ರೋಮಾಂಚನ

ಜಯಮಂಗಲಿಯಲ್ಲಿ ಈಗ ಜಲಸಮೃದ್ಧಿ

ಅಷ್ಟೊಂದು ರೋಮಾಂಚನ ಏಕೆ ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೂ ಕಾರಣ ಇದೆ. ಜಯಮಂಗಲಿ ಮೈದುಂಬಿ ಹರಿದು ಮೂರು ದಶಕಗಳೇ ಕಳೆದು ಹೋಗಿದ್ದವು. ಮಳೆಯ ಮರೀಚಿಕೆ ಆಟದ ನಡುವೆ ಬರಿಯ ಮರಳು ದಂಧೆಗೆ ಸಿಲುಕಿ ತನ್ನ ಒಡಲನ್ನು ಬರಿದು ಮಾಡಿಕೊಂಡಿದ್ದಳು ಜಯಮಂಗಲಿ.

ಮೈದುಂಬಿ ಹರಿಯುತ್ತಿರುವ ಜಯಮಂಗಲಿ ನದಿ. -ಚಿತ್ರ: ಲೇಖಕರದು

ಮುಂಜಾನೆ 6.30ರ ಸಮಯ. ಸವಿಗನಸುಗಳನ್ನು ಹೊದ್ದು ಮಲಗಿದ್ದಾಗ ಮೊಬೈಲ್ ರಿಂಗಣಿಸಿತು. ಬೆಳ್ಳಂಬೆಳಗ್ಗೇನೆ ಯಾರಪ್ಪಾ ಎಂದು ನೋಡಿದರೆ ಗೆಳೆಯ ಅವಿನಾಶ್. ‘ಏನ್ ಅವಿ ಕಾಫಿ ಆಯ್ತಾ’ ಅಂತ ಕೇಳುವಾಗ ಅವನು ತುಂಬಾ ಎಕ್ಸೈಟ್‌ ಆಗಿದ್ದ ಅನ್ನೋದು ಅವನ ಮಾತಿನ ಧಾಟಿಯಲ್ಲೇ ಗೊತ್ತಾಗುತ್ತಿತ್ತು. ಥಟ್ಟನೆ ‘ಜಯಮಂಗಲಿ ತೊರೆ ಬರ್ತಾಯಿದೆಯಂತೆ ಕಣೋ, ತುಂಬಾ ನೀರು ಹರಿಯುತ್ತಿದೆ’ ಅಂದ. ಅವನ ಆ ಮಾತಿನಿಂದ ನನಗೂ ಖುಷಿಯೋ ಖುಷಿ.

ಇಷ್ಟಕ್ಕೂ ನದಿ ಹರಿಯುವುದು ಸಹಜ. ಆದರೆ ಅಷ್ಟೊಂದು ರೋಮಾಂಚನ ಏಕೆ ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೂ ಕಾರಣ ಇದೆ. ಜಯಮಂಗಲಿ ಮೈದುಂಬಿ ಹರಿದು ಮೂರು ದಶಕಗಳೇ ಕಳೆದು ಹೋಗಿದ್ದವು. ಮಳೆಯ ಮರೀಚಿಕೆ ಆಟದ ನಡುವೆ ಬರಿಯ ಮರಳು ದಂಧೆಗೆ ಸಿಲುಕಿ ತನ್ನ ಒಡಲನ್ನು ಬರಿದು ಮಾಡಿಕೊಂಡಿದ್ದಳು ಜಯಮಂಗಲಿ. ನದಿಯ ಸುತ್ತಲಿನ ತೋಟಗಳೆಲ್ಲಾ ನೀರಿಲ್ಲದೆ ಒಣಗುತ್ತಿದ್ದವು. ಹೀಗಿರುವಾಗ ಉತ್ತಮ ಮಳೆಯಾಗುತ್ತಿರುವ ಈ ಸಂದರ್ಭದಲ್ಲಿ ಆಕೆ ಮೈದುಂಬಿ ಹರಿಯುತ್ತಿದ್ದಾಳೆ; ಖುಷಿಯಾಗದೇ ಇರುವುದುಂಟೇ?

ನದಿಯ ವೀಕ್ಷಣೆಗೆ ಸ್ನೇಹಿತರಾದ ರಮೇಶ್, ಅವಿನಾಶ್ ಹಾಗೂ ನಾನು ಒಟ್ಟಾಗಿ ಹೋದೆವು. ನದಿ ತುಂಬಿ ಹರಿಯುತ್ತಿರುವುದನ್ನು ನೋಡಿದಾಗ ಮನಸ್ಸು ಉಲ್ಲಸಿತಗೊಂಡು ಬಾಲ್ಯದ ಜೀವನವನ್ನು ನೆನಪಿಸಿತು. ಆಗ ತುಂಬಿ ಹರಿಯುತ್ತಿದ್ದ ಜಯಮಂಗಲಿಯಲ್ಲಿ ಈಜಿ ಅನುಭವಿಸಿದ ಆನಂದಕ್ಕೆ ಪಾರವೇ ಇರಲಿಲ್ಲ. ಬಾಲ್ಯದಲ್ಲಿ ಇದೇ ಜಯಮಂಗಲಿ ನದಿಗೆ ಶಾಲೆಯಿಂದ ಹೊರ ಸಂಚಾರ ಎಂದು ಕರೆದುಕೊಂಡು ಹೋಗುತ್ತಿದ್ದರು. ಹರಿಯುವ ನದಿಯಲಿ ಈಜಾಡಿ, ಗೆಳೆಯ–ಗೆಳತಿಯರು ತಂದಿದ್ದ ಬುತ್ತಿಯನ್ನು ಹಂಚಿಕೊಂಡು ತಿಂದು ಪಡುತ್ತಿದ್ದ ಸಂತಸ ಕೋಟಿ ರೂಪಾಯಿ ಕೊಟ್ಟರೂ ಸಿಗದು. ಅಂತಹ ದಿನಗಳು ಮತ್ತೊಮ್ಮೆ ನೆನಪು ಮಾಡಿಕೊಳ್ಳುವ ಸುದೈವ ಈಗ ಒದಗಿ ಬಂತು.

ತುಮಕೂರಿನ ದೇವರಾಯನ ದುರ್ಗದಲ್ಲಿ ಹುಟ್ಟುವ ಜಯ ಮತ್ತು ಮಂಗಲಿ ಎಂಬ ಎರಡು ನದಿಗಳು ಕೊರಟಗೆರೆಯ ಇರಕಸಂದ್ರದ ಬಳಿ ಸೇರುವ ಮೂಲಕ ಜಯಮಂಗಲಿಯಾಗಿ ಹೊಸ ರೂಪು ಪಡೆದು ಮುಂದೆ ಹೊಳವನಹಳ್ಳಿ ಹತ್ತಿರ ಗರುಡಾಚಲ ನದಿ ಸೇರಿಕೊಂಡು ಅಕ್ಕಿರಾಂಪುರದ ಬಳಿ ಸುವರ್ಣಮುಖಿ ನದಿಯೊಂದಿಗೆ ಸಂಗಮವಾಗುತ್ತದೆ. ಈ ಸಂಗಮದ ನದಿ ನೀರು ಹರಿಯುತ್ತಾ ಸಾಗಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬಳಿಯ ಹಳ್ಳಿಯೊಂದರ ಬಳಿ ಉತ್ತರ ಪಿನಾಕಿನಿ ನದಿ ಸೇರುತ್ತದೆ.

ಈ ಭಾಗದ ರೈತರ ಭಾಗ್ಯದೇವತೆಯಾಗಿರುವ ಜಯಮಂಗಲಿ ಇದೀಗ ಮೈದುಂಬಿ ಹರಿಯುತ್ತಿದ್ದಾಳೆ. ಎಲ್ಲಿ ನೋಡಿದರೂ ನೀರಿನ ಜುಳು ಜುಳು ಕಲರವ. ಇಂತಹ ನದಿಗೆ ಅಡ್ಡಲಾಗಿ ಕೊರಟಗೆರೆಯ ಅಕ್ಕಿರಾಂಪುರದ ಬಳಿ ಚೆಕ್ ಡ್ಯಾಂಗಳನ್ನು ಅಳವಡಿಸಿ ಅಲ್ಲಿನ ಕೆರೆಗೆ ನೀರು ತುಂಬಿಸುವ ಹುನ್ನಾರ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇದರಿಂದಾಗಿ ಕೆಳಭಾಗದ ರೈತರಿಗೆ ನೀರಿನ ಕೊರತೆ ಆಗುವುದು. ಈ ಬಗೆಗೆ ಅನೇಕ ವಾದ–ವಿವಾದಗಳು ನಡೆದು ಪ್ರಕರಣಗಳು ದಾಖಲಾಗಿದ್ದರೂ ಸಮಸ್ಯೆ ಇನ್ನೂ ಹಾಗೇ ಉಳಿದಿದೆ. ರೈತರ ಪಾಲಿಗೆ ಆಶಾಕಿರಣವಾಗಿ ಮತ್ತೆ ತುಂಬಿ ಹರಿಯುತ್ತಿರುವ ಜಯಮಂಗಲಿ ನದಿ ಎಲ್ಲರಿಗೂ ವರವಾಗಬೇಕಿದೆ.

ಸೊಬಗಿನ ವೀಕ್ಷಣೆಗೆ ಇಲ್ಲಿ ಬನ್ನಿ: ಅಂದಹಾಗೆ ಈ ನದಿಯ ಬಳುಕಿನ ಹರಿಯುವಿಕೆಯನ್ನು ವೀಕ್ಷಿಸುವುದೇ ಒಂದು ಸೊಬಗು. ಅಂತಹ ವೀಕ್ಷಣೆಗೆ ಮಧುಗಿರಿ–ಗೌರಿಬಿದನೂರು ರಸ್ತೆಯ ನಿಟ್ಟರಹಳ್ಳಿ ಬಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಒಳ್ಳೆಯ ತಾಣ. ಹಾಗೆಯೇ ಬ್ಯಾಲ್ಯದ ಮುದ್ದಯ್ಯನಪಾಳ್ಯದ ಬಳಿ ಸಹ ನದಿಯ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ನದಿ ನೀರಿನಲ್ಲಿ ಮಿಂದೆದ್ದು ಮರಳಿ ಬಾಲ್ಯದ ಜೀವನವನ್ನು ಮೆಲುಕು ಹಾಕಬಹುದು.

Comments
ಈ ವಿಭಾಗದಿಂದ ಇನ್ನಷ್ಟು
ವಸಿ ನೋಡಿ, ಇದು ಹಸೆ!

ಕಲೆ
ವಸಿ ನೋಡಿ, ಇದು ಹಸೆ!

23 Apr, 2018
ಕವಡೆಗೂ ಬಂತು ಕಿಮ್ಮತ್ತು

ಸಂಪಾದನೆ
ಕವಡೆಗೂ ಬಂತು ಕಿಮ್ಮತ್ತು

23 Apr, 2018
ಸೆಳೆಯುವ ಸೂಜಿಗಲ್ಲು ಈ ಗಡಾಯಿಕಲ್ಲು!

ಬೃಹತ್ ಬೆಟ್ಟ
ಸೆಳೆಯುವ ಸೂಜಿಗಲ್ಲು ಈ ಗಡಾಯಿಕಲ್ಲು!

23 Apr, 2018
ಕಡಲ ಕಾಗೆಗೀಗ ಕಾವಿನ ಸಮಯ...

ಹಕ್ಕಿ ಬದುಕು
ಕಡಲ ಕಾಗೆಗೀಗ ಕಾವಿನ ಸಮಯ...

23 Apr, 2018
ಹಿನ್ನೀರಲಿ ತೇಲುವ ಭವಿಷ್ಯದ ದೋಣಿ!

ಕರ್ನಾಟಕ ದರ್ಶನ
ಹಿನ್ನೀರಲಿ ತೇಲುವ ಭವಿಷ್ಯದ ದೋಣಿ!

17 Apr, 2018