ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಸಮೃದ್ಧಿ ತಂದಿತು ಸಿರಿಧಾನ್ಯ

Last Updated 22 ಅಕ್ಟೋಬರ್ 2017, 6:29 IST
ಅಕ್ಷರ ಗಾತ್ರ

ಶ್ರೀನಿವಾಸಪುರ ತಾಲ್ಲೂಕಿನ ರೈತರು ಕೆಲವು ದಶಕಗಳ ಬಳಿಕ ಈ ಬಾರಿ ಮಳೆ ಆಶ್ರಯದಲ್ಲಿ ಸಿರಿ ಧಾನ್ಯ ಬೆಳೆದಿದ್ದಾರೆ.   ಸಿರಿ ಧಾನ್ಯ ರೈತರಿಗೆ ಸಿರಿ ಸಮೃದ್ಧಿ ತಂದಿದೆ.
ಮಾವಿನ ಮಡಿಲಿನ ರೈತರಿಗೆ ಸಿರಿಧಾನ್ಯ ಹೊಸದಲ್ಲ. ರಾಗಿ ನಡುವೆ ನವಣೆ, ಅವರೆ ಸಾಲಿನಲ್ಲಿ ಅಕ್ಕಡಿ ಬೆಳೆಯಾಗಿ ಅರೆಸಾಮೆ ಬೆಳೆಯುತ್ತಿದ್ದರು.

ಕಾಲ ಕಳೆದಂತೆ ಗ್ರಾಮೀಣರ ಆಹಾರ ಪದ್ಧತಿಯಲ್ಲಿ ಸಾಮೆ, ಸಜ್ಜೆ, ಆರ್ಕ, ನವಣೆ ನಿರ್ಲಕ್ಷ್ಯಕ್ಕೆ ಒಳಗಾದವು. ಇದಕ್ಕೆ ಪೂರಕವಾಗಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಸಹ ಕುಸಿಯಿತು. ಮಳೆ ಆಶ್ರಿತ ಬೇಸಾಯ ಲಾಭದಾಯಕವಾಗಿ ಉಳಿಯಲಿಲ್ಲ. ಇದರಿಂದ ರೈತರು ರಾಗಿ ಹೊರತುಪಡಿಸಿ ಇತರ ಸಿರಿ ಧಾನ್ಯ ಬೆಳೆಯುವುದನ್ನು ಕೈ ಬಿಟ್ಟರು. 

ಆದರೆ ಇತ್ತೀಚಿನ ದಿನಗಳಲ್ಲಿ ಮತ್ತೆ ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯುತ್ತಿದ್ದಾರೆ. ಉತ್ತಮ ಆರೋಗ್ಯವನ್ನು ನೀಡುತ್ತದೆ ಎನ್ನುವುದು ಒಂದು ಕಾರಣವಾದರೆ ಕಡಿಮೆ ಖರ್ಚಿನ ಬೆಳೆ ಎಂದು ಸಿರಿಧಾನ್ಯಗಳನ್ನು ಬೆಳೆಯಲು ರೈತರು ಮನಸ್ಸು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇವುಗಳಿಗೆ ಒಳ್ಳೆಯ ಬೆಲೆ ಸಹ ಇದೆ.

ಶ್ರೀನಿವಾಸಪುರ ಹೊರ ವಲಯದಲ್ಲಿ, ಪನಸಮಾಕನಹಳ್ಳಿ, ಚಲ್ದಿಗಾನಹಳ್ಳಿ, ನಲ್ಲಪ್ಪಲಿ ಹಾಗೂ ಕಸಬಾ ಹೋಬಳಿಯ ಹಳ್ಳಿಗಳಲ್ಲಿ ಸಿರಿಧಾನ್ಯವನ್ನು ಈಗ ಹೆಚ್ಚು ಬೆಳೆಯಲಾಗಿದೆ.
‘ಸಿರಿಧಾನ್ಯಗಳಿಗೆ ಈಗ ಉತ್ತಮವಾದ ಬೆಲೆ ಇದೆ. ಆರೋಗ್ಯಕ್ಕೂ ಹಿತ. ರಕ್ತದ ಒತ್ತಡ, ಸಕ್ಕರೆ ಕಾಯಿಲೆಗೆ ತುತ್ತಾದವರು ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಹೆಚ್ಚು ಸೇವಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೇಡಿಕೆಯೂ ಇದೆ. ಆದ್ದರಿಂದ ಸಿರಿಧಾನ್ಯಗಳನ್ನು ಇನ್ನು ಬೆಳೆಯುತ್ತೇವೆ’ ಎನ್ನುವರು ಬಹುತೇಕ ರೈತರು.

ಆಹಾ! ಸಿರಿಧಾನ್ಯದ ರುಚಿ ಇದು: ಹಳ್ಳಿಗಳಲ್ಲಿ ಅರೆಸಾಮೆ ಬೇಯಿಸಿ ಒಣಗಿಸಿ ಕುಟ್ಟಿ ಅಕ್ಕಿ ಮಾಡುತ್ತಿದ್ದರು. ಮುದ್ದೆ ತಯಾರಿಕೆಯಲ್ಲಿ ನುಚ್ಚಿನಂತೆ ಬಳಸುತ್ತಿದ್ದರು. ಇನ್ನು ಹಾಲು ಸಾಮೆ, ಕರಿ ಸಾಮೆ ಅಕ್ಕಿಯಿಂದ ತಯಾರಿಸಿದ ಅನ್ನವನ್ನು ಗೊಜ್ಜು ಅಥವಾ ಮಜ್ಜಿಗೆ ಜತೆ ಸವಿಯುವುದು ಎಂದರೆ ಗ್ರಾಮೀಣರಿಗೆ ಖುಷಿಯೋ ಖುಷಿ.

ನವಣೆ ಬಳಸಿ ತಯಾರಿಸುವ ಗಿಣ್ಣಿನ ರುಚಿ ನಾಲಿಗೆಯಲ್ಲಿ ನೀರು ಜಿನುಗಿಸುತ್ತದೆ. ಈ ಹಿಂದೆ ಸಜ್ಜೆಯನ್ನು ಕುಟ್ಟಿ ರಾಗಿ ಮುದ್ದೆ ತಯಾರಿಕೆಯಲ್ಲಿ ಬಳಸಲಾಗುತಿತ್ತು. ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿ ಸಜ್ಜೆಯನ್ನು ಹೆಚ್ಚು ಬೆಳೆಯಲಾಗುತ್ತಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT