ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುತೆರೆಗೆ ಲಗ್ಗೆಯಿಟ್ಟ ಮಲೆನಾಡ ಬೆಡಗಿ

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಟಾಲಿವುಡ್ ಚಿತ್ರಗಳ ಜತೆಗೆ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದೀರಿ. ಈ ನಡುವೆ ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತಿದ್ದೀರಿ. ಏಕಕಾಲಕ್ಕೆ ಮೂರು ಕಡೆ ತೊಡಗಿಸಿಕೊಳ್ಳಲು ಸಮಯ ಹೇಗೆ ಹೊಂದಿಸುತ್ತೀರಿ?

ಕನ್ನಡ ಸಿನಿಮಾಗಳ ಜತೆಗೆ ಈಗ ಧಾರಾವಾಹಿಯಲ್ಲೂ ತೊಡಗಿಸಿಕೊಂಡಿರುವುದರಿಂದ ಸದ್ಯಕ್ಕೆ ಯಾವ ತೆಲುಗು ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಟಾಲಿವುಡ್‌ ಪ್ರಾಜೆಕ್ಟ್‌ಗೆಳಲ್ಲವೂ ಮುಗಿದ ನಂತರವೇ ‘ನಾಗಕನ್ನಿಕೆ’ ಧಾರಾವಾಹಿ ಒಪ್ಪಿಕೊಂಡಿದ್ದು. ಇದರ ಜತೆಗೆ ನನ್ನ ಕೈಯಲ್ಲೀಗ ನಾಲ್ಕೈದು ಕನ್ನಡ ಸಿನಿಮಾಗಳಿವೆ. ಆ ಎಲ್ಲ ಚಿತ್ರಗಳ ಚಿತ್ರೀಕರಣ ಮುಗಿದ ನಂತರವಷ್ಟೇ ಟಾಲಿವುಡ್ ಕಡೆಗೆ ಗಮನ ನೀಡುತ್ತೇನೆ.

* ಸಿನಿಮಾದಿಂದ ಕಿರುತೆರೆಗೆ ಬಂದಿದ್ದೀರಿ, ಕಿರುತೆರೆಯಲ್ಲಿನ ಅನುಭವ ಹೇಗಿದೆ?
ಬಹುತೇಕ ಕಲಾವಿದರು ಕಿರುತೆರೆಯಿಂದ ಸಿನಿಮಾಕ್ಕೆ ಬಂದಿದ್ದಾರೆ. ಆದರೆ ನಾನು ಮಾತ್ರ ಹಿರಿತೆರೆಯಿಂದ ಕಿರುತೆರೆಗೆ ಬರುತ್ತಿದ್ದೇನೆ. ಅದಕ್ಕೆ ಅವಕಾಶಗಳ ಕೊರತೆ ಕಾರಣವಲ್ಲ. ನಿರ್ದೇಶಕ ರಾಮ್‌ಜೀ ಈವರೆಗೆ ಒಳ್ಳೊಳ್ಳೆ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ‘ನಾಗಕನ್ನಿಕೆ’ ಧಾರಾವಾಹಿಯನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿ, ಮೈಸೂರು ಅರಮನೆ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ಧಾರಾವಾಹಿಯಲ್ಲಿ ನಾನು ನಿರ್ವಹಿಸಿರುವ ‘ಶೇಷ’ ಎಂಬ ಪಾತ್ರ ಭಿನ್ನವಾಗಿತ್ತು. ಸ್ವಲ್ಪ ಬದಲಾವಣೆ ಇರಲಿ ಎಂಬ ಕಾರಣಕ್ಕೆ ಈ ಆಫರ್‌ ಒಪ್ಪಿಕೊಂಡೆ. ಕಿರುತೆರೆ ಮತ್ತು ಬೆಳ್ಳಿತೆರೆಯ ನಡುವೆ ನನಗೆ ಅಷ್ಟೊಂದು ವ್ಯತ್ಯಾಸ ಏನೂ ಕಾಣಿಸಲಿಲ್ಲ. ಆದರೆ, ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದರಿಂದ ಜನ ನಮ್ಮನ್ನು ಬೇಗ ಗುರುತು ಹಿಡಿಯುತ್ತಾರೆ ಎಂಬುದು ಮನದಟ್ಟಾಯಿತು.

* ಎರಡು ದೋಣಿಯ ಪಯಣಿಗರಾದ ನೀವು ಸಿನಿಮಾ ಮತ್ತು ಕಿರುತೆರೆಯನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?
ಮೂರು ಗಂಟೆಯ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡುವುದೇ ಮುಖ್ಯ ಗುರಿ ಆಗಿರುತ್ತದೆ. ಆದರೆ, ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ವರ್ಷಗಟ್ಟಲೇ ಬರುತ್ತವೆ. ಕತೆಯ ನಿರೂಪಣೆಯಲ್ಲೂ ಭಿನ್ನತೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಧಾರಾವಾಹಿಗಳೂ ಕೂಡ ಸಿನಿಮಾಗಳಷ್ಟೇ ಅದ್ಧೂರಿಯಾಗಿ ಆಗಿ ಮೂಡಿ ಬರುತ್ತಿವೆ. ‘ನಾಗಕನ್ನಿಕೆ’ ಧಾರಾವಾಹಿ ಕೂಡ ಸಿನಿಮಾ ರೀತಿಯಲ್ಲೇ ಮೂಡಿಬರುತ್ತಿದೆ. ಸಿನಿಮಾ ಶೂಟಿಂಗ್ ಆದರೆ ಸಂಜೆ ಆರಕ್ಕೆ ಪ್ಯಾಕಪ್ ಹೇಳುತ್ತಿದ್ದರು. ಆದರೆ, ಧಾರಾವಾಹಿಗಳ ಚಿತ್ರೀಕರಣದಲ್ಲಿ ಕಾಲಮಿತಿ ಇಲ್ಲ. ಸಿನಿಮಾಗಳಿಗಿಂತ ಹೆಚ್ಚಿನ ಸಮಯ ನೀಡಬೇಕು.

* ಇಲ್ಲಿವರೆಗೆ ನಟಿಸಿದ ಪ್ರತಿಯೊಂದು ಚಿತ್ರದಲ್ಲೂ ಭಿನ್ನ ಪಾತ್ರಗಳನ್ನೇ ನಿರ್ವಹಿಸಿದ್ದೀರಿ...
ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರೊಂದಿಗಿನ ನವಿರು ಪ್ರೇಮಕತೆಯುಳ್ಳ ಸಿನಿಮಾ ‘ಕೃಷ್ಣ ತುಳಸಿ’ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಜತೆಗಿನ ‘ದಶರಥ’ ಸಿನಿಮಾ ಕೂಡ ವಿಭಿನ್ನ ಕಥಾ ಹಂದರವುಳ್ಳ ಸಿನಿಮಾ. ‘ಮಾರ್ಚ್ 22’ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದ ಚಿತ್ರ. ಈ ಚಿತ್ರ ಈಗ ದುಬೈನಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೀಗೆ ನಾನು ನಟಿಸಿದ ಪ್ರತಿಯೊಂದು ಚಿತ್ರದ ಪಾತ್ರವೂ ವಿಭಿನ್ನತೆಯಿಂದ ಕೂಡಿವೆ. ಅದಕ್ಕಾಗಿ ನಾನು ನಿರ್ದೇಶಕರಿಗೆ ಧನ್ಯವಾದ ಹೇಳುತ್ತೇನೆ.

* ಅನಂತ್‌ನಾಗ್ ಮತ್ತು ರವಿಚಂದ್ರನ್ ಅವರೊಂದಿಗೆ ತೆರೆ ಹಂಚಿಕೊಂಡ ಅನುಭವ ಹೇಗಿತ್ತು?
ಇವರಿಬ್ಬರೂ ಕನ್ನಡ ಚಿತ್ರರಂಗದ ದಿಗ್ಗಜರು. ‘ಮಾರ್ಚ್ 22’ ಸಿನಿಮಾದಲ್ಲಿ ಅನಂತ್‌ನಾಗ್ ಅವರೊಂದಿಗೆ ನಟಿಸಿದ್ದು ನನಗೆ ರೋಮಾಂಚನಕಾರಿ ಅನುಭವ. ಡೌನ್‌ಟು ಅಥ್ ಪರ್ಸನ್ ಅವರು. ಸೆಟ್‌ನಲ್ಲಿದ್ದಾಗ ಇವರು ಹೊಸಬರು ಅಥವಾ ಚಿಕ್ಕವರು ಅಂತ ತಾರತಮ್ಯ ಮಾಡುತ್ತಿರಲಿಲ್ಲ. ಎಲ್ಲರೊಂದಿಗೂ ಚೆನ್ನಾಗಿ ಬೆರೆಯುತ್ತಿದ್ದರು. ರವಿಚಂದ್ರನ್ ದೊಡ್ಡ ಸ್ಟಾರ್. ಕ್ರೇಜಿಸ್ಟಾರ್ ಜತೆಗೆ ನಟಿಸಬೇಕು ಎಂಬ ಆಸೆ ಎಲ್ಲ ಕಲಾವಿದೆಯರಿಗೂ ಇದ್ದೇ ಇರುತ್ತದೆ. ಅವರ ಜತೆಗೆ ನಟಿಸುವ ಅವಕಾಶ ಇಷ್ಟು ಬೇಗನೆ ಸಿಗುತ್ತದೆ ಎಂದು ಖಂಡಿತಾ ಭಾವಿಸಿರಲಿಲ್ಲ. ‘ದಶರಥ’ ಚಿತ್ರದ ಕತೆ ತುಂಬ ಭಿನ್ನವಾಗಿದೆ. ತಂದೆ ಮಗಳ ಬಾಂಧವ್ಯವನ್ನು ಇಲ್ಲಿ ತುಂಬ ಆಪ್ತವಾಗಿ ತೋರಿಸಲಾಗಿದೆ. ರವಿ ಸರ್‌ ಈಗ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾಕ್ಕಾಗಿ ಗಡ್ಡ ಮೀಸೆ ತೆಗೆದು ಗೆಟಪ್ ಚೇಂಜ್ ಮಾಡಿಕೊಂಡಿದ್ದಾರೆ. ಹಾಗಾಗಿ, ‘ದಶರಥ’ ಸಿನಿಮಾದ ಕೊನೆಯ ಒಂದು ಭಾಗದ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಇಬ್ಬರು ದೊಡ್ಡ ನಟರೊಂದಿಗೆ ತೆರೆಹಂಚಿಕೊಂಡ ಪುಳಕ ನನ್ನನ್ನು ಆವರಿಸಿಕೊಂಡಿದೆ.

* ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಹೇಳಿ...
‘ಕೃಷ್ಣ ತುಳಸಿ’ ಶೂಟಿಂಗ್ ಮುಗಿದಿದೆ. ಈ ತಿಂಗಳ ಕೊನೆಯಲ್ಲಿ ಆಡಿಯೊ ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆ ದಿನಾಂಕ ಇನ್ನೂ ನಿಕ್ಕಿಯಾಗಿಲ್ಲ. ಚಿತ್ರದ ಪ್ರಮೋಷನ್ ಸದ್ಯದಲ್ಲೇ ಶುರುವಾಗಲಿದೆ. ನಾನು ಮತ್ತು ವಿಜಯ್ ಸೂರ್ಯ ನಟಿಸುತ್ತಿರುವ ‘ಕದ್ದು ಮುಚ್ಚಿ’ ಸಿನಿಮಾದ ಗೀತೆಗಳ ಚಿತ್ರೀಕರಣ ಮಡಿಕೇರಿಯಲ್ಲಿ ನವೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಉಳಿದಂತೆ, ‘ನಾಗಕನ್ನಿಕೆ’ ಧಾರಾವಾಹಿಯ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT