ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ನ್ಯಾಯಾಂಗದಲ್ಲೇ ಅಜ್ಞಾನ

ಪ್ರಮಾಣವಚನಕ್ಕೆ ಮುನ್ನ ಅಂಬೇಡ್ಕರ್‌ ಚಿಂತನೆ ಓದಿ: ದ್ವಾರಕಾನಾಥ್‌ ಸಲಹೆ
Last Updated 22 ಅಕ್ಟೋಬರ್ 2017, 19:47 IST
ಅಕ್ಷರ ಗಾತ್ರ

ಬೆಂಗಳೂರು: ‘ನ್ಯಾಯಾಂಗ ವ್ಯವಸ್ಥೆಗೆ ಮೀಸಲಾತಿ ಕುರಿತು ಸರಿಯಾದ ಪರಿಕಲ್ಪನೆ ಇಲ್ಲ. ಈ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಬಹುತೇಕರು ಪೂರ್ವಗ್ರಹ ಹೊಂದಿದ್ದಾರೆ. ಅದನ್ನು ಬಿಟ್ಟು ಅಂಬೇಡ್ಕರ್‌ ಅವರನ್ನು ಸರಿಯಾಗಿ ಓದಿ, ನಂತರ ಪ್ರಮಾಣವಚನ ಸ್ವೀಕರಿಸಬೇಕು’ ಎಂದು ವಕೀಲ ಡಾ.ಸಿ.ಎಸ್‌.ದ್ವಾರಕನಾಥ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಬಡ್ತಿ ಮೀಸಲಾತಿ ಸಂರಕ್ಷಣಾ ಸಮಿತಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೊ.ಬ.ನಾಗಸಿದ್ಧಾರ್ಥ ಹೊಲೆಯಾರ್‌ ಅವರ ‘ಮೀಸಲಾತಿ ಮತ್ತು ಬಡ್ತಿ ಮೀಸಲಾತಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನ್ಯಾಯಮೂರ್ತಿಗಳೇ ಮೀಸಲಾತಿ ಕುರಿತು ವ್ಯಂಗ್ಯ ಮಾಡುತ್ತಾರೆ. ಅಹಮದಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಅವರು ಕ್ರಿಮಿನಲ್‌ ಪ್ರಕರಣವೊಂದರಲ್ಲಿ (ಹಾರ್ದಿಕ್‌ ಪಟೇಲ್‌ ಮೇಲೆ ದಾಖಲಿಸಲಾಗಿದ್ದ ಹಲ್ಲೆ ಹಾಗೂ ಹಿಂಸಾಚಾರ ಪ್ರಕರಣ) ಮೀಸಲಾತಿ ಕುರಿತು ಮಾತನಾಡುತ್ತಾರೆ. ನಿವೃತ್ತ ಲೋಕಾಯುಕ್ತ ಎನ್‌. ಸಂತೋಷ್‌ ಹೆಗ್ಡೆ ಅವರೂ ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ ಎಂದು ಮೀಸಲಾತಿ ವಿರುದ್ಧ ಮಾತನಾಡಿದ್ದಾರೆ. ಆರ್ಥಿಕ ಮೂಲದ ಬಡತನ ಹಾಗೂ ಜಾತಿ ಮೂಲದ ಬಡತನದ ನಡುವಿನ ವ್ಯತ್ಯಾಸವನ್ನು ಇವರು ಅರ್ಥ ಮಾಡಿಕೊಳ್ಳಬೇಕಿದೆ. ಆರ್ಥಿಕ ಬಡತನ ತಾತ್ಕಾಲಿಕ. ಜಾತಿ ಮೂಲದ ಬಡತನ ನಿರಂತರ’ ಎಂದರು.

‘ಮಾಧ್ಯಮ ಕ್ಷೇತ್ರದಲ್ಲೂ ಮೀಸಲಾತಿಯ ಅಗತ್ಯವಿದೆ. ಏಳು ಮಾಧ್ಯಮಗಳಲ್ಲಿ ಬ್ರಾಹ್ಮಣರು, ಅದರಲ್ಲೂ ಹವ್ಯಕರು ಸಂಪಾದಕರಾಗಿದ್ದಾರೆ. ಇತರೆ ಬ್ರಾಹ್ಮಣರಿಗೂ ಅಲ್ಲಿ ಅವಕಾಶ ಸಿಗುತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ಲೇಖಕ ನಾಗಸಿದ್ಧಾರ್ಥ ಹೊಲೆಯಾರ್‌, ‘ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರಿಗೆ ಮೀಸಲಾತಿ ಕುರಿತು ಅಲ್ಪ ಜ್ಞಾನವೂ ಇಲ್ಲ. ಇದಕ್ಕಾಗಿ ಅಂಬೇಡ್ಕರ್‌ ಅವರು ಎಷ್ಟೆಲ್ಲಾ ಹೋರಾಟ ನಡೆಸಿದರು,  ಇದನ್ನು ಏಕೆ ಜಾರಿಗೆ ತಂದರು ಎಂಬುದನ್ನು ತಿಳಿದುಕೊಳ್ಳಬೇಕು. ಅದನ್ನೇ ಈ ಪುಸ್ತಕದಲ್ಲಿ ವಿವರಿಸಿದ್ದೇನೆ’ ಎಂದರು.

ಬಡ್ತಿ ಮೀಸಲಾತಿ ರದ್ದತಿಗೆ ಕುಲಸಚಿವ ಆಕ್ರೋಶ

‘ಬಡ್ತಿ ಮೀಸಲಾತಿ ವಜಾ ಮಾಡಿದಾಗ ದೊಡ್ಡ ಆಂದೋಲನವೇ ನಡೆಯಬೇಕಿತ್ತು. ಆದರೆ, ನಮ್ಮವರು ತೆಪ್ಪಗಿದ್ದಾರೆ. ಮೀಸಲಾತಿ ಪಡೆದವರಿಗೆ ಆ ಬಗ್ಗೆ ಒಲವಿಲ್ಲ. ಆರಾಮವಾಗಿ ಮಜಾ ಮಾಡುತ್ತಿದ್ದಾರೆ’ ಎಂದು ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಹೊನ್ನು ಸಿದ್ಧಾರ್ಥ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT