ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಿಯಾಲಿಟಿ ಷೋಗಳಿಂದ ಶಾಸ್ತ್ರೀಯತೆಗೆ ಧಕ್ಕೆ’

Last Updated 22 ಅಕ್ಟೋಬರ್ 2017, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಸ್ತ್ರೀಯ ಸಂಗೀತದಲ್ಲಿ ಪೂರ್ವಗ್ರಹಗಳಿಲ್ಲದೆ, ಕಾಳಜಿ ಮತ್ತು ಎಚ್ಚರಿಕೆಯಿಂದ ಬದಲಾವಣೆ ಮಾಡಬೇಕು’ ಎಂದು ರುದ್ರಪಟ್ನಂ ಸಹೋದರರಾದ ಆರ್‌.ಎನ್‌.ತ್ಯಾಗರಾಜನ್‌ ಮತ್ತು ಆರ್‌.ಎನ್‌.ತಾರಾನಾಥನ್‌ ಸಲಹೆ ನೀಡಿದರು.

ಬೆಂಗಳೂರು ಗಾಯನ ಸಮಾಜವು ನಗರದಲ್ಲಿ ಆಯೋಜಿಸಿರುವ ‘48ನೇ ಸಂಗೀತ ಸಮ್ಮೇಳನ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇವತ್ತಿನ ಸಂಗೀತ ಗೋಷ್ಠಿಗಳನ್ನು ಕೇಳುತ್ತಿದ್ದಾಗ ನಿರಾಸೆಯಾಗುತ್ತದೆ. ಸಂಗೀತದಲ್ಲಿ ಹೊಸತನ ಬರಲು ಪ್ರಯೋಗಗಳು ಆಗಬೇಕು. ಆದರೆ, ಆ ಪ್ರಯೋಗಗಳು ಶಾಸ್ತ್ರೀಯತೆಗೆ ಧಕ್ಕೆ ತರಬಾರದು’ ಎಂದು ಅವರು ತಿಳಿಸಿದರು.

‘ಇಂದಿನ ಯುವ ಪ್ರತಿಭೆಗಳು ಜನಪ್ರಿಯತೆಗಾಗಿ ಸಾಂಪ್ರದಾಯಿಕವಲ್ಲದ ಫ್ಯೂಷನ್‌ ಪ್ರಕಾರವನ್ನು ಶಾಸ್ತ್ರೀಯ ಸಂಗೀತದಲ್ಲಿ ಮಿಶ್ರಣ ಮಾಡುತ್ತಿದ್ದಾರೆ. ಹಾಡುಗಾರಿಕೆಯ ರಿಯಾಲಿಟಿ ಷೋಗಳ ಮೂಲಕ ಶಾಸ್ತ್ರೀಯತೆಗೆ ಆಗುತ್ತಿರುವ ಧಕ್ಕೆಯನ್ನು ತಡೆಯಬೇಕಿದೆ’ ಎಂದು ಹೇಳಿದರು.

‘ಇಂದಿನ ಕೆಲವು ಸಂಗೀತ ಪ್ರಕಾರಗಳು ಹಣ ಗಳಿಕೆಗಾಗಿ ಬಳಕೆಯಾಗುತ್ತಿವೆ. ಅವುಗಳಲ್ಲಿ ನೀತಿ, ಸಾಂಪ್ರದಾಯಿಕ ಪಾವಿತ್ರ್ಯ ಮತ್ತು ಭಕ್ತಿಯ ಭಾವಪರವಶತೆ ಇರುವುದಿಲ್ಲ’ ಎಂದು ಅವರು ಹೇಳಿದರು.

ತುಮಕೂರಿನ ರಾಮಕೃಷ್ಣ–ವಿವೇಕಾನಂದ ಆಶ್ರಮದ ವೀರೇಶಾನಂದ ಸ್ವಾಮೀಜಿ, ‘ಮನಶಾಂತಿ ನೀಡುವ ಶಾಸ್ತ್ರೀಯ, ಗ್ರೆಗೋರಿಯನ್‌ ಸಂಗೀತಕ್ಕಿಂತ ಇಂದ್ರಿಯ ಪ್ರಚೋದನೆ ಮಾಡುವ ಪಾಶ್ಚಾತ್ಯ ಸಂಗೀತ ಪ್ರಕಾರಕ್ಕೆ ಜನರು ಆಕರ್ಷಿತರಾಗುತ್ತಿದ್ದಾರೆ. ಸಂಗೀತಕ್ಕೆ ಇದ್ದ ಆಧ್ಯಾತ್ಮಿಕ, ಧಾರ್ಮಿಕ ಪರಿಧಿ ಕಳಚಿ, ಇಂದು ವಾಣಿಜ್ಯೀಕರಣದ ರೂಪ ತಳೆದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಅನಂತಕುಮಾರ್‌, ‘ಗಾಯನ ಸಮಾಜಕ್ಕೆ ತಂದೆ ಹೆಸರಿನಲ್ಲಿ ₹ 11 ಲಕ್ಷ ದತ್ತಿ ಮೊತ್ತ ನೀಡುತ್ತೇನೆ’ ಎಂದರು.

ಈ ಸಮ್ಮೇಳನ 29ರ ವರೆಗೆ ಮುಂದುವರಿಯಲಿದೆ. ಇಲ್ಲಿ ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30ರ ವರೆಗೆ ಉಪನ್ಯಾಸಗಳು, ಸಂಜೆ 4.15ರಿಂದ ರಾತ್ರಿ 9ರ ವರೆಗೆ ಸಂಗೀತ ಕಛೇರಿಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT