ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಖ್ಯಾತ ಕಳ್ಳನ ಬಂಧನ

Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಕೀ ಬಳಸಿ ತಿಂಗಳಲ್ಲಿ ನಗರದ ನಾಲ್ಕು ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿ ನರಸಿಂಹರೆಡ್ಡಿಯನ್ನು (27)  ಬಂಧಿಸಿರುವ ಗಿರಿನಗರ ಪೊಲೀಸರು, 563 ಗ್ರಾಂ ಚಿನ್ನಾಭರಣ ಹಾಗೂ 7.65ಎಂ.ಎಂ. ಪಿಸ್ತೂಲ್ ಜಪ್ತಿ ಮಾಡಿದ್ದಾರೆ.

ಗಿರಿನಗರ ಠಾಣೆಯ ರೌಡಿಶೀಟರ್ ಆಗಿರುವ ನರಸಿಂಹ ರೆಡ್ಡಿ, 2014ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲು ಸೇರಿದ್ದ. ಮೂರು ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾದ ಈತ, ಮೋಜಿನ ಜೀವನಕ್ಕಾಗಿ ಹಣ ಹೊಂದಿಸಲು ಕಳ್ಳತನ ಮಾಡಲಾರಂಭಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸಂಜೆ ವೇಳೆ ಪ್ರತಿಷ್ಠಿತ ರಸ್ತೆಗಳಲ್ಲಿ ಓಡಾಡಿಕೊಂಡು ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದ ಈತ, ರಾತ್ರಿ ನಕಲಿ ಕೀ ಬಳಸಿ ಆ ಮನೆಗಳಿಗೆ ನುಗ್ಗಿ ನಗ–ನಗದು ಕದ್ದೊಯ್ಯುತ್ತಿದ್ದ. ಎಚ್‌ಎಸ್‌ಆರ್ ಲೇಔಟ್, ಸುಬ್ರಹ್ಮಣ್ಯಪುರ ಹಾಗೂ ಗಿರಿನಗರ ಠಾಣೆಗಳ ವ್ಯಾಪ್ತಿಯ ನಾಲ್ಕು ಮನೆಗಳಲ್ಲಿ ಆಗಸ್ಟ್‌ನಲ್ಲಿ ಕಳ್ಳತನ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಗಿರಿನಗರ ನಿವಾಸಿ ಕಿಶೋರ್ ಎಂಬುವರು ಆ.21ರಂದು ಕುಟುಂಬ ಸಮೇತ ಮಂತ್ರಾಲಯಕ್ಕೆ ಹೋಗಿದ್ದರು. ಈ ವೇಳೆ ಆರೋಪಿ ಮನೆಗೆ ನುಗ್ಗಿ 120ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದ. ಮನೆ ಮುಂಭಾಗದ ಕಟ್ಟಡವೊಂದರ ಸಿ.ಸಿ.ಕ್ಯಾಮೆರಾದಲ್ಲಿ ಆತನ ಚಹರೆ ಸೆರೆಯಾಗಿತ್ತು. ಆತ ನಮ್ಮ ಠಾಣೆಯಲ್ಲೇ ರೌಡಿಶೀಟರ್ ಆಗಿದ್ದರಿಂದ ಸಿಬ್ಬಂದಿ ಸುಲಭವಾಗಿ ಗುರುತು ಹಿಡಿದರು. ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆತನನ್ನು, ಮೊಬೈಲ್ ಕರೆ ವಿವರ ಆಧರಿಸಿ ಪತ್ತೆ ಮಾಡಲಾಯಿತು’ ಎಂದು ಗಿರಿನಗರ ಪೊಲೀಸರು ತಿಳಿಸಿದರು.

‘ತಮಿಳುನಾಡಿನ ವ್ಯಕ್ತಿಯೊಬ್ಬನಿಂದ ಪಿಸ್ತೂಲ್ ಖರೀದಿಸಿದ್ದೆ. ಕಳ್ಳತನಕ್ಕೆ ಹೋದಾಗ ಯಾರಾದರೂ ಎದುರಾದರೆ ಅವರನ್ನು ಹೆದರಿಸಲು ಅದನ್ನು ಇಟ್ಟುಕೊಂಡಿದ್ದೆ. ಈವರೆಗೂ ಪಿಸ್ತೂಲ್ ಬಳಕೆ ಮಾಡಿಲ್ಲ’ ಎಂದು ಆರೋಪಿ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT