ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್ ಯಾತ್ರೆ ನಿಷೇಧಿಸುವ ಧೈರ್ಯ ಸಿ.ಎಂ ತೋರಿಸುವುದಿಲ್ಲ : ಮುರಳೀಧರರಾವ್

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನವ ಕರ್ನಾಟಕ ಪರಿವರ್ತನ ಯಾತ್ರೆ ಅಂಗವಾಗಿ ಹಮ್ಮಿಕೊಂಡಿರುವ ಬೈಕ್ ಯಾತ್ರೆ ನಿಷೇಧಿಸುವ ಧೈರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಿಸಲಾರರು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಹೇಳಿದರು.

‘ಮಂಗಳೂರು ಚಲೋಗೆ ಪೂರಕವಾಗಿ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಯನ್ನು ಸರ್ಕಾರ ನಿರ್ಬಂಧಿಸಿತ್ತು. ಈಗ ಅದನ್ನು ಮಾಡಲು ಸಾಧ್ಯವೇ ಇಲ್ಲ. ಹಾಗೆ ಮಾಡಿದರೆ ಮೊದಲ ದಿನವೇ ನಮ್ಮ ಯಾತ್ರೆ ಯಶಸ್ವಿಯಾಗುತ್ತದೆ’ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಭಾನುವಾರ ಪ್ರತಿಪಾದಿಸಿದರು.

‘ಯಾತ್ರೆ ನಡೆಯುವ ಪ್ರತಿಯೊಂದು ದಿನವೂ  ರಾಜ್ಯ ಸರ್ಕಾರದ ಒಂದೊಂದು ಹಗರಣವನ್ನು ಪಕ್ಷ ಬಯಲುಗೊಳಿಸಲಿದೆ. ತಮ್ಮ ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂಬ ವಿಶ್ವಾಸ ಇದ್ದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ. ಬೀದಿಯಲ್ಲೇ ಚರ್ಚೆ ಮಾಡಲು ಪಕ್ಷ ಸಿದ್ಧ’ ಎಂದು ಸವಾಲು ಹಾಕಿದರು.

ಬೈಕ್ ಯಾತ್ರೆ: ಪರಿವರ್ತನ ಯಾತ್ರೆಗೆ ಪೂರಕವಾಗಿ ರಾಜ್ಯದ 56 ಸಾವಿರ ಬೂತ್‌ಗಳಿಂದ ಬೈಕ್‌ ಯಾತ್ರೆ ನಡೆಯಲಿದ್ದು, ಮೂರು ಲಕ್ಷ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ರಾವ್ ವಿವರಿಸಿದರು.

ಬೆಂಗಳೂರಿನಲ್ಲಿ ನಡೆಯಲಿರುವ ಯಾತ್ರೆ ಉದ್ಘಾಟನೆಗೆ ದಕ್ಷಿಣ ಕರ್ನಾಟಕ ಜಿಲ್ಲೆಗಳ ಪ್ರತಿ ಬೂತ್‌ನಿಂದ ತಲಾ ಮೂರು ಬೈಕಿನಲ್ಲಿ ಆರು ಜನರಂತೆ 1.6 ಲಕ್ಷ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಉತ್ತರ ಕರ್ನಾಟಕದ ಜಿಲ್ಲೆಗಳ ಎಲ್ಲ ಬೂತ್‌ಗಳಿಂದ ಆರು ಜನರಂತೆ 1.4 ಲಕ್ಷ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಯಾತ್ರೆಗಾಗಿ ಸಿದ್ಧಪಡಿಸಿರುವ ರಥದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ರಾಷ್ಟ್ರೀಯ ನಾಯಕರು, ಕೇಂದ್ರ ಸಚಿವರು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದ್ದಾರೆ. ಕರ್ನಾಟಕದ ರಾಜಕೀಯದಲ್ಲಿ ಈ ಪರಿವರ್ತನ ಯಾತ್ರೆಯು ಹೊಸ ಶಕೆಯನ್ನು ಆರಂಭಿಸಲಿದೆ ಎಂದು ಹೇಳಿದರು.

**

ಯಾತ್ರೆಗೆ ಪೂರ್ವಸಿದ್ಧತೆ: ಶಿವಪ್ರಕಾಶ್ ಸಭೆ

ಪರಿವರ್ತನ ಯಾತ್ರೆ ಪೂರ್ವಸಿದ್ಧತೆಗಾಗಿ ರಾಜ್ಯಕ್ಕೆ ಭೇಟಿ ನೀಡಿರುವ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಸರಣಿ ಸಭೆ ನಡೆಸಲಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಹಾಗೂ ಬೆಂಗಳೂರಿನಲ್ಲಿ ಮಂಗಳವಾರ ಸಭೆ ನಡೆಸಲಿರುವ ಅವರು ಪ್ರಾದೇಶಿಕ ಮಟ್ಟದ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸುವರು. ಯಾತ್ರೆಗೆ ತಯಾರಿ, ಬೂತ್ ಮಟ್ಟದ ಸಮಿತಿಗಳ ರಚನೆ ಕುರಿತು ನಿರ್ದೇಶನ ನೀಡುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT