ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಮನ್‌ಪ್ರೀತ್ ಬಳಗ

ಏಷ್ಯಾ ಕಪ್‌ ಹಾಕಿ: ಪಾಕಿಸ್ತಾನ ತಂಡದ ಎದುರು ಸ್ಮರಣೀಯ ಗೆಲುವು
Last Updated 21 ಅಕ್ಟೋಬರ್ 2017, 19:46 IST
ಅಕ್ಷರ ಗಾತ್ರ

ಢಾಕ: ಆಕ್ರಮಣಕಾರಿ ಆಟದಿಂದಾಗಿ ಜಯದ ಓಟ ಮುಂದುವರಿಸಿರುವ ಭಾರತ ತಂಡ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಶನಿವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 4–0 ಗೋಲುಗಳಿಂದ ಮಣಿಸಿ ಫೈನಲ್‌ ಪ್ರವೇಶಿಸಿತು.

ಭಾರತ ತಂಡವು ಟೂರ್ನಿಯ ಫೈನಲ್ ಪ್ರವೇಶಿಸಲು ಪಾಕ್ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಶಿಸ್ತಿನ ಆಟವಾಡಿದ ಮನಪ್ರೀತ್ ಬಳಗವು ಎದುರಾಳಿ ತಂಡದ ತಪ್ಪುಗಳನ್ನು ಬಳಸಿಕೊಂಡು ಗೆದ್ದಿತು. ಮೂರು ಫೀಲ್ಡ್‌ ಗೋಲುಗಳು ಹಾಗೂ ಒಂದು ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಮನ್‌ಪ್ರೀತ್ ಬಳಗ ಗೋಲುಗಳನ್ನು ಗಳಿಸಿತು.

ಸತ್ಬೀರ್ ಸಿಂಗ್‌ (39ನೇ ನಿ.), ಹರ್ಮನ್‌ಪ್ರೀತ್ ಸಿಂಗ್‌ (51ನೇ ನಿ.), ಲಲಿತ್ ಉಪಾಧ್ಯಾಯ (52ನೇ ನಿ.), ಗುರ್ಜಂತ್ ಸಿಂಗ್ (57ನೇ ನಿ.) ಗೋಲುಗಳನ್ನು ದಾಖಲಿಸಿದರು.

ಭಾರತ ತಂಡ ಸೂಪರ್ ಫೋರ್ ಹಂತದ ಬಳಿಕ ಏಳು ಪಾಯಿಂಟ್ಸ್‌ಗಳಿಂದ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಟೂರ್ನಿಯಲ್ಲಿ ಭಾರತಕ್ಕೆ ಸಿಕ್ಕ ನಾಲ್ಕನೇ ಜಯ ಇದಾಗಿದೆ. ಹಾಕಿ ವಿಶ್ವ ಲೀಗ್ ಸೆಮಿಫೈನಲ್ಸ್‌ನಲ್ಲಿಯೂ ಪಾಕ್ ತಂಡವನ್ನು ಎರಡು ಬಾರಿ ಮಣಿಸಿತ್ತು. ಇಲ್ಲಿಯೂ ಗುಂಪು ಹಂತದ ಪಂದ್ಯದಲ್ಲಿ ಪಾಕ್ ಎದುರು ಗೆದ್ದಿದೆ. ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಪಾಕ್ ರಕ್ಷಣಾತ್ಮಕವಾಗಿ ಆಡಿತು.

ಸಿಕ್ಕ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಈ ತಂಡ ಕೈಚೆಲ್ಲಿತು. ಮೊದಲ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ನಲ್ಲಿ ಉತ್ತಮ ಅವಕಾಶ ಸಿಕ್ಕಿತ್ತು. ಆದರೆ ಹರ್ಮನ್‌ಪ್ರೀತ್‌ ಗೋಲು ಗಳಿಸುವ ಹಂತದಲ್ಲಿ ಎಡವಿದರು. 23ನೇ ನಿಮಿಷದಲ್ಲಿ ರಮಣದೀಪ್ ಸಿಂಗ್ ಅವರ ಪ್ರಯತ್ನವನ್ನು ಪಾಕ್‌ ತಂಡದ ಗೋಲ್‌ಕೀಪರ್ ಅಮ್ಜದ್ ಅಲಿ ತಡೆದರು. ಮೊದಲರ್ಧದಲ್ಲಿ ಎರಡೂ ತಂಡಗಳು ಗೋಲು ಗಳಿಸಲಿಲ್ಲ.

ಕೊನೆಯ ಎರಡು ಕ್ವಾರ್ಟರ್‌ನಲ್ಲಿ ಭಾರತ ಅಂಗಳದಲ್ಲಿ ಮಿಂಚು ಹರಿಸಿತು. ಲಲಿತ್ ಅವರಿಂದ ಪಾಸ್ ಪಡೆದ ಸತ್ಬೀರ್‌ 39ನೇ ನಿಮಿಷದಲ್ಲಿ ಮುನ್ನಡೆ ತಂದುಕೊಟ್ಟರು. ಕೊನೆಯ ಹತ್ತು ನಿಮಿಷದಲ್ಲಿ ಭಾರತ ಮೂರು ಗೋಲು ಗಳಿಸಿತು. ಬಳಿಕ ಒಂದು ನಿಮಿಷದ ಅಂತರದಲ್ಲಿ ಲಲಿತ್ ಗೋಲು ತಂದರು. ಮೂರು ನಿಮಿಷ ಬಾಕಿ ಇದ್ದಾಗ ಗುರ್ಜಂತ್ ಕೊನೆಯ ಗೋಲು ದಾಖಲಿಸಿದರು. ಇಲ್ಲಿ ಒಂದು ಗೋಲು ಹೊಡೆದ ಹರ್ಮನ್‌ಪ್ರೀತ್ ಟೂರ್ನಿಯಲ್ಲಿ ತಮ್ಮ ಗೋಲು ಗಳಿಕೆಯನ್ನು ಏಳಕ್ಕೆ ಹೆಚ್ಚಿಸಿಕೊಂಡರು.

ಭಾರತಕ್ಕೆ ಮಲೇಷ್ಯಾ ಎದುರಾಳಿ: ಕೊರಿಯಾ ತಂಡದ ಎದುರು 1–1ಗೋಲುಗಳಲ್ಲಿ ಡ್ರಾ ಮಾಡಿಕೊಂಡ ಮಲೇಷ್ಯಾ ತಂಡ ಫೈನಲ್ ತಲುಪಿತು.

ಫೈನಲ್ ಪಂದ್ಯ: ಸಂಜೆ 5.30ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT