ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲಿಮಿನೇಟರ್‌ ಪಂದ್ಯಗಳು ಇಂದು: ಯೋಧಾ- ಪಲ್ಟನ್ ಹಣಾಹಣಿ

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ಐದನೇ ಆವೃತ್ತಿಯ  ಪ್ರೊ ಕಬಡ್ಡಿ ಲೀಗ್‌ ಟೂರ್ನಿಯು ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಸೋಮವಾರ ಮೊದಲ ಎರಡು ಕ್ವಾಲಿಫೈಯರ್ ಪಂದ್ಯಗಳಲ್ಲಿ ಪುಣೇರಿ ಪಲ್ಟನ್‌–ಯು.ಪಿ ಯೋಧಾ ಹಾಗೂ ಪಟ್ನಾ ಪೈರೇಟ್ಸ್‌–ಹರಿಯಾಣ ಸ್ಟೀಲರ್ಸ್ ತಂಡಗಳು ಸೆಣಸಲಿವೆ.

ಈ ಪಂದ್ಯಗಳಲ್ಲಿ ಗೆದ್ದ ತಂಡಗಳು ಕ್ವಾಲಿಫೈಯರ್ ಆಡಲಿವೆ. ಪ್ಲೇ ಆಫ್‌ ಪಂದ್ಯಗಳ ಹೋರಾಟಕ್ಕೆ ಮುಂಬೈ ಒಳಾಂಗಣ ಕ್ರೀಡಾಂಗಣ ಸಜ್ಜು ಗೊಂಡಿದೆ. ಮೊದಲ ಪಂದ್ಯದಲ್ಲಿ ಪುಣೇರಿ ಹಾಗೂ ಯೋಧಾ ತಂಡಗಳು ಸವಾಲು ಒಡ್ಡಲಿವೆ.

ದೀಪಕ್ ಹೂಡಾ ನಾಯಕತ್ವದ ಪುಣೇರಿ ಪಲ್ಟನ್ ತಂಡ ನಿತಿನ್ ತೋಮರ್ ಬಳಗಕ್ಕಿಂತ ಬಲಿಷ್ಠವಾಗಿದೆ. ಅಂತರ ವಲಯ ಪಂದ್ಯದಲ್ಲಿ ಈ ತಂಡಗಳು ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. ಆ ಪಂದ್ಯದಲ್ಲಿ ಪಲ್ಟನ್‌ ಜಯಿಸಿತ್ತು. ಆದರೆ ಆ ಹೋರಾಟ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿತ್ತು. ಕೊನೆಯ ನಿಮಿಷದಲ್ಲಿ ಪಲ್ಟನ್ ಒಂದು ಪಾಯಿಂಟ್‌ನಿಂದ ಮುನ್ನಡೆ ಗಳಿಸಿತ್ತು.

ರಾಜೇಶ್ ಮಂಡಲ್‌ ಪಲ್ಟನ್ ತಂಡದ ಪ್ರಮುಖ ರೈಡರ್‌. ಐದನೇ ಆವೃತ್ತಿಯ ಇಲ್ಲಿಯವರೆಗಿನ ಪಂದ್ಯಗಳಲ್ಲಿ ಅವರು 22 ಪಾಯಿಂಟ್ಸ್‌ಗಳನ್ನು ತಂದುಕೊಟ್ಟಿದ್ದಾರೆ. ದೀಪಕ್ ಹೂಡಾ ಹಾಗೂ ರವಿಕುಮಾರ್ ಕ್ರಮವಾಗಿ 22 ಹಾಗೂ 21 ಪಾಯಿಂಟ್ಸ್‌ಗಳನ್ನು ಗಳಿಸಿ ತಂಡದ ಬೆನ್ನೆಲುಬಾಗಿದ್ದಾರೆ.

ಯೋಧಾ ತಂಡದಲ್ಲಿ ಡಿಫೆಂಡರ್‌ಗಳು ಹೆಚ್ಚು ಮಿಂಚಿದ್ದಾರೆ. ಜೀವಾ ಕುಮಾರ್‌ ಈ ತಂಡದ ಪ್ರಬಲ ಶಕ್ತಿ. 21 ಪಾಯಿಂಟ್ಸ್‌ ಗಳಿಸಿರುವ ಅವರು ಒತ್ತಡದ ಸಮಯದಲ್ಲೂ ಪಾಯಿಂಟ್ಸ್ ಗಳಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಮಹೇಶ್‌ ಗೌಡ (20 ಪಾಯಿಂಟ್ಸ್‌), ನಾಯಕ ನಿತಿನ್ (19), ರಿಶಾಂಕ್ ದೇವಾಡಿಗ (20) ತಂಡದ ಬಲ ಹೆಚ್ಚಿಸಬಲ್ಲರು.

ಲೀಗ್ ಹಂತದಲ್ಲಿ ಪಲ್ಟನ್‌ ಆಡಿದ 22 ಪಂದ್ಯಗಳಲ್ಲಿ 15ರಲ್ಲಿ ಜಯಗಳಿಸಿತ್ತು. 80 ಪಾಯಿಂಟ್ಸ್‌ಗಳಿಂದ ‘ಎ’ ವಲಯದಲ್ಲಿ ಎರಡನೇ ಸ್ಥಾನ ಗಳಿಸಿದೆ. ಯೋಧಾ ತಂಡ 22 ರಲ್ಲಿ ಕೇವಲ ಎಂಟು ಪಂದ್ಯ ಗೆದ್ದರೂ ಪ್ಲೇ ಆಫ್‌ಗೆ ಲಗ್ಗೆಹಾಕಿದೆ. ಹೆಚ್ಚು ಅಂತರದ ಗೆಲುವಿನಿಂದಾಗಿ 60 ಪಾಯಿಂಟ್ಸ್‌ಗಳನ್ನು ಈ ತಂಡ ಹೊಂದಿದೆ.

ಪಟ್ನಾ–ಹರಿಯಾಣ ಪೈಪೋಟಿ: ಪ್ರದೀಪ್ ನರ್ವಾಲ್ ಸಾರಥ್ಯದ ಪೈರೇಟ್ಸ್‌ ಹಾಗೂ ಸುರೇಂದ್ರ ನಾಡ ನಾಯಕತ್ವದ ಸ್ಟೀಲರ್ಸ್ ತಂಡಗಳು ಎರಡನೇ ಎಲಿಮಿನೇಟರ್ ಪಂದ್ಯ ಆಡಲಿವೆ. ‘ಬಿ’ ವಲಯದಲ್ಲಿ ಎರಡನೇ ಸ್ಥಾನ ಹೊಂದಿರುವ ಪೈರೇಟ್ಸ್ ಹಾಗೂ ‘ಎ’ ವಲಯದಲ್ಲಿ ಮೂರನೇ ಸ್ಥಾನದಲ್ಲಿರುವ ಸ್ಟೀಲರ್ಸ್ ಸಮಬಲದ ಸಾಮರ್ಥ್ಯ ಹೊಂದಿರುವ ತಂಡಗಳು ಎನಿಸಿದೆ.

ಲೀಗ್ ಹಂತದಲ್ಲಿ ಪೈರೇಟ್ಸ್‌ ಆಡಿದ 22 ಪಂದ್ಯಗಳಲ್ಲಿ 10ರಲ್ಲಿ ಗೆದ್ದು 71 ಪಾಯಿಂಟ್ಸ್ ಹೊಂದಿತ್ತು. ‘ಎ’ ವಲಯದಲ್ಲಿ ಸ್ಟೀಲರ್ಸ್ 13 ಪಂದ್ಯಗಳನ್ನು ಗೆದ್ದು 79 ಪಾಯಿಂಟ್ಸ್‌ ಹೊಂದಿದೆ. ಅಂತರ ವಲಯದ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಈ ತಂಡಗಳು ಪಂದ್ಯವನ್ನು 41–41ರಲ್ಲಿ ಟೈ ಮಾಡಿಕೊಂಡಿದ್ದವು. ಎಲಿಮಿನೇಟರ್ ಪಂದ್ಯದಲ್ಲೂ ತೀವ್ರ ಜಿದ್ದಾಜಿದ್ದಿನ ಹಣಾಹಣಿ ನಿರೀಕ್ಷಿಸಲಾಗಿದೆ. ಪಟ್ನಾ ತಂಡದಲ್ಲಿ ಮೋನು ಗೋಯತ್ ಹಾಗೂ ಹರಿಯಾಣ ತಂಡದಲ್ಲಿ ವಾಜಿರ್ ಸಿಂಗ್‌ ಮಿಂಚು ಹರಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT