ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಸಲ್ ವಿವಾದ: ಅಸಹನೆ, ಅಸಹಿಷ್ಣುತೆ ಖಂಡನೀಯ

Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಿಜಯ್‍ ನಟನೆಯ ತಮಿಳು ಚಿತ್ರ ‘ಮರ್ಸಲ್’ಗೆ ಸಂಬಂಧಿಸಿದಂತೆ ತಮಿಳುನಾಡಿನ ಬಿಜೆಪಿ ಘಟಕ ಎತ್ತಿರುವ ಆಕ್ಷೇಪಗಳು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ತನ್ನ ಮೂಗಿನ ನೇರಕ್ಕೆ ಎಲ್ಲರೂ ನಡೆಯಬೇಕು ಎನ್ನುವ ಸರ್ವಾಧಿಕಾರಿ ಧೋರಣೆಯದ್ದಾಗಿವೆ. ಜಿಎಸ್‌ಟಿ ಹಾಗೂ ನೋಟು ರದ್ದತಿ ಕುರಿತಂತೆ ಸಿನಿಮಾದಲ್ಲಿ ಇರುವ ದೃಶ್ಯಗಳು ರಾಜಕೀಯ ಪ್ರೇರಿತವಾಗಿದ್ದು, ಅವುಗಳನ್ನು ಸಿನಿಮಾದಿಂದ ತೆಗೆಯಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಆಕ್ಷೇಪಾರ್ಹ ದೃಶ್ಯಗಳನ್ನು ಕತ್ತರಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದೆ. ‘ನಮಗೆ ದೇಗುಲಗಳು ಬೇಕಾಗಿಲ್ಲ, ಆಸ್ಪತ್ರೆಗಳು ಬೇಕು’ ಎನ್ನುವ ಅರ್ಥದ ಸಂಭಾಷಣೆಯಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಮದುರೈನಲ್ಲಿ ಪೊಲೀಸ್‍ ದೂರು ಕೂಡ ದಾಖಲಾಗಿದೆ. ಯಾವುದೇ ತಾತ್ವಿಕ ನೆಲೆಗಟ್ಟನ್ನು ಹೊಂದಿಲ್ಲದ ಈ ಆರೋಪಗಳು, ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳಬೇಕು ಎನ್ನುವ ಕೆಲವರ ಕುರುಡುನಂಬಿಕೆಯನ್ನು ಪ್ರತಿನಿಧಿಸುವಂತಿವೆ ಹಾಗೂ ಭಿನ್ನಮತದ ದನಿಗಳನ್ನು ಸಹಿಸಿಕೊಳ್ಳಲಾಗದ ಅಸಹಿಷ್ಣುತೆಯ ಫಲವಾಗಿವೆ.

ಜಿಎಸ್‌ಟಿ ತೆರಿಗೆಯ ಸ್ವರೂಪದ ಬಗ್ಗೆ ‘ಮರ್ಸಲ್’ ಚಿತ್ರದ ನಾಯಕ ಪ್ರಶ್ನೆ ಎತ್ತುತ್ತಾನೆ. ಸಿಂಗಪುರದಲ್ಲಿ ಶೇ 7 ರಷ್ಟು ತೆರಿಗೆ, ಭಾರತದಲ್ಲಿ ಮಾತ್ರ ಶೇ 28 ಜಿಎಸ್‌ಟಿ ಏಕೆ ಎಂದು ಸಿನಿಮಾದ ನಾಯಕ ಪ್ರಶ್ನಿಸುತ್ತಾನೆ. ಔಷಧಿಗೆ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಆದರೆ ಹಲವಾರು ಜನರ ಸಾವಿಗೆ ಕಾರಣವಾಗುವ ಮದ್ಯವನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ. ಶೇ 7 ರಷ್ಟು ಜಿಎಸ್‌ಟಿ ಇರುವ ಸಿಂಗಪುರದಲ್ಲಿ ಔಷಧಿ ಉಚಿತವಾಗಿ ನೀಡಲಾಗುತ್ತಿದೆ ಎಂದು ಚಿತ್ರದ ನಾಯಕ ಹೇಳುತ್ತಾನೆ. ಉತ್ತರಪ್ರದೇಶದ ಗೋರಖಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಹಸುಗೂಸುಗಳು ಸಾವನ್ನಪ್ಪಿದ ಘಟನೆಯನ್ನೂ ಚಿತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಈ ಎಲ್ಲ ದೃಶ್ಯಗಳನ್ನು ಸಿನಿಮಾದಿಂದ ತೆಗೆಯಬೇಕೆನ್ನುವುದು ಬಿಜೆಪಿ ಆಗ್ರಹ. ರಾಜಕೀಯ ಪ್ರವೇಶದ ಉದ್ದೇಶದಿಂದ ವಿಜಯ್‍ ಈ ಸಂಭಾಷಣೆಗಳನ್ನು ಹೇಳಿದ್ದಾರೆ ಎನ್ನುವುದು ಆರೋಪ. ಈ ಆರೋಪವನ್ನು ನೋಡಿದರೆ ಟೀಕಾಕಾರರಿಗೆ ಸಿನಿಮಾದ ಸ್ವರೂಪವೇ ತಿಳಿದಿಲ್ಲ ಎನ್ನಿಸುತ್ತದೆ. ಸಂಭಾಷಣೆಯೂ ಸೇರಿದಂತೆ ಸಿನಿಮಾದ ಒಟ್ಟಾರೆ ರೂಪುರೇಷೆಯನ್ನು ನಿರ್ಧರಿಸುವ ನಿರ್ದೇಶಕರ ಸೂಚನೆಯಂತೆ ನಟ ನಟಿಸುವಾಗ, ಆ ಸಂಭಾಷಣೆಯ ಉತ್ತರದಾಯಿತ್ವವನ್ನು ಅವನ ಮೇಲೆ ಏಕಪಕ್ಷೀಯವಾಗಿ ಆರೋಪಿಸುವುದರ ಹಿಂದೆ ನಿಜವಾದ ರಾಜಕೀಯ ಉದ್ದೇಶ ಇರುವಂತಿದೆ. ಒಂದುವೇಳೆ, ವಿಜಯ್ ಅವರಿಗೆ ರಾಜಕೀಯದಲ್ಲಿ ಆಸಕ್ತಿಯಿದ್ದು, ಅದಕ್ಕೆ ಪೂರಕವಾಗಿ ನಟನೆಯನ್ನು ಬಳಸಿಕೊಂಡರೆ ಅದಕ್ಕೆ ಯಾರಾದರೂ ಏಕೆ ಆಕ್ಷೇಪಿಸಬೇಕು? ‘ಮರ್ಸಲ್’ ಒಂದು ಸ್ವತಂತ್ರ ಚಿತ್ರವಾಗಿದ್ದು, ಆ ಚಿತ್ರದ ನಿರ್ಮಾತೃಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಬೇಕಾಗಿದೆ. ಸಿನಿಮಾ ಮತ್ತು ಸಾಕ್ಷ್ಯಚಿತ್ರದ ನಡುವೆ ಇರುವ ವ್ಯತ್ಯಾಸವನ್ನು ಟೀಕಾಕಾರರು ಅರ್ಥ ಮಾಡಿಕೊಳ್ಳಬೇಕಾಗಿದೆ.

‘ಮರ್ಸಲ್’ ಒಂದು ವ್ಯಾಪಾರಿ ಮತ್ತು ಮನರಂಜನಾತ್ಮಕ ಚಿತ್ರ. ಸೆನ್ಸಾರ್‍ ಪ್ರಕ್ರಿಯೆಯ ನಂತರ ತೆರೆಕಂಡಿರುವ ಈ ಚಿತ್ರವನ್ನು ರಾಜಕಾರಣಿಗಳು ಮತ್ತೊಮ್ಮೆ ಸೆನ್ಸಾರ್‍ ಮಾಡಹೊರಡುವುದು ಕಾನೂನಿಗೆ ವಿರುದ್ಧವಾದುದು. ತಮ್ಮ ತಕರಾರಿಗೆ ಪೂರಕವಾಗಿ ವಿಜಯ್‌ ಅವರ ಕ್ರಿಶ್ಚಿಯನ್‍ ಹಿನ್ನೆಲೆಯನ್ನು ಕೆದಕುತ್ತಿರುವುದಂತೂ ಕ್ಷುಲ್ಲಕ ರಾಜಕೀಯವಲ್ಲದೆ ಬೇರೇನೂ ಅಲ್ಲ. ಸ್ವಾಗತಾರ್ಹ ಸಂಗತಿಯೆಂದರೆ, ಕಲೆಯಲ್ಲಿ ರಾಜಕೀಯವನ್ನು ಬೆರೆಸುವ ಪ್ರಯತ್ನವನ್ನು ವಿರೋಧಿಸುವಲ್ಲಿ ತಮಿಳು ಚಿತ್ರೋದ್ಯಮ ಒಗ್ಗಟ್ಟು ಪ್ರದರ್ಶಿಸಿದೆ. ರಜನಿಕಾಂತ್ ಹಾಗೂ ಕಮಲ್‍ ಹಾಸನ್ ‘ಮರ್ಸಲ್’ ಬಳಗದ ಬೆಂಬಲಕ್ಕೆ ನಿಂತಿದ್ದಾರೆ. ಇಂಥ ವಿರೋಧಗಳನ್ನು ತಾತ್ವಿಕವಾಗಿ ಎದುರಿಸಬೇಕು ಎಂದು ಕಮಲ್‍ ಹಾಸನ್‍ ಹೇಳಿರುವುದು ಸರಿಯಾಗಿದೆ. ‘ಬಿಜೆಪಿಗೆ ನನ್ನ ಚಿತ್ರವನ್ನು ಎಡಿಟ್‍ ಮಾಡುವ ಅಧಿಕಾರವಿಲ್ಲ’ ಎಂದು ಚಿತ್ರದ ಸಂಕಲನಕಾರ ರೂಬೆನ್ ಹೇಳಿರುವುದು ಅರ್ಥಪೂರ್ಣವಾಗಿದೆ. ಸಿನಿಮಾದ ಭರ್ಜರಿ ಯಶಸ್ಸು ಕೂಡ ರಾಜಕೀಯ ಆಕ್ಷೇಪಗಳಿಗೆ ಜನರ ಒಪ್ಪಿಗೆಯಿಲ್ಲ ಎನ್ನುವುದನ್ನು ಸೂಚಿಸುವಂತಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳ ಮೂಲಕ ‘ಚಲನಚಿತ್ರ ಪ್ರಮಾಣೀಕರಣ ಮಂಡಳಿ’ (ಸಿಬಿಎಫ್‌ಸಿ) ಹಲವು ಬಾರಿ ಸುದ್ದಿಯಲ್ಲಿತ್ತು. ಸಿಬಿಎಫ್‌ಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಿಜೆಪಿ ಬೆಂಬಲಿಗರು ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಪಾಳೇಗಾರರಂತೆ ವರ್ತಿಸುತ್ತಿದ್ದರು. ಈಗ ರಾಜಕಾರಣದ ಹೆಸರಿನಲ್ಲಿಯೇ ನೇರ ದಾಳಿ ಚಿತ್ರರಂಗದ ಮೇಲಾಗುತ್ತಿರುವುದು ಆತಂಕಕಾರಿ.

ಇಂಥ ದಾಳಿಕೋರ ಮನೋಭಾವವನ್ನು ಚಿತ್ರರಂಗ ಹಾಗೂ ಕಲಾವಲಯ ಒಗ್ಗಟ್ಟಿನಿಂದ ಎದುರಿಸಬೇಕಾಗಿದೆ. ಆ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳನ್ನು ವಿಫಲಗೊಳಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT