ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗುವೇ ಮದ್ದು...

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಒತ್ತಡ ಎನ್ನುವುದು ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುತ್ತದೆ. ಅದರಿಂದ ಹೊರಬರುವ ದಾರಿಯನ್ನು ಕಂಡುಕೊಳ್ಳುವುದರಲ್ಲಿ ನಮ್ಮ ಖುಷಿ ಇದೆ. ಒತ್ತಡವನ್ನು ಹೆಚ್ಚಿಸಿಕೊಳ್ಳುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಇದರಿಂದ ನಮ್ಮ ಆರೋಗ್ಯವು ಕೆಡುತ್ತದೆ. ಸಮಸ್ಯೆಗಳನ್ನು ನಿಭಾಯಿಸುವುದನ್ನು ಕಲಿತುಕೊಂಡರೆ ಒತ್ತಡ ಅರ್ಧದಷ್ಟು ಕಡಿಮೆಯಾಗುತ್ತದೆ.

ವ್ಯಾಯಾಮ ಒತ್ತಡ ಶಮನಕ್ಕೆ ಒಳ್ಳೆಯ ಮದ್ದು. ಯೋಗ, ಕಸರತ್ತು... ಹೀಗೆ ಯಾವುದಾದರೂ ಬಗೆಯ ವ್ಯಾಯಾಮವನ್ನು ಪ್ರತಿದಿನ ಮಾಡುವುದರಿಂದ ದಿನಪೂರ್ತಿ ಲವಲವಿಕೆಯಿಂದ ಇರುವುದರ ಜೊತೆಗೆ ಮನಸ್ಸನ್ನು ಶಾಂತವಾಗಿಸಬಹುದು. ನಾನಂತೂ ವ್ಯಾಯಾಮದ ಮೂಲಕವೇ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತೇನೆ. ಪ್ರತಿದಿನ ಬೆಳಿಗ್ಗೆ 4.30ಕ್ಕೆ ಎದ್ದು ಕಸರತ್ತು ಪ್ರಾರಂಭಿಸುತ್ತೇನೆ. ರಾತ್ರಿ ಶೂಟಿಂಗ್‌ ಮುಗಿಸಿ ಮನೆಗೆ ಬಂದ ನಂತರ ಒಂದು ಗಂಟೆ ವ್ಯಾಯಾಮ ಮಾಡುತ್ತೇನೆ. ಇದರಿಂದ ದೇಹ ಹಗುರಾಗುವ ಜೊತೆಗೆ ಮನಸ್ಸು ಉಲ್ಲಾಸದಿಂದ ಇರುತ್ತದೆ. ನಿಜ ಹೇಳಬೇಕೆಂದರೆ ನಾನು ಒತ್ತಡ ಮಾಡಿಕೊಳ್ಳುವುದು ತೀರ ಕಡಿಮೆ. ಶಿಸ್ತಿನ ಜೊತೆಗೆ ಸದಾ ಖುಷಿಯಾಗಿರುವುದರಿಂದ ಒತ್ತಡ ನನ್ನ ಬಳಿ ಸುಳಿಯುವುದು ಕಡಿಮೆಯೇ. ಅನವಶ್ಯಕ ವಿಷಯಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ.

ಜೊತೆಗೆ ಒಳ್ಳೆಯ ಆಹಾರವನ್ನು ಸೇವಿಸಬೇಕು. ದೇಹಕ್ಕೆ ಒಗ್ಗುವಂತಹ ಆರೋಗ್ಯಕರ ಆಹಾರ ಸೇವನೆಯೂ ಮನಸ್ಸನ್ನು ನೆಮ್ಮದಿಯಾಗಿರಿಸುತ್ತದೆ. ಹಾಗಂತ ನನ್ನ ಬದುಕಿನಲ್ಲಿ ಒತ್ತಡವೇ ಇಲ್ಲ ಎನ್ನುವುದು ಸುಳ್ಳಾಗುತ್ತದೆ. ಕೆಲಸ, ಕುಟುಂಬವನ್ನು ಹೇಗೆ ನಿಭಾಯಿಸಬೇಕೆಂಬುದನ್ನು ಅರಿತಾಗ ಒತ್ತಡ ಮನಸ್ಸಿನ ಮೇಲೆ ಬೀರುವ ಪರಿಣಾಮ ಕಡಿಮೆಯಾಗುತ್ತದೆ.

ಮಗ ಹುಟ್ಟುವ ಸಂದರ್ಭದಲ್ಲಿ ನಾನು ಚಿತ್ರೀಕರಣಕ್ಕೆಂದು ಬೇರೆ ಊರಿಗೆ ಹೋಗಿದ್ದೆ. ಇಲ್ಲಿ ಏನಾಯಿತೆಂಬ ಆತಂಕದಿಂದ ತೀರ ಒತ್ತಡಕ್ಕೆ ಒಳಗಾಗಿದ್ದೆ. ಬಹುಶಃ ಅದೊಂದೇ ಸಂದರ್ಭದಲ್ಲಿ ನಾನು ತೀರಾ ಒತ್ತಡಕ್ಕೆ ಒಳಗಾಗಿದ್ದು. ಒತ್ತಡ ಯಾರನ್ನೂ ಬಿಡುವುದಿಲ್ಲ ನಿಜ. ಆದರೆ ಯೋಜಿತವಾಗಿ ಕೆಲಸ ಮಾಡುವುದರಿಂದ ಒತ್ತಡದಿಂದ ಆದಷ್ಟು ದೂರ ಇರಬಹುದು. ನಮ್ಮ ವಿಷಯವನ್ನು ನೇರ ಮತ್ತು ಸ್ಪಷ್ಟವಾಗಿ ಬೇರೆಯವರಿಗೆ ತಲುಪಿಸುವುದರಿಂದಲೂ ಅನ್ಯರಿಂದ ನಾವು ತೊಂದರೆಗೆ ಸಿಲುಕಿ ಒತ್ತಡಕ್ಕೆ ಒಳಗಾಗುವುದು ತಪ್ಪುತ್ತದೆ.

ನಾನು ಕುಟುಂಬದ ಹೊರತಾಗಿ ಕೆಲಸದ ವಿಷಯಕ್ಕೆ ಒತ್ತಡ ಮಾಡಿಕೊಳ್ಳುವುದು ಕಡಿಮೆ. ಹೊಸ ಸಿನಿಮಾ ಬಿಡುಗಡೆಯಾಗುವಾಗ ಅದರ ಫಲಿತಾಂಶ ನೆನೆದು ಸ್ವಲ್ಪ ಒತ್ತಡ ಎನಿಸುತ್ತದೆ. ಸಿನಿಮಾ ಸೋತಾಗಲೂ ಬೇಸರವಾಗುತ್ತದೆ. ಆದರೆ ಅಲ್ಲಿಗೆ ಮುಗಿಯಿತು ಎಂದುಕೊಳ್ಳುವುದಿಲ್ಲ. ಅದರಿಂದ ಹೊರಬರಲು ಪ್ರಯತ್ನಿಸುತ್ತೇನೆ. ಭವಿಷ್ಯದ ಯೋಚನೆ ಮಾಡುತ್ತೇನೆ. ಒತ್ತಡ ಎನಿಸಿದಾಗ ಅದಕ್ಕೆ ಅಗತ್ಯವಾದ ಸ್ಪಂದನೆ ನೀಡುವುದರಿಂದ ನೆಮ್ಮದಿ ಆಗುತ್ತದೆ. ಸಮಸ್ಯೆಗಳನ್ನು ಸಂಭಾಳಿಸಿಕೊಂಡು ಮುನ್ನುಗ್ಗುವುದೇ ಬದುಕಿನ ಭಾಗ.

ಒತ್ತಡ ಕಾಡಿದಾಗ ಸಿನಿಮಾ ನೋಡುತ್ತಾ, ಸಂಗೀತ ಆಲಿಸುತ್ತಾ ಅಥವಾ ಮೌನವಾಗಿ ಸುಮ್ಮನೆ ಕೂತು ಸಮಸ್ಯೆ ಮರೆಯುವ ದಾರಿ ಕಂಡುಕೊಳ್ಳುತ್ತೇನೆ. ಸಂಗೀತ ಕೇಳುತ್ತಾ ನಾನು ವಾಸ್ತವವನ್ನು ಮರೆತು ಅದರೊಳಗೆ ಕಳೆದು ಹೋಗುತ್ತೇನೆ. ಹೀಗೆ ಮನಸ್ಸನ್ನು ಸಮಾಧಾನಗೊಳಿಸುವ, ಖುಷಿಕೊಡುವ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT