ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿ ಕುಸ್ತಿ ಬದಲು ನಾಕ್‌ ಔಟ್‌

Last Updated 22 ಅಕ್ಟೋಬರ್ 2017, 4:31 IST
ಅಕ್ಷರ ಗಾತ್ರ

ಬಳ್ಳಾರಿ: ಈ ಬಾರಿಯ ಹಂಪಿ ಉತ್ಸವದ ಕುಸ್ತಿ ಸ್ಪರ್ಧೆಯಲ್ಲಿ ಜೋಡಿ ಕುಸ್ತಿಗಳಿಗೆ ಅವಕಾಶವಿಲ್ಲ. ಬದಲಿಗೆ ಎಲ್ಲ ಪಂದ್ಯಗಳೂ ನಾಕ್‌ ಔಟ್‌ ಮಾದರಿಯಲ್ಲೇ ನಡೆಯಲಿವೆ.
ಸೋಲುವ ಮತ್ತು ಗೆಲ್ಲುವ ಕುರಿತು ಮೊದಲೇ ಯೋಜಿಸಿಕೊಂಡು ಬರುತ್ತಿದ್ದ ಕುಸ್ತಿ ಜೋಡಿಗಳಿಗೆ ಅವಕಾಶವನ್ನು ನೀಡದೇ, ತೂಕದ ಆಧಾರದಲ್ಲಿ ಏಳು ವಿಭಾಗದಲ್ಲಿ ವೈಜ್ಞಾನಿಕವಾಗಿ ಸ್ಪರ್ಧೆಯನ್ನು ಏರ್ಪಡಿಸಲು ಸಿದ್ಧತೆ ನಡೆದಿದೆ.

ಎಷ್ಟು ಮಂದಿ ಸ್ಪರ್ಧಿಗಳು ಬರುತ್ತಾರೋ ಅವರೆಲ್ಲರನ್ನೂ ತೂಕ ಆಧರಿಸಿ ವಿಂಗಡಿಸಿ, ಎರಡು ನಿಮಿಷ–ಎರಡು ರೌಂಡ್‌ ಮಾದರಿಯಲ್ಲಿ ಅಂಕಗಳನ್ನು ಆಧರಿಸಿ ಫಲಿತಾಂಶವನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಅವರು ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿದ್ದಾರೆ.

‘ಪ್ರತಿಯೊಬ್ಬ ಸ್ಪರ್ಧಿಗೂ ಚೆಸ್ಟ್‌ ನಂಬರ್‌ ನೀಡಲಾಗುವುದು. ನಿಜವಾಗಲೂ ಗಟ್ಟಿ ಇದ್ದವರು, ಕುಸ್ತಿಯಲ್ಲಿ ಪಳಗಿದವರು, ತಮ್ಮಷ್ಟೇ ತೂಕದವರೊಂದಿಗೆ ಸ್ಪರ್ಧಿಸಿ ಗೆಲ್ಲಬಹುದಷ್ಟೇ’ ಎಂದು ಪಂದ್ಯಾವಳಿ ಆಯೋಜನೆ ಹೊಣೆ ಹೊತ್ತಿರುವ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಹಮತ್‌ ಉಲ್ಲಾ ಶನಿವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೋಡಿ ಕುಸ್ತಿಯಲ್ಲಿ ಯಾರು ಬೇಕಾದರೂ ಎಷ್ಟು ಮಂದಿಯ ವಿರುದ್ಧವಾದರೂ ಕುಸ್ತಿ ಆಡಲು ಅವಕಾಶವಿರುತ್ತದೆ. ಅದು ಅವ್ಯವಹಾರಕ್ಕೂ ದಾರಿ ಮಾಡುವ ಸಾಧ್ಯತೆ ಉಂಟು. ಹಿಂದಿನ ವರ್ಷದ ಉತ್ಸವದ ಸಂದರ್ಭದಲ್ಲಿ, ಬಹುಮಾನದ ಆಸೆಗೆ ಹಲವರು ಜೋಡಿಗಳಾಗಿ ಬಂದು ಕುಸ್ತಿ ಆಡಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಾರಿ ಅದಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಆಧುನಿಕ ಪದ್ಧತಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ’ ಎಂದರು.

ಕಬಡ್ಡಿಗೆ 8 ತಂಡ: ’ಈ ಬಾರಿ ಕಬಡ್ಡಿ ಪಂದ್ಯಾವಳಿಗೆ ಸ್ಥಳೀಯವಾದ ನಾಲ್ಕು ತಂಡಗಳನ್ನು ಆಯ್ಕೆ ಮಾಡಲಾಗುವುದು. ಜೊತೆಗೆ ಹೊರಗಿನ ನಾಲ್ಕು ತಂಡಗಳನ್ನು ಆಯ್ಕೆ ಮಾಡಲಾಗುವುದು. ಪಂದ್ಯಗಳು ರೋಚಕವಾಗಿರಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ’ ಎಂದರು.

ಹೊನಲು ಬೆಳಕು: ಕಮಲಾಪುರದ ವಾಲಿಬಾಲ್‌ ಅಂಕಣದಲ್ಲಿ ಹೊನಲು ಬೆಳಕಿನ ಪಂದ್ಯಾವಳಿಗಳು ನಡೆಯಲಿವೆ. 2 ಸ್ಥಳೀಯ ತಂಡ ಮತ್ತು ಆರು ಹೊರಗಿನ ತಂಡಗಳು ಪಾಲ್ಗೊಳ್ಳಲಿವೆ. ಮಧ್ಯಾಹ್ನ 3ಕ್ಕೆ ಆರಂಭವಾಗುವ ಪಂದ್ಯಾವಳಿ ರಾತ್ರಿ 11ಕ್ಕೆ ಮುಕ್ತಾಯವಾಗಲಿದೆ’ ಎಂದು ಮಾಹಿತಿ ನೀಡಿದರು.

ಪವರ್‌ ಲಿಫ್ಟಿಂಗ್‌: ‘ಈ ಬಾರಿ ಗುಂಡು ಎತ್ತುವ ಸ್ಪರ್ಧೆಯ ಬದಲಿಗೆ ಪವರ್‌ ಲಿಫ್ಟಿಂಗ್‌ ಅನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ಸ್ಪರ್ಧಿಗಳು ಆಸಕ್ತಿ ತೋರಿದ್ದಾರೆ’ ಎಂದರು. ‘ಈ ಬಾರಿಯ ಉತ್ಸವದಲ್ಲಿ ಷಟಲ್‌ಬ್ಯಾಡ್ಮಿಂಟನ್‌ ಪಂದ್ಯಾವಳಿಯನ್ನು ಆಯೋಜಿಸಲು ಚಿಂತನೆ ನಡೆದಿದೆ. ಇನ್ನೂ ನಿರ್ಧರಿಸಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT