ಹೇಡಿತನವೂ, ಹುಡುಗಾಟಿಕೆಯೂ ಆಗಿರುವ ಬಯಕೆ!

ಕೃಷ್ಣ ವರ್ಣೀಯರಿಗೆ, ಏಷ್ಯಾ ಮೂಲದವರಿಗೆ ಹಾಗೂ ಮಿಶ್ರ ಸಮುದಾಯದವರಿಗೆ ಮತದಾನದ ಹಕ್ಕು ನಿರಾಕರಿಸುವ ವರ್ಣಭೇದ ನೀತಿ ಅನುಸರಿಸಿದ ಕಾರಣಕ್ಕೆ ದಕ್ಷಿಣ ಆಫ್ರಿಕಾವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ನಿರ್ಬಂಧಿಸಲಾಗಿತ್ತು.

ಕೃಪೆ: ಸ್ಫೋರ್ಟ್ಸ್ ವಿಕಿ

ಅಂದಾಜು ಮೂವತ್ತು ವರ್ಷಗಳ ಹಿಂದೆ, ಕ್ಲೈವ್‌ ಲಾಯ್ಡ್‌ ನೇತೃತ್ವದ ವೆಸ್ಟ್‌ ಇಂಡೀಸ್ ಕ್ರಿಕೆಟ್ ತಂಡದ ಅಧಃಪತನ ಆರಂಭವಾಗಿತ್ತು, ಅಲನ್ ಬಾರ್ಡರ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ವಿಶ್ವ ಕ್ರಿಕೆಟ್‌ನ ಅಧಿಪತ್ಯ ಆರಂಭಿಸಿತ್ತು. ಆಸ್ಟ್ರೇಲಿಯಾ ತಂಡದಲ್ಲಿ ಎಡಗೈ ಆಟಗಾರರು ಹಲವರಿದ್ದರು. ಬಾರ್ಡರ್ ಕೂಡ ಎಡಗೈ ಆಟಗಾರ. ಆರಂಭಿಕ ಬ್ಯಾಟ್ಸ್‌ಮನ್‌ ಕೆಪ್ಲರ್‌ ವೆಸ್ಸೆಲ್ಸ್ ಕೂಡ ಎಡಗೈ ಆಟಗಾರ ಆಗಿದ್ದರು. ಇವರು ಮೂಲತಃ ದಕ್ಷಿಣ ಆಫ್ರಿಕಾದವರು.

ಕೃಷ್ಣ ವರ್ಣೀಯರಿಗೆ, ಏಷ್ಯಾ ಮೂಲದವರಿಗೆ ಹಾಗೂ ಮಿಶ್ರ ಸಮುದಾಯದವರಿಗೆ ಮತದಾನದ ಹಕ್ಕು ನಿರಾಕರಿಸುವ ವರ್ಣಭೇದ ನೀತಿ ಅನುಸರಿಸಿದ ಕಾರಣಕ್ಕೆ ದಕ್ಷಿಣ ಆಫ್ರಿಕಾವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ನಿರ್ಬಂಧಿಸಲಾಗಿತ್ತು. ಮೂಲ ದೇಶದ ಪರವಾಗಿ ಆಡಲು ಸಾಧ್ಯವಾಗದಿದ್ದ ಕಾರಣ ವೆಸ್ಸೆಲ್ಸ್ ಅವರು ತಮ್ಮ ರಾಷ್ಟ್ರೀಯತೆಯನ್ನು ಬದಲಿಸಿಕೊಂಡರು. ಇದಾದ ಕೆಲವು ವರ್ಷಗಳ ನಂತರ, ಜಿಂಬಾಬ್ವೆಯವರಾದ ಗ್ರೇಮ್ ಹಿಕ್ ಅವರು ಇಂಗ್ಲೆಂಡ್ ಪರ ಆಡಿದರು. ತೀರಾ ಈಚೆಗಿನ ವರ್ಷಗಳಲ್ಲಿ ಲ್ಯೂಕ್ ರೊಂಚಿ ಅವರು ಆಸ್ಟ್ರೇಲಿಯಾ ಪರವಾಗಿಯೂ ಆಡಿದ್ದಾರೆ, ನ್ಯೂಝಿಲೆಂಡ್ ಪರವಾಗಿಯೂ ಆಡಿದ್ದಾರೆ. ಇಯೋನ್ ಮೋರ್ಗನ್ ಅವರು ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ಪರವಾಗಿ ಆಡಿದ್ದಾರೆ.

ಬೇರೆ ದೇಶಗಳಿಗೆ ಸೇರಿದವರು ತಮ್ಮ ತಂಡಗಳನ್ನು ಪ್ರತಿನಿಧಿಸುವುದು ಈ ದೇಶಗಳ ‍ಪಾಲಿಗೆ ಸಮಸ್ಯೆಯ ಸಂಗತಿಯಲ್ಲ ಎಂಬುದು ಸ್ಪಷ್ಟ. ಹಾಗೆಯೇ, ತಮ್ಮ ದೇಶದ ಕ್ರಿಕೆಟ್ ತಂಡಕ್ಕೆ ತಾವು ಬೇಕಾಗಿಲ್ಲ ಅಥವಾ ತಮ್ಮ ಅಗತ್ಯ ಇಲ್ಲ ಎಂದು ಅನಿಸಿದಾಗ ಆಟಗಾರರು ಬೇರೆ ದೇಶಗಳಿಗೆ ತೆರಳುವುದಕ್ಕೂ ಅವರ ಆಕ್ಷೇಪ ಇಲ್ಲ.

ಬಿಸಿಸಿಐಗೆ ತಮ್ಮ ಅವಶ್ಯಕತೆ ಇಲ್ಲವೆಂದಾದರೆ, ಇನ್ನೊಂದು ದೇಶದ ಪರವಾಗಿ ಆಟವಾಡುವ ಆಯ್ಕೆಯನ್ನು ಪರಿಶೀಲಿಸುವುದಾಗಿ ಭಾರತದ ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ ಕಳೆದ ವಾರ ಹೇಳಿದರು. ಕ್ರಿಕೆಟ್ ಆಟ ಆಡಲು ಅವಕಾಶ ಕಲ್ಪಿಸುವ ಹಿಂದಿನ ಆದೇಶವೊಂದನ್ನು ಬದಲಾಯಿಸಿ, ನಿಷೇಧ ಮುಂದುವರಿಸುವ ಆದೇಶ ಹೊರಬಿದ್ದ ನಂತರ ಶ್ರೀಶಾಂತ್ ಈ ಹೇಳಿಕೆ ನೀಡಿದರು. 2013ರ ಐಪಿಎಲ್‌ ಆವೃತ್ತಿಯಲ್ಲಿ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪ ಎದುರಾದ ನಂತರ ಶ್ರೀಶಾಂತ್ ಅವರ ಮೇಲೆ ಕ್ರಿಕೆಟ್ ಪಂದ್ಯಾಟಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಲಾಯಿತು. ಆಗ ಅವರಿಗೆ 29 ವರ್ಷ. ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪ್ರತಿ ಎಸೆತಕ್ಕೂ ಬೆಟ್ಟಿಂಗ್‌ ನಡೆಸಲಾಗುತ್ತದೆ. ಬುಕ್ಕಿಗಳು ನಿರ್ದಿಷ್ಟ ಎಸೆತವೊಂದರಲ್ಲಿ ಬೌಲರ್ ವಿಕೆಟ್ ಪಡೆಯುತ್ತಾನೆ ಎಂದೋ, ನೋಬಾಲ್‌ ಎಸೆಯುತ್ತಾನೆ ಎಂದೋ, ಬ್ಯಾಟ್ಸ್‌ಮನ್‌ ಬೌಂಡರಿ ಬಾರಿಸುತ್ತಾನೆ ಎಂದೋ ಬೆಟ್ ಮಾಡುತ್ತಾನೆ.

ಬುಕ್ಕಿಗೆ ಬೌಲರ್‌ ಜೊತೆ ಸಂಪರ್ಕ ಸಾಧಿಸಲು ಸಾಧ್ಯವಾದರೆ, ಯಾವುದೇ ಒಂದು ಓವರ್‌ನ ಎಸೆತಗಳು ಹೇಗಿರಬೇಕು ಎಂಬುದನ್ನು ಮೊದಲೇ ನಿರ್ಧರಿಸಬಹುದು. ಆಗ ಬುಕ್ಕಿಗಳು, ದೇಶವೊಂದು ಪಂದ್ಯದಲ್ಲಿ ಗೆಲ್ಲುತ್ತದೆಯೋ, ಸೋಲುತ್ತದೆಯೋ ಎಂಬಷ್ಟಕ್ಕೆ ಮಾತ್ರ ಬೆಟ್ಟಿಂಗ್ ನಡೆಸುವುದರಲ್ಲಿ ಆಕರ್ಷಣೆ ಇಲ್ಲ, ಇನ್ನೂ ಹೆಚ್ಚಿನದರ ಮೇಲೆ ಬೆಟ್ಟಿಂಗ್ ನಡೆಸಬೇಕು ಎಂದು ಬಯಸುವವರಿಗೆ (ಭಾರತದಲ್ಲಿ ಇಂಥವರು ಗುಜರಾತಿಗಳಲ್ಲಿ ಹೆಚ್ಚು) ಹಲವು ಆಯ್ಕೆಗಳನ್ನು ನೀಡಲು ಸಾಧ್ಯವಾಗುತ್ತದೆ. ಬುಕ್ಕಿ ಹಾಗೂ ಬೌಲರ್‌ಗಳ ನಡುವೆ ಹೊಂದಾಣಿಕೆ ಏರ್ಪಟ್ಟ ನಂತರವೂ, ಸ್ಪಾಟ್ ಫಿಕ್ಸಿಂಗ್ ಎಂಬುದು ಸುಲಭದ ಕೆಲಸವಲ್ಲ. ಇದನ್ನು ಮಾಡುತ್ತಿದ್ದ ಪಾಕಿಸ್ತಾನದ ಕೆಲವರು ಬ್ರಿಟಿಷ್ ಮಾಧ್ಯಮಗಳ ಕೈಯಲ್ಲಿ ಕೆಲವು ವರ್ಷಗಳ ಹಿಂದೆ ಸಿಕ್ಕಿಬಿದ್ದರು. ಶ್ರೀಶಾಂತ್ ವಿರುದ್ಧದ ಆರೋಪಗಳು ಕೂಡ ಈ ಅವಧಿಯಲ್ಲೇ ಕೇಳಿಬಂದವುಗಳು. ನ್ಯಾಯಾಲಯವು ಆರೋಪಗಳನ್ನು ಕೈಬಿಟ್ಟಿದ್ದರೂ, ಶ್ರೀಶಾಂತ್ ಅವರ ಮೇಲಿನ ನಿರ್ಬಂಧ ಮುಂದುವರಿದಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಶ್ರೀಶಾಂತ್ ಅವರಿಗೆ ಕ್ರಿಕೆಟ್ ಆಡಲು ಸಾಧ್ಯವಾಗಿಲ್ಲ. ನ್ಯಾಯಾಲಯ ಈಚೆಗೆ ನೀಡಿದ ಆದೇಶದ ನಂತರ ಶ್ರೀಶಾಂತ್ ಅವರು ಹತಾಶರಾಗಿ ಹೀಗೆ ಹೇಳಿದರು: ‘ನಿಷೇಧ ಹೇರಿರುವುದು ಬಿಸಿಸಿಐ ವಿನಾ ಐಸಿಸಿ ಅಲ್ಲ. ಭಾರತದ ಪರವಾಗಿ ಅಲ್ಲದಿದ್ದರೆ ನಾನು ಬೇರೆ ದೇಶಗಳ ಪರವಾಗಿ ಆಡಬಹುದು. ಏಕೆಂದರೆ ನನಗೆ ಈಗ 34 ವರ್ಷ. ನಾನು ಇನ್ನು ಗರಿಷ್ಠ ಆರು ವರ್ಷಗಳವರೆಗೆ ಮಾತ್ರ ಆಡಬಹುದು. ಕ್ರಿಕೆಟ್ ಪ್ರೀತಿಸುವ ವ್ಯಕ್ತಿಯಾಗಿ ನನಗೆ ಕ್ರಿಕೆಟ್ ಆಡಬೇಕು ಅನಿಸುತ್ತಿದೆ. ಇಷ್ಟೇ ಅಲ್ಲ, ಬಿಸಿಸಿಐ ಎಂಬುದು ಖಾಸಗಿ ಸಂಸ್ಥೆ. ಭಾರತೀಯ ಕ್ರಿಕೆಟ್ ತಂಡ ಎಂದು ಹೇಳುವವರು ನಾವು ಮಾತ್ರ. ಅಷ್ಟಕ್ಕೂ, ಬಿಸಿಸಿಐ ಎಂಬುದೇ ಒಂದು ಖಾಸಗಿ ಸಂಸ್ಥೆ’.

ಶ್ರೀಶಾಂತ್ ಅವರ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳುವುದು ಸುಲಭ. ತಮಗೆ ಭಾರತದಲ್ಲಿ ಆಡಲು ಅವಕಾಶ ಇಲ್ಲದ ಕ್ರೀಡೆಯೊಂದಕ್ಕಾಗಿ ಶ್ರೀಶಾಂತ್ ಅವರು ತಮ್ಮ ಜೀವನ ಮುಡಿಪಿಟ್ಟಿದ್ದಾರೆ. ಅವರು ಬೇರೊಂದು ದೇಶದ ಪರವಾಗಿ ಏಕೆ ಆಟ ಆಡಬಾರದು? ಅವರು ಹಾಗೆ ಆಟ ಆಡುವುದು ಸರಿ ಎಂದು ನನಗೆ ಅನಿಸುತ್ತಿದೆ. ರಾಷ್ಟ್ರೀಯತೆಯಲ್ಲಿ ಆಗುವ ಬದಲಾವಣೆಯಂತಹ ಲೌಕಿಕ ಸಮಸ್ಯೆಗಳನ್ನು ಒಮ್ಮೆ ಬದಿಗೆ ಇಡೋಣ. ದಕ್ಷಿಣ ಆಫ್ರಿಕದವನೊಬ್ಬ ಆಸ್ಟ್ರೇಲಿಯದವನಾಗುವುದು, ಭಾರತೀಯನೊಬ್ಬ ಬೇರೇನೋ ಆಗುವುದಕ್ಕಿಂತ ಬಹಳ ಸುಲಭ. ಅಲ್ಲದೆ, ಶ್ರೀಶಾಂತ್‌ ಅವರು ಹೊರದೇಶಗಳಲ್ಲಿ ಟಿ–20 ಆಡುವ ಬಗ್ಗೆ ಮಾತ್ರ ಸುಳಿವು ನೀಡಿದ್ದಾರೆ.

ಶ್ರೀಶಾಂತ್ ಅವರ ನಿರ್ಧಾರ ಏನೇ ಇರಬಹುದು, ತಮ್ಮದೇ ದೇಶಕ್ಕೆ ಬೇಡವಾಗಿದ್ದರೂ, ತಾವು ಜನಿಸಿದ ದೇಶದ ಬಗ್ಗೆ ಇರುವ ನಿಷ್ಠೆಯನ್ನು ಬೇರೊಂದು ದೇಶದ ಪರವಾಗಿ ಆಟ ಆಡದಿರುವ ಮೂಲಕ ತೋರಿಸಿ ಎಂದು ಹೇಳುವುದು ಸರಿಯಲ್ಲ. ಕ್ರಿಕೆಟ್ ಎಂಬ ಆಟವನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸುವುದು ಭಾರತೀಯರು ಮಾತ್ರ. ಏಕೆಂದರೆ ನಾವು ನಮ್ಮ ರಾಷ್ಟ್ರೀಯತೆಯನ್ನೇ ಈ ಆಟದ ಜೊತೆ ಸಮೀಕರಿಸಿದ್ದೇವೆ. ಬಿಸಿಸಿಐ ನಿಯಂತ್ರಣದ ತಂಡವು, ಪಾಕಿಸ್ತಾನ ಕ್ರಿಕೆಟ್ ಅಸೋಸಿಯೇಷನ್‌ನ ತಂಡದ ವಿರುದ್ಧ ಗೆಲುವು ಸಾಧಿಸಿದಾಗ, ‘ಪಾಕಿಸ್ತಾನ’ವನ್ನು ‘ಭಾರತ’ ಸೋಲಿಸಿತು ಎಂಬಂತೆ ಕಾಣಲಾಗುತ್ತದೆ. ನಮ್ಮ ಕ್ರಿಕೆಟ್ ತಂಡ ಗೆಲುವು ಸಾಧಿಸಿದಾಗ ಅಥವಾ ಸೋತಾಗ ಆಗುವಷ್ಟು ತೀವ್ರ ಅನುಭವ ನಮ್ಮ ಬೇರೆ ಯಾವುದೇ ಸಾಂಸ್ಕೃತಿಕ ವಿಚಾರಗಳಲ್ಲಿ ಕಾಣಿಸುವುದಿಲ್ಲ.

ಭಾರತದ ಯಾವುದೇ ಸಿನಿಮಾ ನಾಯಕ ಅಥವಾ ನಾಯಕಿ, ಉದಾಹರಣೆಗೆ ಪ್ರಿಯಾಂಕಾ ಛೋಪ್ರಾ, ಬಾಲಿವುಡ್ ತೊರೆದು ಹಾಲಿವುಡ್‌ ಪ್ರವೇಶಿಸಲು ತೀರ್ಮಾನಿಸಿದರೆ, ಅದು ದೇಶಕ್ಕೆ ಎಸಗಿದ ದ್ರೋಹ ಎಂಬಂತೆ ನಾವು ಮಾತನಾಡುವುದಿಲ್ಲ. ಭಾರತದ ವ್ಯಕ್ತಿಯೊಬ್ಬರು ಅಲ್ಲಿಗೆ ಹೋಗುತ್ತಿರುವುದು ದೊಡ್ಡ ಸಂಗತಿ ಎಂದು ಭಾವಿಸುತ್ತೇವೆ. ಹೀಗಿರುವಾಗ, ಕ್ರಿಕೆಟಿಗರ ವಿಚಾರದಲ್ಲಿ ಮಾತ್ರ ಬೇರೆಯ ನಿಲುವು ಏಕಿರಬೇಕು? ಇದನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಈ ವಿಚಾರದಲ್ಲಿ ಶ್ರೀಶಾಂತ್ ಬಗ್ಗೆ ಅನುಕಂಪ ಹೊಂದಬಹುದು.

ಖಾಸಗಿ ಸಂಸ್ಥೆಯಾಗಿರುವ ಬಿಸಿಸಿಐಗೆ, ತನ್ನ ಪರವಾಗಿ ಯಾರು ಆಟ ಆಡಬೇಕು, ಯಾರು ಆಡಬಾರದು ಎಂಬುದನ್ನು ತೀರ್ಮಾನಿಸುವ ಹಕ್ಕು ಇದೆ. ಇಡೀ ವಿಶ್ವದ ಅತ್ಯಂತ ಭ್ರಷ್ಟ ಕ್ರೀಡಾ ಸಂಸ್ಥೆಗಳಲ್ಲಿ ಇದೂ ಒಂದು. ಆದರೆ ಆ ವಿಚಾರವನ್ನು ಈಗ ಪಕ್ಕಕ್ಕೆ ಇಡೋಣ. ತಮ್ಮ ಪ್ರತಿಭೆ ಹಾಗೂ ಕ್ರಿಕೆಟ್ ವೃತ್ತಿಯ ವಿಚಾರದಲ್ಲಿ ಏನು ಮಾಡಬೇಕು ಎಂಬುದನ್ನು ಶ್ರೀಶಾಂತ್ ಅವರಿಗೆ ಹೇಳುವ ಹಕ್ಕು ನಮ್ಮಲ್ಲಿ ಯಾರಿಗೂ ಇಲ್ಲ. ನಮ್ಮ ಖೊಟ್ಟಿ ಕ್ರಿಕೆಟ್ ದೇಶಪ್ರೇಮದ ದಿಗ್ದರ್ಶಕ ಶ್ರೀಶಾಂತ್ ಆಗಬೇಕು ಎಂದು ಬಯಸುವುದು ಹೇಡಿತನವೂ ಹೌದು, ಹುಡುಗಾಟಿಕೆಯೂ ಹೌದು.

Comments
ಈ ವಿಭಾಗದಿಂದ ಇನ್ನಷ್ಟು
ನಮ್ಮ ತನಿಖಾ ಸಂಸ್ಥೆಗಳ ಕಥೆ-ವ್ಯಥೆ

ದೂರ ದರ್ಶನ
ನಮ್ಮ ತನಿಖಾ ಸಂಸ್ಥೆಗಳ ಕಥೆ-ವ್ಯಥೆ

12 Mar, 2018
ಅಧಿಕಾರದಲ್ಲಿರುವ ಪಕ್ಷದ ಏಳು ಅನುಕೂಲಗಳು

ದೂರ ದರ್ಶನ
ಅಧಿಕಾರದಲ್ಲಿರುವ ಪಕ್ಷದ ಏಳು ಅನುಕೂಲಗಳು

5 Mar, 2018
ಗುಜರಾತ್ ಮಾದರಿಯ ಇನ್ನೊಂದು ಮುಖ!

ದೂರ ದರ್ಶನ
ಗುಜರಾತ್ ಮಾದರಿಯ ಇನ್ನೊಂದು ಮುಖ!

26 Feb, 2018

ದೂರ ದರ್ಶನ
ಹಿಂಸೆಯಿಲ್ಲದ ಯುದ್ಧದಲ್ಲಿ ತಂತ್ರಜ್ಞಾನದ್ದೇ ಮೇಲುಗೈ

ಆಧುನಿಕ ರಾಷ್ಟ್ರವು ಯುದ್ಧದ ವೇಳೆ ಶತ್ರು ರಾಷ್ಟ್ರದ ಸಂಪರ್ಕ ಸಾಧನಗಳನ್ನು ನಿಷ್ಕ್ರಿಯಗೊಳಿಸುವತ್ತ ಗಮನ ನೀಡುತ್ತದೆ. ಇಂಟರ್ನೆಟ್‌ ಸೇವೆಗಳು ಸ್ಥಗಿತವಾಗುವಂತೆ ಮಾಡಿದರೆ ಯಾವುದೇ ಆಧುನಿಕ ರಾಷ್ಟ್ರ...

19 Feb, 2018
ಕಲ್ಲೆಸೆಯುವ ಕಾಶ್ಮೀರದ ಕೈಗಳ ಬಗ್ಗೆ...

ದೂರ ದರ್ಶನ
ಕಲ್ಲೆಸೆಯುವ ಕಾಶ್ಮೀರದ ಕೈಗಳ ಬಗ್ಗೆ...

12 Feb, 2018