ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಜಯದ ಹೊಸ್ತಿಲಲ್ಲಿ ಅಬೆ

Last Updated 22 ಅಕ್ಟೋಬರ್ 2017, 20:05 IST
ಅಕ್ಷರ ಗಾತ್ರ

ಟೋಕಿಯೊ (ಎಎಫ್‌ಪಿ): ಭಾನುವಾರ ನಡೆದ ಚುನಾವಣೆಯಲ್ಲಿ ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರು ಭರ್ಜರಿ ಜಯದತ್ತ ದಾಪುಗಾಲಿಟ್ಟಿದ್ದಾರೆ. ಈ ಜನಾದೇಶದಿಂದ ಉತ್ತರ ಕೊರಿಯಾ ಮೇಲೆ ಅಬೆ ಅವರು ಕೈಗೊಂಡ ಕಠಿಣ ನಿರ್ಧಾರಗಳು ಹಾಗೂ ದೇಶದ ಆರ್ಥಿಕತೆಗೆ ಶಕ್ತಿ ತುಂಬುವ ಕ್ರಮಗಳಿಗೆ ಮತ್ತಷ್ಟು ಬಲ ಬರಲಿದೆ.

ಸಂಸತ್ತಿನ 465 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಮೈತ್ರಿಕೂಟವು 311 ಸ್ಥಾನಗಳನ್ನು ಗೆದ್ದುಕೊಳ್ಳುವತ್ತ ಹೆಜ್ಜೆ ಇಟ್ಟಿದೆ ಎಂದು ಎಂದು ಖಾಸಗಿ ಸುದ್ದಿಸಂಸ್ಥೆ ಟಿಬಿಎಸ್ ವರದಿ ಮಾಡಿದೆ. ಈ ಜಯದ ಮೂಲಕ ದೇಶದಲ್ಲಿ ದೀರ್ಘಕಾಲ ಆಡಳಿತ ಚುಕ್ಕಾಣಿ ಹಿಡಿಯಲಿರುವ ಶ್ರೇಯ ಅಬೆ ಅವರಿಗೆ ಸಲ್ಲಲಿದೆ.

ಅಮೆರಿಕದ ಮಿತ್ರದೇಶವಾಗಿರುವ ಜಪಾನ್‌ ಮೇಲೆ ಪರಮಾಣು ಬೆದರಿಕೆ ಹಾಕುತ್ತಿರುವ ನೆರೆಯ ಉತ್ತರ ಕೊರಿಯಾ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಅಬೆ ಅವರಿಗೆ ಸಾಧ್ಯವಾಗಲಿದೆ. ಕೊರಿಯಾ ಜಪಾನ್ ಮೇಲೆ ಈಗಾಗಲೇ ಎರಡು ಬಾರಿ ಕ್ಷಿಪಣಿ ಹಾರಾಟ ನಡೆಸಿ ಬೆದರಿಕೆ ಒಡ್ಡಿದೆ.

ಜಪಾ‌ನ್‌ ಪ್ರಸಿದ್ಧ ಪತ್ರಿಕೆ ಯುಮಿಯುರಿ ಪತ್ರಿಕೆಯ ವೆಬ್‌ಸೈಟ್ ‘ಅಬೆ ಅವರು ದಾಖಲೆ ಜಯದತ್ತ ಮುನ್ನುಗ್ಗುತ್ತಿದ್ದಾರೆ’ ಎಂದು ವರದಿ ಮಾಡಿದೆ. ಮೂರನೇ ಎರಡರಷ್ಟು ಭಾರಿ ಬಹುಮತ ಉಳಿಸಿಕೊಳ್ಳಲು ಮೈತ್ರಿ ಸರ್ಕಾರಕ್ಕೆ ಸಾಧ್ಯವಾಗಲಿದೆಯೇ ಎಂಬುದು ಖಚಿತಗೊಂಡಿಲ್ಲ.

ಭಾರಿ ಮಳೆ ಹಾಗೂ ಬಿರುಗಾಳಿ ಅಪ್ಪಳಿಸುವ ಸಾಧ್ಯತೆ ಬಗ್ಗೆ ಎಚ್ಚರಿಕೆ ರವಾನಿಸಿದ್ದರೂ ಭಾರಿ ಪ್ರಮಾಣದ ಮತ ಚಲಾವಣೆಯಾಗಿದೆ. ಚಂಡಮಾರುತ್ತಕ್ಕೆ ಇಬ್ಬರು ಬಲಿಯಾಗಿದ್ದಾರೆ.

ಒಡಕಿನ ಲಾಭ ಪಡೆದ ಶಿಂಜೊ ಅಬೆ

ಚುನಾವಣೆಗೆ ಮುನ್ನ ಪ್ರತಿಪಕ್ಷ ವಿಭಜನೆಯಾಗಿದ್ದು ಅಬೆ ನೇತೃತ್ವದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಗೆ (ಎಲ್‌ಡಿಪಿ) ನೆರವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ. ಟೋಕೊಯೊದ ಜನಪ್ರಿಯ ಗವರ್ನರ್ ಯುರಿಕೊ ಕೊಯ್ಕೆ ಅವರು ಕಟ್ಟಿದ್ದ ಹೊಸ ಪಕ್ಷ ಸುಮಾರು 50 ಸ್ಥಾನಗಳನ್ನು ಗೆಲ್ಲುವತ್ತ ಹೆಜ್ಜೆ ಇಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಾನ್‌ಸ್ಟಿಟ್ಯೂಷನಲ್ ಡೆಮಾಕ್ರಟಿಕ್ ಪಾರ್ಟಿಯು ನಿರೀಕ್ಷೆಗಿಂತ ಕೊಂಚ ಉತ್ತಮ ಪ್ರದರ್ಶನ ತೋರಿದೆ. ಇದು ಅಬೆ ಅವರಿಗಿಂತ 58 ಸ್ಥಾನಗಳ ಹಿಂದಿದೆ.

ಪ್ರತಿಪಕ್ಷಗಳು ಒಗ್ಗಟ್ಟಿನ ಮೈತ್ರಿಕೂಟ ರಚಿಸಿಕೊಳ್ಳದಿರುವುದೇ ಅಬೆ ಗೆಲುವಿಗೆ ದಾರಿಯಾಯಿತು ಎಂದು ರಾಜಕೀಯ ವಿಶ್ಲೇಷಕ ಮಿಕಿಟಕ ಮಸುಯಮ ಅವರು ಹೇಳಿದ್ದಾರೆ.

ಉತ್ತರ ಕೊರಿಯಾ ಮೇಲೆ ಕಠಿಣ ಕ್ರಮ ಹಾಗೂ ಆರ್ಥಿಕತೆ ಪುನಶ್ಚೇತನದ ಬಗ್ಗೆ ಅಬೆ ಅವರು ಕೇವಲ 12 ದಿನಗಳ ಪ್ರಚಾರ ಕಾರ್ಯಕ್ರಮಗಳ ವೇಳೆ ನೀಡಿದ್ದ ಗಟ್ಟಿ ಭರವಸೆಗಳೇ ಅವರಿಗೆ ಗೆಲುವು ತಂದುಕೊಟ್ಟಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT