ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು ಶೇ 25 ರಷ್ಟು ಹೆಚ್ಚಳ

Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರಫ್ತು ವಹಿವಾಟು ಸೆಪ್ಟೆಂಬರ್‌ನಲ್ಲಿ ಶೇ 25.67 ರಷ್ಟು ಏರಿಕೆ ಕಂಡಿದ್ದು, ಆರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಒಟ್ಟಾರೆ ₹1.85 ಲಕ್ಷ ಕೋಟಿ ಮೌಲ್ಯದ ಸರಕುಗಳು ರಫ್ತಾಗಿವೆ.

ಈ ಹಿಂದೆ ಮಾರ್ಚ್‌ ತಿಂಗಳಿನಲ್ಲಿ ಶೇ 27.5 ರಷ್ಟು ಗರಿಷ್ಠ ಮಟ್ಟದ ಪ್ರಗತಿ ಕಂಡಿತ್ತು. ರಾಸಾಯನಿಕ, ಪೆಟ್ರೋಲಿಯಂ ಮತ್ತು ಎಂಜಿನಿಯರಿಂಗ್ ಉತ್ಪನ್ನಗಳ ರಫ್ತು ಪ್ರಮಾಣ ಹೆಚ್ಚಾಗಿರುವುದರಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ಆಮದು ವಹಿವಾಟು ಸಹ ಶೇ 18.09 ರಷ್ಟು ಹೆಚ್ಚಾಗಿದ್ದು, ಒಟ್ಟು ₹2.44 ಲಕ್ಷ ಕೋಟಿ ಮೌಲ್ಯದ ಸರಕುಗಳು ಆಮದಾಗಿವೆ.

ವ್ಯಾಪಾರ ಕೊರತೆ ಅಂತರ (ರಫ್ತು ಮತ್ತು ಆಮದು ನಡುವಣ ಅಂತರ) ₹58,500 ಕೋಟಿಗಳಿಂದ ₹58,370 ಕೋಟಿಗಳಿಗೆ ಅಲ್ಪ ಇಳಿಕೆ ಕಂಡಿದೆ. ಚಿನ್ನದ ಆಮದು ಶೇ 5 ರಷ್ಟು ತಗ್ಗಿದ್ದು, ₹11,115 ಕೋಟಿ ಮೌಲ್ಯದ ಚಿನ್ನ ಆಮದು ಮಾಡಿಕೊಳ್ಳಲಾಗಿದೆ.

ತೈಲ ಮತ್ತು ತೈಲಯೇತರ ಉತ್ಪನ್ನಗಳ ಆಮದು ಕ್ರಮವಾಗಿ ಶೇ 18.47 ಮತ್ತು ಶೇ 17.98 ರಷ್ಟು ಏರಿಕೆಯಾಗಿದೆ. ಏಪ್ರಿಲ್‌–ಸೆಪ್ಟೆಂಬರ್ ಅವಧಿಯಲ್ಲಿ ರಫ್ತು ವಹಿವಾಟು ಶೇ 11.52 ರಷ್ಟು ಮತ್ತು ಆಮದು ಶೇ 25.08 ರಷ್ಟು ಏರಿಕೆಯಾಗಿದೆ.

ಇನ್ನೂ ಹೆಚ್ಚಿನ ಪ್ರಗತಿ ನಿರೀಕ್ಷೆ
ಜಿಎಸ್‌ಟಿಗೆ ಸಂಬಂಧಿಸಿದಂತೆ ರಫ್ತುದಾರರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ವಹಿವಾಟು ಇನ್ನಷ್ಟು ಏರಿಕೆ ಕಾಣಲಿದೆ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟ (ಎಫ್‌ಐಇಒ) ವಿಶ್ವಾಸ ವ್ಯಕ್ತಪಡಿಸಿದೆ.

ಜಾಗತಿಕ ವಿದ್ಯಮಾನಗಳು, ರೂಪಾಯಿ ಮೌಲ್ಯದಲ್ಲಿ ಏರಿಳಿತ ಮತ್ತು ಕೆಲವು ದೇಶಗಳ ವ್ಯಾಪಾರ ರಕ್ಷಣಾ ನೀತಿಗಳು ದೇಶದ ರಫ್ತು ವಹಿವಾಟಿನ ಪ್ರಗತಿಗೆ ಅಡ್ಡಿಯಾಗಿವೆ ಎಂದು ಒಕ್ಕೂಟದ ಅಧ್ಯಕ್ಷ ಗಣೇಶ್‌ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ರಫ್ತು ವಹಿವಾಟು ₹20.15 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT