ಸಾಮಾಜಿಕ ಮುಜುಗರಕ್ಕೆ ಹೆದರಿ ಮನೆಯಲ್ಲಿರೋ ಕೆಂಡ ಬೂದಿಯಿಂದ ಹೊರಗೆ ಬರೋಲ್ಲ. ತಮ್ಮ ಜೀವನಕ್ಕೆ ಪ್ರಯೋಜನ ಆಗದ ಕೆಲಸದಲ್ಲೇ ಬದುಕು ಅರ್ಧ ಸವೆದಿರುತ್ತದೆ...ಲೈಫು ಇಷ್ಟೇನೆ! ಅಂತ ಯಾವಾಗಲೋ ಅನ್ನಿಸಿ ಅಡ್ಡ ಚಟಕ್ಕೆ ಬಿದ್ದ ವಿಷ್ಣುವಿನ ವಯಸ್ಸು ತನ್ನ ಪಾಡಿಗೆ ತಾನು ಮುನ್ನುಗ್ಗುತ್ತಲೇ ಇತ್ತು. ಮನೆಯಲ್ಲಿ ಮದುವೆಯ ಒತ್ತಾಯ ಬಂದರೂ ಹೆಂಡತಿ ಕೇಳುವ ಮೂಲಭೂತ ವಸ್ತ್ರಗಳಿಗೂ ಅಪ್ಪನೆದುರು ಕೈಕಟ್ಟಿ ನಿಂತು ಲೆಕ್ಕ ಒಪ್ಪಿಸಬೇಕು ಎನ್ನುವ ಅವ್ಯಕ್ತ ಭಯ- ಮದುವೆಯನ್ನೇ ನಿರಾಕರಿಸಿತ್ತು. ವಯಸ್ಸಾದ ಅಪ್ಪ- ಅಮ್ಮನ ಜೊತೆ ಮನಸ್ತಾಪ ಹೆಚ್ಚಾಗಿ 'ಛೇ, ಮುಂದಿನ ಜನ್ಮ ಎನ್ನುವುದಿದ್ದರೆ ಈ ಜಾತಿಯಲ್ಲಿನ್ನು ಹುಟ್ಟಬಾರದು’ ಎನ್ನುವ ತೀರ್ಮಾನದಲ್ಲೇ ಬೆಂಗಳೂರಿನ ಬಸ್ ಏರಿದ್ದ. ತಾನು ಯಾಕೆ ಹೋಗುತ್ತಿದ್ದೇನೆ... ತಾನಲ್ಲಿ ಏನು ಮಾಡಬೇಕು ಎನ್ನುವ ಪರಿಕಲ್ಪನೆಯೇ ಇಲ್ಲದೆ!!

***

ಬೆಂಗಳೂರಿಗೆ ಬಂದ ವಿಷ್ಣು ಗಾರ್ಮೆಂಟ್ ಫ್ಯಾಕ್ಟರಿಯೊಂದರಲ್ಲಿ ಸೂಪರ್‌ವೈಸರ್ ಆಗಿ ಕೆಲಸಕ್ಕೆ ಸೇರಿದ.‘ತೋಟ ಕಾಯುವುದು, ಬಾಳೆಕಾಯಿ ತಿನ್ನುವುದು’ ಎನ್ನುವ ಮಾತಿನಂತಾಗಿತ್ತು ಅವನ ಸಂಬಳ ಮತ್ತು ಉಳಿತಾಯದ ಮನೋಭಾವ. ಸಣ್ಣ ಬಾಡಿಗೆ ಮನೆಯಲ್ಲಿ ವಾಸ... ಅದೇ ಫ್ಯಾಕ್ಟರಿಯ ಸೀನಿಯರ್ ಮ್ಯಾನೇಜರ್ ಪುಷ್ಪಲತಾ ಅಯ್ಯರ್‌ ಅರವತ್ತರ ಗೃಹಿಣಿ. ವಿಷ್ಣುವಿನ ಬಗ್ಗೆ ಅಪಾರ ಕಾಳಜಿ ತೋರಿಸುತ್ತಿದ್ದರು... ಒಂದು ದಿನ ಕಾರಿನಲ್ಲಿ ಯಾವುದೋ ಕೆಲಸಕ್ಕೆ ಅವರ ಜೊತೆ ಹೋಗುತ್ತಿರುವಾಗ- ‘ಒಂದು ಮನೆ ಇದೆ. ನೋಡ್ಕೊಂಡ್ ಇರ‍್ತೀರಾ?’ ಎನ್ನುವ ಪ್ರಸ್ತಾಪ ಇಟ್ಟರು. ‘ಅವರಿರೋದು ಲಂಡನ್ನಿನಲ್ಲಿ. ದೊಡ್ಡ ಬಂಗಲೆ. ವರ್ಷಕ್ಕೆ ಒಂದೆರಡು ಬಾರಿ ಬರ್ತಾರೆ. ಕೇರ್ ಟೇಕರ್ ತರ ಇದ್ರೆ ಆಯ್ತು. ಅವರು ಬ್ರಾಹ್ಮಣರನ್ನು ಬಿಟ್ಟು ಬೇರೆಯವರಿಗೆ ಕೊಡೋಲ್ಲ!‘ ಹಿಂದೆ ಮುಂದೆ ಯೋಚಿಸದೆ ಆಯ್ತು ಎಂದಿದ್ದ ವಿಷ್ಣು. ಇಂತಹ ಕೆಲವು ಅನುಕೂಲಗಳಿಗಾದರೂ ಮುಂದಿನ ಜನ್ಮದಲ್ಲಿ ಬ್ರಾಹ್ಮಣನಾಗೇ ಹುಟ್ಟಬೇಕು ಎನ್ನುವ ನಿರ್ಧಾರ ಮಾಡಿ ತನ್ನಷ್ಟಕ್ಕೇ ತಾನು ನಕ್ಕ.

***

ಸ್ಯಾಂಕಿ ಟ್ಯಾಂಕನ್ನು ದಾಟಿ ಸರ್ಕಲ್‌ನಲ್ಲಿ ಎಡಕ್ಕೆ ತಿರುಗಿದ ಕಾರು ಡಾಲರ್ಸ್ ಕಾಲೊನಿಯ ರಾಮನ್ ಪಿಳ್ಳೈ ಅವರ ಮನೆ ಎದುರು ನಿಂತಿತ್ತು. ಕಾಲಿಂಗ್ ಬೆಲ್ ಮಾಡಿದ ಮೇಡಮ್‌ಗೆ ರಾಮನ್ ಪಿಳ್ಳೈ ಕಿಟಕಿಯಿಂದಲೇ-‘ಓಹ್ ಪುಷ್ಪ! ನಾನೇ ಲೇಟು... ಒಂದ್ ಎರಡು ನಿಮಿಷ ಸಮಯ ಕೊಡ್ತೀರಾ...ಡ್ರೆಸ್ ಬೇರೆ ಹಾಕ್ಕೊಂಡು ಬಾಗಿಲು ತೆಗೀತೇನೆ....ಇವರೇನಾ ನೀ ಹೇಳಿದ್ದು...’ ಕಿಟಕಿಯ ಹಿಂದೆ ನಿಂತು ಸರಳಿನ ಮೇಲೆ ಕೈ ಇಟ್ಟು ಅತಿ ವಿನಯದಿಂದ ಅವರಾಡುತ್ತಿದ್ದ ಮಾತುಗಳಲ್ಲಿ  ಯಾವುದೋ ಬಂಧನದಲ್ಲಿರುವ ವ್ಯಕ್ತಿಯಂತೆ ವಿಷ್ಣುವಿಗೆ ಗೋಚರಿಸಿತ್ತು. ವಿಷ್ಣುವನ್ನು ಗಮನಿಸಿ ‘ಹಲೋ’ ಎಂದರು. ಈ ಪರಿಭಾಷೆಗೆ ವಿಷ್ಣುವಿನ ಮುಗುಳುನಗೆಯೇ ಉತ್ತರವಾಗಿತ್ತು. ಹಳೆಯ ಮನೆ. ಮನೆಯ ಮುಂಭಾಗದಲ್ಲಿ ಹೂವಿನ ಗಿಡಗಳು. ಒಂದು ಭದ್ರವಾದ ಕಂಪೌಂಡ್. ಮನೆಯ ಎಡ ಭಾಗಕ್ಕೆ ತಾಗಿಕೊಂಡಂತೆ ಕಾರ್ ಶೆಡ್. ವಿಷ್ಣು ಗಮನಿಸುತ್ತಿರುವಾಗಲೇ ‘ಸ್ವಲ್ಪ ವಿಚಿತ್ರ… ಆದ್ರೂ ಒಂತರಾ ಒಳ್ಳೆ ಮನುಷ್ಯ’ ಮೇಡಮ್ ಸಣ್ಣದಾಗಿ ಹೇಳಿದ್ದರು. ತಾನೇನು ಕಡಿಮೆ ವಿಚಿತ್ರವೇ ಎನ್ನುವ ಭಾವನೆಯಲ್ಲಿ ತಲೆಯಲ್ಲಾಡಿಸಿದ ವಿಷ್ಣು- ವಿಚಿತ್ರಗಳ ಸಮಾಗಮಕ್ಕೆ ಎದುರು ನೋಡುತ್ತಿದ್ದ.

‘ಸ್ಸಾರಿ ಪುಷ್ಪ...ಅಯಾಮ್ ವೆರಿ ಗ್ರೇಟ್ ಫುಲ್ ಟು ಯು’ ಎನ್ನುತ್ತಲೇ ಆದರದಿಂದ ಬರಮಾಡಿಕೊಂಡರು ರಾಮನ್ ಪಿಳ್ಳೈ.  ‘ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು ವಿಷ್ಣು’

ಆಗಲೇ 60- 65 ದಾಟಿರಬಹುದಾದರೂ ಆ ವಯಸ್ಸಿಗೆ ಸರಿ ಹೊಂದುವ ಆರು ಅಡಿ ಎತ್ತರದ ಬೊಜ್ಜಿಲ್ಲದ ಸುಂದರ ಆಕಾರ. ಮಾತಿನಲ್ಲಿ ಅಷ್ಟೇ ವಿನಯ. ಮತ್ತೊಮ್ಮೆ ‘ಪುಷ್ಪ... ಅಯಾಮ್ ವೆರಿ ಗ್ರೇಟ್ ಫುಲ್ ಟು ಯು’ ಅಂದಾಗ ಮನೆಯ ಕೀಲಿಕೈ ತನಗೇ ಕೊಟ್ಟಂತೆ ಭಾಸವಾಗಿತ್ತು.

‘ನಿಮ್ಮ ವಯಸ್ಸೆಷ್ಟು ವಿಷ್ಣು?’

‘ಮೂವತ್ತಾರು’. ಎಲ್ಲರೂ ಕೇಳುವ 'ಇನ್ನೂ ಮದುವೆ ಆಗಿಲ್ವ!' ಎನ್ನುವ ಪ್ರಶ್ನೆ ಬರಬಹುದೆಂದು ವಿಷ್ಣು ತಲೆಬಗ್ಗಿಸಿದ್ದ.

‘ಓಹ್!..ನನ್ನ ಅರ್ಧ ವಯಸ್ಸು’..ಮೇಡಮ್ ಕೂಡಾ ಅವರೊಂದಿಗೆ ನಕ್ಕಾಗ- ಪರವಾಯಿಲ್ಲ ಹಾಸ್ಯಪ್ರಜ್ಞೆ ಇರುವ ವ್ಯಕ್ತಿ ಅನ್ನಿಸಿತ್ತು.

‘ನಿಮ್ಮನ್ನ ನೋಡಿದರೆ ಮೂವತ್ತಾರು ಆಗಿದೆ ಅನ್ನಿಸೋಲ್ಲ… ನೀವು ಮದುವೆ ಆಗಿಲ್ವಂತೆ. ನನ್ನ ಹೆಂಡತಿ... ಪಾಪ ತೀರಿಕೊಂಡು ಎಂಟು ವರ್ಷ ಆಯ್ತು’…ಇಬ್ಬರಿಗೂ ಹೆಂಡತಿ ಇಲ್ಲ ಅನ್ನುವುದಕ್ಕೆ ಹೇಳಿದ ಸಾಂತ್ವನದಂತಿದ್ದ ಅವರ ಮಾತಿನಲ್ಲಿ- ಮದುವೆ ಆಗದಿರುವುದರಿಂದಲೇ ತನ್ನ ಮನೆಗೊಬ್ಬ ಕೇರ್ ಟೇಕರ್ ಸಿಕ್ಕಿದ ಎನ್ನುವ ಖುಷಿ ಕಾಣುತ್ತಿತ್ತು.

‘ನೀವೇನೂ ಮಾಡೋದು ಬೇಡ. ಸೂಪರ್‌ವೈಸ್ ಮಾಡಿದರೆ ಸಾಕು. ವಾರದಲ್ಲಿ ಮೂರು ದಿನ ಕೆಲಸದವಳು ಬಂದು ಎಲ್ಲಾ ಮಾಡ್ತಾಳೆ’

ಕೇರ್ ಟೇಕರ್ ಕೆಲಸಕ್ಕೆ ಯಾವುದೇ ಹಣ ನೀಡುವುದಿಲ್ಲವೆಂದೂ, ಎಲೆಕ್ಟ್ರಿಕ್ ಬಿಲ್, ವಾಟರ್ ಬಿಲ್ ಎಲ್ಲಾ ಅವರೇ ಕೊಡುತ್ತಾರೆಂದೂ ತೀರ್ಮಾನವಾಗಿತ್ತು. ಮೇಡಮ್ ಮೊದಲೇ ತಿಳಿಸಿದ್ದಂತೆ ಅವರು ವಾಪಸಾಗುವುದಕ್ಕೆ ಮೊದಲು ಮನೆಗೆ ಒಬ್ಬ ಕೇರ್ ಟೇಕರ್ ಬೇಕು... ತಾವು ಹೇಳಿದರೆ ಅದೇ ಫೈನಲ್ ಅಂದಿದ್ದರು... ತನಗೂ ಒಂದು ಒಳ್ಳೆಯ ಮನೆ ಸಿಕ್ಕಿದರೆ ಸಾಕು ಎನ್ನಿಸಿತ್ತು. ಸುಬ್ಬಾಭಟ್ಟರಿಗೆ ಹೆಂಡತಿ ಇಲ್ಲ, ವೆಂಕಮ್ಮನಿಗೆ ಗಂಡ ಇಲ್ಲ ಎನ್ನುವ ಪರಸ್ಪರ ಹೊಂದಾಣಿಕೆಯ ಗಾದೆ ಮಾತು ನೆನಪಾಗಿ ಮೇಡಮ್‌ಗೆ ಬಾಯಿ ಬಿಟ್ಟು ಹೇಳಲಾಗದೆ ತನ್ನೊಳಗೇ ನಕ್ಕ ವಿಷ್ಣು.

***

ವಿಷ್ಣು ತನ್ನ ಲಗೇಜಿನೊಂದಿಗೆ ಔಟ್‌ಹೌಸ್‌ನಲ್ಲಿ ಬಂದು ಸೇರಿದ್ದ. ಮೈಕೇಲ್ ಎನ್ನುವ ಅವರದೇ ವಯಸ್ಸಿನ ವ್ಯಕ್ತಿಯನ್ನು ತಮ್ಮ ಬೆಸ್ಟ್ ಫ್ರೆಂಡ್ ಎಂದು ಪರಿಚಯಿಸಿದ್ದರು. ‘ಅವರ ಹತ್ತಿರಾನೂ ಒಂದ್ ಕೀ ಇರುತ್ತೆ. ಅವರು ಎಷ್ಟೊತ್ತಿಗೆ ಬೇಕಾದರೂ ನಮ್ಮ ಮನೆಗೆ ಬರಬಹುದು... ಮಧ್ಯರಾತ್ರಿ ಬಂದರೂ ಬರಬಹುದು’. ಯಾವುದೋ ಬಲೆಯಲ್ಲಿ ಸಿಕ್ಕಿ ಬಿದ್ದ ಸಂಶಯ ಕಾಡಿತು. ಅವರ ನೋಟದಲ್ಲಿ ಏನು ತಪ್ಪು ಮಾಡಿದರೂ ಸಿಕ್ಕಿ ಬೀಳುತ್ತೀರಿ ಎನ್ನುವ ಎಚ್ಚರಿಕೆ ಇತ್ತು. ಎಲ್ಲವೂ ತಾನು ಅಂದುಕೊಂಡಂತೆ ಇಲ್ಲಿ ನಡೆಯುತ್ತದೆ ಎನ್ನುವ ವಿಶ್ವಾಸವಿತ್ತು. ಮನೆಯಲ್ಲಿ ಸಿ.ಸಿ.ಕ್ಯಾಮೆರಾ ಕೂಡ ಅಳವಡಿಸಿರಬಹುದು ಎನ್ನುವ ಅನುಮಾನ ಒಮ್ಮೆ ಗೋಡೆಯ ಮೇಲೆಲ್ಲಾ ಕಣ್ಣಾಡಿಸುವಂತೆ ಮಾಡಿತ್ತು.

‘ನಾನು ನಾಳೆನೇ ಹೊರಡಬೇಕು.ಇಬ್ರೂ ಕಾಫಿ ಕುಡೀತಾ ಮಾತಾಡೋಣ... ಫಿಲ್ಟರ್ ಕಾಫಿ... ನೀವು ಟೇಸ್ಟ್ ನೋಡಬಹುದು’. ಅವರ ಅತಿಯಾದ ವಿನಯ ವಿಷ್ಣುವಿಗೆ ಮುಜುಗರ ಉಂಟು ಮಾಡುತ್ತಿತ್ತು.

ಎರಡು ದಿನದ ಅನುಭವದಲ್ಲಿ ಅವರೊಬ್ಬ ವಿಚಿತ್ರ ಸ್ವಭಾವದ ವ್ಯಕ್ತಿ ಎನ್ನುವುದು ಸ್ಪಷ್ಟವಾಗಿತ್ತು. ಮನೆಯ ಪ್ರತಿ ಒಳವನ್ನೂ ಪೊರಕೆಯಿಂದ ಗುಡಿಸಿ ಆ ಕಸವನ್ನು ಡಸ್ಟ್‌ಬಿನ್‌ಗೆ ಹಾಕಬೇಕು. ಕಸ ಗುಡಿಸಿದಾಗ ಮೇಲೆ ಹಾರಿದ ದೂಳಿನ ಕಣ ನೆಲದ ಮೇಲೆ ಕೂರಲು ಬಿಟ್ಟು ಹದಿನೈದು ನಿಮಿಷದ ನಂತರ ನೆಲ ಒರೆಸಬೇಕು. ಪ್ರತಿ ಒಳವನ್ನು ಒರೆಸುವಾಗ ಎರಡು ಮೂರು ಬಾರಿ ಬಟ್ಟೆಯನ್ನು ಬಕೆಟಲ್ಲಿ ಅದ್ದಿ ಸ್ವಚ್ಛ ಮಾಡಿಕೊಂಡು ಹೊಸ ನೀರಿನಲ್ಲೇ ಒರೆಸಬೇಕು. ಮರದ ಪೀಠೋಪಕರಣಗಳನ್ನು  ಒಣ ಬಟ್ಟೆಯಲ್ಲೇ ಒರೆಸಬೇಕು. ಸ್ವಚ್ಛತೆಯ ವಿಚಾರದಲ್ಲಿ ತಾನು ಒಂದು ಪ್ರಬಂಧವನ್ನೇ ಬರೆಯಬಹುದೇನೋ ಎನ್ನಿಸಿತ್ತು ವಿಷ್ಣುವಿಗೆ. ಅರವತ್ತು ವರ್ಷ ಹಳೆಯ ಮನೆಯಾದರೂ ಈಗಷ್ಟೇ ಜೋಡಿಸಿಟ್ಟಂತೆ ಇದ್ದ ಮರದ ಬಾಗಿಲು, ಕಿಟಕಿ, ಪೀಠೋಪಕರಣಗಳ ಸೌಂದರ್ಯ, ರಾಮನ್ ಪಿಳ್ಳೆಯವರ ‘ಕ್ಲೀನ್ ಅಡಿಕ್ಷನ್’ ಕಾಯಿಲೆಯ ಫಲ ಎನ್ನುವುದು ವಿಷ್ಣುವಿಗೆ ಮನದಟ್ಟಾಗಿದ್ದರೂ- ಅವರನ್ನು ರೋಗಿ ಎಂದು ಒಪ್ಪಲು ಮನಸ್ಸು ಸಮ್ಮತಿಸುತ್ತಿರಲಿಲ್ಲ. ಯಾರಿಗೂ ತಿಳಿಯದ ಸ್ವಚ್ಛತೆಯ  ಪಾಠದ ಗುರುವಾಗಿ ಕಂಡರು.

ಕಿಚನ್‌ನಿಂದ ಬರುತ್ತಿದ್ದ ಫಿಲ್ಟರ್ ಕಾಫಿಯ ಘಮ ಕಾಫಿಗೆ ಕರೆಯುವುದನ್ನೇ ಎದುರು ನೋಡುತ್ತಿತ್ತು.

‘ವಿಷ್ಣು, ನಿಮ್ಮತ್ರ ಸ್ಟೀಲ್ ಲೋಟ ಇದೆಯಲ್ಲ, ಅದನ್ನು ತನ್ನಿ ಪ್ಲೀಸ್’.

ಅವರ ಕಿಚನ್‌ನಲ್ಲೇ ತರಾವರಿ ಲೋಟಗಳು ಇದ್ದಿದ್ದನ್ನು ನೋಡಿದ್ದ ವಿಷ್ಣು, ಯಾಕೆ ಹೇಳಿದರು ಎನ್ನುವ ಯೋಚನೆಯಲ್ಲೇ ತನ್ನ ಲೋಟವನ್ನು ಹಿಡಿದು ಹೊರ ಬಂದಿದ್ದ... ಕಾಫಿ ಪಾತ್ರೆಯಲ್ಲಿ ಬಿಸಿ ಕಾಫಿಯನ್ನು ಹಿಡಿದು ನಿಂತಿದ್ದ ರಾಮನ್ ಲೋಟವನ್ನು ಕೆಳಗಿಡಲು ಹೇಳಿದರು. ಮೇನ್‌ಹೌಸ್‌ನ ಹಿಂದಿನ ಬಾಗಿಲಿನ ಮೆಟ್ಟಿಲ ಮೇಲೆ ಇಟ್ಟಿದ್ದ ಲೋಟಕ್ಕೆ ಮೇಲಿನಿಂದ ಕಾಫಿ ಹೊಯ್ಯುತ್ತಿದ್ದರು ರಾಮನ್ ಪಿಳ್ಳೈ...

ಒಂದು ಕ್ಷಣ ವಿಷ್ಣುವಿನ ಕಣ್ಣುಗಳು ಚಲನೆಯನ್ನೇ ನಿಲ್ಲಿಸಿದ್ದವು. ವಿಚಿತ್ರವಾದ ಅನುಭವ, ಅವಮಾನ...' ಈ ಸಂಭ್ರಮಕ್ಕೆ ಇವರ ಕಾಫಿ ತನಗೆ ಬೇಕಿತ್ತಾ. ಒಳಗೆ ಕರೆದು ಅವರ ಲೋಟದಲ್ಲೇ ಕೊಡಬಹುದಿತ್ತು'... ತನ್ನ ಮನೆಯ ಸಗಣಿ ತೆಗೆಯುವ ಮಾಸ್ತಿ ನೆನಪಾದಳು…

ವಿಷ್ಣುವಿಗೆ ತಿಳಿವಳಿಕೆ ಬಂದಾಗಿನಿಂದಲೂ ಕೊಟ್ಟಿಗೆ ಕೆಲಸಕ್ಕೆ ಬರುತ್ತಿದ್ದವಳು ಮಾಸ್ತಿ. ಯಾವತ್ತೂ ಕೊಟ್ಟಿಗೆಯನ್ನು ಬಿಟ್ಟು ಮನೆಯ ಹೊಸಿಲು ದಾಟಿ ಬಂದವಳಲ್ಲ. ಅಮ್ಮ ಕೊಟ್ಟ ಕಾಫಿಯನ್ನೋ, ಮಜ್ಜಿಗೆಯನ್ನೋ ತಾನೂ ಇದೇ ರೀತಿ ಕೊಟ್ಟಿಗೆಯಲ್ಲಿಟ್ಟು ದೂರದಲ್ಲಿ ನಿಂತಿರುತ್ತಿದ್ದ ಮಾಸ್ತಿಯ ಪಾತ್ರೆಗೇ ಹೊಯ್ಯುತ್ತಿದ್ದುದು ನೆನಪಾಯಿತು. ಮಾಸ್ತಿಯಂತ ಎಷ್ಟು ಜೀವಗಳು ಈ ಅನುಭವಿಸುವಿಕೆಯಲ್ಲೇ ಪೂರ್ತಿ ಜೀವನ ಬದುಕುತ್ತಿವೆಯಲ್ಲ. ಅವರ ಮಾನಸಿಕ ತೊಳಲಾಟ ಈಗ ತನಗಾಗುತ್ತಿರುವ ಹಿಂಸೆಗಿಂತ ಭಿನ್ನವಾಗಿರಲು ಸಾಧ್ಯವೆ?! ಮೊದಲ ಬಾರಿ ಅಸ್ಪೃಶ್ಯ ಬದುಕಿನ ನೋವುಗಳ ಪ್ರತ್ಯಕ್ಷ ಅನುಭವ ವಿಷ್ಣುವನ್ನು ತಟ್ಟಿತ್ತು... ಮೆಟ್ಟಿಲ ಮೇಲೆಯೇ ಇದ್ದ ಲೋಟದಿಂದ ಫಿಲ್ಟರ್ ಕಾಫಿಯ ಯಾವ ಪರಿಮಳವೂ ವಿಷ್ಣುವಿಗೆ ಅನುಭವಕ್ಕೆ ಬರುತ್ತಿರಲಿಲ್ಲ. ಜಾತಿಯ ಹೆಸರಿನಲ್ಲಿ ಫಿಲ್ಟರ್ ಮಾಡಿ ಅಸ್ಪೃಶ್ಯತೆ ಆಚರಿಸಿದ ಸಮಾಜದ ಗಬ್ಬು ವಿಷ್ಣುವಿನ ಮೈಯನ್ನೆಲ್ಲ ಆವರಿಸಿತ್ತು.

‘ಒಳಗೆ ಬನ್ನಿ ವಿಷ್ಣು. ಇಬ್ಬರೂ ಕಾಫಿ ಹೀರುತ್ತಾ ಮಾತಾಡೋಣ’ ವಿಷ್ಣುವಿಗೆ ಸ್ವಲ್ಪ ಸಮಾಧಾನವಾದಂತೆನಿಸಿತ್ತು.

ನನ್ನ ಲಂಡನ್ ಸ್ನೇಹಿತರನ್ನು ಹೀಗೇ ಕಾಫಿಗೆ ಕರೀತಿರ‍್ತೇನೆ. ಅವರಿಗೆ ನಮ್ ಇಂಡಿಯಾದ ಕಾಫಿ ತುಂಬಾ ಇಷ್ಟ. ನಾನು ಇಂಡಿಯಾಕ್ಕೆ ಬಂದಾಗೆಲ್ಲ ಇಲ್ಲಿಂದ ಫಿಲ್ಟರ್ ಕಾಫಿ ಪೌಡರ್ ತಗೊಂಡ್ ಹೋಗ್ತೇನೆ...ಮತ್ತೊಮ್ಮೆ ಕಾಫಿಯನ್ನು ಹೀರಿ ರುಚಿಯನ್ನು ಆಸ್ವಾದಿಸಿದ್ದರು.

ಇಂಡಿಯಾದವರನ್ನು ನಾನು ಹತ್ತಿರ ಸೇರಿಸೋದೂ ಇಲ್ಲ. ದೊಡ್ ದೊಡ್  ಬೊಜ್ಜು ಹೊಟ್ಟೆ ಬಿಟ್ಟುಕೊಂಡಿರ್ತಾರೆ’. ಹೊಟ್ಟೆ ಮುಂದು ಮಾಡಿ ತೋರಿಸಿದ್ದರು ‘ಸರಿಯಾಗಿ ನಡೆಯೋಕು ಬರೋಲ್ಲ… ಕಾಲು ಇರೋದು ನಮ್ ದೇಹ ಹೊತ್ಕೊಂಡ್ ಹೋಗೋದಕ್ಕೆ’...ಕಾಫಿ ಕುಡಿಯುವುದನ್ನು ಬಿಟ್ಟು ಮೇಲೆದ್ದ ರಾಮನ್ ಹೀಗೆ ನಡೆಯಬೇಕು ಎಂದು ನಾಲ್ಕು ಹೆಜ್ಜೆ ನಡೆದು ತೋರಿಸಿದರು. ‘ಇಂಡಿಯನ್ಸ್ ಕಾಲು ಎಳೆದುಕೊಂಡು ನಡೀತಾರೆ. ಕಾಲು ಎತ್ತಿ ಹಾಕಬೇಕು ಅನ್ನೋ ಸಾಮಾನ್ಯ ಜ್ಞಾನನೂ ಇಲ್ಲ ಇವರಿಗೆ’ ಅವರು ಕುಳಿತ ಕುರ್ಚಿಯ ಹಿಂದಿನಿಂದ ಬೀಳುತ್ತಿದ್ದ ಶೇಡ್ ಲ್ಯಾಂಪಿನ ಬೆಳಕಿನಲ್ಲಿ ಯಾವುದೋ ನಾಟಕದ  ಪಾತ್ರವನ್ನು ನೋಡುತ್ತಿದ್ದೇನೆ ಎನಿಸಿತ್ತು ವಿಷ್ಣುವಿಗೆ. ಆದರೂ ಅವರು ಹೇಳಿದ್ದರಲ್ಲಿ ತಪ್ಪಿಲ್ಲ ಎನಿಸಿತ್ತು. ಕಾಫಿ ಕುಡಿದು ಹೊರ ಹೋಗುವಾಗ, ಅವರು ತನ್ನನ್ನು ಗಮನಿಸುತ್ತಿರಬಹುದು ಎನ್ನುವ ಕಾರಣಕ್ಕೆ ಕಾಲನ್ನು ಎತ್ತಿ ಎತ್ತಿ ಹೆಜ್ಜೆ ಹಾಕುವ ಪ್ರಯತ್ನ ಮಾಡಿದ ವಿಷ್ಣು...

***

‘ಸಾರ್ ಟಿಕೆಟ್, ಫೋನು, ಫೋನ್ ಚಾರ್ಜರ್ ಎಲ್ಲಾ ತಗೊಂಡಿದೀರಾ ಸಾರ್’...ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಮನೆಯೆದುರು ಕಾರು ಬಂದು ನಿಂತಾಗ ರಾಮನ್‌ಗೆ ವಿಷ್ಣು ನೆನಪಿಸಿದ್ದ...ನಗುತ್ತಲೇ ಹೇಳಿದ್ದರು...‘ನೀವು ನನ್ ತಾಯಿ ನೆನಪು ಮಾಡಿಸಿದ್ರಿ ವಿಷ್ಣು... ನಾನು ಪ್ರತಿ ಸಾರಿ ಹೊರಡುವಾಗ ಅವರು ಹೀಗೇ ಕೇಳ್ತಾ ಇದ್ರು...ಥ್ಯಾಂಕ್ಯು ವಿಷ್ಣು’ ಲಗೇಜನ್ನು ಕಾರಿಗೆ ಇಟ್ಟಾಗಿತ್ತು. ಕಾರಿನ ಹತ್ತಿರ ನಿಂತಿದ್ದ ರಾಮನ್ ತಮ್ಮ ಎತ್ತರದ ದೇಹದಿಂದ ವಿಷ್ಣುವನ್ನೇ ಕಣ್ಣಲ್ಲಿ ಕಣ್ಣಿಟ್ಟು ನೋಡಿದರು. ನಿಧಾನವಾಗಿ ಮನೆಯ ಕೀ ಬಂಚ್ ವಿಷ್ಣುವಿನ ಕೈಗಿತ್ತರು...ಕೀ ಬಂಚ್ ಭಾರವಾಗಿತ್ತು...ಮತ್ತೊಮ್ಮೆ ಮನೆಯತ್ತ ನಿಟ್ಟುಸಿರು ಬಿಟ್ಟು ನೋಡಿದ ರಾಮನ್ ಪಿಳ್ಳೈ ‘ಮನೆಯನ್ನು ಚೆನ್ನಾಗಿ ನೋಡಿಕೊಳ್ಳಿ ವಿಷ್ಣು. ಐ ಟ್ರಸ್ಟ್ ಯು’ ಎಂದು ಕಾರು ಏರಿದರು. ಕೈಯಲ್ಲಿದ್ದ ಕೀ ಬಂಚ್ ಇನ್ನೂ ಹೆಚ್ಚು ಭಾರವಾದಂತೆ ವಿಷ್ಣುವಿಗೆ ಭಾಸವಾಗಿತ್ತು.

***

ಬೆಳಗಿನ ಜಾವವೇ ವಿಷ್ಣುವಿನೊಳಗಿನ ಕೇರ್ ಟೇಕರ್ ಹಾಸಿಗೆ ಬಿಟ್ಟೇಳಿಸಿದ್ದ. ಮೇನ್‌ಹೌಸ್‌ನ ಹಿಂಬಾಗಿಲನ್ನು ತೆಗೆದು ನೀರಿನ ಪಂಪ್ ಚಾಲು ಮಾಡಿದ. ಕಿಚನ್ ಮತ್ತು ಬಾತ್ ರೂಮಿನಲ್ಲಿರುವ ಗೀಸರ್‌ಗಳಿಂದ ಪ್ರತಿದಿನ ನೀರು ಹೊರಹೋಗದಿದ್ದರೆ ಮಣ್ಣಿನ ಕಣಗಳು ಪೈಪಿನಲ್ಲಿ ಶೇಖರಣೆಯಾಗುತ್ತವೆ ಎನ್ನುವ ಕಾರಣಕ್ಕೆ ನೀರನ್ನು ಹೊರಬಿಟ್ಟ. ಕಮೋಡ್‌ನಲ್ಲಿ ನೀರು ಜಾಸ್ತಿ ದಿನ ಬದಲಾಗದಿದ್ದರೆ ಕಲೆ ಕಟ್ಟುತ್ತದೆ ಎನ್ನುವ ಕಾರಣಕ್ಕೆ ನೀರನ್ನು ಫ್ಲಶ್ ಮಾಡಿದ. ಮನೆಯ ಸುತ್ತಲ ಪ್ಯಾಸೇಜನ್ನು ಗುಡಿಸಿದ. ರಾಮನ್ ಪಿಳ್ಳೈ ಅವರ ಸ್ವಚ್ಛತೆಯ ಪಾಠ ಈ ಎಲ್ಲಾ ಕೆಲಸ ಮಾಡಿಸಿತ್ತು. ಅದಾಗಲೇ ಪೂರ್ಣ ಬೆಳಗಾಗಿತ್ತು. ಗಿಡಕ್ಕೆ ನೀರು ಬಿಡುತ್ತಾ ಇರುವಾಗಲೇ ಎದುರು ಮನೆಯ ಗೇಟ್ ತೆಗೆದ ಶಬ್ದವಾಗಿ ಅತ್ತ ತಿರುಗಿದ ವಿಷ್ಣುವಿಗೆ ನಡುವಯಸ್ಸಿನ ಹೆಂಗಸೊಬ್ಬಳು ಇತ್ತ ಕಡೆಯೇ ಬರುತ್ತಿರುವುದು ಕಂಡಿತು. ಬಹುಶಃ ತಾನು ಕೆಲಸ ಮಾಡುತ್ತೇನೋ ಇಲ್ಲವೋ ಎನ್ನುವುದನ್ನು ನೋಡಿ ವರದಿ ನೀಡಲು ಹೇಳಿರಬಹುದೇನೋ ಎನ್ನುವ ಅನುಮಾನದಲ್ಲಿ ಸ್ವಲ್ಪ ಹೆಚ್ಚೇ ನೀರು ಗಿಡಕ್ಕೆ ಬೀಳುತ್ತಿತ್ತು.

ಸೀದಾ ಬಂದವರೇ ಕಂಪೌಂಡ್‌ನ ಹೊರಗೆ ನಿಂತು ‘ಏನಪಾ ನಿನ್ ಹೆಸರು’... ‘ವಿಷ್ಣು’ ಎಂದು ಹೇಳುವುದರೊಳಗಾಗಿ ದಾಸವಾಳದ ಗಿಡವನ್ನು ಕಂಪೌಂಡಿನ ಹೊರಗಿನಿಂದಲೇ ಬಗ್ಗಿಸಿ ಒಂದೇ ಮುಷ್ಟಿಯಲ್ಲಿ ನಾಲ್ಕಾರು ಹೂವುಗಳನ್ನು ಸೆರಗಿನೊಳಗೆ ಸೇರಿಸಿದ್ದರು.

ಶೆಟ್ಟರ ಹೆಂಡತಿ ಎನ್ನುವುದು ಸಾಕ್ಷಿ ಸಮೇತ ಗೊತ್ತಾಗಿತ್ತು ವಿಷ್ಣುವಿಗೆ...

ಔಟ್ ಹೌಸ್ ಮತ್ತು ಮೇನ್ ಹೌಸ್ ಮಧ್ಯದಲ್ಲಿರುವ ಬಾವಿ ಸುತ್ತ ನೀರು ಹಾಕಿ ಚೊಕ್ಕ ಮಾಡುತ್ತಿರುವಾಗಲೇ ಕಾಲಿಂಗ್ ಬೆಲ್ ಸದ್ದು  ಮಾಡಿತ್ತು... ಯಾರಿರಬಹುದು ಎನ್ನುವ ಕುತೂಹಲದಲ್ಲಿ ಮೈನ್ ಡೋರ್ ಪಕ್ಕದ ಕಿಟಕಿ ತೆರೆದ..

ದಪ್ಪನೆಯ ದೇಹದ, ರಸ್ತೆಯ ಕಸ ಗುಡಿಸುವ ಕಾರ್ಪೋರೇಶನ್ ಹೆಂಗಸೊಬ್ಬಳು ಗೇಟಿನ ಬಳಿ ನಿಂತಿದ್ದಳು.

‘ನಾನಪ್ಪ, ಅಲವೇಲಮ್ಮ... ಯಜಮಾನರು ವಾಪಸು ಹೋಗಿದಾರೆ ಅಲ್ವಾ?’

‘ಹೌದು... ನಿನ್ನೆನೇ ಹೋದ್ರು... ಯಾಕೆ ಏನಾಗ್ಬೇಕಿತ್ತು?’

ಕಿಟಕಿಯಲ್ಲೇ ಮುಖ ತೋರಿಸಿ ಮಾತನಾಡುತ್ತಿದ್ದ ವಿಷ್ಣುವಿಗೆ ತಾನು ಮೊದಲ ದಿನ ನೋಡಿದ ರಾಮನ್‌ರ ಸ್ಥಾನದಲ್ಲಿ  ಬಂಧನದಲ್ಲಿರುವ ಅನುಭವ ಉಂಟಾಗಿತ್ತು... ಮೈನ್ ಡೋರ್ ವಾರಕ್ಕೊಂದು ಸಾರಿ ತೆಗೆದು ಒರೆಸಿ. ಬೇರೆ ಸಂದರ್ಭದಲ್ಲಿ ಯಾರಿಗೂ ತೆಗಿಯಬೇಡಿ ಎಂದು ಹೇಳಿದ್ದ ಮಾತು ಕಿವಿಯಲ್ಲೇ ಗುಂಯ್ ಗುಡುತ್ತಿತ್ತು.

ಯಾವ ಒಪ್ಪಿಗೆಗೂ ಕಾಯದೆ ಅಲವೇಲಮ್ಮ ತನ್ನ ಕಸದ ತಳ್ಳು ಗಾಡಿಯನ್ನು ಮನೆಯ ಕಂಪೌಂಡ್‌ಗೆ ತಾಗಿಕೊಂಡಂತೆ ಪ್ರತಿಷ್ಠಾಪಿಸಿದ್ದಳು. ಎದುರು ಮನೆ ಶೆಟ್ರು ಗಮನಿಸುತ್ತಿರಬಹುದೇನೋ ಎನ್ನುವ ಆತಂಕದಲ್ಲಿ ವಿಷ್ಣುವಿನ ಮುಖ ಸಪ್ಪಗಾಗಿತ್ತು.

***

ಕೇರ್ ಟೇಕರ್ ಅವತಾರ ಎತ್ತಿ ಆಗಲೇ ಹದಿನೈದು ದಿನ ಕಳೆದಿತ್ತು. ತನ್ನ ಪರಿಸ್ಥಿತಿಯನ್ನು ನೆನೆದು ಮನಸಿನೊಳಗೆ ಏನೇನೊ ಯೋಚನೆಗಳು ಸುಳಿದಾಡುತ್ತಿದ್ದವು. ಈ ಒರೆಸುವ ಗುಡಿಸುವ ಕರ್ಮ ತಾನಾಗಿಯೇ ಅಂಟಿಸಿಕೊಂಡೆನೇ!? ಎನ್ನುವ ವಿಚಾರ ಅಂದಿನ ಘಟನೆಯನ್ನು ಮೆಲುಕು ಹಾಕಿತ್ತು.

ಪುಷ್ಪಲತಾ ಮೇಡಂ ರಾಮನ್‌ರನ್ನು ಭೇಟಿ ಮಾಡಿಸಿದ್ದ ಮಾರನೆಯ ದಿನ ಮತ್ತೆ ಕಾಣಲು ಹೋದಾಗ ಮನೆಯ ಬೀಗ ಹಾಕಿತ್ತು. ಕಾರ್ ಶೆಡ್ ಒಳಗಿನಿಂದ ಮೂವತ್ತರ ಆಸುಪಾಸಿನ ಹೆಂಗಸೊಬ್ಬಳು ಬಾಗಿಲ ಎದುರಿನ ಮೆಟ್ಟಿಲ ಮೇಲೆ ಬಂದು ಕುಳಿತಳು... ‘ನೀವೇನ ಈ ಮನೆಗೆ ಬರೋರು?’ ತಾನು ಮನೆ ಕೆಲಸಕ್ಕೆ ಬರುವವಳು ಎಂದು ಪರಿಚಯಿಸಿಕೊಂಡಳು. ‘ಬ್ಯಾಂಕಿಗೆ ಹೋಗಿದಾರೆ. ಇನ್ನೂ ಅರ್ಧ ಗಂಟೆ ಆಗುತ್ತೆ. ಇಲ್ಲೇ ನಿಂತಿರೋದಕ್ಕೆ ಹೇಳಿದಾರೆ.’ ಆಕೆ ಹಾಕಿದ್ದ ಕಪ್ಪು ಲಂಗದ ಹಿನ್ನೆಲೆಯಲ್ಲಿ ಬೆಳ್ಳನೆಯ ಕಾಲಿನ ದರ್ಶನಕ್ಕೆ ಕೊಂಚ ಮೇಲೆದ್ದಿದ್ದ ಸೀರೆ ನೆರವಾಗಿ, ಬೇಡ ಬೇಡವೆಂದರೂ ವಿಷ್ಣುವಿನ ಕಣ್ಣು ಕ್ಷಣಕಾಲ ಅತ್ತ ನೆಟ್ಟಿತ್ತು... ‘ಬನ್ನಿ ಮನೆ ಎಲ್ಲಾ ತೋರುಸ್ತೇನೆ... ನಾ ತೋರಿಸಿದೆ ಅಂತ ಅವರಿಗೆ ಹೇಳಬೇಡಿ’ ಎಂದು ವಯ್ಯಾರದಿಂದ ಪಕ್ಕದ ಕಾರ್ ಶೆಡ್ಡಿನ ಬಾಗಿಲತ್ತ ನಡೆದಳು. ನೋಡುವುದಕ್ಕೆ ತಕ್ಕ ಮಟ್ಟಿಗೆ ಇದ್ದಳು. ವಿಷ್ಣುವಿಗೆ ನೂರೆಂಟು ರೋಮಾಂಚನಗಳು ತಲೆಯಲ್ಲಿ ಸುಳಿದರೂ ತನ್ನ ಜಾತಿಯವರ ಬಾಯಿಗೆ ಬಿದ್ದು ಎಲ್ಲಿ ಹರಾಜಾಗುತ್ತೇನೋ ಎನ್ನುವ ಪುಕ್ಕಲುತನ ನಿರಾಕರಿಸಿತ್ತು. ವಾಪಸು ಬಂದು ಕುಳಿತು ಗಂಡಸೇ ಅಲ್ಲ ಎನ್ನುವಂತೆ ವಿಷ್ಣುವಿನತ್ತ ನೋಡಿದ ಆಕೆ ‘ನೀವು ಪುಳ್ಚಾರಾ?!’ ಎಂದು ಅಸಡ್ಡೆಯಿಂದ ರಾಗ ಎಳೆದಿದ್ದು ಇಡೀ ಜಾತಿಯ ಗಂಡಸ್ತನಕ್ಕೇ ಎಳ್ಳು ನೀರು ಬಿಟ್ಟಂತಿತ್ತು.

***

ಮನೆಯ ಮಧ್ಯದ ಹಾಲ್‌ನಲ್ಲಿ ಉಭಯಕುಶಲೋಪರಿಗಳ ವಿನಿಮಯವಾಗಿತ್ತು. ಕುಟುಂಬದ ವಿಚಾರಗಳನ್ನೆಲ್ಲ ಕೇಳಿ ತಿಳಿದು ಬ್ರಾಹ್ಮಣ ಎನ್ನುವುದನ್ನು ಮತ್ತೊಮ್ಮೆ ದೃಢಪಡಿಸಿಕೊಂಡಿದ್ದರು ರಾಮನ್. ಬನ್ನಿ ಮನೆ ತೋರಿಸ್ತೇನೆ ಎಂದಾಗ ವಿಷ್ಣು ಅವರ ಹಿಂದೆ ಹೆಜ್ಜೆ ಹಾಕಿದ್ದ.

ವಿಶಾಲವಾದ ಸುಸಜ್ಜಿತ ಮಹಡಿ ಮನೆಯನ್ನು ನೋಡುತ್ತ ನೋಡುತ್ತ ವಿಷ್ಣು ಯಾವ ಕಂಪೆನಿಯ ಸಿ.ಇ.ಓ.ಗೂ ಕಡಿಮೆ ಇಲ್ಲದ ಬಂಗಲೆಯಲ್ಲಿ ತಾನು ವಾಸಿಸುತ್ತೇನೆ ಎನ್ನುವ ಖುಷಿಯಲ್ಲಿದ್ದ. ಜ್ಯೋತಿಷಿಯೊಬ್ಬನು 33 ವರ್ಷದ ನಂತರ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದಿದ್ದ. ಭವಿಷ್ಯ ನಿಜವಾಗಲು ಪ್ರಾರಂಭಿಸಿದೆ ಎನ್ನಿಸಿ ಕಲ್ಪನೆಗಳ ಲೋಕದಲ್ಲೇ ವಿಹರಿಸುತ್ತಿದ್ದ.

ಬೀಗ ಹಾಕಿದ ಔಟ್ ಹೌಸ್‌ನ ಬಾಗಿಲನ್ನು ತೆರೆದ ರಾಮನ್ ತಾವು ಹೊರಗಡೆಯೇ ನಿಂತು ಕೀಯನ್ನು ವಿಷ್ಣುವಿನ ಕೈಗಿತ್ತರು. ‘ನೀವು ಔಟ್ ಹೌಸ್‌ನಲ್ಲಿ ಇರ್ತೀರಿ ವಿಷ್ಣು. ಮೈನ್ ಹೌಸು ನಾನು ಬಂದಾಗ ಬೇಕು. ನೀವು ಅದನ್ನು ಯೂಸ್ ಮಾಡಬೇಡಿ. ನೆಲ ಸ್ವಲ್ಪ ಹಾಳಾಗಿದೆ... ಅಡ್ಜಸ್ಟ್ ಮಾಡ್ಕೊಳ್ಳಿ ಪ್ಲೀಸ್’

‘ಕುಮುದ ನಮ್ ತಾಯಿ ಇದ್ದಾಗಿಂದಲೂ ನಮ್ ಮನೆ ಕೆಲಸ ಮಾಡಿಕೊಂಡು ಬಂದಿದಾಳೆ. ಅವಳಿಗೆ ಎಲ್ಲಾ ಗೊತ್ತು. ನೀವು ಸೂಪರ್‌ವೈಸ್ ಮಾಡಿದ್ರೆ ಸಾಕು. ಎರಡು ದಿನಕ್ಕೆ ಒಂದ್ಸಾರಿ... ನಿಮ್ ಸಮಯ ಹ್ಯಾಗೆ ಹೊಂದಿಸಿಕೊಳ್ತೀರಿ ವಿಷ್ಣು’

ಕುರ್ಚಿಗೆ ಒರಗಿ ಕುಳಿತಿದ್ದ ರಾಮನ್ ಒಂದೇ ಬಾರಿ ಎಲ್ಲವನ್ನೂ ಹೇಳಿ ಮುಗಿಸಿ ವಿಷ್ಣುವಿನ ಉತ್ತರವನ್ನು ಎದುರು ನೋಡುತ್ತಿದ್ದರು.

ತಲೆ ಕೆಳಗೆ ಹಾಕಿ ಆಲೋಚಿಸುತ್ತಿದ್ದ ವಿಷ್ಣು ನಿಧಾನವಾಗಿ ತಲೆ ಮೇಲೆತ್ತಿದ್ದ. ಪ್ರಶ್ನಾರ್ಥಕ ಚಿಹ್ನೆ ರಾಮನ್‌ರ ಮುಖದಲ್ಲಿ ಕಂಡಿತ್ತು.

‘ಕೆಲಸದವಳು ಬೇಡ ಸಾರ್. ನಾನೇ ಮನೆ ಕೆಲಸ ಮಾಡ್ಕೋತೇನೆ’ ಕುಮುದಳಿಗೆ ಕೇಳಿಸಬಾರದೆಂದು ಸಣ್ಣದಾಗಿಯೇ ನುಡಿದಿದ್ದ ವಿಷ್ಣು.

‘ಆ ಸಂಬಳ ನಾನೇ ಕೊಡ್ತೇನೆ’ ಸ್ವಲ್ಪ ಸಿಡುಕಿನಿಂದಲೇ ಹೇಳಿದ್ದರು ರಾಮನ್.

‘ಅದು ಸಂಬಳದ ಪ್ರಶ್ನೆ ಅಲ್ಲ ಸಾರ್... ಗಂಡಸು ಒಬ್ನೇ ಇರೋವಾಗ, ಹೆಂಗಸು ಒಬ್ಳೇ ಬರೋದು ಸರಿಯಲ್ಲ ಸಾರ್... ನಾಳೆ ಏನಾದ್ರು ಹೆಚ್ಚು ಕಡಿಮೆ ಆದ್ರೆ ನಿಮಗೇ ತೊಂದರೆ...’ ಒರಗಿ ಕುಳಿತಿದ್ದ ರಾಮನ್‌ರ ದೇಹ ನೆಟ್ಟಗಾಗಿತ್ತು.

‘ಹೌದಲ್ಲಾ... ನನಗೆ ಇದೆಲ್ಲಾ ಹೊಳೆದೇ ಇರಲಿಲ್ಲ.’

ಮುಗ್ಧತೆಯ ಜೊತೆ ವಿಷ್ಣು ಯಾವುದೋ ದೊಡ್ಡ ಗಂಡಾಂತರದಿಂದ ತನ್ನನ್ನು ಪಾರು ಮಾಡಿದ್ದಾನೆ ಎನ್ನುವ ಕೃತಜ್ಞತೆ ಅವರ ಕಣ್ಣುಗಳಲ್ಲಿ ಗಡಿಬಿಡಿಯನ್ನು ತೋರಿಸಿತ್ತು. ನೀವು ಇಲ್ಲೇ ಕುಳಿತಿರಿ. ನಾನು ಈಗಲೇ ಅವಳನ್ನು ಲೆಕ್ಕಾಚಾರ ಮಾಡಿ ಕಳಿಸಿಬಿಡ್ತೇನೆ...

ಕುಮುದಳ ಲೆಕ್ಕಾಚಾರ ಮಾಡಿ ಬಂದು ‘ನೀವು ನಾಡಿದ್ದು ಶುಕ್ರವಾರ ಲಗೇಜ್ ತಗೊಂಡು ಬನ್ನಿ. ನಾನು ಮನೆ ಕೆಲಸ ಎಲ್ಲ ನಿಮಗೆ ಹೇಳಿಬಿಡ್ತೇನೆ... ಭಾನುವಾರ ಬೆಳಿಗ್ಗೆ ಎಂಟು ಗಂಟೆಗೇ ಲಂಡನ್ನಿಗೆ ಟಿಕೆಟ್ ಬುಕ್ ಆಗಿದೆ’ ಎಂದು ಬೀಳ್ಕೊಟ್ಟಿದ್ದರು.

ಮನೆಯಿಂದ ಹೊರಟ ವಿಷ್ಣು ದೂರದಲ್ಲಿ ರಸ್ತೆಯ ಕಸ ಗುಡಿಸುವವಳೊಂದಿಗೆ ಕುಮುದ ಮಾತನಾಡುತ್ತಿರುವುದು ಕಂಡು ನಡಿಗೆಯನ್ನು ನಿಧಾನಿಸಿದ... ‘ಯಾವುದೋ ಗಂಡ್ಸು ಮನೆ ನೋಡ್ಕೊಳ್ಳೋಕೆ ಬಂದಿದಾನೆ. ನಾನು ಬರೋಲ್ಲ ಅಂತ ಲೆಕ್ಕಾಚಾರ ಮಾಡಿಕೊಂಡೆ ಬಂದೆ ಕಣವ್ವಾ’. ವ್ಯಾನಿಟಿ ಬ್ಯಾಗ್ ಹೆಗಲಿಗೆ ಸಿಕ್ಕಿಸಿಕೊಂಡು ಕೈ ಬಾಯಿ ಮಾಡುತ್ತಾ ಮಾತನಾಡುತ್ತಿದ್ದ ರೀತಿಯಲ್ಲಿ ಮೊದಲು ನೋಡಿದ್ದಕ್ಕಿಂತ ಹೆಚ್ಚು ಸುಂದರವಾಗಿ ಕಂಡಿದ್ದಳು...ಬಂದ ಭಾಗ್ಯವನ್ನು ಕೈಯಾರೆ ಒದ್ದೆನಲ್ಲ ಎಂದು ವಿಷ್ಣುವಿನ ಅವಿವಾಹಿತ ಬದುಕು- ಮುಂದಿನ ಜನ್ಮದಲ್ಲಿ ಬ್ರಾಹ್ಮಣನಾಗಿ ಹುಟ್ಟಬಾರದು ಎನ್ನುವ ವಿಷ್ಣುವಿನ ನಿರ್ಧಾರಕ್ಕೆ ತನ್ನ ರುಜು ಹಾಕಿತ್ತು.

***

ಅದಾಗಲೇ ವಿಷ್ಣು ಕೇರ್ ಟೇಕರ್ ಅವತಾರವೆತ್ತಿ ಒಂದು ತಿಂಗಳೇ ಕಳೆದಿದ್ದ. ಬೇಕು ಬೇಡದ ಎಲ್ಲ ವಿಷಯಗಳನ್ನು ಫೋನ್‌ನಲ್ಲಿ ಹಂಚಿಕೊಂಡಿದ್ದರು ರಾಮನ್. ಪ್ರಾರಂಭದಲ್ಲಿ ಪ್ರತಿದಿನವೂ ಬರುತ್ತಿದ್ದ ಫೋನ್ ಮೂರು ನಾಲ್ಕು ದಿನಕ್ಕೆ ಇಳಿದಿತ್ತು. ಸುತ್ತ ಮುತ್ತಲ ಕೆಲವು ವ್ಯಕ್ತಿಗಳಿಂದ ಈ ವ್ಯಕ್ತಿಯ ಬಗೆಗಿನ ಹಲವಾರು ಮಾಹಿತಿಗಳೂ ಲಭ್ಯವಾಗಿದ್ದವು. ತನ್ನೊಡನೆ ಮಾತನಾಡುವ ಪ್ರತಿಯೊಬ್ಬನಲ್ಲೂ ಈ ಮನೆ ಮಾರಾಟ ಮಾಡ್ತಾರಂತಾ ಎನ್ನುವ ಪ್ರಶ್ನೆಯೇ ಮುಖ್ಯವಾಗಿತ್ತು... ‘ಇದು ನಮ್ಮಪ್ಪ ಕಟ್ಟಿಸಿದ ಮನೆ. ಇದನ್ನು ನಾನು ಯಾರಿಗೂ ಮಾರೋಲ್ಲ’ ಎಂದು ಹಿಂದೆಯೇ ಹೇಳಿದ್ದರಿಂದ ತನಗೆ ಇಷ್ಟವಾಗುವವರೆಗೆ ಕೇರ್ ಟೇಕರ್ ಕೆಲಸ ಗಟ್ಟಿ ಎನ್ನುವ ವಿಶ್ವಾಸದಲ್ಲಿದ್ದ.

ಈ ದಿನ ಎರಡನೆಯ ಬಾರಿ ಫೋನ್ ಬಂದಾಗ ಏನಿರಬಹುದು ಎನ್ನುವ ಆತಂಕ. ‘ಒಂದು ಮುಖ್ಯ ವಿಷಯ ಹೇಳೋದಿದೆ ವಿಷ್ಣು. ನಾನು ಈ ಸಾರಿ ಬಂದಾಗ ನಿಮ್ಮನೆ ಔಟ್‌ಹೌಸ್‌ಗೆ ಹೋಗಿದ್ದೆ. ನಿಮ್ ಆರೋಗ್ಯ ಚೆನ್ನಾಗಿದೆ ತಾನೆ? ಏನೂ ಆಗಿಲ್ವ ನಿಮಗೆ?’ ಏನು ಉತ್ತರಿಸಬೇಕೆನ್ನುವ ಗೊಂದಲದಲ್ಲಿದ್ದಾಗಲೇ ಅವರ ಮಾತು ಮುಂದುವರೆದಿತ್ತು... ‘ನಿಮ್ಮ ಔಟ್ ಹೌಸಿನ ಗೋಡೆಯಲ್ಲಿ ಮಳೆಗಾಲದಲ್ಲಿ ನೀರು ಸೋರಿತ್ತು. ಗೋಡೆ ಎಲ್ಲಾ ಸ್ವಲ್ಪ ಪಾಚಿ ಕಟ್ಟಿತ್ತು... ನಾನು ಹಾಗೇ ವಾಪಸು ಬಂದ್ ಬಿಟ್ಟೆ. ಅದು ಬ್ಯಾಕ್ಟೀರಿಯಾ ವಿಷ್ಣು. ನಮ್ ದೇಹಕ್ಕೆ ಅಪಾಯ...’

‘ನಾವು ಹಳ್ಳಿಯಲ್ಲಿ ಬೆಳೆದವರು ಸಾರ್... ಇವೆಲ್ಲ ನಮಗೆ ಮಾಮೂಲು’ ವಿಷ್ಣು ಅವರ ಮಾತಿನ ನಡುವೆಯೇ ನುಡಿದಿದ್ದ... ರಾಮನ್‌ರ ಧ್ವನಿ ಬದಲಾಗಿತ್ತು.

‘ನಾನ್ ಹೇಳೊದನ್ನು ಕೇಳಿ ವಿಷ್ಣು... ನಾನು ಬ್ಯಾಕ್ಟೀರಿಯಾಲಜಿಸ್ಟ್... ಅದರ ಬಗ್ಗೆ ನಾನು ರಿಸರ್ಚ್ ಮಾಡಿದೇನೆ. ಪ್ರೊಫೆಸರ್ ಆಗಿ ಮೂವತ್ತು ವರ್ಷ ಪಾಠ ಮಾಡಿದೇನೆ. ನನ್ ಮನೆನಲ್ಲಿ ಅದೆಲ್ಲ ಇರೋದು ನನಗೆ ಇಷ್ಟ ಆಗಲ್ಲ... ನಾನು ಮೈಕೆಲ್‌ಗೆ ಹೇಳಿ ಎಲ್ಲಾ ಏರ್ಪಾಟು ಮಾಡ್ತೇನೆ... ಅವನು ಮೆಡಿಸಿನ್ ಸ್ಪ್ರೇ ಮಾಡಿಸಿ ಗೋಡೆಗೆ ಬೇರೆ ಬಣ್ಣ ಹೊಡೆಸುತ್ತಾನೆ...’

ಅಲ್ಲಿ ಯಾವ ವೃತ್ತಿ ಮಾಡುತ್ತಿದ್ದರು ಎನ್ನುವ ಪುಷ್ಪಾ ಮೇಡಮ್‌ಗೂ ಗೊತ್ತಿರದ ವಿಷಯ ತಿಳಿದಂತಾಗಿತ್ತು... ಹುಚ್ಚುಚ್ಚಾಗಿ ಆಡುವವರೇ ಪ್ರೊಫೆಸರ್‌ಗಳಾಗುತ್ತಾರೋ ಅಥವಾ ಪ್ರೊಫೆಸರ್‌ಗಳಾದ ಮೇಲೆ ಹುಚ್ಚುಚ್ಚಾಗಿ ಆಡುತ್ತಾರೋ ಎನ್ನುವ ಹಲವು ದೃಷ್ಟಾಂತಗಳು ತಲೆಯಲ್ಲಿ ಸುಳಿದಾಡಿದ್ದವು. ತನಗೆ ಎರಡು ದಿನದಿಂದ ಕೆಮ್ಮು ಜೋರಾಗಿ ಕಫದಲ್ಲಿ ಹಸಿರು ಬಣ್ಣ ಕಂಡದ್ದು ನೆನಪಾಗಿ- ತಾನು ಸೇದುವ ಸಿಗರೇಟಿಗಿಂತ ಪಾಚಿಯೇ ಹೆಚ್ಚು ಹಾನಿಕಾರಕ ಎನ್ನುವ ತೀರ್ಮಾನಕ್ಕೆ ಬಂದ ವಿಷ್ಣು ಗೂಡಂಗಡಿಯತ್ತ ಹೊರಟ.

***

ಹದಿನೈದು ದಿನದಿಂದ ವಿಷ್ಣುವಿಗೆ ಕೇರ್‌ ಟೇಕರ್‌ ಹೊರೆ ಕಡಿಮೆಯಾಗಿತ್ತು. ಮೈಕೆಲ್‌ ಮನೆಯ ನವೀಕರಣದ ಕೆಲಸ ಮಾಡಿಸುತ್ತಿದ್ದ. ಔಟ್‌ಹೌಸಿನ ಗೋಡೆಗೂ ಸುಣ್ಣ- ಬಣ್ಣ ಬಳಿದಾಗಿತ್ತು. ಮನೆಯ ಬಾಗಿಲುಗಳಿಗೆ ಕಬ್ಬಿಣದ ಗ್ರಿಲ್‌ ಬಂದಿತ್ತು. ಬಾವಿಯ ಸುತ್ತಲೂ ಇದ್ದ ತೆರೆದ ಜಾಗದ ಮೇಲೂ ಕಬ್ಬಿಣದ ಗ್ರಿಲ್‌ ಜೋಡಿಸಲಾಗಿತ್ತು. ಮನೆಯ ಕಾರ್‌ ಗ್ಯಾರೇಜಿನಿಂದ ಒಳ ಪ್ರವೇಶಿಸಿದರೆ ಅಕ್ಷರಶಃ ಜೈಲು.

***

ಲಂಡನ್ನಿನಿಂದ ಬರುತ್ತಿರುವ ರಾಮನ್‌ರನ್ನು ಬೆಳಿಗ್ಗೆ ಐದು ಗಂಟೆಗೆ ಎದುರುಗೊಳ್ಳುವ ಒತ್ತಡದಲ್ಲಿದ್ದ ವಿಷ್ಣು. ‘ಮಿಲ್ಕ್‌ ಬೂತಿನಿಂದ ಬೆಳಿಗ್ಗೆ ನಾಲ್ಕು ಗಂಟೆಗೆ ಹಾಲು ತನ್ನಿ. ಲೇಟಾದರೆ ಅವನು ನೀರು ಬೆರೆಸುತ್ತಾನೆ’ ಎನ್ನುವ ಆದೇಶದ ಕಾರಣಕ್ಕೆ ಹಾಲಿನ ಪಾತ್ರೆ ಹಿಡಿದು ಹೊರಟವನಿಗೆ, ಕಂಪೌಂಡ್‌ ಪಕ್ಕ ನಿಂತಿದ್ದ ಅಲವೇಲಮ್ಮನ ಕಸದ ಗಾಡಿ ನೆನಪಾಯಿತು. ಯಾರೂ ತನ್ನನ್ನು ಗಮನಿಸುತ್ತಿಲ್ಲ ಎನ್ನುವ ಖಾತ್ರಿಯಲ್ಲಿ ತಳ್ಳಿಕೊಂಡು ಹೊರಟ. ಗಾಡಿಯ ಢಣಢಣ ಶಬ್ದಕ್ಕೆ ಸುತ್ತಲ ನಾಯಿಗಳು ಬೊಗಳುತ್ತಾ ಬಂದವು. ವೇಗ ಹೆಚ್ಚಿಸಿ ಪಕ್ಕದ ರಸ್ತೆಯ ಮೂಲೆಯಲ್ಲಿ ಬಿಟ್ಟು-ತನ್ನ ಈ ಅವತಾರದಲ್ಲಿ ಇನ್ನೇನು ಬಾಕಿ ಇರಬಹುದು ಎಂದು ತನ್ನನ್ನೇ ಪ್ರಶ್ನಿಸಿಕೊಂಡ.

***

ಇನ್ನೇನು ಬರುವ ಸಮಯವಾಗಿದೆ ಎನ್ನುವ ಚಡಪಡಿಕೆಯಲ್ಲಿರುವಾಗಲೇ ಮನೆಯ ಮುಂದೆ ಕಾರು ಬಂದುನಿಂತಿತ್ತು.

ಗುಡ್‌ ಮಾರ್ನಿಂಗ್‌ ವಿಷ್ಣು ಎನ್ನುತ್ತಲೇ ಕಾರಿನಿಂದಿಳಿದಿದ್ದರು. ಮುಖದಲ್ಲಿ ತಮ್ಮ ಮನೆಯನ್ನು ತಲುಪಿದ ಸಂತೋಷ ಎದ್ದುಕಾಣುತ್ತಿತ್ತು.

ಲಗೇಜ್‌ ಹಿಡಿದುಕೊಳ್ಳಲು ಮುಂದಾದ ವಿಷ್ಣುವಿಗೆ ತಟ್ಟನೆ ಕೇಳಿದ್ದರು ‘ಕೈಯೆಲ್ಲಾ ಸೋಪ್ಹಚ್ಚಿ ಕ್ಲೀನಾಗಿ ತೊಳ್ಕೊಂಡಿದೀರಾ? ಪಾಠಕ್ಕೆ ಸಂಬಂಧಿಸದೇ ಇದ್ದ ಪ್ರಶ್ನೆಯನ್ನು ಪಬ್ಲಿಕ್‌ ಪರೀಕ್ಷೆಯಲ್ಲಿ ಎದುರಿಸಿದ ವಿದ್ಯಾರ್ಥಿಯಂತಾಗಿತ್ತು ವಿಷ್ಣುವಿನ ಪರಿಸ್ಥಿತಿ!

‘ಬೇಡ ಬಿಡಿ ನಾನೇ ತಗೋತೇನೆ’ ಪೆಚ್ಚು ಮೋರೆ ಮಾಡಿಕೊಂಡು ಕೈ ಹಿಂದಕ್ಕೆಳೆದುಕೊಂಡಿದ್ದ ವಿಷ್ಣು.

ವರಾಂಡದ ಸ್ಟೂಲಿನ ಮೇಲೆ ಕುಳಿತು ಶೂ ಕಳಚಿ ಸಾಕ್ಸ್‌ ತೆಗೆಯುತ್ತಲೇ... ‘ನೀವು ಸ್ವಲ್ಪ ದಪ್ಪ ಆಗಿದೀರಿ ವಿಷ್ಣು’ ಎಂದಾಗ ತನ್ನನ್ನು ಕೂಲಂಕಶವಾಗಿ ನೋಡುತ್ತಿರುವಂತೆ ಭಾಸವಾಗಿ ಹೊಟ್ಟೆಯನ್ನು ಸ್ವಲ್ಪ ಒಳಗೆ ಎಳೆದುಕೊಂಡು ನಕ್ಕಿದ್ದ ವಿಷ್ಣು.

ಮನೆಯನ್ನೆಲ್ಲ ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ವಿಷ್ಣುವನ್ನೇ ನೋಡುತ್ತಾ ‘ನಿಮ್ಮಿಂದ ತುಂಬ ಉಪಕಾರ ಆಯ್ತು ವಿಷ್ಣು... ಮನೆ ಕ್ಲೀನಾಗಿ ಇಟ್ಟಿರ್ತೀರೋ ಇಲ್ವೋ ಅಂತ ಗಾಬರಿಯಾಗಿತ್ತು’ ಜೀವನದಲ್ಲಿ ಮೂದಲಿಸಿಕೊಂಡೇ ಬದುಕಿದ್ದ ವಿಷ್ಣುವಿಗೆ, ಮೊದಲ ಬಾರಿ ಕ್ಲೀನ್ ಅಡಿಕ್ಷನ್‌ ರಾಮನ್‌ ಪಿಳ್ಳೈಯವರ ಹಸ್ತಾಕ್ಷರವಿರುವ ‘ಪ್ರಶಂಸಾಪತ್ರ’ ಪಡೆದ ಖುಷಿ. ಮೈನ್‌ ಹೌಸ್‌ಗೆ ಬಡ್ತಿ ಪಡೆಯುವ ಕನಸು ಕಂಡಿದ್ದ ಕೇರ್‌ಟೇಕರ್‌ ವಿಷ್ಣು.

ನೋಡ ನೋಡುತ್ತಿದ್ದಂತೆ ವಾರ ಕಳೆದಿತ್ತು. ರಾಮನ್‌ ಪುನಃ ಹೊರಟು ನಿಂತಿದ್ದರು. ಕಾರು ಹತ್ತುವ ಮೊದಲು ‘ನೀವೊಂದ್ ಮದುವೆ ಮಾಡಿಕೊಳ್ಳಿ ವಿಷ್ಣು... ಏಕಾಂಗಿ ಬದುಕು ಮನುಷ್ಯನನ್ನು ಖಿನ್ನತೆಗೆ ನೂಕುತ್ತೆ’... ವಿಷ್ಣು ತೇವವಾದ ಕಣ್ಣುಗಳಿಂದ ಕಾರು ರಸ್ತೆಯಲ್ಲಿ ತಿರುಗಿ ಮಾಯವಾಗುವವರೆಗೂ ಕೈಬೀಸುತ್ತಲೇ ಇದ್ದ.

***

ವಿಷ್ಣು ಹೊಸ ಕಂಪೆನಿಗೆ ಸೇರಿದ್ದು ಆ ಕೆಲಸವೂ ನಿರಾತಂಕವಾಗಿ ಸಾಗಿತ್ತು. ಈಗೀಗ ಫೋನ್‌ ಬರುವುದು ಕಡಿಮೆಯಾಗಿದ್ದರೂ ಮಾತಿನಲ್ಲಿ ಮೊದಲಿನ ವಿನಯವಿರಲಿಲ್ಲ. ಬಾಡಿಗೆ ಕೊಡದೇ ಬದುಕುತ್ತಿದ್ದೇನೆ ಎನ್ನುವ ಮಾತುಗಳನ್ನು ಈ ಬಾರಿ ಬಂದಾಗ ಹೇಳಿದ್ದರಿಂದ ಅವರ ಸಮಯಸಾಧಕ ಮಾತುಗಳ ಪರಿಚಯವಾಗಿತ್ತು. ಅವರೊಬ್ಬ ಸ್ವಾರ್ಥಿ ಎಂದು ಅರಿವಾಗಿತ್ತು. ಆದದ್ದಾಗಲಿ.. ಪ್ರತಿದಿನ ಕ್ಲೀನ್‌ ಮಾಡದಿದ್ದರೂ ಅವರು ಬರುವಾಗ ಕ್ಲೀನ್ ಇದ್ದರೆ ಸಾಕು ಎನ್ನುವ ತೀರ್ಮಾನಕ್ಕೆ ಬಂದಿದ್ದ ವಿಷ್ಣು. ಹೆಚ್ಚು ಕಡಿಮೆ ಮೇನ್‌ಹೌಸ್‌ಗೆ ಶಿಫ್ಟಾಗಿದ್ದ... ಊರಿಗೆ ತಿಂಗಳಿಗೆ ಒಂದೆರಡು ಬಾರಿ ಹೋಗಿ ಬರುತ್ತಿದ್ದ. ಈ ಬಾರಿ ರಾಮನ್‌ ಬಂದಾಗ ಅಕ್ಕಪಕ್ಕದ ಯಾರನ್ನೂ ಒಮ್ಮೆಯೂ ಮಾತನಾಡಿಸದಿದ್ದರಿಂದ ಅವರೊಡನೆ ಸಂಪರ್ಕವಿಲ್ಲ ಎನ್ನುವುದು ಮನದಟ್ಟಾಗಿತ್ತು. ಶೆಟ್ರ ಹೆಂಡತಿ ದಿನವೂ ಹೂ ಕೀಳುತ್ತಿದ್ದಳು. ಪಕ್ಕದ ಸಾಬರು ನಲ್ಲಿಗೆ ಬಾಲ ಹಾಕಿ ತಮ್ಮ ಗಾರ್ಡನ್‌ಗೆ ನೀರು ತೆಗೆದುಕೊಳ್ಳುತ್ತಿದ್ದರು. ಅಲವೇಲಮ್ಮನ ಕಸದ ಗಾಡಿ ಮನೆಯ ಮುಂದೆ ಕಾಯಂ ಆಗಿತ್ತು. ಊರಿನ ಸ್ನೇಹಿತರು, ಪರಿಚಯಸ್ಥರಿಗೆ ಬಾಗಿಲು ಸದಾ ತೆರೆದಿರುತ್ತಿತ್ತು. ಸ್ನೇಹಿತರ ಬಾಯಲ್ಲಿ ವಿಷ್ಣು ಅಲಿಯಾಸ್‌ ವಿಷ್ಣು ಪಿಳ್ಳೈ ಆಗಿದ್ದ.

***

ವಿಷಯ ತಿಳಿಸುವುದಕ್ಕಾಗಿ ಪುಷ್ಪಲತಾ ಮೇಡಂ ಸುದೀರ್ಘವಾಗಿ ಮಾತನಾಡಿದರು... ‘ರಾಮನ್‌ ಮುಂದಿನ ತಿಂಗಳು ಮಗಳ ಜೊತೆ ಬರ್ತಾ ಇದಾರಂತೆ. ಬಹುಶಃ ಮನೆ ಮಾರಾಟ ಮಾಡ್ತಾರೆ ಅಂತ ಕಾಣುತ್ತೆ. ನನಗೆ ಗೊತ್ತೇ ಇರಲಿಲ್ಲ. ಅವರ ಅಪ್ಪ ಮಾಡಿದ ಎಲ್ಲಾ ಆಸ್ತಿನೂ ಆಗಲೇ ಮಾರ್ಕೊಂಡ್ಬಿಟ್ಟಿದಾರಂತೆ. ಕ್ಲೀನ್ ಅಡಿಕ್ಷನ್‌ ಪಾರ್ಟಿ. ತಾನು ಬಹಳ ಶ್ರೀಮಂತ ಅಂತ ತೋರಿಸೋ ಷೋಕಿ ಬೇರೆ. ಈ ಮನೆ ಮೇಲೂ ತುಂಬಾ ಸಾಲ ಮಾಡಿಕೊಂಡಿದಾರೆ. ಅಪ್ಪ ಅಮ್ಮ ಬಿಟ್ಟುಹೋದ ಮನೆ. ಅದನ್ನೂ ಉಳಿಸಿಕೋಳ್ಳೊಕೆ ಆಗ್ತಾ ಇಲ್ಲ ಅಂತ ಬೇಜಾರಾಗಿದ್ರು. ಈ ಮನೆ ಮಾರಿದ್ರೆ ತಾನು ಇನ್ನು ಇಂಡಿಯಾಕ್ಕೆ ಬರೋ ಹಾಗಿಲ್ಲ ಅಂತ ನನ್ನ ಹತ್ತಿರ ಹೇಳ್ಕೊಂಡ್ ಅಳ್ತಾ ಇದ್ರು ಪಾಪ. ಎಷ್ಟಂದ್ರೂ ನನ್ಮನೆ, ನನ್ಊರು,  ನನ್ನ ದೇಶ ಅನ್ನೋ ಅಭಿಮಾನ ಎಲ್ಲರಿಗೂ ಇರುತ್ತಲ್ಲ ವಿಷ್ಣು’

***

ಒಂದೂವರೆ ವರ್ಷದ ನಂತರ ಮಗಳ ಜೊತೆ ರಾಮನ್‌ ಪಿಳ್ಳೈ ಬಂದಿಳಿದಿದ್ದರು. ಮಗಳನ್ನು ಪರಿಚಯ ಮಾಡಿಸಿದ್ದು ಬಿಟ್ಟರೆ ಮಗಳೊಡನೆ ಯಾವುದೇ ಮಾತುಕತೆ ನಡೆಯಲಿಲ್ಲ. ಬಂದ ದಿನವೇ ಪಕ್ಕದ ರೋಡಿನಲ್ಲಿರುವ ಶ್ರೀಮಂತ ವ್ಯಕ್ತಿಯೊಬ್ಬರು ಮೊದಲೇ ನಿಕ್ಕಿಯಾದಂತೆ ಮನೆ ನೋಡಿಹೋಗಿದ್ದರು.

ವಿಷ್ಣು ತನ್ನ ಅವತಾರದ ಕೊನೆಯ ಕ್ಷಣಗಳಿಗೆ ಬಂದು ನಿಂತಿದ್ದ.

***

ತನ್ನ ಲಗೇಜನ್ನು ತೆಗೆದುಕೊಂಡು ವಿಷ್ಣು ಗ್ಯಾರೇಜ್‌ ಬಾಗಿಲಿನಿಂದ ಹೊರಬಂದ.

‘ವಿಷ್ಣು... ನೀವು ಎಲ್ಲಿಗೆಹೋಗ್ತೀರಿ?’ ಮೈನ್ ಹೌಸಿನ ಕಿಟಕಿಯಿಂದಲೇ ಕೇಳುತ್ತಿದ್ದ ಪ್ರಶ್ನೆಯಲ್ಲಿ ಪಾಪ ಎನ್ನುವ ಕುತೂಹಲವಿತ್ತು.

‘ಇದು ನಮ್ ಅಪ್ಪ ಕಟ್ಟಿಸಿದ ಮನೆ. ನನಗೆ ಮಾರೋಕೆ ಇಷ್ಟ ಇಲ್ಲ. ಆದರೆ ಬೇರೆ ವಿಧಿ ಇಲ್ಲ’ ಮಾತನಾಡುತ್ತಲೇ ಇದ್ದರು ರಾಮನ್. ಮಾತಿನಲ್ಲಿ ದುಃಖವಿತ್ತು.

‘ನೀವು ಎಲ್ಲಿಗೆ ಹೋಗ್ತೀರಿ ಅಂತ ಹೇಳೇ ಇಲ್ಲ?’ ಕುತೂಹಲ ಹೆಚ್ಚಾಗಿತ್ತು.

‘ನಾನು ನನ್ನ ಊರಿಗೆ ವಾಪಾಸ್ಹೋಗಿ ಅಪ್ಪ-ಅಮ್ಮ, ಜಮೀನು ಎಲ್ಲಾ ನೋಡ್ಕೊಂಡ್ ಇರೋಣ ಅಂತ ತೀರ್ಮಾನ ಮಾಡಿದೇನೆ ಸಾರ್...’

‘ಪ್ಲೀಸ್ ಹಾಗೇ ಮಾಡಿ ವಿಷ್ಣು... ಐ ಲೈಕ್‌ ಯು’.

ಇಬ್ಬರ ನಡುವೆ ಮೌನ ಆವರಿಸಿತ್ತು.

‘ನಾನು ಮತ್ತೆ ಬೆಂಗಳೂರಿಗೆ ಬರೋಲ್ಲ ವಿಷ್ಣು...ಇಲ್ಲಿ ಬಂದರೆ ನನ್ಮನೆ ಇರೋಲ್ಲ... ಅದರಲ್ಲಿ ಬೇರೆಯವರಿರ‍್ತಾರೆ. ನನಗೆ ಅದನ್ನ ಸಹಿಸಿಕೊಳ್ಳೋದು ಕಷ್ಟ..’ ವಿಷ್ಣುವಿನ ನೋಟ ರಸ್ತೆಯ ಕಡೆ ಹೊರಳಿತ್ತು.

‘ನಾನು ಬೆಂಗಳೂರಿಗೆ ಬಂದ್ರೆ ಸಾಧ್ಯವಾದಾಗೆಲ್ಲ ಇಲ್ಲಿ ಬಂದ್ಹೋಗ್ತೇನೆ ಸಾರ್...’ ವಿಷ್ಣುವಿನತ್ತಲೇ ವಿಚಿತ್ರವಾಗಿ ನೋಡುತ್ತಿದ್ದರು ರಾಮನ್.

‘ಇದು ನಾನು ಬಂದ ಪ್ರಾರಂಭದಲ್ಲಿ ನೀವೇ ಹಣ ಕೊಟ್ಟು, ನನ್‌ ಕೈಯಾರೆ ನೆಡಿಸಿದ್ರಿ...’ ರಸ್ತೆಯ ಪಕ್ಕದಲ್ಲಿದ್ದ ಹೊಂಗೆ ಗಿಡದತ್ತ ಕೈ ತೋರಿಸಿ ನಿಂತಿದ್ದ ವಿಷ್ಣು. ‘ಎಷ್ಟ್ ಎತ್ತರಕ್ಕೆ ಬೆಳೆದು ನೆರಳು ನೀಡ್ತಾ ಇದೆ ನೋಡಿ. ಸ್ವಲ್ಪ ವರ್ಷಕ್ಕೆ ಈ ಮನೆಗಿಂತಲು ಎತ್ತರ ಬೆಳೆದು ನೆರಳು ನೀಡುತ್ತೆ. ಹಕ್ಕಿಗಳಿಗೆ ಆಸರೆ ನೀಡುತ್ತೆ. ನನಗೆ ಇಷ್ಟು ದಿನ ನೆರಳು ಕೊಟ್ಟ ಈ ಮನೆಯ ಋಣ ಸ್ವಲ್ಪವಾದರೂ ತೀರಿಸಿದೆ ಅನ್ನೋ ಖುಷಿಯಲ್ಲಿ ಇದನ್ನು ನೋಡೋದಕ್ಕಾದರೂ ನಾನು ಬರ್ತೇನೆ ಸಾರ್...’ ನಾಚಿಕೊಂಡವರಂತೆ ಮುಖ ತಗ್ಗಿಸಿದ್ದರು ರಾಮನ್. ಕಡೆಯ ಬಾರಿ ವಿದಾಯ ಹೇಳಿ ಗೇಟ್ತೆರೆದು ಹೊರಟಿದ್ದ ವಿಷ್ಣು, ಗೇಟ್ಹಾಕುತ್ತಾ ರಾಮನ್ರತ್ತ ನೋಡಿದ... ನೀರು ತುಂಬಿದ್ದ ರಾಮನ್ ಪಿಳ್ಳೈಯವರ ಕಣ್ಣುಗಳು ಹೊಂಗೆ ಗಿಡದತ್ತಲೇ ದೃಷ್ಟಿ ನೆಟ್ಟು ಸಮಾಧಾನದ ನಗುವಿಗೆ ಪ್ರಯತ್ನಿಸುತ್ತಿದ್ದವು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT