ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಸುತ್ತಿಗೆ ಕಿದಂಬಿ ಶ್ರೀಕಾಂತ್

Last Updated 21 ಅಕ್ಟೋಬರ್ 2017, 19:43 IST
ಅಕ್ಷರ ಗಾತ್ರ

ಒಡೆನ್ಸ್‌: ಭಾರತದ ಕಿದಂಬಿ ಶ್ರೀಕಾಂತ್ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರಿಸ್ ಪ್ರೀಮಿಯರ್ ಟೂರ್ನಿಯಲ್ಲಿ ಶನಿವಾರ ಫೈನಲ್ ಪ್ರವೇಶಿಸಿದರು.

ಸೆಮಿಫೈನಲ್ ಹಣಾಹಣಿಯಲ್ಲಿ ಶ್ರೀಕಾಂತ್ 21–18, 21–17ರಿಂದ ಹಾಂಕಾಂಗ್‌ನ ವಾಂಗ್ ವಿಂಗ್ ಕೀ ವಿನ್ಸೆಂಟ್ ವಿರುದ್ಧ ಗೆದ್ದರು.

ಆಕ್ಸೆಲ್‌ಸನ್ ವಿರುದ್ಧ ಜಯ
ಅವರು ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ  14–21, 22–20, 21–7ರಲ್ಲಿ ಅಕ್ಸೆಲ್‌ಸನ್ ವಿರುದ್ಧ ಗೆದ್ದಿದ್ದರು. 56 ನಿಮಿಷದ ಪೈಪೋಟಿಯಲ್ಲಿ ಶ್ರೀಕಾಂತ್‌ ಉತ್ತಮವಾಗಿ ಆಡಿದರು. ಮೊದಲ ಗೇಮ್‌ನಲ್ಲಿ  ಸೋತ ಶ್ರೀಕಾಂತ್ ಎರಡನೇ ಗೇಮ್‌ ಅನ್ನು ಕೇವಲ ಎರಡು ಪಾಯಿಂಟ್ಸ್‌ಗಳ ಅಂತರದಿಂದ ಗೆದ್ದರು.

ಕುತೂಹಲ ಮೂಡಿಸಿದ್ದ ನಿರ್ಣಾಯಕ ಗೇಮ್‌ನಲ್ಲಿ ಅಕ್ಸೆಲ್‌ಸನ್ ನಿರಸವಾಗಿ ಆಡಿದರು. ಆರಂಭದಲ್ಲೇ ಹಿಂದೆ ಉಳಿದ ಅವರು  ತಪ್ಪುಗಳಿಂದ ಭಾರತದ ಆಟಗಾರನಿಗೆ ಪಾಯಿಂಟ್ಸ್ ಬಿಟ್ಟುಕೊಟ್ಟರು. ಶ್ರೀಕಾಂತ್ ಅವರ ಷಟಲ್‌ನಿಂದ ಹೊರಬಂದ ಪ್ರಬಲ ಸ್ಮ್ಯಾಷ್ ಮತ್ತು ರಿಟರ್ನ್ಸ್‌ಗಳನ್ನು ನಿರೀಕ್ಷಿಸಿರದ ಅಕ್ಸೆಲ್‌ಸನ್ ಸೋತರು.

‘ಈ ಜಯ ನನ್ನ ಚೈತನ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಇಂಡಿಯಾ ಓಪನ್‌, ಜಪಾನ್‌ ಓಪನ್ ಹಾಗೂ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ನಾನು ಅಕ್ಸೆಲ್‌ಸನ್ ಅವರಿಂದ ಸೋತಿದ್ದೆ. ತಾಳ್ಮೆಯ ಆಟದಿಂದ ಈಗ ಗೆಲುವು ಒಲಿದಿದೆ. ಮೂರನೇ ಗೇಮ್‌ನಲ್ಲಿ ಅಕ್ಸೆಲ್‌ಸನ್‌ ಚೆನ್ನಾಗಿ ಆಟ ಆಡಲಿಲ್ಲ’ ಎಂದು ಶ್ರೀಕಾಂತ್ ಹೇಳಿದ್ದಾರೆ.

ಸೈನಾ, ಪ್ರಣಯ್‌ಗೆ ಸೋಲು: ಹಿಂದಿನ ಪಂದ್ಯಗಳಲ್ಲಿ ಅಗ್ರಗಣ್ಯ ಸ್ಪರ್ಧಿಗಳನ್ನು ಮಣಿಸಿದ್ದ ಸೈನಾ ನೆಹ್ವಾಲ್ ಹಾಗೂ ಎಚ್‌.ಎಸ್‌. ಪ್ರಣಯ್‌ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸೈನಾ 10–21, 13–21ರಲ್ಲಿ ಐದನೇ ರ‍್ಯಾಂಕ್‌ನ ಜಪಾನ್‌ನ ಆಟಗಾರ್ತಿ ಅಕಾನೆ ಯಮಗುಚಿ ಎದುರು ಸೋತಿದ್ದಾರೆ.

‘ಸತತವಾಗಿ ಪಂದ್ಯ ಇದ್ದ ಕಾರಣ ವಿಶ್ರಾಂತಿ ಸಿಗಲಿಲ್ಲ. ಮೂರು ತಾಸು ಕೂಡ ಮಲಗಲು ಸಾಧ್ಯವಾಗಿಲ್ಲ. ಈ ರೀತಿಯ ಡ್ರಾಗೆ ಹೊಂದಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ. ಯಮಗುಚಿ ಉತ್ತಮವಾಗಿ ಆಡಿದರು. ನನಗೆ ಪೈಪೋಟಿ ನೀಡಲು ಆಗಲಿಲ್ಲ’ ಎಂದು ಸೈನಾ ಹೇಲಿದ್ದಾರೆ.

ಪ್ರಣಯ್‌ 13–21, 18–21ರಲ್ಲಿ ನೇರ ಗೇಮ್‌ಗಳಿಂದ ಎರಡನೇ ರ‍್ಯಾಂಕ್‌ನ ಕೊರಿಯಾದ ಆಟಗಾರ ಸನ್‌ ವಾನ್‌ ಹೊ ವಿರುದ್ಧ ಸೋತರು.

‘ಸಾಕಷ್ಟು ತಪ್ಪುಗಳನ್ನು ಎಸಗಿದೆ. ತಾಳ್ಮೆ ಕಳೆದುಕೊಂಡು ಆಡಿದೆ. ಇದು ಸೋಲಿಗೆ ಕಾರಣವಾಯಿತು’ ಎಂದು ಪ್ರಣಯ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT